ಪೌಲನು ಬರೆಯುತ್ತಿರುವ ಪತ್ರ. ಕ್ರಿಸ್ತ ಯೇಸುವಿನ ಅಪೊಸ್ತಲನಾಗುವುದಕ್ಕೆ ನಾನು ದೇವರ ಚಿತ್ತಾನುಸಾರವಾಗಿ ಕರೆಯುಲ್ಪಟ್ಟೆನು. ನಾನು ಈ ಪತ್ರವನ್ನು ಕ್ರಿಸ್ತನಲ್ಲಿ ನಮ್ಮ ಸಹೋದರನಾದ ಸೊಸ್ಥೆನನೊಂದಿಗೆ ಬರೆಯುತ್ತಿದ್ದೇನೆ.
ಕ್ರಿಸ್ತ ಯೇಸುವಿನಲ್ಲಿ ಪವಿತ್ರರಾಗಿ ಮಾಡಲ್ಪಟ್ಟಿರುವ ಕೊರಿಂಥದ ದೇವರ ಸಭೆಯವರಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ನೀವು ದೇವರ ಪವಿತ್ರ ಜನರಾಗುವುದಕ್ಕೆ ಕರೆಯಲ್ಪಟ್ಟಿದ್ದೀರಿ. ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಂಬಿಕೆ ಇಡುವ ಎಲ್ಲಾ ಜನರೊಂದಿಗೆ ನೀವು ಕರೆಯಲ್ಪಟ್ಟಿದ್ದೀರಿ. ಯೇಸು ಕ್ರಿಸ್ತನು ಅವರಿಗೂ ನಮಗೂ ಪ್ರಭುವಾಗಿದ್ದಾನೆ.
ಸಹೋದರ ಸಹೋದರಿಯರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಾನು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ವಾದವಿವಾದವಿಲ್ಲದೆ ಭಿನ್ನಭೇದಗಳಿಲ್ಲದೆ ಒಂದೇ ಮನಸ್ಸಿನಿಂದಲೂ ಒಂದೇ ಉದ್ದೇಶದಿಂದಲೂ ನೀವು ಐಕ್ಯಮತ್ಯದಿಂದ ಬಾಳಿರಿ.
ಅಂದರೆ, ನಿಮ್ಮಲ್ಲಿ ಒಬ್ಬನು, “ನಾನು ಪೌಲನನ್ನು ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ; ಮತ್ತೊಬ್ಬನು, “ನಾನು ಅಪೊಲ್ಲೋಸನನ್ನು ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ. ಇನ್ನೊಬ್ಬನು, “ನಾನು ಕೇಫನನ್ನು (ಪೇತ್ರನನ್ನು) ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ. ಮತ್ತೊಬ್ಬನು, “ನಾನು ಕ್ರಿಸ್ತನನ್ನು ಹಿಂಬಾಲಿಸುತ್ತೇನೆ.” ಎಂದು ಹೇಳುತ್ತಾನೆ.
ಇದು ದೇವರ ಜ್ಞಾನದ ಸಂಕಲ್ಪವಾಗಿತ್ತು. ಲೋಕವು ತನ್ನ ಸ್ವಂತ ಜ್ಞಾನದ ಮೂಲಕವಾಗಿ ದೇವರನ್ನು ತಿಳಿದುಕೊಂಡಿರಲಿಲ್ಲ. ಆದ್ದರಿಂದ ಮೂರ್ಖತನದಂತೆ ತೋರುವ ಸಂದೇಶದ ಮೂಲಕ ನಂಬುವವರನ್ನು ರಕ್ಷಿಸುವುದು ದೇವರಿಗೆ ಒಳ್ಳೆಯದೆನಿಸಿತು.
ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ಕರೆದಾಗ ನೀವು ಹೇಗಿದ್ದಿರಿ ಎಂದು ಜ್ಞಾಪಿಸಿಕೊಳ್ಳಿರಿ. ಲೋಕದ ಎಣಿಕೆಯಲ್ಲಿ ನಿಮ್ಮಲ್ಲಿ ಅನೇಕರು ಜ್ಞಾನಿಗಳಾಗಿರಲಿಲ್ಲ; ಅಧಿಕಾರಿಗಳಾಗಿರಲಿಲ್ಲ; ಪ್ರಾಮುಖ್ಯವಾದ ಕುಟುಂಬಗಳಿಗೆ ಸೇರಿದವರಾಗಿರಲಿಲ್ಲ.
ಲೋಕವು ಯಾವುದನ್ನು ಮುಖ್ಯವಲ್ಲವೆಂದು ಯೋಚಿಸುತ್ತದೆಯೋ ಯಾವುದನ್ನು ದ್ವೇಷಿಸುತ್ತದೆಯೋ ಮತ್ತು ನಿಷ್ಪ್ರಯೋಜಕವೆಂದು ಪರಿಗಣಿಸುತ್ತದೆಯೋ ಅದನ್ನು ದೇವರು ಆರಿಸಿಕೊಂಡನು. ಲೋಕವು ಯಾವುದನ್ನು ಮುಖ್ಯವೆಂದು ಯೋಚಿಸುತ್ತದೊ ಅದನ್ನು ನಾಶಪಡಿಸಲು ದೇವರು ಹೀಗೆ ಮಾಡಿದನು.
ನಿಮ್ಮನ್ನು ಕ್ರಿಸ್ತ ಯೇಸುವಿನಲ್ಲಿ ಒಂದು ಭಾಗವನ್ನಾಗಿ ಮಾಡಿದಾತನು ದೇವರೇ. ಕ್ರಿಸ್ತನು ನಮಗಾಗಿ ದೇವರಿಂದ ಬಂದ ಜ್ಞಾನವಾಗಿದ್ದಾನೆ. ನಾವು ನೀತಿವಂತರಾಗಿರುವುದಕ್ಕೆ, ಪಾಪದಿಂದ ಬಿಡುಗಡೆಯಾಗಿರುವುದಕ್ಕೆ ಮತ್ತು ಪವಿತ್ರರಾಗಿರುವುದಕ್ಕೆ ಕ್ರಿಸ್ತನೇ ಕಾರಣನಾಗಿದ್ದಾನೆ.