ಹೀಗೆ ನಾನು ತಿರುಗಿಕೊಂಡು ಸೂರ್ಯನ ಕೆಳಗೆ ನಡೆಯುತ್ತಿರುವ ಹಿಂಸೆಗಳನ್ನೆಲ್ಲಾ ನಾನು ಯೋಚಿಸಿದೆನು; ಹಿಂಸಿಸಲ್ಪಟ್ಟವರ ಕಣ್ಣೀರನ್ನೂ ಅವರನ್ನು ಆದರಿಸುವವರು ಯಾರೂ ಇಲ್ಲದಿರುವ ದನ್ನೂ ನೋಡಿದೆನು; ಅವರನ್ನು ಹಿಂಸೆಪಡಿಸುವವರ ಕಡೆಗೆ ಶಕ್ತಿ ಇತ್ತು; ಆದರೆ ಇವರನ್ನು ಆದರಿಸುವವನು ಯಾವನೂ ಇಲ್ಲ.
ತಿರುಗಿ ಎಲ್ಲಾ ಪ್ರಯಾಸಕ್ಕಾಗಿಯೂ ಪ್ರತಿಯೊಂದು ಒಳ್ಳೆಯ ಕಾರ್ಯಕ್ಕಾಗಿಯೂ ಮನುಷ್ಯನು ತನ್ನ ನೆರೆಯವನ ಮೇಲೆ ಅಸೂಯೆ ಪಡುತ್ತಾನೆಂದೂ ನಾನು ತಿಳುಕೊಂಡೆನು. ಇದೂ ಕೂಡ ವ್ಯರ್ಥವೂ ಪ್ರಾಣಕ್ಕೆ ಆಯಾಸಕರವೂ ಆಗಿದೆ.
ಎರಡನೆಯವನಿಲ್ಲದ ಒಬ್ಬೊಂಟಿಗನು ಒಬ್ಬನಿದ್ದಾನೆ; ಹೌದು, ಅವನಿಗೆ ಮಗುವಾಗಲೀ ಸಹೋದರನಾಗಲೀ ಇಲ್ಲ; ಆದರೂ ಅವನ ಪ್ರಯಾಸಕ್ಕೆ ಕೊನೆಯಿಲ್ಲ. ಅಲ್ಲದೆ ಐಶ್ವರ್ಯ ದಿಂದ ಅವನ ಕಣ್ಣು ತೃಪ್ತಿಹೊಂದದು; ಮಾತ್ರವಲ್ಲದೆ ಅವನು--ನಾನು ಯಾರಿಗೋಸ್ಕರ ಕಷ್ಟಪಟ್ಟು ಪ್ರಾಣ ವನ್ನು ಅದಕ್ಕೆ ಸುಖವಿಲ್ಲದ ಹಾಗೆ ಕೊರೆತೆಪಡಿಸು ತ್ತೇನೆ; ಎಂದು ಅವನು ಅಂದುಕೊಳ್ಳುವನು. ಇದು ಕೂಡ ವ್ಯರ್ಥವೇ; ಹೌದು, ವ್ಯಥೆಯಿಂದಾದ ಪ್ರಯಾಸವೇ.
ಎಲ್ಲಾ ಜನರಿಗೂ ಅವರಿಗಿಂತ ಮುಂಚೆ ಇದ್ದ ಎಲ್ಲವುಗಳಿಗೂ ಅಂತ್ಯವಿಲ್ಲ; ಅವನ ತರುವಾಯ ಬರುವವನು ಸಹ ಅವನಲ್ಲಿ ಆನಂದಿಸುವದಿಲ್ಲ. ಖಂಡಿತವಾಗಿಯೂ ಇದೂ ಕೂಡ ವ್ಯರ್ಥವೂ ಮನಸ್ಸಿಗೆ ಆಯಾಸಕರವೂ ಆಗಿದೆ.