ಮೊದಲು ನಾವು ಸಹ ಅವಿವೇಕಿಗಳಾಗಿದ್ದೆವು. ನಾವು ವಿಧೇಯರಾಗಿರಲಿಲ್ಲ. ನಾವು ಮೋಸಹೋಗಿದ್ದೆವು. ಅನೇಕ ಬಗೆಯ ಆಸೆಗಳಿಗೆ ಮತ್ತು ಭೋಗಗಳಿಗೆ ದಾಸರಾಗಿದ್ದೆವು; ಕೆಟ್ಟದ್ದನ್ನು ಮಾಡುವವರೂ ಹೊಟ್ಟೆಕಿಚ್ಚುಳ್ಳವರೂ ಆಗಿದ್ದೆವು. ಜನರು ನಮ್ಮನ್ನು ದ್ವೇಷಿಸುತ್ತಿದ್ದರು. ನಾವು ಒಬ್ಬರನ್ನೊಬ್ಬರು ದ್ವೇಷಿಸುತ್ತಿದ್ದೆವು.
ಆತನು ನಮ್ಮನ್ನು ರಕ್ಷಿಸಿದ್ದು ತನ್ನ ಕರುಣೆಯಿಂದಲೇ ಹೊರತು ನೀತಿವಂತರಾಗಲು ನಾವು ಮಾಡಿದ ಒಳ್ಳೆಯ ಕಾರ್ಯಗಳಿಂದಲ್ಲ. ಆತನು ನಮ್ಮನ್ನು ಸ್ನಾನದ ಮೂಲಕವಾಗಿಯೂ ಪವಿತ್ರಾತ್ಮನ ಮೂಲಕವಾಗಿಯೂ ಹೊಸಬರನ್ನಾಗಿ ಮಾಡಿ ರಕ್ಷಿಸಿದನು.
ಈ ಬೋಧನೆಯು ಸತ್ಯವಾದದ್ದು. ನೀನು ಜನರಿಗೆ ಈ ಸಂಗತಿಗಳನ್ನು ಒತ್ತಿಹೇಳಬೇಕೆಂದು ನಾನು ಅಪೇಕ್ಷಿಸುತ್ತೇನೆ. ಆಗ, ದೇವರಲ್ಲಿ ನಂಬಿಕೆ ಇಟ್ಟಿರುವವರು ಜಾಗರೂಕರಾಗಿದ್ದು ತಮ್ಮ ಜೀವನದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವರು. ಇವು ಎಲ್ಲರಿಗೂ ಹಿತಕರವಾಗಿವೆ ಮತ್ತು ಪ್ರಯೋಜನಕರವಾಗಿವೆ.
ಬುದ್ಧಿಯಿಲ್ಲದೆ ಕುತರ್ಕ ಮಾಡುವ ಜನರಿಂದ, ನಿರರ್ಥಕವಾದ ವಂಶಾವಳಿಗಳ ಚರಿತ್ರೆಯ ಬಗ್ಗೆ ಮಾತನಾಡುವ ಜನರಿಂದ, ಮೋಶೆಯು ಬರೆದಿರುವ ಧರ್ಮಶಾಸ್ತ್ರದಲ್ಲಿರುವ ನಿಯಮಗಳ ಬಗ್ಗೆ ತೊಂದರೆಯನ್ನು ಉಂಟುಮಾಡುವ ಮತ್ತು ವಾಗ್ವಾದ ಮಾಡುವ ಜನರಿಂದ ದೂರವಾಗಿರು. ಅವುಗಳಿಗೆ ಯಾವ ಬೆಲೆಯೂ ಇಲ್ಲ, ಅವುಗಳಿಂದ ಜನರಿಗೆ ಯಾವ ಪ್ರಯೋಜನವೂ ಇಲ್ಲ.
ನಾನು ನಿನ್ನ ಬಳಿಗೆ ಅರ್ತೆಮನನ್ನು ಮತ್ತು ತುಖಿಕನನ್ನು ಕಳುಹಿಸಿದಾಗ, ನಿಕೊಪೊಲಿಯಲ್ಲಿರುವ ನನ್ನ ಬಳಿಗೆ ಬರಲು ಆದಷ್ಟು ಪ್ರಯತ್ನಿಸು. ನಾನು ಈ ಚಳಿಗಾಲವನ್ನು ಅಲ್ಲಿಯೇ ಕಳೆಯಬೇಕೆಂದಿದ್ದೇನೆ.
ಇಲ್ಲಿ ನನ್ನೊಡನೆ ಇರುವ ಜನರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ. ಕ್ರಿಸ್ತನಲ್ಲಿ ನಂಬಿಕೆ ಇಟ್ಟವರಾಗಿದ್ದು ನಮ್ಮನ್ನು ಪ್ರೀತಿಸುವವರಿಗೆಲ್ಲ ನಮ್ಮ ವಂದನೆ ತಿಳಿಸು. ದೇವರ ಕೃಪೆಯು ನಿಮ್ಮೊಂದಿಗಿರಲಿ.