ನನ್ನ ಸಹೋದರ ಸಹೋದರಿಯರೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ನಿಮ್ಮನ್ನು ನೋಡಬಯಸುತ್ತೇನೆ. ನೀವು ನನಗೆ ಆನಂದವನ್ನು ಉಂಟುಮಾಡಿ, ನಿಮ್ಮ ವಿಷಯದಲ್ಲಿ ನಾನು ಹೆಮ್ಮಪಡುವಂತೆ ಮಾಡಿದ್ದೀರಿ. ನಾನು ನಿಮಗೆ ಹೇಳಿದಂತೆ ಪ್ರಭುವನ್ನು ಅನುಸರಿಸಿರಿ.
ನನ್ನ ಸ್ನೇಹಿತನೇ, ನೀನು ನನ್ನ ಜೊತೆಕೆಲಸದವನಾಗಿ ನಂಬಿಗಸ್ತಿಕೆಯಿಂದ ಸೇವೆ ಮಾಡುತ್ತಿರುವುದರಿಂದ ಈ ಸ್ತ್ರೀಯರಿಗೂ ನೀನು ಸಹಾಯ ಮಾಡಬೇಕೆಂದು ನಿನ್ನನ್ನು ಕೇಳಿಕೊಳ್ಳುತ್ತೇನೆ. ಈ ಸ್ತ್ರೀಯರು ನನ್ನೊಂದಿಗೆ ಸುವಾರ್ತೆಗೋಸ್ಕರ ಸೇವೆ ಮಾಡಿದ್ದಾರೆ. ನನ್ನೊಂದಿಗೆ ಸೇವೆ ಮಾಡುತ್ತಿದ್ದ ಕ್ಲೇಮೆನ್ಸ್ ಮತ್ತು ಇತರ ಸೇವಕರೊಡನೆ ಈ ಸ್ತ್ರೀಯರು ಸೇವೆ ಮಾಡಿದ್ದಾರೆ. ಅವರ ಹೆಸರುಗಳು ಜೀವಬಾಧ್ಯರ ಪುಸಕ್ತದಲ್ಲಿ [*ಜೀವಬಾಧ್ಯರ ಪುಸ್ತಕ ಆಯ್ಕೆಗೊಂಡ ದೇವಮಕ್ಕಳೆಲ್ಲರ ಹೆಸರನ್ನು ಹೊಂದಿರುವ ದೇವರ ಪುಸ್ತಕ. ನೋಡಿರಿ: ಪ್ರಕಟನೆ 3:5; 21:27.] ಬರೆಯಲ್ಪಟ್ಟಿವೆ.
ಯಾವುದರ ಬಗ್ಗೆಯೂ ಚಿಂತಿಸಬೇಡಿ. ಆದರೆ ಪ್ರಾರ್ಥನೆ ಮಾಡುತ್ತಾ ನಿಮ್ಮ ಅಗತ್ಯತೆಗಳಿಗೆಲ್ಲಾ ದೇವರಲ್ಲಿ ವಿಜ್ಞಾಪಿಸಿರಿ. ನೀವು ಪ್ರಾರ್ಥನೆ ಮಾಡುವಾಗಲೆಲ್ಲಾ ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ.
ಸಹೋದರ ಸಹೋದರಿಯರೇ, ಒಳ್ಳೆಯದಾದ ಮತ್ತು ಸ್ತುತಿಗೆ ಯೋಗ್ಯವಾದ ಸಂಗತಿಗಳ ಬಗ್ಗೆ ಆಲೋಚಿಸಿರಿ. ಸತ್ಯವಾದ, ಮಾನ್ಯವಾದ, ನ್ಯಾಯವಾದ, ಶುದ್ಧವಾದ, ಸುಂದರವಾದ ಮತ್ತು ಗೌರವಯುತವಾದ ವಿಷಯಗಳ ಬಗ್ಗೆ ಆಲೋಚಿಸಿರಿ.
ನನ್ನ ಮೇಲೆ ನಿಮಗಿರುವ ಚಿಂತೆಯನ್ನು ನೀವು ಮತ್ತೆ ತೋರಿಸಿದ್ದಕ್ಕಾಗಿ ನಾನು ಪ್ರಭುವಿನಲ್ಲಿ ಬಹು ಸಂತೋಷಪಡುತ್ತೇನೆ. ನೀವು ನನ್ನ ಬಗ್ಗೆ ಚಿಂತಿಸುತ್ತಲೇ ಇದ್ದೀರಿ. ಆದರೆ ಅದನ್ನು ತೋರಿಸಲು ನಿಮಗೆ ಅವಕಾಶವೇ ಇರಲಿಲ್ಲ.
ನಾನು ಈ ಮಾತುಗಳನ್ನು ಹೇಳುತ್ತಿರುವುದು ನನಗಿರುವ ಕೊರತೆಯ ದೆಸೆಯಿಂದಲ್ಲ. ನನ್ನಲ್ಲಿರುವಂಥವುಗಳಲ್ಲಿ ಮತ್ತು ನನಗೆ ಸಂಭವಿಸುವ ಪ್ರತಿಯೊಂದರಲ್ಲಿ ತೃಪ್ತನಾಗಿರಲು ನಾನು ಕಲಿತುಕೊಂಡಿದ್ದೇನೆ.
ಹಸಿವೆಯಿಂದಿರುವಾಗಲೂ ಸಮೃದ್ಧಿಯುಳ್ಳವನಾಗಿರುವಾಗಲೂ ಹೇಗೆ ಜೀವಿಸಬೇಕೆಂಬುದು ನನಗೆ ತಿಳಿದಿದೆ. ಯಾವ ಸಮಯದಲ್ಲಾಗಲಿ ಯಾವ ಪರಿಸ್ಥಿತಿಯಲ್ಲಾಗಲಿ ಸಂತೋಷದಿಂದಿರುವ ಗುಟ್ಟು ನನಗೆ ತಿಳಿದಿದೆ. ಊಟಕ್ಕೆ ಬೇಕಾದಷ್ಟು ಇರುವಾಗಲೂ ಇಲ್ಲದಿರುವಾಗಲೂ ನನಗೆ ಅಗತ್ಯವಾದವುಗಳನ್ನು ಹೊಂದಿರುವಾಗಲೂ ಹೊಂದಿಲ್ಲದಿರುವಾಗಲೂ ಸಂತೋಷವಾಗಿರಲು ಕಲಿತುಕೊಂಡಿದ್ದೇನೆ.
ನಿಜವಾಗಿಯೂ, ನಿಮ್ಮಿಂದ ಕೊಡುಗೆಗಳನ್ನು ಪಡೆದುಕೊಳ್ಳಬೇಕೆಂಬುದು ನನ್ನ ಅಪೇಕ್ಷೆಯಲ್ಲ. ಆದರೆ ಕೊಡುವುದರ ಮೂಲಕ ಮುಂದೆ ಹೇರಳವಾಗಿ ದೊರೆಯುವ ಆಶೀರ್ವಾದಗಳನ್ನು ನೀವು ಹೊಂದಿಕೊಳ್ಳಬೇಕೆಂಬುದೇ ನನ್ನ ಅಪೇಕ್ಷೆ.
ಎಪಫ್ರೊದೀತನು ನಿಮ್ಮ ಕೊಡುಗೆಯನ್ನು ತಂದು ಕೊಟ್ಟಿದ್ದರಿಂದ ಬೇಕಾದದ್ದೆಲ್ಲ ನನ್ನಲ್ಲಿ ಹೇರಳವಾಗಿದೆ. ನಿಮ್ಮ ಕೊಡುಗೆಯು ದೇವರಿಗೆ ಅರ್ಪಿಸಲ್ಪಟ್ಟ ಪರಿಮಳಭರಿತವಾದ ಯಜ್ಞವಾಗಿದೆ. ಇದು ದೇವರಿಗೆ ಮೆಚ್ಚಿಕೆಯಾದದ್ದೂ ಆಗಿದೆ.