ಅಂತೆಯೇ ಆರೋನನು ಮಾಡಿದನು. ಆರೋನನು ದೀಪಗಳನ್ನು ಸರಿಯಾದ ಸ್ಥಳದಲ್ಲಿಟ್ಟು ಅವುಗಳು ದೀಪಸ್ತಂಭದ ಎದುರಿನಲ್ಲಿ ಪ್ರಕಾಶಿಸುವಂತೆ ಮಾಡಿದನು. ಹೀಗೆ ಯೆಹೋವನು ಹೇಳಿದಂತೆಯೇ ಮೋಶೆಯು ಮಾಡಿದನು.
ಅವರನ್ನು ಶುದ್ಧೀಕರಿಸುವ ಕ್ರಮ ಹೇಗೆಂದರೆ, ನೀನು ಅವರ ಮೇಲೆ ದೋಷಪರಿಹಾರಕ ಜಲವನ್ನು ಚಿಮಿಕಿಸಬೇಕು. ಬಳಿಕ ಅವರು ಸರ್ವಾಂಗಕ್ಷೌರ ಮಾಡಿಸಿಕೊಂಡು ತಮ್ಮ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಹೀಗೆ ತಮ್ಮನ್ನು ಶುದ್ಧಪಡಿಸಿಕೊಳ್ಳಬೇಕು.
“ತರುವಾಯ ಲೇವಿಯರು ಸರ್ವಾಂಗಹೋಮಕ್ಕಾಗಿ ಒಂದು ಎಳೆಹೋರಿಯನ್ನು ಮತ್ತು ಅದರೊಡನೆ ಸಮರ್ಪಿಸಬೇಕಾದ ಧಾನ್ಯಸಮರ್ಪಣೆಗಾಗಿ ಎಣ್ಣೆ ಬೆರೆಸಿದ ಗೋಧಿಯಹಿಟ್ಟನ್ನು ತೆಗೆದುಕೊಂಡು ಬರಬೇಕು; ನೀನು ಅವರಿಂದ ದೋಷಪರಿಹಾರಕ ಯಜ್ಞಕ್ಕಾಗಿ ಮತ್ತೊಂದು ಎಳೆಹೋರಿಯನ್ನು ತೆಗೆದುಕೊಳ್ಳಬೇಕು.
“ಲೇವಿಯರು ಆ ಹೋರಿಗಳ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟ ನಂತರ, ನೀನು ಯೆಹೋವನಿಗೆ ದೋಷಪರಿಹಾರಕ ಯಜ್ಞವಾಗಿ ಒಂದು ಹೋರಿಯನ್ನೂ ಸರ್ವಾಂಗಹೋಮವಾಗಿ ಇನ್ನೊಂದು ಹೋರಿಯನ್ನೂ ಸಮರ್ಪಿಸಬೇಕು. ಇವು ಲೇವಿಯರಿಗೆ ನೈವೇದ್ಯದ ಸಮರ್ಪಣೆಗಳಾಗಿವೆ.
ಯಾಕೆಂದರೆ ಲೇವಿಯರು ಇಸ್ರೇಲರ ಮಧ್ಯದಿಂದ ನನಗಾಗಿ ಸಂಪೂರ್ಣವಾಗಿ ಪ್ರತಿಷ್ಠಿತರಾಗಿದ್ದಾರೆ. ಇಸ್ರೇಲರ ಚೊಚ್ಚಲು ಗಂಡುಮಕ್ಕಳಿಗೆ ಬದಲಾಗಿ ನಾನು ಇವರನ್ನೇ ನನ್ನ ಸ್ವಂತಕ್ಕಾಗಿ ತೆಗೆದುಕೊಂಡಿದ್ದೇನೆ.
ಇಸ್ರೇಲರಲ್ಲಿ ಚೊಚ್ಚಲಾದ ಮನುಷ್ಯರೂ ಪಶುಗಳೂ ನನ್ನ ಸ್ವತ್ತಾಗಿರುವರು. ಈಜಿಪ್ಟ್ ದೇಶದಲ್ಲಿದ್ದ ಚೊಚ್ಚಲಾದದ್ದನ್ನೆಲ್ಲ ನಾನು ಸಂಹರಿಸಿದಾಗ ಇಸ್ರೇಲರ ಚೊಚ್ಚಲಾದದ್ದನ್ನು ನನ್ನ ಸ್ವಂತಕ್ಕಾಗಿ ಪ್ರತಿಷ್ಠಿಸಿಕೊಂಡೆನಲ್ಲಾ.
ಇಸ್ರೇಲರ ಮಧ್ಯದಿಂದ ನಾನು ಲೇವಿಯರನ್ನು ಆರಿಸಿಕೊಂಡಿದ್ದೇನೆ ಮತ್ತು ದೇವದರ್ಶನಗುಡಾರದಲ್ಲಿ ಇಸ್ರೇಲರ ಪರವಾಗಿ ಕೆಲಸ ಮಾಡಲೂ ಮತ್ತು ಇಸ್ರೇಲರಿಗೆ ದೋಷಪರಿಹಾರ ಮಾಡುವುದಕ್ಕೂ ನಾನು ಅವರನ್ನು ಆರೋನ ಮತ್ತು ಅವನ ಪುತ್ರರಿಗೆ ಒಪ್ಪಿಸಿಕೊಟ್ಟಿದ್ದೇನೆ. ಇಸ್ರೇಲರನ್ನು ಶುದ್ಧಿಗೊಳಿಸುವ ಯಜ್ಞಗಳನ್ನು ಸಮರ್ಪಿಸುವುದಕ್ಕೆ ಅವರು ಸಹಾಯ ಮಾಡುವರು. ಹೀಗಿರುವುದರಿಂದ ಇಸ್ರೇಲರು ಪವಿತ್ರವಸ್ತುಗಳ ಅತೀ ಸಮೀಪಕ್ಕೆ ಬಂದರೂ ಅವರಿಗೆ ಅಪಾಯವು ಸಂಭವಿಸುವುದಿಲ್ಲ.”
ಲೇವಿಯರು ತಮ್ಮನ್ನು ಶುದ್ಧಮಾಡಿಕೊಂಡು ಬಟ್ಟೆಗಳನ್ನು ಒಗೆದುಕೊಂಡರು. ಬಳಿಕ ಆರೋನನು ಅವರನ್ನು ಯೆಹೋವನಿಗೆ ವಿಶೇಷ ಕೊಡುಗೆಯಾಗಿ ಕೊಟ್ಟನು. ಆರೋನನು ಅವರನ್ನು ಶುದ್ಧೀಕರಿಸುವುದಕ್ಕಾಗಿ ದೋಷಪರಿಹಾರ ಮಾಡಿದನು.
ಆಗ ಲೇವಿಯರು ದೇವದರ್ಶನಗುಡಾರದಲ್ಲಿ ಆರೋನನ ಮತ್ತು ಅವನ ಪುತ್ರರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡಲು ಅರ್ಹರಾದರು. ಯೆಹೋವನು ಮೋಶೆಗೆ ಲೇವಿಯರ ಬಗ್ಗೆ ಆಜ್ಞಾಪಿಸಿದ್ದಂತೆಯೇ ಅವರಿಗೆ ಮಾಡಲಾಯಿತು.
“ಲೇವಿಯರು ಅನುಸರಿಸಬೇಕಾದ ಪದ್ಧತಿ ಏನೆಂದರೆ: ಲೇವಿಯರಲ್ಲಿ ಇಪ್ಪತ್ತೈದು ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ಗಂಡಸರು ದೇವದರ್ಶನಗುಡಾರದ ಸೇವೆಯ ದಳದಲ್ಲಿ ಕೆಲಸಮಾಡಲು ಯೋಗ್ಯರಾಗಿದ್ದಾರೆ.