ನಿಮ್ಮ ಗುಡಾರಗಳು ಕಣಿವೆಗಳಂತೆ ಹರಡಿಕೊಂಡಿವೆ. ನಿಮ್ಮ ಗುಡಾರಗಳು ನದಿಯ ಬಳಿಯಿರುವ ತೋಟಗಳಂತಿವೆ. ನಿಮ್ಮ ಗುಡಾರಗಳು ಯೆಹೋವನು ನೆಟ್ಟ ಸುವಾಸನೆಯ ಪೊದೆಗಳಂತೆಯೂ ನೀರಿನ ಬಳಿಯಿರುವ ದೇವದಾರಿನ ಮರಗಳಂತೆಯೂ ಇವೆ.
ನಿಮಗೆ ಯಾವಾಗಲೂ ಬೇಕಾದಷ್ಟು ನೀರು ಇರುವುದು; ನೀವು ಬಿತ್ತಿದ ಬೀಜಗಳು ಬೆಳೆಯಲು ಸಾಕಷ್ಟು ನೀರು ಇರುವುದು. ನಿಮ್ಮ ಅರಸನು ಆಗಾಗ್ ಎಂಬವನಿಗಿಂತಲೂ ದೊಡ್ಡವನಾಗಿದ್ದಾನೆ. ನಿಮ್ಮ ರಾಜ್ಯವು ಬಹಳ ಬಲಿಷ್ಠವಾಗಿರುವುದು.
“ದೇವರು ಆ ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. ಅವರು ಕಾಡುಕೋಣದಂತೆ ಬಲಿಷ್ಠರಾಗಿದ್ದಾರೆ. ಅವರು ತಮ್ಮೆಲ್ಲಾ ಶತ್ರುಗಳನ್ನು ಸೋಲಿಸುವರು. ಅವರು ತಮ್ಮ ವೈರಿಗಳ ಮೂಳೆಗಳನ್ನು ಮುರಿದುಹಾಕುವರು. ಅವರ ಬಾಣಗಳು ಅವರ ವೈರಿಗಳನ್ನು ಕೊಲ್ಲುವವು.
ಆದ್ದರಿಂದ ನೀನೀಗ ನೇರವಾಗಿ ಮನೆಗೆ ಹೋಗಿಬಿಡು. ನಿನಗೆ ಹೆಚ್ಚು ಹಣ ಕೊಡುವುದಾಗಿ ಆಲೋಚಿಸಿದ್ದೆನು. ಆದರೆ ನೀನು ನಿನ್ನ ಬಹುಮಾನವನ್ನು ಕಳೆದುಕೊಳ್ಳುವಂತೆ ಯೆಹೋವನು ಮಾಡಿದನು” ಎಂದು ಹೇಳಿದನು.
(12-13) ಅದಕ್ಕೆ ಬಿಳಾಮನು ಬಾಲಾಕನಿಗೆ, “ಬಾಲಾಕನು, ಬೆಳ್ಳಿಬಂಗಾರಗಳಿಂದ ತುಂಬಿದ ತನ್ನ ಅರಮನೆಯನ್ನು ಕೊಟ್ಟರೂ ನಾನು ಯೆಹೋವನ ಆಜ್ಞೆಯನ್ನು ಮೀರಿ ನನಗೆ ಇಷ್ಟಬಂದಂತೆ ಕೆಟ್ಟದ್ದನ್ನಾಗಲಿ ಒಳ್ಳೆಯದನ್ನಾಗಲಿ ನಾನು ಮಾಡಲಾರೆನು; ಆದರೆ ಯೆಹೋವನು ಆಜ್ಞಾಪಿಸುವುದನ್ನೇ ಮಾತಾಡುವೆನೆಂದು ನೀನು ನನ್ನ ಬಳಿಗೆ ಕಳುಹಿಸಿದ ದೂತರಿಗೆ ಹೇಳಲಿಲ್ಲವೇ?
ನಾನು ದೇವರ ಮುಂದೆ ಅಡ್ಡಬೀಳುತ್ತೇನೆ, ಆದರೆ ನನ್ನ ಕಣ್ಣುಗಳು ಮುಚ್ಚಲ್ಪಟ್ಟಿಲ್ಲ. ನಾನು ದೇವರ ವಾಕ್ಯಗಳನ್ನು ಕೇಳುತ್ತಿದ್ದೇನೆ. ನಾನು ಮಹೋನ್ನತನಾದ ದೇವರಿಂದ ಜ್ಞಾನವನ್ನು ಹೊಂದಿಕೊಳ್ಳುತ್ತಿದ್ದೇನೆ. ಸರ್ವಶಕ್ತನಾದ ದೇವರು ತೋರಿಸುವ ಸಂಗತಿಗಳನ್ನು ನಾನು ನೋಡುತ್ತಿದ್ದೇನೆ.
“ಬರುತ್ತಿರುವ ಒಬ್ಬನನ್ನು ನೋಡುತ್ತಿದ್ದೇನೆ. ಆದರೆ ಈಗಲ್ಲ. ಬರುತ್ತಿರುವ ಒಬ್ಬನನ್ನು ನೋಡುತ್ತಿದ್ದೇನೆ, ಆದರೆ ಬೇಗನೆ ಅಲ್ಲ. ಯಾಕೋಬನ ವಂಶದಿಂದ ನಕ್ಷತ್ರವೊಂದು ಬರುವುದು. ಇಸ್ರೇಲರಿಂದ ಅರಸನೊಬ್ಬನು ಬರುವನು. ಅವನು ಮೋವಾಬ್ಯರ ತಲೆಯನ್ನು ಜಜ್ಜುವನು. ಆ ಅರಸನು ಶೇತನ ಪುತ್ರರೆಲ್ಲರ ತಲೆಗಳನ್ನು ಜಜ್ಜುವನು.
“ತರುವಾಯ ಬಿಳಾಮನು ಅಮಾಲೇಕ್ಯರನ್ನು ನೋಡಿ ಹೀಗೆಂದನು: “ಅಮಾಲೇಕ್ಯರು ಎಲ್ಲಾ ಜನಾಂಗಗಳಲ್ಲಿ ಬಲಿಷ್ಠರು; ಅಮಾಲೇಕ್ಯರು ಎಲ್ಲಾ ಜನಾಂಗಗಳಲ್ಲಿ ಮೊದಲನೆಯವರು; ಆದರೆ ಕೊನೆಯಲ್ಲಿ ಅವರು ನಾಶವಾಗುವರು.”
ಆಗ ಬಿಳಾಮನು ಕೇನ್ಯರನ್ನು ನೋಡಿ ಹೀಗೆಂದನು: “ನಿಮ್ಮ ಮನೆಯು ಬೆಟ್ಟದ ತುದಿಯಲ್ಲಿರುವ ಪಕ್ಷಿಯ ಗೂಡಿನಂತೆ [*ಗೂಡು ಹೀಬ್ರೂ ಭಾಷೆಯಲ್ಲಿ ಈ ಪದವು “ಕೇನ್ಯರು” ಎಂಬ ಉಚ್ಛಾರಣೆಯನ್ನು ಹೊಂದಿದೆ.] ಸುರಕ್ಷಿತವಾಗಿದೆಯೆಂದು ನೀವು ನಂಬುತ್ತೀರಿ.