“ಇಸ್ರೇಲರು ದೇವದರ್ಶನಗುಡಾರದ ಸುತ್ತಲೂ ಸ್ವಲ್ಪ ದೂರದಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಪ್ರತಿಯೊಬ್ಬನು ತನ್ನತನ್ನ ಗೋತ್ರಧ್ವಜದ ಹತ್ತಿರ ತನ್ನತನ್ನ ದಂಡಿನಲ್ಲೇ ಇಳಿದುಕೊಳ್ಳಬೇಕು.
“ವಿಭಾಗಗಳಿಗನುಸಾರವಾಗಿ ತಮ್ಮತಮ್ಮ ಸ್ವಂತ ಧ್ವಜಗಳೊಡನೆ ಮುನ್ನಡೆಯುವ ಯೆಹೂದ ಮತ್ತು ಅದರ ಗೋತ್ರಗಳವರು ದೇವದರ್ಶನಗುಡಾರದ ಪೂರ್ವದಿಕ್ಕಿನಲ್ಲಿ ಪಾಳೆಯ ಮಾಡಿಕೊಳ್ಳಬೇಕು. ಯೆಹೂದ ಕುಲದವರ ನಾಯಕನು ಅಮ್ಮೀನಾದ್ವಾನ ಮಗನಾದ ನಹಶೋನ.
“ಯೆಹೂದ ಪಾಳೆಯದಲ್ಲಿ ಮತ್ತು ಅದರೊಡನೆ ಮುನ್ನಡೆಯುವ ಗೋತ್ರಗಳವರ ಒಟ್ಟು ಸೈನಿಕರು 1,86,400 ಮಂದಿ. ಇವರೆಲ್ಲರು ವಿಭಾಗಗಳಿಗನುಸಾರವಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡವರು. ಇಸ್ರೇಲರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡುವಾಗ, ಯೆಹೂದ ಕುಲವು ಮತ್ತು ಅದರೊಂದಿಗಿರುವ ಎರಡು ಕುಲಗಳವರು ಮೊದಲು ಹೊರಡುವರು.
“ರೂಬೇನ್ ಪಾಳೆಯದಲ್ಲಿರುವ ಎಲ್ಲಾ ತಂಡಗಳಲ್ಲಿರುವ ಒಟ್ಟು ಸೈನಿಕರು 1,51,450 ಮಂದಿ. ಇವರೆಲ್ಲರೂ ವಿಭಾಗಗಳಿಗನುಸಾರವಾಗಿ ಹೆಸರನ್ನು ನೊಂದಾಯಿಸಿಕೊಂಡವರು. ಇಸ್ರೇಲರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡುವಾಗ ರೂಬೇನ್ ಕುಲವು ಮತ್ತು ಅದರ ನಂತರದಲ್ಲಿರುವ ಎರಡು ಕುಲಗಳವರು ಎರಡನೆಯದಾಗಿ ಹೊರಡುವರು.
“ಇಸ್ರೇಲರು ಪ್ರಯಾಣಮಾಡುವಾಗ ಅವರ ನಂತರ ಹೊರಡುವ ತಂಡದವರೇ ಲೇವಿ ಕುಲದವರು. ಇತರ ಪಾಳೆಯಗಳ ಮಧ್ಯೆ ದೇವದರ್ಶನಗುಡಾರವು ಅವರೊಡನೆ ಇರುವುದು. ಅವರು ತಾವು ಪಾಳೆಯ ಮಾಡಿಕೊಂಡ ಕ್ರಮಾನುಸಾರವಾಗಿ ತಮ್ಮ ಧ್ವಜಗಳೊಡನೆ ಮುನ್ನಡೆಯುವರು.
“ಎಫ್ರಾಯೀಮ್ ಕುಲದವರು ಮತ್ತು ಅವರೊಡನೆ ಮುನ್ನಡೆಯುವ ಕುಲಗಳವರು ದೇವದರ್ಶನಗುಡಾರದ ಪಶ್ಚಿಮ ದಿಕ್ಕಿನಲ್ಲಿ ತಮ್ಮ ಧ್ವಜಗಳೊಡನೆ ವಿಭಾಗಗಳಿಗನುಸಾರವಾಗಿ ಪಾಳೆಯ ಮಾಡಬೇಕು. ಎಫ್ರಾಯೀಮ್ ಕುಲದವರ ನಾಯಕನು ಅಮ್ಮೀಹೂದನ ಮಗನಾದ ಎಲೀಷಾಮ.
“ಎಫ್ರಾಯೀಮ್ ಪಾಳೆಯದಲ್ಲಿರುವ ಸೈನಿಕರು 1,08,100 ಮಂದಿ. ಇವರೆಲ್ಲರು ತಮ್ಮ ವಿಭಾಗಗಳಿಗನುಸಾರವಾಗಿ ಹೆಸರನ್ನು ನೊಂದಾಯಿಸಿಕೊಂಡವರು. ಜನರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡುವಾಗ ಎಫ್ರಾಯೀಮರ ಕುಲದವರು ಮತ್ತು ಅವರ ನಂತರದಲ್ಲಿರುವ ಎರಡು ಕುಲಗಳವರು ಮೂರನೆಯ ಗುಂಪಾಗಿ ಹೊರಡುವರು.
“ದಾನ್ ಕುಲದವರು ಮತ್ತು ಅವರೊಡನೆ ಮುನ್ನಡೆಯುವ ಕುಲಗಳು ದೇವದರ್ಶನಗುಡಾರದ ಉತ್ತರ ದಿಕ್ಕಿನಲ್ಲಿ ತಮ್ಮ ಧ್ವಜದೊಡನೆ ವಿಭಾಗಗಳಿಗನುಸಾರವಾಗಿ ಪಾಳೆಯ ಮಾಡಬೇಕು. ದಾನ್ ಕುಲದ ನಾಯಕನು ಅಮ್ಮೀಷದ್ದೈಯನ ಮಗನಾದ ಅಹೀಗೆಜೆರ್.
“ದಾನ್ ಕುಲದ ಪಾಳೆಯದಲ್ಲಿರುವ ಲೆಕ್ಕಿಸಲ್ಪಟ್ಟ ಸೈನಿಕರು 1,57,600 ಮಂದಿ. ಇಸ್ರೇಲರು ಸ್ಥಳದಿಂದ ಸ್ಥಳಕ್ಕೆ ಪ್ರಯಾಣಮಾಡುವಾಗ ದಾನ್ ಕುಲದವರು ಮತ್ತು ಅವರೊಂದಿಗಿರುವ ಎರಡು ಕುಲಗಳವರು ಕೊನೆಯಲ್ಲಿ ತಮ್ಮ ಧ್ವಜಗಳೊಡನೆ ಮುನ್ನಡೆಯುವರು.”
ಹೀಗೆ ಯೆಹೋವನು ಮೋಶೆಗೆ ಹೇಳಿದ ಪ್ರತಿಯೊಂದನ್ನು ಇಸ್ರೇಲರು ಮಾಡಿದರು. ತಮ್ಮ ಕ್ರಮಕ್ಕನುಸಾರವಾಗಿ ಅವರು ಪಾಳೆಯ ಮಾಡಿಕೊಂಡರು. ನೇಮಕವಾದ ಪ್ರಕಾರವೇ ಪ್ರಯಾಣ ಮಾಡುತ್ತಿದ್ದರು; ಪ್ರತಿಯೊಬ್ಬನು ತನ್ನ ಸ್ವಂತ ಕುಲದೊಡನೆಯೂ ಕುಟುಂಬದೊಡನೆಯೂ ಇದ್ದನು.