“ಯೆಹೋವನು ಆಜ್ಞಾಪಿಸಿದ ಸಂಪ್ರದಾಯದ ನಿಯಮವಿದು. ಯಾವ ದೋಷವಿಲ್ಲದ ಕೆಂಪು ಹಸುವನ್ನು ನಿನಗೆ ತಂದುಕೊಡುವಂತೆ ಇಸ್ರೇಲರಿಗೆ ಹೇಳು. ಆ ಹಸುವಿನಲ್ಲಿ ಯಾವ ಗಾಯಗಳಿರಬಾರದು ಮತ್ತು ಆ ಹಸುವು ಎಂದಿಗೂ ನೊಗವನ್ನು ಹೊತ್ತಿರಬಾರದು.
“ಆಗ ಶುದ್ಧನಾದವನೊಬ್ಬನು ಹಸುವಿನ ಬೂದಿಯನ್ನು ಕೂಡಿಸಿ ಪಾಳೆಯದ ಹೊರಗೆ ಶುದ್ಧವಾದ ಸ್ಥಳದಲ್ಲಿ ಇಡಬೇಕು. ಇಸ್ರೇಲರ ಶುದ್ಧೀಕರಣದ ನೀರನ್ನು ಸಿದ್ಧಪಡಿಸುವುದಕ್ಕಾಗಿ ಆ ಬೂದಿಯನ್ನು ಉಪಯೋಗಿಸಬೇಕು. ಅದು ದೋಷಪರಿಹಾರಕವಾದದ್ದು.
“ಆ ಬೂದಿಯನ್ನು ಕೂಡಿಸಿದವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. “ಇದು ಇಸ್ರೇಲರಿಗೂ ಅವರ ಮಧ್ಯದಲ್ಲಿ ಇಳಿದುಕೊಂಡಿರುವ ಪರದೇಶಸ್ಥರಿಗೂ ಶಾಶ್ವತ ನಿಯಮ.
ಒಬ್ಬನು ಮನುಷ್ಯ ಶವವನ್ನು ಮುಟ್ಟಿ ತನ್ನನ್ನು ಶುದ್ಧೀಕರಿಸಿಕೊಳ್ಳದೆ ಹೋದರೆ ಅವನು ಯೆಹೋವನ ಪವಿತ್ರ ಗುಡಾರವನ್ನು ಅಶುದ್ಧಮಾಡುತ್ತಾನೆ. ಆದ್ದರಿಂದ ಆ ವ್ಯಕ್ತಿಯನ್ನು ಇಸ್ರೇಲರಿಂದ ಬಹಿಷ್ಕರಿಸಬೇಕು. ಶುದ್ಧೀಕರಣದ ವಿಶೇಷ ನೀರು ಅವನ ಮೇಲೆ ಚಿಮಿಕಿಸಲ್ಪಡದ ಕಾರಣ ಅವನು ಅಶುದ್ಧನಾಗಿಯೇ ಇರುವನು. ಅವನ ಅಶುದ್ಧತ್ವ ಅವನಲ್ಲಿ ನೆಲೆಸುವುದು. ಅವನು ಅಶುದ್ಧನಾಗಿಯೇ ಇರುವನು.
“ಯಾವನಾದರೂ ಗುಡಾರದಲ್ಲಿ ಸತ್ತರೆ ಅನುಸರಿಸಬೇಕಾದ ನಿಯಮವಿದು: ಒಬ್ಬನು ಗುಡಾರದಲ್ಲಿ ಸತ್ತರೆ, ಆ ಗುಡಾರವನ್ನು ಪ್ರವೇಶಿಸುವ ಪ್ರತಿಯೊಬ್ಬನು ಮತ್ತು ಆ ಗುಡಾರದಲ್ಲಿರುವ ಪ್ರತಿಯೊಬ್ಬನು ಅಶುದ್ಧನಾಗುವನು. ಅವರು ಏಳು ದಿನಗಳವರೆಗೆ ಅಶುದ್ಧರಾಗಿರುವರು.
ಹೊರಗೆ ಹೋಗಿರುವವನು ಯುದ್ಧದಲ್ಲಿ ಸತ್ತವನ ಶವವನ್ನಾಗಲಿ ಸಹಜವಾಗಿ ಸತ್ತವನ ಶವವನ್ನಾಗಲಿ ಮನುಷ್ಯನ ಮೂಳೆಯನ್ನಾಗಲಿ ಅಥವಾ ಸಮಾಧಿಯನ್ನಾಗಲಿ ಮುಟ್ಟಿದರೆ ಅವನು ಏಳು ದಿನಗಳವರೆಗೆ ಅಶುದ್ಧನಾಗಿರವನು.
ಆಗ ಶುದ್ಧನಾಗಿರುವ ಒಬ್ಬನು ಹಿಸ್ಸೋಪ್ ಗಿಡದ ಎಳೆಕೊಂಬೆಯನ್ನು ಆ ನೀರಿನಲ್ಲಿ ಅದ್ದಿ ಗುಡಾರದ ಮೇಲೆಯೂ ಪಾತ್ರೆಗಳ ಮೇಲೆಯೂ ಮತ್ತು ಅದರೊಳಗಿದ್ದ ವ್ಯಕ್ತಿಗಳ ಮೇಲೆಯೂ ಚಿಮಿಕಿಸಬೇಕು. ಸತ್ತವನ ದೇಹವನ್ನು ಮುಟ್ಟಿದವನಿಗೂ ಯುದ್ಧದಲ್ಲಿ ಕೊಲ್ಲಲ್ಪಟ್ಟವನ ದೇಹವನ್ನು ಮುಟ್ಟಿದವನಿಗೂ ಸತ್ತವನ ಮೂಳೆಗಳನ್ನು ಮುಟ್ಟಿದವನಿಗೂ ನೀವು ಹೀಗೆ ಮಾಡಲೇಬೇಕು.
“ಶುದ್ಧನಾಗಿರುವವನು ಮೂರನೆಯ ದಿನದಲ್ಲಿಯೂ ಏಳನೆಯ ದಿನದಲ್ಲಿಯೂ ಅಶುದ್ಧನಾದವನ ಮೇಲೆ ಚಿಮಿಕಿಸಬೇಕು. ಹೀಗೆ ಅವನು ಏಳನೆಯ ದಿನದಲ್ಲಿ ಶುದ್ಧನಾಗುವನು. ಬಳಿಕ ಅಶುದ್ಧನಾದವನು ತನ್ನ ಬಟ್ಟೆಯನ್ನು ತೊಳೆದುಕೊಳ್ಳಬೇಕು.
“ಅಶುದ್ಧನಾಗಿದ್ದರೂ ತನ್ನನ್ನು ಶುದ್ಧಮಾಡಿಕೊಳ್ಳದವನು ಯೆಹೋವನ ಗುಡಾರವನ್ನು ಅಶುದ್ಧಮಾಡಿದವನಾಗಿರುತ್ತಾನೆ. ಆದ್ದರಿಂದ ಅವನನ್ನು ಇಸ್ರೇಲರಿಂದ ಬಹಿಷ್ಕರಿಸಬೇಕು. ಶುದ್ಧಪಡಿಸಿಕೊಳ್ಳುವ ನೀರನ್ನು ಚಿಮಿಕಿಸಿಕೊಳ್ಳದೆ ಹೋದದರಿಂದ ಅವನು ಅಶುದ್ಧನೇ.
ಇದು ನಿಮಗೆ ಶಾಶ್ವತನಿಯಮ. ಶುದ್ಧಪಡಿಸುವ ಆ ನೀರನ್ನು ಚಿಮಿಕಿಸಿದವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು; ಮತ್ತು ಆ ನೀರನ್ನು ಯಾವನಾದರೂ ಮುಟ್ಟಿದರೆ, ಅವನು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರುವನು.