ಆಗ ಯೆಹೋವನು ಆರೋನನಿಗೆ, “ಪವಿತ್ರ ವಸ್ತುಗಳ ವಿಷಯದಲ್ಲಿ ಏನಾದರೂ ಹೊಲಸುತನ ನಡೆದರೆ, ನೀನೂ ನಿನ್ನ ಗಂಡುಮಕ್ಕಳೂ ನಿನ್ನ ತಂದೆಯ ಕುಟುಂಬದವರೂ ಅದರ ಅಪರಾಧದ ಫಲವನ್ನು ಅನುಭವಿಸಬೇಕು. ಯಾಜಕತ್ವದ ವಿಷಯದಲ್ಲಿ ಏನಾದರೂ ಹೊಲಸುತನ ನಡೆದರೆ, ನೀನು ಮತ್ತು ನಿನ್ನ ಗಂಡುಮಕ್ಕಳು ಮಾತ್ರ ಅದರ ಅಪರಾಧದ ಫಲವನ್ನು ಅನುಭವಿಸಬೇಕು.
ನಿನ್ನ ತಂದೆಯ ಕುಲದವರೂ ನಿನ್ನ ರಕ್ತಸಂಬಂಧಿಗಳೂ ಆಗಿರುವ ಲೇವಿಕುಲದವರನ್ನು ನಿನ್ನೊಡನೆ ಸೇರಿಸಿಕೊ; ನೀನು ಮತ್ತು ನಿನ್ನ ಗಂಡುಮಕ್ಕಳು ಒಡಂಬಡಿಕೆಯ ಮುಂದೆ ಇರುವಾಗ ಅವರು ನಿನ್ನೊಂದಿಗಿದ್ದು ನಿನಗೆ ಸಹಾಯ ಮಾಡುವರು.
ಆ ಲೇವಿಯರು ನಿನಗೆ ಕಾವಲುಗಾರರಾಗಿರಬೇಕು ಅಂದರೆ ಇಡೀ ಗುಡಾರವನ್ನು ಕಾಯಬೇಕು. ಆದರೆ ಅವರು ಪವಿತ್ರವಾದ ಪಾತ್ರೆಯನ್ನಾಗಲಿ ಯಜ್ಞವೇದಿಕೆಯನ್ನಾಗಲಿ ಮುಟ್ಟಬಾರದು; ಮುಟ್ಟಿದರೆ ಅವರೂ ಸಾಯುವರು ಮತ್ತು ನೀವೂ ಸಾಯುವಿರಿ.
ಎಲ್ಲಾ ಇಸ್ರೇಲರಿಂದ ನಾನೇ ಲೇವಿಯರನ್ನು ಆರಿಸಿಕೊಂಡಿದ್ದೇನೆ. ಅವರು ನಿನಗೆ ಕೊಡಲ್ಪಟ್ಟ ಬಹುಮಾನವಾಗಿದ್ದಾರೆ. ದೇವದರ್ಶನಗುಡಾರಕ್ಕೆ ಸಂಬಂಧಿಸಿದ ಭಾರವಾದ ಕೆಲಸವನ್ನು ಮಾಡಲು ಅವರು ಯೆಹೋವನಿಗೆ ಪ್ರತಿಷ್ಠಿತರಾಗಿದ್ದಾರೆ.
ದರೆ ಆರೋನನೇ, ನೀನೂ ನಿನ್ನ ಪುತ್ರರೂ ನಿಮ್ಮ ಯಾಜಕತ್ವವನ್ನು ಕಾಪಾಡಿಕೊಳ್ಳಬೇಕು. ಅಯೋಗ್ಯನಾದ ಯಾವನೂ ಯಜ್ಞವೇದಿಕೆಯ ಬಳಿ ಕೆಲಸ ಮಾಡುವುದಕ್ಕಾಗಲೀ ತೆರೆಯ ಆಚೆಯಿರುವ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸುವುದಕ್ಕಾಗಲಿ ನೀವು ಬಿಡಕೂಡದು. ನಾನು ನಿಮಗೆ ಅಮೂಲ್ಯವಾದ ಯಾಜಕತ್ವವನ್ನು ಕೊಟ್ಟಿದ್ದೇನೆ. ಆದರೆ ಅಯೋಗ್ಯನಾದ ಯಾವನಾದರೂ ಯಾಜಕತ್ವದ ಈ ಕರ್ತವ್ಯಗಳನ್ನು ಮಾಡಲು ಪ್ರಯತ್ನಿಸಿದರೆ ಅವನು ಕೊಲ್ಲಲ್ಪಡುವನು.”
ಆಗ ಯೆಹೋವನು ಆರೋನನಿಗೆ ಹೀಗೆ ಹೇಳಿದನು: “ನನಗೆ ಬರಬೇಕಾಗಿರುವ ಕೊಡುಗೆಗಳನ್ನು ಮತ್ತು ಇಸ್ರೇಲರ ಪವಿತ್ರವಾದ ಎಲ್ಲಾ ಕಾಣಿಕೆಗಳನ್ನು ಕಾಯುವ ಜವಾಬ್ದಾರಿಕೆಯನ್ನು ನಾನೇ ನಿನಗೆ ವಹಿಸಿದ್ದೇನೆ. ಅವುಗಳನ್ನು ನಿನಗೂ ನಿನ್ನ ಸಂತತಿಯವರಿಗೂ ಪಾಲಾಗಿ ಕೊಟ್ಟಿದ್ದೇನೆ. ಅವು ಯಾವಾಗಲೂ ನಿಮ್ಮವೇ.
ಯಜ್ಞವೇದಿಕೆಯ ಬೆಂಕಿಯಲ್ಲಿ ಹೋಮಮಾಡದೆ ಉಳಿಸಿರುವ ಮಹಾಪರಿಶುದ್ಧ ಪದಾರ್ಥಗಳಲ್ಲಿ ನಿಮಗೆ ದೊರೆಯಬೇಕಾದವುಗಳು ಯಾವುವೆಂದರೆ: ಅವರು ನನಗೆ ಕೊಡಲಿರುವ ಯಜ್ಞಗಳು, ಧಾನ್ಯಾರ್ಪಣೆಗಳು, ಪಾಪಪರಿಹಾರಕ ಯಜ್ಞಗಳು, ದೋಷಪರಿಹಾರಕ ಯಜ್ಞಗಳು ಮತ್ತು ಅಂತಹ ಪ್ರತಿಯೊಂದು ಅರ್ಪಣೆಗಳು ನಿನಗೂ ನಿನ್ನ ಗಂಡುಮಕ್ಕಳಿಗೂ ಮಹಾಪವಿತ್ರವಾಗಿವೆ.
“ಅದಲ್ಲದೆ, ಅವರ ಪ್ರತಿಷ್ಠಿತಾ ಕಾಣಿಕೆಗಳು ಮತ್ತು ಇಸ್ರೇಲರ ನಿವಾಳಿಸಲ್ಪಟ್ಟ ಕಾಣಿಕೆಗಳು ನಿಮಗೆ ಸೇರಿವೆ. ಅವುಗಳನ್ನು ನಾನು ನಿನಗೂ ನಿನ್ನ ಗಂಡುಮಕ್ಕಳಿಗೂ ಹೆಣ್ಣುಮಕ್ಕಳಿಗೂ ಶಾಶ್ವತವಾದ ಪಾಲಾಗಿ ಕೊಡುವೆನು.
“ಮನುಷ್ಯರಲ್ಲಾಗಲಿ ಪ್ರಾಣಿಗಳಲ್ಲಾಗಲಿ ಅವರು ಯೆಹೋವನಿಗೆ ಸಮರ್ಪಿಸುವ ಚೊಚ್ಚಲಾದದ್ದು ನಿನಗೆ ಸಲ್ಲಬೇಕು. ಆದರೆ ಮನುಷ್ಯರ ಚೊಚ್ಚಲು ಮಕ್ಕಳಿಗೂ ಅಪವಿತ್ರವಾದ ಪಶುಗಳ ಮರಿಗಳಿಗೂ ಬದಲಾಗಿ ನೀನು ಈಡನ್ನು ತೆಗೆದುಕೊಳ್ಳಬೇಕು.
“ಆದರೆ ಚೊಚ್ಚಲು ಆಕಳಿಗಾಗಲಿ ಕುರಿಗಾಗಲಿ ಆಡಿಗಾಗಲಿ ಈಡನ್ನು ಕೊಡಕೂಡದು. ಆ ಪಶುಗಳು ಪವಿತ್ರವಾಗಿವೆ. ಅವುಗಳ ರಕ್ತವನ್ನು ವೇದಿಕೆಯ ಮೇಲೆ ಚೆಲ್ಲಿ ಅವುಗಳ ಕೊಬ್ಬನ್ನು ಯೆಹೋವನಿಗೆ ಮೆಚ್ಚಿಗೆಕರವಾದ ಸುಗಂಧ ವಾಸನೆಯ ತ್ಯಾಗಮಯವಾದ ಕಾಣಿಕೆಯನ್ನಾಗಿ ಹೋಮಮಾಡಿರಿ.
ಇಸ್ರೇಲರು ಯೆಹೋವನಿಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸುವ ಪವಿತ್ರ ವಸ್ತುಗಳೆಲ್ಲವನ್ನು ನಿನಗೂ ನಿನ್ನ ಸಂತತಿಯವರಾದ ಸ್ತ್ರೀಪುರುಷರೆಲ್ಲರಿಗೂ ಶಾಶ್ವತವಾದ ಪಾಲಾಗಿ ಅನುಗ್ರಹಿಸಿದ್ದೇನೆ. ಇದು ಯೆಹೋವನ ಸನ್ನಿಧಿಯಲ್ಲಿ ನಿನ್ನೊಡನೆಯೂ ನಿನ್ನ ನಂತರದ ಸಂತತಿಯವರೊಡನೆಯೂ ಮಾಡಿಕೊಂಡ ಶಾಶ್ವತವಾದ ಉಪ್ಪಿನ ಒಡಂಬಡಿಕೆ.”
ಇದಲ್ಲದೆ ಯೆಹೋವನು ಆರೋನನಿಗೆ, “ಅವರ ಭೂಮಿಯಲ್ಲಿ ನಿನಗೆ ಯಾವ ಪಾಲೂ ದೊರೆಯುವುದಿಲ್ಲ. ಅವರ ಮಧ್ಯದಲ್ಲಿ ನೀನು ಭೂಮಿಯ ಯಾವ ಭಾಗವನ್ನೂ ಹೊಂದಿರುವುದಿಲ್ಲ. ಇಸ್ರೇಲರ ಮಧ್ಯದಲ್ಲಿ ಯೆಹೋವನಾದ ನಾನೇ ನಿನ್ನ ಪಾಲೂ ಭಾಗವೂ ಆಗಿದ್ದೇನೆ.
ದೇವದರ್ಶನಗುಡಾರಕ್ಕೋಸ್ಕರ ಲೇವಿಯರು ಮಾತ್ರ ಕೆಲಸ ಮಾಡಬೇಕು. ದೇವದರ್ಶನಗುಡಾರದಲ್ಲಿ ಏನಾದರೂ ಅತಿಕ್ರಮಣ ನಡೆದರೆ ಇಸ್ರೇಲರ ದಂಡನೆಯನ್ನು ಅವರೇ ಪಡೆಯುವರು. ಈಗಿನಿಂದ ಇದೇ ಶಾಶ್ವತ ಕಟ್ಟಳೆ. ಇತರ ಇಸ್ರೇಲರಿಗೆ ನಾನು ವಾಗ್ದಾನ ಮಾಡಿದ ಭೂಮಿಯಲ್ಲಿ ಲೇವಿಯರಿಗೆ ಯಾವ ಪಾಲೂ ದೊರೆಯುವುದಿಲ್ಲ.
ಇಸ್ರೇಲರು ಪ್ರತ್ಯೇಕಿಸಿ ಯೆಹೋವನಿಗೆ ಸಮರ್ಪಿಸುವ ಹತ್ತನೆಯ ಪಾಲನ್ನು ಲೇವಿಯರಿಗೆ ಸ್ವಾಸ್ತ್ಯವಾಗಿ ಕೊಟ್ಟಿದ್ದೇನೆ. ಇವರಿಗೆ ಇಸ್ರೇಲರೊಂದಿಗೆ ಪಾಲು ದೊರೆಯುವುದಿಲ್ಲವೆಂದು ನಾನು ಲೇವಿಯರ ಕುರಿತು ಹೇಳಿದ ಮಾತಿಗೆ ಇದೇ ಕಾರಣ” ಎಂದು ಹೇಳಿದನು.
“ನೀನು ಲೇವಿಯರಿಗೆ ಇದನ್ನು ತಿಳಿಸಬೇಕು: ಇಸ್ರೇಲರು ತಮ್ಮ ಆದಾಯದಲ್ಲಿ ಕೊಡುವ ದಶಾಂಶವನ್ನು ನಿಮ್ಮ ಪಾಲೆಂದು ನಾನು ನಿಗದಿಪಡಿಸಿದ್ದೇನೆ. ಇಸ್ರೇಲರು ದಶಾಂಶ ಕೊಟ್ಟಾಗ ನೀವು ಆ ದಶಾಂಶದಲ್ಲಿ ಹತ್ತನೆಯ ಒಂದು ಭಾಗವನ್ನು ಯೆಹೋವನಿಗೆ ಸಲ್ಲಿಸಬೇಕು.
“ಮೋಶೆಯೇ, ಲೇವಿಯರಿಗೆ ಹೀಗೆ ಹೇಳು: ಆ ಕಾಣಿಕೆಗಳಲ್ಲಿ ಉತ್ತಮವಾದ ಭಾಗವನ್ನು ನೀವು ಯೆಹೋವನಿಗೆ ಕೊಡುವಾಗ, ಲೇವಿಯರಾದ ನಿಮಗೆ ಅದು ಕಣದ ಉತ್ಪಾದನೆಯಂತೆಯೂ ದ್ರಾಕ್ಷಿಆಲೆಯ ಉತ್ಪಾದನೆಯಂತೆಯೂ ಪರಿಗಣಿಸಲ್ಪಡುವುದು.
ನೀವು ಯಾವಾಗಲೂ ಉತ್ತಮ ಭಾಗವನ್ನು ಯೆಹೋವನಿಗೆ ಕೊಟ್ಟರೆ, ಸಂಕಟದ ದಂಡನೆಯಿಂದ ತಪ್ಪಿಸಿಕೊಳ್ಳುವಿರಿ. ಇಸ್ರೇಲರು ಕೊಟ್ಟ ಪವಿತ್ರವಾದ ಕಾಣಿಕೆಗಳಿಗೆ ನೀವು ಅಪಮಾನ ಮಾಡುವುದಿಲ್ಲ ಮತ್ತು ನೀವು ಸಾಯುವುದಿಲ್ಲ.”