ನೀವು ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವುದಕ್ಕಾಗಿ ನಿಮ್ಮ ಮಂದೆಯಿಂದಾಗಲಿ ಹಿಂಡಿನಿಂದಾಗಲಿ ಅಗ್ನಿಯ ಮೂಲಕ ಯಜ್ಞವನ್ನರ್ಪಿಸುವವನು ಸರ್ವಾಂಗಹೋಮ ಮಾಡಿದರೂ ಅಥವಾ ಸಮಾಧಾನಯಜ್ಞಮಾಡಿದರೂ ಹರಕೆಯ ಯಜ್ಞಮಾಡಿದರೂ ಅಥವಾ ಸ್ವಇಚ್ಛೆಯಿಂದ ಯಜ್ಞಮಾಡಿದರೂ ನಿಯಮಿತ ಹಬ್ಬಗಳಲ್ಲಿ ಯಜ್ಞಮಾಡಿದರೂ
(22-23) “ಯೆಹೋವನು ಮೋಶೆಯ ಮೂಲಕ ಪ್ರಕಟಿಸಿದ ಆಜ್ಞೆಗಳನ್ನು ಅಂದರೆ ಯೆಹೋವನು ಆಜ್ಞೆಯನ್ನು ಕೊಟ್ಟ ದಿನದಿಂದಿಡಿದು ಮುಂದಿನ ಎಲ್ಲಾ ಕಾಲದಲ್ಲಿ ನೀವು ತಿಳಿಯದೆ ಯೆಹೋವನ ಆಜ್ಞೆಗಳನ್ನು ಉಲ್ಲಂಘಿಸಿದರೆ ಹೀಗೆ ಮಾಡಬೇಕು:
ನಿರುದ್ದೇಶದಿಂದ ಮತ್ತು ಸಮುದಾಯಕ್ಕೆ ತಿಳಿಯದಂತೆ ಇದನ್ನು ಮಾಡಿದ್ದಾಗಿದ್ದರೆ, ಯೆಹೋವನಿಗೆ ಸುಗಂಧ ವಾಸನೆಯನ್ನು ಉಂಟುಮಾಡುವುದಕ್ಕಾಗಿ ಒಂದು ಎಳೆಹೋರಿಯನ್ನು ಸರ್ವಾಂಗಹೋಮವಾಗಿ ಅರ್ಪಿಸಬೇಕು ಮತ್ತು ಅದರೊಡನೆ ಧಾನ್ಯಾರ್ಪಣೆಯನ್ನೂ ಪಾನಾರ್ಪಣೆಯನ್ನೂ ಪಾಪಪರಿಹಾರಕ ಯಜ್ಞವಾಗಿ ಒಂದು ಹೋತವನ್ನೂ ಅರ್ಪಿಸಬೇಕು.
“ಈ ರೀತಿಯಲ್ಲಿ ಇಸ್ರೇಲರ ಇಡೀ ಸಮುದಾಯದವರ ಕ್ಷಮೆಗಾಗಿ ಯಾಜಕನು ಪ್ರಾಯಶ್ಚಿತ್ತ ಮಾಡುವನು. ಯಾಕೆಂದರೆ ಅದು ತಿಳಿಯದೆ ಮಾಡಿದ ತಪ್ಪಾಗಿತ್ತು ಮತ್ತು ಆ ತಪ್ಪಿಗಾಗಿ ಅವರು ತಮ್ಮ ಅರ್ಪಣೆಯನ್ನು ಯೆಹೋವನಿಗೆ ಕಾಣಿಕೆಯಾಗಿ ತಂದರು ಮತ್ತು ಯೆಹೋವನ ಎದುರಿನಲ್ಲಿ ಪಾಪಪರಿಹಾರಕ ಯಜ್ಞವನ್ನು ಅರ್ಪಿಸಿದರು.
ಆದ್ದರಿಂದ ಇಡೀ ಇಸ್ರೇಲ್ ಸಮುದಾಯದವರಿಗೆ ಕ್ಷಮಾಪಣೆಯಾಗುವುದು ಮತ್ತು ಅವರ ಮಧ್ಯದಲ್ಲಿ ವಾಸಿಸುವ ಪರದೇಶಸ್ಥರಿಗೂ ಕ್ಷಮಾಪಣೆಯಾಗುವುದು; ಯಾಕೆಂದರೆ ಜನರೆಲ್ಲರೂ ನಿರುದ್ದೇಶದಿಂದ ಮಾಡಿದ ಆ ತಪ್ಪಿನಲ್ಲಿ ಸಿಕ್ಕಿಕೊಂಡಿದ್ದರು.
“ಆದರೆ ಉದ್ದೇಶಪೂರ್ವಕವಾಗಿ ಪಾಪಮಾಡುವವನು ಯೆಹೋವನಿಗೆ ಅವಮಾನ ಮಾಡುವವನಾಗಿದ್ದಾನೆ. ಅವನನ್ನು ಕುಲದಿಂದ ಬಹಿಷ್ಕರಿಸಬೇಕು. ಈ ನಿಯಮವು ಇಸ್ರೇಲರಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಹಾಗೂ ಪರದೇಶಸ್ಥರಿಗೂ ಅನ್ವಯಿಸುವುದು.
“ಇಸ್ರೇಲರಿಗೆ ಈ ಸಂಗತಿಗಳನ್ನು ತಿಳಿಸು: ನನ್ನ ಅಪ್ಪಣೆಗಳನ್ನು ಜ್ಞಾಪಕಮಾಡುವುದಕ್ಕೆ ನಿಮಗೆ ಒಂದು ಗುರುತನ್ನು ಕೊಡುತ್ತೇನೆ. ನಿಮ್ಮ ಬಟ್ಟೆಗಳ ಮೂಲೆಯಲ್ಲಿ ಗೊಂಡೆಗಳನ್ನು ಕಟ್ಟಿಕೊಳ್ಳಬೇಕು. ಪ್ರತಿಯೊಂದು ಗೊಂಡೆಯೂ ಒಂದೊಂದು ನೀಲಿದಾರದಿಂದ ಕೂಡಿರಬೇಕು. ನೀವು ಇವುಗಳನ್ನು ಇಂದಿನಿಂದ ಯಾವಾಗಲೂ ಧರಿಸಿಕೊಳ್ಳಬೇಕು.
ಈ ಗೊಂಡೆಗಳನ್ನು ನೀವು ನೋಡುವಾಗ, ಯೆಹೋವನು ನಿಮಗೆ ಕೊಟ್ಟ ಅಪ್ಪಣೆಗಳನ್ನೆಲ್ಲ ಜ್ಞಾಪಕಮಾಡಿಕೊಳ್ಳಬೇಕು ಮತ್ತು ಅವುಗಳಿಗೆ ವಿಧೇಯರಾಗಬೇಕು. ನೀವು ನಿಮ್ಮ ಮನಸ್ಸಿಗೆ ಮತ್ತು ಕಣ್ಣಿಗೆ ತೋರಿದ ಪ್ರಕಾರ ನಡೆಯದೆ ನಂಬಿಗಸ್ತರಾಗಿರಬೇಕು.