English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Numbers Chapters

Numbers 15 Verses

1 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
2 “ಇಸ್ರೇಲರಿಗೆ ಹೀಗೆ ಆಜ್ಞಾಪಿಸಬೇಕು: ನಾನು ನಿಮ್ಮ ನಿವಾಸಕ್ಕಾಗಿ ಒಂದು ದೇಶವನ್ನು ಕೊಡುತ್ತಿದ್ದೇನೆ. ನೀವು ಆ ದೇಶಕ್ಕೆ ಸೇರಿದ ನಂತರ
3 ನೀವು ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವುದಕ್ಕಾಗಿ ನಿಮ್ಮ ಮಂದೆಯಿಂದಾಗಲಿ ಹಿಂಡಿನಿಂದಾಗಲಿ ಅಗ್ನಿಯ ಮೂಲಕ ಯಜ್ಞವನ್ನರ್ಪಿಸುವವನು ಸರ್ವಾಂಗಹೋಮ ಮಾಡಿದರೂ ಅಥವಾ ಸಮಾಧಾನಯಜ್ಞಮಾಡಿದರೂ ಹರಕೆಯ ಯಜ್ಞಮಾಡಿದರೂ ಅಥವಾ ಸ್ವಇಚ್ಛೆಯಿಂದ ಯಜ್ಞಮಾಡಿದರೂ ನಿಯಮಿತ ಹಬ್ಬಗಳಲ್ಲಿ ಯಜ್ಞಮಾಡಿದರೂ
4 ಅದರೊಂದಿಗೆ ಧಾನ್ಯನೈವೇದ್ಯಕ್ಕಾಗಿ ಒಂದೂವರೆ ಸೇರು ಎಣ್ಣೆ ಬೆರಸಿದ ಮೂರು ಸೇರು ಗೋಧಿಯ ಹಿಟ್ಟನ್ನೂ
5 ಪಾನದ್ರವ್ಯಕ್ಕಾಗಿ ಒಂದೂವರೆ ಸೇರು ದ್ರಾಕ್ಷಾರಸವನ್ನೂ ತರಬೇಕು. ನೀವು ಸರ್ವಾಂಗಹೋಮವಾಗಿ ಇಲ್ಲವೆ ಸಮಾಧಾನಯಜ್ಞವಾಗಿ ಸಮರ್ಪಿಸುವ ಒಂದೊಂದು ಕುರಿಯೊಂದಿಗೆ ಇದನ್ನೂ ಸಮರ್ಪಿಸಬೇಕು.
6 “ನೀವು ಟಗರನ್ನು ಸಮರ್ಪಿಸುವುದಾದರೆ, ಧಾನ್ಯನೈವೇದ್ಯಕ್ಕಾಗಿ ಎರಡು ಸೇರು ಎಣ್ಣೆ ಬೆರಸಿದ ಆರು ಸೇರು ಒಳ್ಳೆಯ ಗೋಧಿಯ ಹಿಟ್ಟನ್ನೂ
7 ಪಾನದ್ರವ್ಯಕ್ಕಾಗಿ ಎರಡು ಸೇರು ದ್ರಾಕ್ಷಾರಸವನ್ನೂ ಸಮರ್ಪಿಸಬೇಕು. ಅದು ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವ ಯಜ್ಞವಾಗಿರುತ್ತದೆ.
8 “ನಿಮ್ಮಲ್ಲಿ ಎಳೆಹೋರಿಯನ್ನು ಯೆಹೋವನಿಗೆ ಸರ್ವಾಂಗಹೋಮವನ್ನಾಗಲಿ ಹರಕೆಯ ಯಜ್ಞವನ್ನಾಗಲಿ ಸಮಾಧಾನಯಜ್ಞವನ್ನಾಗಲಿ ಅರ್ಪಿಸುವವನು
9 ಅದರೊಂದಿಗೆ ಧಾನ್ಯನೈವೇದ್ಯಕ್ಕಾಗಿ ಮೂರು ಸೇರು ಎಣ್ಣೆ ಬೆರಸಿದ ಒಂಭತ್ತು ಸೇರು ಗೋಧಿಯ ಹಿಟ್ಟನ್ನೂ
10 ಪಾನದ್ರವ್ಯಕ್ಕಾಗಿ ಮೂರು ಸೇರು ದ್ರಾಕ್ಷಾರಸವನ್ನೂ ತಂದು ಸಮರ್ಪಿಸಬೇಕು. ಇದು ಅಗ್ನಿಯ ಮೂಲಕ ಸಮರ್ಪಿಸುವ ಯಜ್ಞವಾಗಿದೆ. ಇದರ ಸುವಾಸನೆಯು ಯೆಹೋವನಿಗೆ ಮೆಚ್ಚಿಕೆಯನ್ನು ಉಂಟುಮಾಡುತ್ತದೆ.
11 ಕುರಿ, ಆಡು, ಟಗರು, ಹೋರಿ ಇವುಗಳಲ್ಲಿ ಯಾವುದನ್ನು ಅರ್ಪಿಸಿದರೂ ಇದನ್ನು ಮಾಡಲೇಬೇಕು.
12 ನೀವು ಸಮರ್ಪಿಸುವ ಪಶುಗಳ ಲೆಕ್ಕದ ಪ್ರಕಾರವೇ ಒಂದೊಂದು ಪಶುವಿನ ಸಂಗಡ ಈ ರೀತಿಯಾಗಿ ಮಾಡಬೇಕು.
13 “ಇಸ್ರೇಲಿನ ಪ್ರತಿಯೊಬ್ಬ ಸ್ವದೇಶಿಯೂ ಯೆಹೋವನಿಗೆ ಸುಗಂಧಹೋಮವನ್ನು ಸಮರ್ಪಿಸುವಾಗ ಈ ರೀತಿಯಾಗಿ ಮಾಡಬೇಕು.
14 ನಿಮ್ಮ ಮಧ್ಯದಲ್ಲಿ ವಾಸಿಸುವ ವಿದೇಶಿಯರಲ್ಲಿ ಯಾವನೇ ಆಗಲಿ, ಯೆಹೋವನಿಗೆ ಸುಗಂಧಹೋಮ ಮಾಡಬೇಕಾದರೆ ನಿಮ್ಮಂತೆಯೇ ಅವನು ಮಾಡಬೇಕು.
15 ನಿಮಗೂ ನಿಮ್ಮಲ್ಲಿರುವ ಪರದೇಶದವರಿಗೂ ಒಂದೇ ವಿಧಿಯಿರಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮ. ಯೆಹೋವನ ಸನ್ನಿಧಿಯಲ್ಲಿ ನೀವೂ ಪರದೇಶಿಯರೂ ಒಂದೇ ಆಗಿದ್ದೀರಿ.
16 ನಿಮಗೂ ನಿಮ್ಮ ಬಳಿಯಲ್ಲಿ ವಾಸಿಸುವ ಪರದೇಶದವನಿಗೂ ಒಂದೇ ವಿಧವಾದ ಪ್ರಮಾಣ ವಿಧಿಗಳಿರಬೇಕು.”
17 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
18 “ಇಸ್ರೇಲರಿಗೆ ಈ ಸಂಗತಿಗಳನ್ನು ತಿಳಿಸು: ನಾನು ನಿಮ್ಮನ್ನು ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ.
19 ನೀವು ಆ ದೇಶದ ಭೂಮಿಯ ಬೆಳೆಯನ್ನು ಅನುಭೋಗಿಸುವಾಗ, ಸ್ವಲ್ಪವನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಬೇಕು.
20 ನೀವು ಕಣದಲ್ಲಿರುವ ಗೋಧಿಯಲ್ಲಿ ಪ್ರಥಮಫಲವನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡುವಂತೆಯೇ ನೀವು ಪ್ರಥಮವಾಗಿ ನಾದಿದ ಹಿಟ್ಟಿನಿಂದ ಒಂದು ರೊಟ್ಟಿಯನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು.
21 ನೀವೂ ನಿಮ್ಮ ಸಂತತಿಯವರೂ ಕಣಕದಿಂದ ಮಾಡುವ ಮೊದಲನೆಯ ರೊಟ್ಟಿಯನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಬೇಕು.
22 (22-23) “ಯೆಹೋವನು ಮೋಶೆಯ ಮೂಲಕ ಪ್ರಕಟಿಸಿದ ಆಜ್ಞೆಗಳನ್ನು ಅಂದರೆ ಯೆಹೋವನು ಆಜ್ಞೆಯನ್ನು ಕೊಟ್ಟ ದಿನದಿಂದಿಡಿದು ಮುಂದಿನ ಎಲ್ಲಾ ಕಾಲದಲ್ಲಿ ನೀವು ತಿಳಿಯದೆ ಯೆಹೋವನ ಆಜ್ಞೆಗಳನ್ನು ಉಲ್ಲಂಘಿಸಿದರೆ ಹೀಗೆ ಮಾಡಬೇಕು:
24 ನಿರುದ್ದೇಶದಿಂದ ಮತ್ತು ಸಮುದಾಯಕ್ಕೆ ತಿಳಿಯದಂತೆ ಇದನ್ನು ಮಾಡಿದ್ದಾಗಿದ್ದರೆ, ಯೆಹೋವನಿಗೆ ಸುಗಂಧ ವಾಸನೆಯನ್ನು ಉಂಟುಮಾಡುವುದಕ್ಕಾಗಿ ಒಂದು ಎಳೆಹೋರಿಯನ್ನು ಸರ್ವಾಂಗಹೋಮವಾಗಿ ಅರ್ಪಿಸಬೇಕು ಮತ್ತು ಅದರೊಡನೆ ಧಾನ್ಯಾರ್ಪಣೆಯನ್ನೂ ಪಾನಾರ್ಪಣೆಯನ್ನೂ ಪಾಪಪರಿಹಾರಕ ಯಜ್ಞವಾಗಿ ಒಂದು ಹೋತವನ್ನೂ ಅರ್ಪಿಸಬೇಕು.
25 “ಈ ರೀತಿಯಲ್ಲಿ ಇಸ್ರೇಲರ ಇಡೀ ಸಮುದಾಯದವರ ಕ್ಷಮೆಗಾಗಿ ಯಾಜಕನು ಪ್ರಾಯಶ್ಚಿತ್ತ ಮಾಡುವನು. ಯಾಕೆಂದರೆ ಅದು ತಿಳಿಯದೆ ಮಾಡಿದ ತಪ್ಪಾಗಿತ್ತು ಮತ್ತು ಆ ತಪ್ಪಿಗಾಗಿ ಅವರು ತಮ್ಮ ಅರ್ಪಣೆಯನ್ನು ಯೆಹೋವನಿಗೆ ಕಾಣಿಕೆಯಾಗಿ ತಂದರು ಮತ್ತು ಯೆಹೋವನ ಎದುರಿನಲ್ಲಿ ಪಾಪಪರಿಹಾರಕ ಯಜ್ಞವನ್ನು ಅರ್ಪಿಸಿದರು.
26 ಆದ್ದರಿಂದ ಇಡೀ ಇಸ್ರೇಲ್ ಸಮುದಾಯದವರಿಗೆ ಕ್ಷಮಾಪಣೆಯಾಗುವುದು ಮತ್ತು ಅವರ ಮಧ್ಯದಲ್ಲಿ ವಾಸಿಸುವ ಪರದೇಶಸ್ಥರಿಗೂ ಕ್ಷಮಾಪಣೆಯಾಗುವುದು; ಯಾಕೆಂದರೆ ಜನರೆಲ್ಲರೂ ನಿರುದ್ದೇಶದಿಂದ ಮಾಡಿದ ಆ ತಪ್ಪಿನಲ್ಲಿ ಸಿಕ್ಕಿಕೊಂಡಿದ್ದರು.
27 “ಆದರೆ ಒಬ್ಬನು ತಿಳಿಯದೆ ಪಾಪಮಾಡಿದರೆ, ಅವನು ಒಂದು ವರ್ಷದ ಹೆಣ್ಣು ಆಡನ್ನು ದೋಷ ಪರಿಹಾರಕ ಯಜ್ಞವಾಗಿ ಅರ್ಪಿಸಬೇಕು.
28 ಆಗ ಯಾಜಕನು ನಿರುದ್ದೇಶದಿಂದ ತಪ್ಪುಮಾಡಿದವನ ಕ್ಷಮಾಪಣೆಗಾಗಿ ಯೆಹೋವನ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಮಾಡುವನು.
29 ನಿರುದ್ದೇಶದಿಂದ ತಪ್ಪುಮಾಡಿದ ಪ್ರತಿಯೊಬ್ಬರಿಗೂ ಈ ನಿಯಮ ಅನ್ವಯಿಸುತ್ತದೆ. ಈ ವಿಷಯದಲ್ಲಿ ಇಸ್ರೇಲರಲ್ಲಿರುವ ಸ್ವದೇಶದವರಿಗೂ ಪರದೇಶದವರಿಗೂ ಒಂದೇ ವಿಧಿಯಿರಬೇಕು.
30 “ಆದರೆ ಉದ್ದೇಶಪೂರ್ವಕವಾಗಿ ಪಾಪಮಾಡುವವನು ಯೆಹೋವನಿಗೆ ಅವಮಾನ ಮಾಡುವವನಾಗಿದ್ದಾನೆ. ಅವನನ್ನು ಕುಲದಿಂದ ಬಹಿಷ್ಕರಿಸಬೇಕು. ಈ ನಿಯಮವು ಇಸ್ರೇಲರಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಹಾಗೂ ಪರದೇಶಸ್ಥರಿಗೂ ಅನ್ವಯಿಸುವುದು.
31 ಆ ಮನುಷ್ಯನು ಯೆಹೋವನ ಮಾತನ್ನು ತಾತ್ಸಾರಮಾಡಿ ಆತನ ಆಜ್ಞೆಯನ್ನು ಮೀರಿದ್ದರಿಂದ ಕುಲದಿಂದ ತೆಗೆದುಹಾಕಲ್ಪಡಲೇಬೇಕು. ಅವನು ತನ್ನ ಪಾಪದ ಫಲವನ್ನು ಅನುಭವಿಸಲಿ.”
32 ಇಸ್ರೇಲರು ಮರುಭೂಮಿಯಲ್ಲಿ ಇನ್ನೂ ಇದ್ದಾಗ ಒಬ್ಬನು ಸಬ್ಬತ್‌ದಿನದಲ್ಲಿ ಕಟ್ಟಿಗೆ ಕೂಡಿಸುವುದನ್ನು ಜನರು ಕಂಡರು.
33 ಕಂಡವರು ಅವನನ್ನು ಮೋಶೆ ಆರೋನರ ಮತ್ತು ಸರ್ವಸಮೂಹದವರ ಬಳಿಗೆ ಹಿಡಿದುಕೊಂಡು ಬಂದರು.
34 ಅವನನ್ನು ಶಿಕ್ಷಿಸಬೇಕಾದ ವಿಧಿಯನ್ನು ಅವರು ತಿಳಿಯದೆ ಇದ್ದುದರಿಂದ ಅವನನ್ನು ಕಾವಲಲ್ಲಿಟ್ಟರು.
35 ಆಗ ಯೆಹೋವನು ಮೋಶೆಗೆ, “ಆ ಮನುಷ್ಯನು ಸಾಯಬೇಕು. ಅವನನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಎಲ್ಲಾ ಜನರು ಕಲ್ಲೆಸೆದು ಕೊಲ್ಲಬೇಕು” ಎಂದು ಹೇಳಿದನು.
36 ಆಗ ಜನರು ಅವನನ್ನು ಪಾಳೆಯದ ಹೊರಗೆ ಕರೆದುಕೊಂಡು ಹೋಗಿ ಕಲ್ಲೆಸೆದು ಕೊಂದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಅವರು ಇದನ್ನು ಮಾಡಿದರು.
37 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
38 “ಇಸ್ರೇಲರಿಗೆ ಈ ಸಂಗತಿಗಳನ್ನು ತಿಳಿಸು: ನನ್ನ ಅಪ್ಪಣೆಗಳನ್ನು ಜ್ಞಾಪಕಮಾಡುವುದಕ್ಕೆ ನಿಮಗೆ ಒಂದು ಗುರುತನ್ನು ಕೊಡುತ್ತೇನೆ. ನಿಮ್ಮ ಬಟ್ಟೆಗಳ ಮೂಲೆಯಲ್ಲಿ ಗೊಂಡೆಗಳನ್ನು ಕಟ್ಟಿಕೊಳ್ಳಬೇಕು. ಪ್ರತಿಯೊಂದು ಗೊಂಡೆಯೂ ಒಂದೊಂದು ನೀಲಿದಾರದಿಂದ ಕೂಡಿರಬೇಕು. ನೀವು ಇವುಗಳನ್ನು ಇಂದಿನಿಂದ ಯಾವಾಗಲೂ ಧರಿಸಿಕೊಳ್ಳಬೇಕು.
39 ಈ ಗೊಂಡೆಗಳನ್ನು ನೀವು ನೋಡುವಾಗ, ಯೆಹೋವನು ನಿಮಗೆ ಕೊಟ್ಟ ಅಪ್ಪಣೆಗಳನ್ನೆಲ್ಲ ಜ್ಞಾಪಕಮಾಡಿಕೊಳ್ಳಬೇಕು ಮತ್ತು ಅವುಗಳಿಗೆ ವಿಧೇಯರಾಗಬೇಕು. ನೀವು ನಿಮ್ಮ ಮನಸ್ಸಿಗೆ ಮತ್ತು ಕಣ್ಣಿಗೆ ತೋರಿದ ಪ್ರಕಾರ ನಡೆಯದೆ ನಂಬಿಗಸ್ತರಾಗಿರಬೇಕು.
40 ನೀವು ನನ್ನ ಎಲ್ಲಾ ಆಜ್ಞೆಗಳನ್ನು ಜ್ಞಾಪಿಸಿಕೊಂಡು ವಿಧೇಯರಾಗಿರಬೇಕು. ಆಗ ನೀವು ನಿಮ್ಮ ದೇವರ ವಿಶೇಷವಾದ ಜನರಾಗಿರುವಿರಿ.
41 ನಿಮ್ಮ ದೇವರಾಗಿರುವುದಕ್ಕೆ ನಿಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆತಂದ ನಿಮ್ಮ ದೇವರಾದ ಯೆಹೋವನು ನಾನೇ.”
×

Alert

×