(28-29) ಹೀಗೆ ಇವರೆಲ್ಲಾ ಯೆಹೋವನಿಗೆ ಒಂದು ವಿಶೇಷವಾದ ವಾಗ್ದಾನವನ್ನು ಮಾಡಿದರು. ತಾವು ವಾಗ್ದಾನವನ್ನು ನೆರವೇರಿಸದೆ ಹೋದಲ್ಲಿ ಸಂಕಟಬಾಧೆಗಳು ಪ್ರಾಪ್ತವಾಗುವಂತೆ ಯೆಹೋವನನ್ನು ಕೇಳಿಕೊಂಡರು. ಇವರೆಲ್ಲಾ ದೇವರ ನೀತಿನಿಯಮಗಳನ್ನು ಅನುಸರಿಸುತ್ತೇವೆಂದು ಮಾತುಕೊಟ್ಟರು. ಆ ನೀತಿನಿಯಮಗಳನ್ನು ಯೆಹೋವನು ತನ್ನ ಸೇವಕನಾದ ಮೋಶೆಯ ಮೂಲಕ ನಮಗೆ ಕೊಟ್ಟನು. ಮೇಲೆ ಕಾಣಿಸಿದ ಹೆಸರುಗಳಲ್ಲದೆ ಉಳಿದ ಜನರು, ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ದೇವಾಲಯದ ಸೇವಕರು ಮತ್ತು ಇಸ್ರೇಲಿನ ಜನರು ತಮ್ಮ ಸುತ್ತಲು ವಾಸಿಸುವ ಜನರಿಂದ ಪ್ರತ್ಯೇಕಿಸಲ್ಪಟ್ಟರು. ದೇವರ ವಿಧಿನಿಯಮಗಳನ್ನು ಅನುಸರಿಸುವುದಕ್ಕಾಗಿ ತಮ್ಮ ಹೆಂಡತಿ ಮಕ್ಕಳೊಂದಿಗೆ ಪ್ರತ್ಯೇಕಿಸಿಕೊಂಡರು. ದೇವರಿಗೆ ಮಾಡಿದ ಒಡಂಬಡಿಕೆಯನ್ನು ನಡೆಸಿಕೊಡಲು ಒಪ್ಪಿದರು ಮತ್ತು ಹಾಗೆ ಮಾಡದಿದ್ದಲ್ಲಿ ದೇವರಿಂದ ಸಂಕಟ ವ್ಯಾಧಿಗಳನ್ನು ಸ್ವೀಕರಿಸಲೂ ಒಪ್ಪಿದರು.
“ಸಬ್ಬತ್ ದಿನದಲ್ಲಿ ಯಾವ ಕೆಲಸವನ್ನೂ ಮಾಡುವುದಿಲ್ಲವೆಂದು ಪ್ರಮಾಣಮಾಡುತ್ತೇವೆ. ನಮ್ಮ ಸುತ್ತಮುತ್ತಲಿನ ಜನರು ಸಬ್ಬತ್ ದಿನದಲ್ಲಿ ಮಾರಲು ದವಸಧಾನ್ಯವನ್ನಾಗಲಿ ಬೇರೆ ವಸ್ತುಗಳನ್ನಾಗಲಿ ತಂದರೆ ನಾವು ಸಬ್ಬತ್ ದಿನದಲ್ಲಿ ಮತ್ತು ಇತರ ಯಾವುದೇ ಹಬ್ಬದ ದಿನದಲ್ಲಿ ಅವುಗಳನ್ನು ಕೊಂಡುಕೊಳ್ಳುವುದಿಲ್ಲ. ಪ್ರತಿ ಏಳನೆಯ ವರ್ಷ ನಾವು ನೆಡುವುದೂ ಇಲ್ಲ. ಹೊಲದಲ್ಲಿ ಕೆಲಸ ಮಾಡುವುದೂ ಇಲ್ಲ. ನಮಗೆ ಬೇರೆಯವರು ಕೊಡಬೇಕಾಗಿರುವ ಸಾಲವನ್ನು ಏಳನೆಯ ವರ್ಷದಲ್ಲಿ ವಜಾ ಮಾಡುತ್ತೇವೆ.
“ದೇವಾಲಯವನ್ನು ನಡಿಸುವ ಖರ್ಚಿನ ಜವಾಬ್ದಾರಿಕೆಯನ್ನು ನಾವು ಹೊರುತ್ತೇವೆ. ನಾವು ಒಂದು ಬೆಳ್ಳಿನಾಣ್ಯವನ್ನು ಪ್ರತಿವರ್ಷ ನಮ್ಮ ದೇವರಿಗೆ ಕಾಣಿಕೆ ಕೊಡುತ್ತೇವೆ. ಇದು ದೇವಾಲಯದ ಕೆಲಸಕಾರ್ಯಗಳಿಗೆ ಉಪಯೋಗಿಲ್ಪಡಬೇಕು.
ಪ್ರತಿದಿನ ದೇವಾಲಯದೊಳಗೆ ಮೇಜಿನ ಮೇಲೆ ಇಡುವ ರೊಟ್ಟಿಗಳಿಗಾಗಿಯೂ ದಿನನಿತ್ಯದ ಸರ್ವಾಂಗಹೋಮಗಳಿಗೂ ಧಾನ್ಯಸರ್ಮರ್ಪಣೆಗೂ ಈ ಹಣವನ್ನು ಉಪಯೋಗಿಸಿರಿ. ಅಮವಾಸ್ಯೆ, ಸಬ್ಬತ್ ಮತ್ತು ಇತರ ವಿಶೇಷ ಸಭಾಕೂಟಗಳಲ್ಲಿ ಮಾಡುವ ಯಜ್ಞಗಳಿಗಾಗಿ ಈ ಹಣವನ್ನು ಉಪಯೋಗಿಸಿರಿ. ಇಸ್ರೇಲರನ್ನು ಶುದ್ಧರನ್ನಾಗಿ ಮಾಡುವ ಪವಿತ್ರ ಯಜ್ಞಗಳಿಗಾಗಿ ಮತ್ತು ಪಾಪಪರಿಹಾರಕ ಯಜ್ಞಗಳಿಗಾಗಿ ಈ ಹಣವನ್ನು ಉಪಯೋಗಿಸಿರಿ. ನಮ್ಮ ದೇವರ ಆಲಯದ ಯಾವ ಕಾರ್ಯಗಳಿಗೆ ಬೇಕಾದರೂ ಈ ಹಣವನ್ನು ಉಪಯೋಗಿಸಿರಿ.
“ನಾವು ಅಂದರೆ ಯಾಜಕರು, ಲೇವಿಯರು ಮತ್ತು ಇತರ ಜನರು ಒಟ್ಟಾಗಿ ಸೇರಿ ದೇವಾಲಯದಲ್ಲಿ ಯಜ್ಞ ಹೋಮಗಳನ್ನರ್ಪಿಸುವುದಕ್ಕೆ ಬೇಕಾದ ಕಟ್ಟಿಗೆಯನ್ನು ಪ್ರತಿಯೊಂದು ಕುಟುಂಬವು ವರ್ಷಕ್ಕೊಮ್ಮೆ ತಮಗೆ ನಿಗದಿತವಾದ ಸಮಯದಲ್ಲಿ ತಂದು ಒದಗಿಸುವುದಕ್ಕೆ ಚೀಟು ಹಾಕಿದೆವು. ಧರ್ಮಶಾಸ್ತ್ರದಲ್ಲಿ ಬರೆದಂತೆಯೇ ನಾವು ಮಾಡಬೇಕಲ್ಲಾ!
“ಪ್ರಥಮ ಫಲದ ಹಿಟ್ಟನ್ನು, ಪ್ರಥಮ ಫಲದ ಹಣ್ಣುಗಳನ್ನು, ಹೊಸ ದ್ರಾಕ್ಷಾರಸವನ್ನು, ಹೊಸ ಎಣ್ಣೆಯನ್ನು ಯಾಜಕರಿಗೋಸ್ಕರವಾಗಿ ದೇವಾಲಯದ ಉಗ್ರಾಣಗಳಲ್ಲಿ ತಂದಿಡುವೆವು. ನಮ್ಮ ಬೆಳೆಗಳಲ್ಲಿ ಹತ್ತನೆಯ ಒಂದು ಭಾಗವನ್ನು ಲೇವಿಯರಿಗೆ ತಂದುಕೊಡುವೆವು. ನಾವು ಕೆಲಸ ಮಾಡುತ್ತಿರುವ ಊರುಗಳಿಂದ ಲೇವಿಯರು ಇವುಗಳನ್ನು ತೆಗೆದುಕೊಳ್ಳಬೇಕು.
ನಮ್ಮಿಂದ ಆ ಕಾಣಿಕೆಗಳನ್ನು ಅವರು ಸ್ವೀಕರಿಸುವಾಗ ಆರೋನನ ವಂಶದವರಾದ ಯಾಜಕನೊಬ್ಬನು ಅವರ ಜೊತೆಯಲ್ಲಿ ಇರಬೇಕು. ಲೇವಿಯರು ಆ ಕಾಣಿಕೆಗಳನ್ನು ದೇವಾಲಯಕ್ಕೆ ತಂದು ಅದರ ಉಗ್ರಾಣಗಳಲ್ಲಿ ಶೇಖರಿಸಿಡಬೇಕು.
ಇಸ್ರೇಲ್ ಜನರು ಮತ್ತು ಲೇವಿಯರು ತಮ್ಮ ಕಾಣಿಕೆಗಳಾದ ದವಸಧಾನ್ಯ, ಹೊಸ ದ್ರಾಕ್ಷಾರಸ, ಎಣ್ಣೆ ಇವುಗಳನ್ನು ತಂದು ದೇವಾಲಯದ ಉಗ್ರಾಣಗಳಲ್ಲಿ ಇಡಬೇಕು. ದೇವಾಲಯಕ್ಕೋಸ್ಕರ ಮೀಸಲಾದ ಎಲ್ಲಾ ವಸ್ತುಗಳನ್ನು ಆ ಉಗ್ರಾಣಗಳಲ್ಲಿ ಇಡಬೇಕು. ಕೆಲಸದಲ್ಲಿ ನಿರತರಾಗಿರುವ ಯಾಜಕರು, ಗಾಯಕರು, ದ್ವಾರಪಾಲಕರು ಅಲ್ಲೇ ಇರಬೇಕು. “ನಮ್ಮ ದೇವರ ಆಲಯವನ್ನು ನಾವು ನೋಡಿಕೊಳ್ಳುವುದಾಗಿ ನಾವೆಲ್ಲರೂ ಪ್ರಮಾಣಮಾಡುತ್ತೇವೆ!”