ಯಾಜಕನು ಸರ್ವಾಂಗಹೋಮ ಸಮರ್ಪಣೆಗಳ ಪಶುವನ್ನು ವಧಿಸುವ ಸ್ಥಳದಲ್ಲಿಯೇ ದೋಷಪರಿಹಾರಕ ಪಶುವನ್ನು ವಧಿಸಬೇಕು. ಬಳಿಕ ಯಾಜಕನು ದೋಷಪರಿಹಾರಕ ಯಜ್ಞದ ರಕ್ತವನ್ನು ವೇದಿಕೆಯ ಸುತ್ತಲೂ ಚಿಮಿಕಿಸಬೇಕು.
ಯಾಜಕನು ಅದರ ಎರಡು ಮೂತ್ರಪಿಂಡಗಳನ್ನೂ ಮತ್ತು ಅವುಗಳನ್ನು ಸೊಂಟದವರೆಗೆ ಆವರಿಸಿರುವ ಕೊಬ್ಬನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ಅರ್ಪಿಸಬೇಕು. ಅವನು ಮೂತ್ರಪಿಂಡಗಳೊಡನೆ ಪಿತ್ತಾಶಯವನ್ನು ಅರ್ಪಿಸಬೇಕು.
ಸಮಾಧಾನಯಜ್ಞದ ಮಾಂಸವನ್ನು ಅದು ಸಮರ್ಪಣೆಯಾದ ದಿನದಲ್ಲಿಯೇ ತಿನ್ನಬೇಕು. ಒಬ್ಬನು ದೇವರಿಗೆ ತನ್ನ ಕೃತಜ್ಞತೆಯನ್ನು ಸೂಚಿಸುವುದಕ್ಕಾಗಿ ಈ ಕಾಣಿಕೆಯನ್ನು ಅರ್ಪಿಸುತ್ತಾನೆ. ಅದರ ಮಾಂಸದಲ್ಲಿ ಮರುದಿನದ ಮುಂಜಾನೆಯವರೆಗೆ ಏನೂ ಉಳಿಸಬಾರದು.
“ಯಾವನಾದರೂ ಸ್ವಇಚ್ಛೆಯ ಕಾಣಿಕೆಗಾಗಲಿ ಹರಕೆಯನ್ನು ಸಲ್ಲಿಸುವುದಕ್ಕಾಗಲಿ ಸಮಾಧಾನಯಜ್ಞ ಅರ್ಪಿಸಬಹುದು ಅಥವಾ ಆ ವ್ಯಕ್ತಿ ದೇವರಿಗೆ ಕಾಣಿಕೆಯನ್ನು ಅರ್ಪಿಸಿದರೆ, ಅವನು ಅದರ ಯಜ್ಞಮಾಂಸವನ್ನು ಸಮರ್ಪಿಸಿದ ದಿನದಲ್ಲಿಯೇ ತಿನ್ನಬೇಕು. ಉಳಿದದ್ದನ್ನು ಮರುದಿನ ತಿನ್ನಬೇಕು.
ಒಬ್ಬನು ತನ್ನ ಸಮಾಧಾನಯಜ್ಞದಲ್ಲಿ ಉಳಿದದ್ದನ್ನು ಮೂರನೆಯ ದಿನದಲ್ಲಿ ತಿಂದರೆ, ಯೆಹೋವನು ಅವನ ವಿಷಯದಲ್ಲಿ ಸಂತೋಷಗೊಳ್ಳುವುದಿಲ್ಲ. ಯೆಹೋವನು ಆ ಯಜ್ಞವನ್ನು ಅವನ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಆ ಯಜ್ಞವು ಅಸಹ್ಯವಸ್ತುವಾಗುವುದು. ಆ ಮಾಂಸವನ್ನು ತಿಂದವನು ಆ ಪಾಪದ ಫಲವನ್ನು ಅನುಭವಿಸುವನು.
“ಒಬ್ಬನಿಗೆ ಮನುಷ್ಯದೇಹದಿಂದ ಆಗಿರುವ ಅಶುದ್ಧ ವಸ್ತು, ಅಶುದ್ಧ ಮೃಗ, ನಿಷಿದ್ಧ ವಸ್ತು ಇವುಗಳಲ್ಲಿ ಯಾವುದಾದರೂ ಸ್ಪರ್ಶವಾಗಿದ್ದರೆ ಅವನು ಅಶುದ್ಧನಾಗಿದ್ದಾನೆ. ಅವನು ಯೆಹೋವನಿಗೆ ಸೇರಿದ ಸಮಾಧಾನಯಜ್ಞಗಳ ಮಾಂಸವನ್ನು ತಿಂದರೆ, ಅವನನ್ನು ಕುಲದಿಂದ ತೆಗೆದುಹಾಕಬೇಕು.”
ಕಾಣಿಕೆಯ ಆ ಭಾಗವು ಅಗ್ನಿಯಲ್ಲಿ ಹೋಮಮಾಡಬೇಕು. ಅವನು ಕಾಣಿಕೆಯನ್ನು ತೆಗೆದುಕೊಂಡು ಯೆಹೋವನ ಸನ್ನಿಧಿಗೆ ಹೋಗಬೇಕು. ಅವನು ಆ ಪಶುವಿನ ಕೊಬ್ಬನ್ನೂ ಎದೆಯ ಭಾಗವನ್ನೂ ಯಾಜಕನ ಬಳಿಗೆ ತರಬೇಕು. ಯೆಹೋವನ ಸನ್ನಿಧಿಯಲ್ಲಿ ಎದೆಯ ಭಾಗವು ನಿವಾಳಿಸಲ್ಪಡಬೇಕು. ಇದು ನೈವೇದ್ಯ ಸಮರ್ಪಣೆಯಾಗಿರುವುದು.
ನೈವೇದ್ಯರೂಪವಾಗಿ ನಿವಾಳಿಸುವ ಸಮರ್ಪಣೆಯಲ್ಲಿ ಪಶುವಿನ ಎದೆಯ ಭಾಗವನ್ನು ಮತ್ತು ಸಮಾಧಾನಯಜ್ಞಗಳಲ್ಲಿ ಪಶುವಿನ ಬಲ ತೊಡೆಯನ್ನು ಯೆಹೋವನಾದ ನಾನು ಇಸ್ರೇಲರಿಂದ ತೆಗೆದುಕೊಂಡು ಆರೋನನಿಗೂ ಅವನ ಪುತ್ರರಿಗೂ ಕೊಡುತ್ತಿದ್ದೇನೆ. ಇಸ್ರೇಲರು ಈ ನಿಯಮಕ್ಕೆ ಎಂದೆಂದಿಗೂ ವಿಧೇಯರಾಗಬೇಕು.”
ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸಿದ ಸಮರ್ಪಣೆಗಳಲ್ಲಿ ಇವೇ ಆರೋನನಿಗೂ ಅವನ ಪುತ್ರರಿಗೂ ಕೊಡಲ್ಪಟ್ಟ ಭಾಗಗಳಾಗಿವೆ. ಆರೋನನೂ ಅವನ ಪುತ್ರರೂ ಯೆಹೋವನ ಯಾಜಕರಾಗಿ [*ಯಾಜಕರಾಗಿ ಹೀಬ್ರೂವಿನಲ್ಲಿ ಇದರರ್ಥ ಬಹುಶಃ, “ಆತನು ಅವರನ್ನು ಯೆಹೋವನಿಗೆ ಯಾಜಕರಾಗಿ ಸೇವೆಮಾಡಲು ನೇಮಿಸುವಾಗ” ಎಂದಿರಬಹುದು.] ಸೇವೆ ಮಾಡುವಾಗಲೆಲ್ಲಾ ಯಜ್ಞಗಳಲ್ಲಿ ಆ ಪಾಲನ್ನು ಪಡೆಯುವರು.
ಯೆಹೋವನು ಮೋಶೆಗೆ ಆ ನಿಯಮಗಳನ್ನು ಸೀನಾಯಿ ಬೆಟ್ಟದಲ್ಲಿ ಕೊಟ್ಟನು. ಇಸ್ರೇಲರು ಯೆಹೋವನಿಗೆ ತಮ್ಮ ಯಜ್ಞಗಳನ್ನು ಅರ್ಪಿಸಬೇಕೆಂದು ಸೀನಾಯಿ ಮರುಭೂಮಿಯಲ್ಲಿ ಆಜ್ಞಾಪಿಸಿದ ದಿನದಲ್ಲಿ ಯೆಹೋವನು ಆ ನಿಯಮಗಳನ್ನು ಕೊಟ್ಟನು.