“ಇಸ್ರೇಲರಿಗೆ ಹೀಗೆ ಹೇಳು: ಯಾವನಾದರೂ ಯೆಹೋವನಿಗೆ ಒಬ್ಬ ವ್ಯಕ್ತಿಯನ್ನು ಪ್ರತಿಷ್ಠಿಸುವುದಕ್ಕಾಗಿ ಹರಕೆ ಮಾಡಿಕೊಂಡರೆ ಅವನಿಗೆ ಒಂದು ಬೆಲೆಯನ್ನು ನಿಗದಿಮಾಡಬೇಕು. ಅವನನ್ನು ಯೆಹೋವನಿಂದ ಮರಳಿ ಕೊಂಡುಕೊಳ್ಳ ಬಯಸುವವರು ಆ ಬೆಲೆಯನ್ನು ಕೊಡಬೇಕು.
ಯಾಕೆಂದರೆ ಅದನ್ನು ಪ್ರತಿಷ್ಠಿಸಿದ ವ್ಯಕ್ತಿ ಅದನ್ನು ಯೆಹೋವನಿಗೆ ಅರ್ಪಿಸುತ್ತೇನೆಂದು ಹರಕೆ ಮಾಡಿರುತ್ತಾನೆ. ಆದ್ದರಿಂದ ಅವನು ಅದರ ಬದಲು ಇನ್ನೊಂದು ಪಶುವನ್ನು ಕೊಡಲು ಪ್ರಯತ್ನಿಸಬಾರದು; ಅದನ್ನು ಬದಲಾಯಿಸಲು ಪ್ರಯತ್ನಿಸಬಾರದು. ಅವನು ಒಳ್ಳೆಯ ಪಶವಿನ ಬದಲಾಗಿ ಕೆಟ್ಟ ಪಶುವನ್ನು ಕೊಡಲು ಪ್ರಯತ್ನಿಸಬಾರದು. ಅವನು ಪಶುಗಳನ್ನು ಬದಲಾಯಿಸಲು ಪ್ರಯತ್ನಿಸಿದರೆ, ಆ ಎರಡು ಪಶುಗಳೂ ಪವಿತ್ರವಾಗುತ್ತವೆ. ಅವೆರಡೂ ಯೆಹೋವನದಾಗಿರುತ್ತವೆ.
“ಒಬ್ಬನು ತನ್ನ ಮನೆಯನ್ನು ಯೆಹೋವನಿಗೆ ಮೀಸಲಾಗಿ ಪ್ರತಿಷ್ಠಿಸಿದರೆ, ಯಾಜಕನು ಅದಕ್ಕೆ ಬೆಲೆಯನ್ನು ನಿರ್ಣಯಿಸುವನು. ಮನೆಯು ಒಳ್ಳೆಯದ್ದಾಗಿದ್ದರೂ ಕೆಟ್ಟದ್ದಾಗಿದ್ದರೂ ಯಾಜಕನು ನಿರ್ಣಯಿಸಿದ ಬೆಲೆಯೇ ಅದರ ಬೆಲೆಯಾಗಿರುತ್ತದೆ.
“ಒಬ್ಬನು ತನ್ನ ಹೊಲಗಳಲ್ಲಿ ಒಂದು ಭಾಗವನ್ನು ಯೆಹೋವನಿಗಾಗಿ ಪ್ರತಿಷ್ಠಿಸಿದರೆ, ಅದರಲ್ಲಿ ಬಿತ್ತುವುದಕ್ಕೆ ಬೇಕಾಗಿರುವ ಬೀಜಗಳನ್ನು ಆಧಾರ ಮಾಡಿಕೊಂಡು ಬೆಲೆಯನ್ನು ನಿಗದಿ ಮಾಡಬೇಕು. ಪ್ರತಿಯೊಂದು ಹೋಮೆರ್ (ಎರಡು ಖಂಡುಗ) ಜವೆಗೋಧಿಯನ್ನು ಉತ್ಪಾದಿಸುವ ಹೊಲವು ಐವತ್ತು ಶೆಕೆಲ್ ಬೆಲೆಬಾಳುವುದು.
ಆದರೆ ಒಬ್ಬನು ಜ್ಯೂಬಿಲಿಯ ನಂತರ ತನ್ನ ಹೊಲವನ್ನು ಕೊಟ್ಟರೆ, ಯಾಜಕನು ಅದರ ಸರಿಯಾದ ಬೆಲೆಯನ್ನು ಲೆಕ್ಕಹಾಕಬೇಕು. ಅವನು ಮುಂದಿನ ಜ್ಯೂಬಿಲಿ ಸಂವತ್ಸರಕ್ಕೆ ಇರುವ ವರ್ಷಗಳನ್ನು ಲೆಕ್ಕಹಾಕಿ ಅದರಿಂದ ಬೆಲೆಯನ್ನು ನಿರ್ಣಯಿಸಬೇಕು.
ಅವನು ಹೊಲವನ್ನು ಮರಳಿ ಕೊಂಡುಕೊಳ್ಳದಿದ್ದರೆ ಅದು ಯಾವಾಗಲೂ ಯಾಜಕರುಗಳಿಗೆ ಸೇರಿದ್ದಾಗಿರುತ್ತದೆ. ಭೂಮಿಯು ಮತ್ತೊಬ್ಬನಿಗೆ ಮಾರಲ್ಪಟ್ಟಿದ್ದರೆ, ಮೊದಲನೆಯ ವ್ಯಕ್ತಿಯು ಅದನ್ನು ಮತ್ತೆ ಕೊಂಡುಕೊಳ್ಳಲು ಸಾಧ್ಯವಿಲ್ಲ.
ಅವನು ಭೂಮಿಯನ್ನು ಹಿಂದಕ್ಕೆ ಕೊಂಡುಕೊಳ್ಳದಿದ್ದರೆ, ಅದು ಜ್ಯೂಬಿಲಿ ಸಂವತ್ಸರದಲ್ಲಿ ಯೆಹೋವನಿಗೆ ಮೀಸಲಾದದ್ದಾಗಿರುವುದು. ಅದು ಎಂದೆಂದಿಗೂ ಯಾಜಕನದ್ದಾಗಿರುವುದು. ಅದು ಪೂರ್ಣವಾಗಿ ಯೆಹೋವನಿಗೆ ಪ್ರತಿಷ್ಠಿಸಿದ ಭೂಮಿಯಂತೆ ಇರುವುದು.
“ಜನರು ಯೆಹೋವನಿಗೆ ವಿಶೇಷ ಕಾಣಿಕೆಯಾಗಿ ದನಗಳನ್ನು ಮತ್ತು ಕುರಿಗಳನ್ನು ಕೊಡಬಹುದು. ಆದರೆ ಪಶುವು ಚೊಚ್ಚಲಾದದ್ದಾಗಿದ್ದರೆ, ಅದು ಈಗಾಗಲೇ ಯೆಹೋವನದ್ದಾಗಿರುತ್ತದೆ. ಆದ್ದರಿಂದ ಜನರು ಅಂಥ ಪಶುಗಳನ್ನು ಯೆಹೋವನಿಗೆ ವಿಶೇಷ ಕಾಣಿಕೆಯಾಗಿ ಕೊಡಲಾಗುವುದಿಲ್ಲ.
ಜನರು ಚೊಚ್ಚಲಾದ ಪಶುಗಳನ್ನು ಯೆಹೋವನಿಗೆ ಕೊಡಬೇಕು. ಆದರೆ ಚೊಚ್ಚಲಾದ ಪಶುವು ಅಶುದ್ಧವಾದ ಪಶುವಾಗಿದ್ದರೆ, ಆಗ ಹರಕೆ ಮಾಡಿದವನು ಅದನ್ನು ಮರಳಿ ಕೊಂಡುಕೊಳ್ಳಬೇಕು. ಯಾಜಕನು ಅದರ ಬೆಲೆಯನ್ನು ನಿರ್ಣಯಿಸುವನು ಮತ್ತು ಹರಕೆ ಮಾಡಿದವನು ಆ ಬೆಲೆಗೆ ಐದನೆಯ ಒಂದಂಶವನ್ನು ಸೇರಿಸಬೇಕು. ಅವನು ಅದನ್ನು ಮರಳಿ ಕೊಂಡುಕೊಳ್ಳದಿದ್ದರೆ, ಆಗ ಯಾಜಕನು ತಾನು ನಿರ್ಣಯಿಸಿದ ಬೆಲೆಗೆ ಆ ಪಶುವನ್ನು ಮಾರಬೇಕು. Special Gifts
“ಜನರು ಯೆಹೋವನಿಗೆ ಸಲ್ಲಿಸುವ ವಿಶೇಷ ಬಗೆಯ ಕಾಣಿಕೆಯು ಯೆಹೋವನಿಗೆ ಮಾತ್ರ ಸೇರಿದ್ದಾಗಿರುತ್ತದೆ. ಅದನ್ನು ಬಿಡಿಸಿಕೊಳ್ಳುವುದಕ್ಕಾಗಲಿ ಮಾರುವುದಕ್ಕಾಗಲಿ ಆಗುವುದಿಲ್ಲ. ಅದು ಯೆಹೋವನದ್ದಾಗಿರುತ್ತದೆ. ಈ ಕಾಣಿಕೆಗಳು ಜನರನ್ನು, ಪಶುಗಳನ್ನು ಮತ್ತು ಪಿತ್ರಾರ್ಜಿತ ಸ್ವತ್ತುಗಳನ್ನು ಒಳಗೊಂಡಿವೆ.
ಆರಿಸಲ್ಪಟ್ಟ ಪಶುವು ಒಳ್ಳೆಯದೋ ಕೆಟ್ಟದ್ದೋ ಎಂದು ಅದರ ಮಾಲಿಕನು ಚಿಂತೆ ಮಾಡಬಾರದು. ಅವನು ಅದನ್ನು ಬದಲಾಯಿಸಬಾರದು. ಅವನು ಅದನ್ನು ಬದಲಾಯಿಸಲು ತೀರ್ಮಾನಿಸಿದರೆ, ಆಗ ಎರಡೂ ಪಶುಗಳು ಯೆಹೋವನದಾಗುತ್ತವೆ. ಆ ಪಶುವನ್ನು ಮರಳಿ ಕೊಂಡುಕೊಳ್ಳಲಾಗದು.”