Bible Languages

Indian Language Bible Word Collections

Bible Versions

Books

Leviticus Chapters

Leviticus 19 Verses

Bible Versions

Books

Leviticus Chapters

Leviticus 19 Verses

1 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
2 “ಇಸ್ರೇಲರಿಗೆ ಹೀಗೆ ಹೇಳು: ನಾನೇ ನಿಮ್ಮ ದೇವರಾದ ಯೆಹೋವನು ನಾನು ಪರಿಶುದ್ಧನಾಗಿರುವಂತೆಯೇ ನೀವೂ ಪರಿಶುದ್ಧರಾಗಿರಬೇಕು!
3 “ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು; ನನ್ನ ವಿಶ್ರಾಂತಿಯ ವಿಶೇಷ ದಿನಗಳನ್ನು ಆಚರಿಸಬೇಕು. ನಾನೇ ನಿಮ್ಮ ದೇವರಾದ ಯೆಹೋವನು!
4 “ವಿಗ್ರಹಾರಾಧನೆ ಮಾಡಬೇಡಿರಿ! ಎರಕದ ವಿಗ್ರಹಗಳನ್ನು ಮಾಡಿಕೊಳ್ಳಬೇಡಿರಿ. ನಾನೇ ನಿಮ್ಮ ದೇವರಾದ ಯೆಹೋವನು!
5 “ನೀವು ಸಮಾಧಾನ ಯಜ್ಞಗಳನ್ನು ಯೆಹೋವನಿಗೆ ಸಮರ್ಪಿಸುವಾಗ, ನೀವು ಅಂಗೀಕೃತರಾಗುವಂತೆ ಅವುಗಳನ್ನು ಅರ್ಪಿಸಬೇಕು.
6 ನೀವು ಅರ್ಪಿಸಿದ ದಿನದಲ್ಲಿ ಅಥವಾ ಮರುದಿನದಲ್ಲಿ ಅದನ್ನು ತಿನ್ನಬಹುದು. ಆದರೆ ಆ ಯಜ್ಞದಲ್ಲಿ ಏನಾದರೂ ಮೂರನೆಯ ದಿನದವರೆಗೆ ಉಳಿದರೆ, ನೀವು ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
7 ಅದರಲ್ಲಿ ಯಾವುದನ್ನಾದರೂ ಮೂರನೆಯ ದಿನದಲ್ಲಿ ತಿಂದರೆ, ಅದು ಅಪವಿತ್ರವಾಗುವುದು. ಅದು ಅಂಗೀಕೃತವಾಗುವುದಿಲ್ಲ.
8 ಒಬ್ಬನು ಅದನ್ನು ಮೂರನೆಯ ದಿನದಲ್ಲಿ ತಿಂದರೆ ಅವನು ಪಾಪಮಾಡಿದ ದೋಷಿಯಾಗಿರುವನು. ಯಾಕೆಂದರೆ ಯೆಹೋವನಿಗೆ ಮೀಸಲಾದ ಪವಿತ್ರ ವಸ್ತುಗಳ ವಿಷಯದಲ್ಲಿ ಅವನಿಗೆ ಗೌರವವಿಲ್ಲ; ಆ ವ್ಯಕ್ತಿಯನ್ನು ಅವನ ಜನರಿಂದ ತೆಗೆದುಹಾಕಬೇಕು.
9 “ಸುಗ್ಗಿಕಾಲದಲ್ಲಿ ನಿಮ್ಮ ಬೆಳೆಯನ್ನು ಕೊಯ್ಯುವಾಗ, ಹೊಲಗಳ ಮೂಲೆಗಳಲ್ಲಿರುವುದನ್ನೆಲ್ಲಾ ಕೊಯ್ಯಬೇಡಿರಿ; ಧಾನ್ಯವೇನಾದರೂ ನೆಲದ ಮೇಲೆ ಬಿದ್ದರೆ ಅದನ್ನು ಕೂಡಿಸಿಕೊಳ್ಳಬಾರದು.
10 ನಿಮ್ಮ ದ್ರಾಕ್ಷಿತೋಟಗಳಲ್ಲಿರುವ ದ್ರಾಕ್ಷಿಗಳನ್ನೆಲ್ಲಾ ತೆಗೆದುಕೊಳ್ಳಬೇಡಿರಿ: ನೆಲದ ಮೇಲೆ ಬೀಳುವ ದ್ರಾಕ್ಷಿಹಣ್ಣುಗಳನ್ನು ಹೆಕ್ಕಿಕೊಳ್ಳಬಾರದು. ಯಾಕೆಂದರೆ ನೀವು ಅವುಗಳನ್ನು ಬಡವರಿಗಾಗಿಯೂ ನಿಮ್ಮ ದೇಶದಲ್ಲಿ ವಾಸಿಸಲು ಬಂದ ಪರದೇಶಸ್ಥರಿಗಾಗಿಯೂ ಬಿಡಬೇಕು. ನಾನೇ ನಿಮ್ಮ ದೇವರಾದ ಯೆಹೋವನು!
11 “ನೀವು ಕದಿಯಬಾರದು; ಮೋಸಮಾಡಬಾರದು; ಒಬ್ಬರಿಗೊಬ್ಬರು ಸುಳ್ಳಾಡಬಾರದು.
12 ನೀವು ನನ್ನ ಹೆಸರನ್ನು ಉಪಯೋಗಿಸಿ ಸುಳ್ಳಾಣೆ ಇಟ್ಟುಕೊಳ್ಳಬಾರದು; ಇಲ್ಲವಾದರೆ ನೀವು ದೇವರ ಹೆಸರನ್ನು ಅಪಕೀರ್ತಿಗೆ ಗುರಿಪಡಿಸುವಿರಿ; ನಾನೇ ನಿಮ್ಮ ದೇವರಾದ ಯೆಹೋವನು!
13 “ನಿಮ್ಮ ನೆರೆಯವನಿಗೆ ಕೆಡುಕುಗಳನ್ನು ಮಾಡಬಾರದು. ನೀವು ಅವನನ್ನು ಸುಲಿಗೆ ಮಾಡಬಾರದು. ನಿಮ್ಮ ಕೂಲಿಯವರ ಕೂಲಿಯನ್ನು ಮರುದಿನದ ಮುಂಜಾನೆಯವರೆಗೆ ಹಿಡಿದಿಟ್ಟುಕೊಳ್ಳಬಾರದು.
14 “ನೀವು ಕಿವುಡನನ್ನು ಶಪಿಸಬಾರದು. ಕುರುಡನು ಬೀಳುವಂತೆ ನೀವು ಅವನ ಮುಂದೆ ಅಡ್ಡವಾಗಿ ಏನನ್ನೂ ಇಡಬಾರದು. ಆದರೆ ನೀವು ನಿಮ್ಮ ದೇವರನ್ನು ಸನ್ಮಾನಿಸಬೇಕು. ನಾನೇ ನಿಮ್ಮ ದೇವರಾದ ಯೆಹೋವನು.
15 “ನೀವು ಕೊಡುವ ತೀರ್ಪು ನ್ಯಾಯವಾಗಿರಬೇಕು. ಬಡವರ ಬಡತನವನ್ನಾಗಲಿ ಪ್ರಾಮುಖ್ಯರ ದೊಡ್ಡಸ್ತಿಕೆಯನ್ನಾಗಲಿ ಗಮನಿಸದೆ ಪಕ್ಷಪಾತವಿಲ್ಲದೆ ತೀರ್ಪುಕೊಡಬೇಕು. ನೀವು ನಿಮ್ಮ ನೆರೆಯವನಿಗೆ ತೀರ್ಪುಮಾಡುವಾಗ ನ್ಯಾಯದ ತೀರ್ಪುಕೊಡಿರಿ.
16 “ಬೇರೆ ಜನರ ವಿರುದ್ಧ ಚಾಡಿ ಹೇಳಬಾರದು. ನಿಮ್ಮ ನೆರೆಯವನ ಪ್ರಾಣವನ್ನು ಅಪಾಯಕ್ಕೆ ಈಡುಮಾಡುವ ಯಾವ ಕಾರ್ಯವನ್ನೂ ನೀವು ಮಾಡಬಾರದು. ನಾನೇ ಯೆಹೋವನು!
17 “ನೀವು ನಿಮ್ಮ ಸಹೋದರನನ್ನು ಮನಸ್ಸಿನಲ್ಲಿ ದ್ವೇಷಿಸಬಾರದು. ನಿಮ್ಮ ಸಹೋದರನು ಏನಾದರೂ ತಪ್ಪುಮಾಡಿದರೆ, ಅವನೊಡನೆ ಅದರ ಕುರಿತು ಮಾತಾಡು. ಅವನ ಅಪರಾಧದಲ್ಲಿ ನೀವು ಪಾಲುಹೊಂದದಂತೆ ನೇರವಾಗಿ ಗದರಿಸಿ. ಆಗ ನೀವು ಅವನನ್ನು ಕ್ಷಮಿಸಬಹುದು.
18 “ಜನರು ನಿಮಗೆ ಮಾಡುವ ಕೆಟ್ಟಕಾರ್ಯಗಳನ್ನು ಮರೆತುಬಿಡಿರಿ. ನಿಮ್ಮ ಜನರಲ್ಲಿ ಒಬ್ಬನಾಗಿರುವವನ ಮೇಲೆ ಸೇಡನ್ನು ತೀರಿಸಿಕೊಳ್ಳಲು ಪ್ರಯತ್ನಿಸಬೇಡಿರಿ; ದ್ವೇಷವನ್ನೂ ಇಟ್ಟುಕೊಳ್ಳಬೇಡಿ. ನಿಮ್ಮ ನೆರೆಯವನನ್ನು ನಿಮ್ಮಂತೆಯೇ ಪ್ರೀತಿಸಿರಿ. ನಾನೇ ಯೆಹೋವನು!
19 “ನೀವು ನನ್ನ ಕಟ್ಟಳೆಗಳಿಗೆ ವಿಧೇಯರಾಗಿರಬೇಕು. ಎರಡು ಬೇರೆ ಜಾತಿಯ ಪಶುಗಳನ್ನು ಒಟ್ಟಿಗೆ ಸೇರಿಸಿ ಈಯಿಸಬಾರದು. ನಿಮ್ಮ ಹೊಲಗಳಲ್ಲಿ ಎರಡು ವಿಧದ ಬೀಜಗಳನ್ನು ಬಿತ್ತಬಾರದು. ಎರಡು ವಿಧದ ದಾರಗಳನ್ನು ಸೇರಿಸಿ ಮಾಡಿದ ಬಟ್ಟೆಯನ್ನು ಧರಿಸಿಕೊಳ್ಳಬಾರದು.
20 “ಇನ್ನೊಬ್ಬನ ದಾಸಿಯಾಗಿರುವ ಸ್ತ್ರೀಯೊಡನೆ ಒಬ್ಬನು ಲೈಂಗಿಕ ಸಂಬಂಧವಿಟ್ಟುಕೊಂಡಿದ್ದರೆ, ಈ ದಾಸಿಯು ಹಣದಿಂದಾಗಲಿ ಉಚಿತವಾಗಿಯಾಗಲಿ ಬಿಡುಗಡೆಯಾಗಲು ಸಾಧ್ಯವಿಲ್ಲದಿದ್ದರೆ ಅವರಿಬ್ಬರಿಗೆ ಶಿಕ್ಷೆ ವಿಧಿಸಬೇಕು. ಆದರೆ ಅವರಿಗೆ ಮರಣ ಶಿಕ್ಷೆಯಾಗಬಾರದು. ಯಾಕೆಂದರೆ ಸ್ತ್ರೀಯು ಸ್ವತಂತ್ರಳಾಗಿಲ್ಲ.
21 ಪುರುಷನು ತನ್ನ ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಟಗರನ್ನು ಯೆಹೋವನ ಬಳಿಗೆ ದೇವದರ್ಶನಗುಡಾರದ ಬಾಗಿಲಿಗೆ ತರಬೇಕು. ಅವನು ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಟಗರನ್ನು ತರಬೇಕು.
22 ಯಾಜಕನು ಅವನನ್ನು ಶುದ್ಧಿಮಾಡುವ ಕಾರ್ಯಗಳನ್ನು ಮಾಡುವನು. ಯಾಜಕನು ಯೆಹೋವನ ಸನ್ನಿಧಿಯಲ್ಲಿ ಟಗರನ್ನು ದೋಷಪರಿಹಾರಕ ಯಜ್ಞವಾಗಿ ಅರ್ಪಿಸುವನು. ಅದು ಆ ಪುರುಷನು ಮಾಡಿದ ಪಾಪಗಳ ಪರಿಹಾರಕ್ಕಾಗಿರುವುದು. ಆಗ ಅವನಿಗೆ ಕ್ಷಮಾಪಣೆಯಾಗುವುದು.
23 “ಮುಂದೆ ನೀವು ನಿಮ್ಮ ದೇಶವನ್ನು ಪ್ರವೇಶಿಸುವಿರಿ. ಆ ಸಮಯದ ಆಹಾರಕ್ಕಾಗಿ ಅನೇಕ ವಿಧಗಳ ಮರಗಳನ್ನು ನೆಡುವಿರಿ. ಸಸಿಯನ್ನು ನೆಟ್ಟನಂತರ, ನೀವು ಆ ಮರದಿಂದ ಹಣ್ಣನ್ನು ಉಪಯೋಗಿಸುವುದಕ್ಕೆ ಮೂರು ವರ್ಷಗಳು ಕಾಯಬೇಕು. ನೀವು ಆ ಹಣ್ಣನ್ನು ಉಪಯೋಗಿಸಬಾರದು.
24 ನಾಲ್ಕನೆಯ ವರ್ಷದಲ್ಲಿ ಆ ಮರದ ಹಣ್ಣು ಯೆಹೋವನದಾಗುವುದು. ಅದು ಯೆಹೋವನ ಸ್ತುತಿಗೆ ಅರ್ಪಿತವಾಗುವ ಪವಿತ್ರ ಕಾಣಿಕೆಯಾಗಿರುವುದು.
25 ಬಳಿಕ ಐದನೆಯ ವರ್ಷದಲ್ಲಿ, ನೀವು ಆ ಮರದ ಹಣ್ಣನ್ನು ತಿನ್ನಬಹುದು ಮತ್ತು ಮರವು ನಿಮಗೆ ಹೆಚ್ಚೆಚ್ಚಾಗಿ ಹಣ್ಣನ್ನು ನೀಡುವುದು. ನಾನೇ ನಿಮ್ಮ ದೇವರಾದ ಯೆಹೋವನು!
26 “ರಕ್ತಸಹಿತವಾದ ಮಾಂಸವನ್ನು ನೀವು ತಿನ್ನಬಾರದು. “ನೀವು ಕಣಿ ಹೇಳಬಾರದು; ಮಂತ್ರತಂತ್ರಗಳನ್ನು ಮಾಡಬಾರದು.
27 “ನಿಮ್ಮ ಮುಖದ ಪಾರ್ಶ್ವದಲ್ಲಿ ಬೆಳೆಯುವ ಕೂದಲನ್ನು ನೀವು ಕತ್ತರಿಸಬಾರದು. ನಿಮ್ಮ ಮುಖದ ಪಾರ್ಶ್ವದಲ್ಲಿರುವ ಗಡ್ಡವನ್ನು ಕತ್ತರಿಸಿಕೊಳ್ಳುವುದರ ಮೂಲಕ ನೀವು ನಿಮ್ಮ ಗಡ್ಡವನ್ನು ವಿಕಾರ ಮಾಡಿಕೊಳ್ಳಬಾರದು.
28 ಸತ್ತವರನ್ನು ಜ್ಞಾಪಕ ಮಾಡಿಕೊಳ್ಳುವುದಕ್ಕಾಗಿ ನಿಮ್ಮ ದೇಹವನ್ನು ಗಾಯ ಮಾಡಿಕೊಳ್ಳಬಾರದು. ಶರೀರದ ಮೇಲೆ ಹಚ್ಚೇ ಚುಚ್ಚಿಸಿಕೊಳ್ಳಬಾರದು. ನಾನೇ ಯೆಹೋವನು!
29 “ಮಗಳನ್ನು ಸೂಳೆಯನ್ನಾಗಿ ಮಾಡಬಾರದು. ಇದರಿಂದ ಸೂಳೆಗಾರಿಕೆ ಹೆಚ್ಚಾಗುತ್ತದೆ. ನಿಮ್ಮ ದೇಶದಲ್ಲಿ ಸೂಳೆಗಾರಿಕೆ ಇರದಂತೆ ನೋಡಿಕೊಳ್ಳಿರಿ. ಇಂಥ ಪಾಪದಿಂದ ನಿಮ್ಮ ದೇಶವು ತುಂಬಿಹೋಗಲು ಬಿಡಬೇಡಿರಿ.
30 “ನೀವು ನನ್ನ ಸಬ್ಬತ್ ದಿನಗಳನ್ನು ಅನುಸರಿಸಬೇಕು. ನನ್ನ ವಿಶ್ರಾಂತಿಯ ವಿಶೇಷ ದಿನಗಳಲ್ಲಿ ನೀವು ಕೆಲಸ ಮಾಡಬಾರದು. ನೀವು ನನ್ನ ಪವಿತ್ರಸ್ಥಳವನ್ನು ಗೌರವಿಸಬೇಕು. ನಾನೇ ಯೆಹೋವನು!
31 ಸಲಹೆಗಾಗಿ, ಸತ್ತವರಲ್ಲಿ ವಿಚಾರಿಸುವವರ ಮತ್ತು ಬೇತಾಳಿಕರ ಬಳಿಗೆ ಹೋಗಬೇಡಿರಿ. ಅವರು ನಿಮ್ಮನ್ನು ಕೇವಲ ಅಶುದ್ಧರನ್ನಾಗಿ ಮಾಡುವರು. ನಾನೇ ನಿಮ್ಮ ದೇವರಾದ ಯೆಹೋವನು!
32 “ವೃದ್ಧರ ಮುಂದೆ ಎದ್ದು ನಿಂತುಕೊಳ್ಳಿರಿ. ಹಿರಿಯರಿಗೆ ಗೌರವಕೊಡಿರಿ. ನಿಮ್ಮ ದೇವರನ್ನು ಸನ್ಮಾನಿಸಿರಿ. ನಾನೇ ಯೆಹೋವನು!
33 ನಿಮ್ಮ ದೇಶದಲ್ಲಿ ವಾಸಿಸುವ ಪರದೇಶಸ್ಥರಿಗೆ ಕೆಟ್ಟದ್ದನ್ನು ಮಾಡಬೇಡಿರಿ.
34 ನಿಮ್ಮ ಸ್ವಂತ ದೇಶದವರೊಡನೆ ವರ್ತಿಸುವ ಪ್ರಕಾರ ಪರದೇಶಸ್ಥರೊಡನೆ ವರ್ತಿಸಿರಿ. ನಿಮ್ಮನ್ನು ಪ್ರೀತಿಸುವಂತೆ ಪರದೇಶಸ್ಥರನ್ನು ಪ್ರೀತಿಸಿರಿ. ಯಾಕೆಂದರೆ ನೀವು ಸಹ ಒಂದು ಕಾಲದಲ್ಲಿ ಈಜಿಪ್ಟಿನಲ್ಲಿದ್ದಾಗ ಪರದೇಶಸ್ಥರಾಗಿದ್ದಿರಿ. ನಾನೇ ನಿಮ್ಮ ದೇವರಾದ ಯೆಹೋವನು!
35 “ನೀವು ಜನರಿಗೆ ತೀರ್ಪುಮಾಡುವಾಗ ನ್ಯಾಯವಾಗಿ ತೀರ್ಪುಮಾಡಬೇಕು. ನೀವು ಅಳೆಯುವಾಗ ಮತ್ತು ತೂಕಮಾಡುವಾಗ ನ್ಯಾಯವಾಗಿ ನಡೆದುಕೊಳ್ಳಬೇಕು.
36 ನಿಮ್ಮ ಪುಟ್ಟಿಗಳು ಸರಿಯಾದ ಪ್ರಮಾಣದ್ದಾಗಿರಬೇಕು. ನಿಮ್ಮ ಕೊಳಗಗಳು ದ್ರವಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ಹಿಡಿಸಿಕೊಳ್ಳುವಂತವುಗಳಾಗಿರಬೇಕು. ನಿಮ್ಮ ತೂಕದ ಕಲ್ಲುಗಳು ಮತ್ತು ತಕ್ಕಡಿಗಳು ವಸ್ತುಗಳನ್ನು ಸರಿಯಾಗಿ ತೂಕ ಮಾಡುವಂಥವುಗಳಾಗಿರಬೇಕು. ನಾನೇ ನಿಮ್ಮ ದೇವರಾದ ಯೆಹೋವನು! ನಾನು ನಿಮ್ಮನ್ನು ಈಜಿಪ್ಟಿನಿಂದ ಹೊರತಂದೆನು.
37 “ನೀವು ನನ್ನ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಜ್ಞಾಪಕಮಾಡಿಕೊಳ್ಳಬೇಕು; ಅವುಗಳಿಗೆ ವಿಧೇಯರಾಗಬೇಕು. ನಾನೇ ಯೆಹೋವನು.” ವಿಗ್ರಹಾರಾಧನೆಯ ಕುರಿತು ಎಚ್ಚರಿಕೆ

Leviticus 19:1 Kannada Language Bible Words basic statistical display

COMING SOON ...

×

Alert

×