ಹಿಂದೆ ನೀವು ಈಜಿಪ್ಟಿನಲ್ಲಿ ವಾಸಿಸಿದಿರಿ. ಈಜಿಪ್ಟಿನ ಜನರು ಆಚರಿಸುವ ಆಚಾರಗಳನ್ನು ನೀವು ಅನುಸರಿಸಬಾರದು. ಆ ದೇಶದಲ್ಲಿ ಮಾಡುತ್ತಿದ್ದ ಕಾರ್ಯಗಳನ್ನು ನೀವು ಮಾಡಬಾರದು. ನಾನು ನಿಮ್ಮನ್ನು ಕಾನಾನಿಗೆ ನಡೆಸುತ್ತಿದ್ದೇನೆ. ಆ ದೇಶದಲ್ಲಿ ಮಾಡುವ ಕಾರ್ಯಗಳನ್ನು ನೀವು ಮಾಡಕೂಡದು. ಅವರ ಸಂಪ್ರದಾಯಗಳನ್ನು ಅನುಸರಿಸಬೇಡಿ.
“ಸಹೋದರಿಯೊಂದಿಗೆ, ಅಂದರೆ ನಿಮ್ಮ ತಂದೆ ಅಥವಾ ತಾಯಿಯ ಮಗಳೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು. ನಿಮ್ಮ ಸಹೋದರಿಯು ನಿಮ್ಮ ಮನೆಯಲ್ಲಾಗಲಿ ಅಥವಾ ಇನ್ನೊಂದು ಸ್ಥಳದಲ್ಲಾಗಲಿ ಹುಟ್ಟಿದರೂ ಆಕೆಯೊಡನೆ ಲೈಂಗಿಕ ಸಂಬಂಧ ಮಾಡಬಾರದು.
“ಒಬ್ಬ ಸ್ತ್ರೀಯೊಡನೆಯೂ ಆಕೆಯ ಮಗಳೊಡನೆಯೂ ಲೈಂಗಿಕ ಸಂಬಂಧ ಮಾಡಬಾರದು. ಆ ಸ್ತ್ರೀಯ ಮೊಮ್ಮಗಳೊಡನೆಯೂ ಲೈಂಗಿಕ ಸಂಬಂಧ ಮಾಡಬಾರದು. ಈ ಮೊಮ್ಮಗಳು ಈ ಸ್ತ್ರೀಯ ಮಗನ ಅಥವಾ ಮಗಳ ಮಗಳಾಗಿರಬಹುದು. ಆಕೆಯ ಮೊಮ್ಮಕ್ಕಳಾದ ಹೆಣ್ಣುಮಕ್ಕಳು ಆಕೆಯ ಹತ್ತಿರದ ಸಂಬಂಧಿಕರಾಗಿದ್ದಾರೆ. ಅವರೊಡನೆ ಲೈಂಗಿಕ ಸಂಬಂಧ ಮಾಡುವುದು ತಪ್ಪು.
“ಹೆಂಡತಿ ಇನ್ನೂ ಜೀವದಿಂದಿರುವಾಗ, ಆಕೆಯ ಸಹೋದರಿಯನ್ನು ಹೆಂಡತಿಯನ್ನಾಗಿ ತೆಗೆದುಕೊಳ್ಳಬಾರದು. ಇಲ್ಲವಾದರೆ ಆ ಇಬ್ಬರು ಸಹೋದರಿಯರು ಒಬ್ಬರಿಗೊಬ್ಬರು ವೈರಿಗಳಾಗುವರು. ಹೆಂಡತಿಯ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು.
“ಪಶುವಿನೊಡನೆ ಲೈಂಗಿಕ ಸಂಬಂಧ ಮಾಡಬಾರದು. ಇಂಥ ಸಂಬಂಧವು ನಿಮ್ಮನ್ನು ಅಪವಿತ್ರರನ್ನಾಗಿ ಮಾಡುವುದು. ಅಲ್ಲದೆ ಸ್ತ್ರೀಯು ಪಶುವಿನೊಡನೆ ಲೈಂಗಿಕ ಸಂಬಂಧ ಪಡೆಯಬಾರದು. ಇಂಥ ಸಂಬಂಧ ಸ್ವಭಾವಕ್ಕೆ ವಿರುದ್ದವಾದದ್ದು.
“ಆ ದುರಾಚಾರಗಳಲ್ಲಿ ಯಾವುದರಿಂದಲೂ ನಿಮ್ಮನ್ನು ಅಶುದ್ಧರನ್ನಾಗಿ ಮಾಡಿಕೊಳ್ಳಬೇಡಿರಿ. ನಾನು ಜನಾಂಗಗಳನ್ನು ಅವರ ದೇಶಗಳಿಂದ ಹೊರಡಿಸಿ ಅವರ ದೇಶವನ್ನು ನಿಮಗೆ ಕೊಡುತ್ತಿದ್ದೇನೆ. ಯಾಕೆಂದರೆ ಅವರು ಅಂಥ ಭಯಂಕರ ಪಾಪಗಳನ್ನು ಮಾಡಿದರು.
“ಆದ್ದರಿಂದ ನೀವು ನನ್ನ ಕಟ್ಟಳೆಗಳಿಗೂ ನಿಯಮಗಳಿಗೂ ಆಜ್ಞಾವಿಧಿಗಳಿಗೂ ವಿಧೇಯರಾಗಬೇಕು. ನೀವು ಆ ಭಯಂಕರ ಪಾಪಗಳಲ್ಲಿ ಯಾವುದನ್ನೂ ಮಾಡಬಾರದು. ಆ ವಿಧಿಗಳು ಇಸ್ರೇಲರಿಗಾಗಿ ಮತ್ತು ನಿಮ್ಮ ಮಧ್ಯದಲ್ಲಿ ವಾಸಿಸುವ ಜನರಿಗಾಗಿ ಇರುತ್ತವೆ.
ಅನ್ಯಜನರು ಆ ಭಯಂಕರ ಪಾಪಗಳನ್ನು ಮಾಡಿದ್ದಾರೆ. ಆದರೆ ನೀವು ನನ್ನ ಕಟ್ಟಳೆಗಳಿಗೆ ವಿಧೇಯರಾಗಬೇಕು. ನೀವು ಆ ಭಯಂಕರ ಪಾಪಗಳಲ್ಲಿ ಯಾವುದನ್ನೂ ಮಾಡಬಾರದು. ಆ ಭಯಂಕರ ಪಾಪಗಳಿಂದ ನಿಮ್ಮನ್ನು ಹೊಲೆ ಮಾಡಿಕೊಳ್ಳಬೇಡಿರಿ. ನಾನೇ ನಿಮ್ಮ ದೇವರಾದ ಯೆಹೋವನು.”