ಆತನು ಹೇಳಿದ್ದೇನೆಂದರೆ: “ನಿನ್ನ ಸಹೋದರನಾದ ಆರೋನನೊಡನೆ ಮಾತಾಡು. ಅವನು ತನಗೆ ಇಷ್ಟಬಂದಾಗಲೆಲ್ಲಾ ತೆರೆಯ ಹಿಂದಿರುವ ಮಹಾ ಪವಿತ್ರಸ್ಥಳದೊಳಕ್ಕೆ ಹೋಗಬಾರದೆಂದು ಅವನಿಗೆ ಹೇಳು. ಆ ತೆರೆಯ ಹಿಂದೆ ಇರುವ ಕೋಣೆಯೊಳಗೆ ಪವಿತ್ರ ಪೆಟ್ಟಿಗೆಯು ಇರುತ್ತದೆ. ಕೃಪಾಸನವು ಪವಿತ್ರ ಪೆಟ್ಟಿಗೆಯ ಮೇಲ್ಭಾಗದಲ್ಲಿರುತ್ತದೆ. ಕೃಪಾಸನದ ಮೇಲೆ ಮೇಘದಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ. ಆರೋನನು ಆ ಕೋಣೆಯೊಳಗೆ ಹೋದರೆ ಸಾಯುವನು!
ಆರೋನನು ತನ್ನ ಪೂರ್ಣಶರೀರವನ್ನು ನೀರಿನಿಂದ ತೊಳೆದುಕೊಳ್ಳಬೇಕು. ಬಳಿಕ ಅವನು ಈ ಬಟ್ಟೆಗಳನ್ನು ಹಾಕಿಕೊಳ್ಳಬೇಕು. ಆರೋನನು ಪವಿತ್ರ ನಾರಿನ ನಿಲುವಂಗಿಯನ್ನೂ ನಾರಿನ ಚಡ್ಡಿಯನ್ನೂ ಧರಿಸಿಕೊಂಡಿರಬೇಕು. ಅವನು ನಾರಿನ ನಡುಕಟ್ಟನ್ನು ಕಟ್ಟಿಕೊಳ್ಳಬೇಕು; ನಾರಿನ ಮುಂಡಾಸವನ್ನು ಇಟ್ಟುಕೊಳ್ಳಬೇಕು. ಇವುಗಳು ಪವಿತ್ರವಾದವುಗಳಾಗಿವೆ.
ಬಳಿಕ ಆರೋನನು ಪಾಪಪರಿಹಾರಕ ಯಜ್ಞಕ್ಕೋಸ್ಕರ ಹೋರಿಯನ್ನು ಅರ್ಪಿಸಬೇಕು. ಈ ಪಾಪಪರಿಹಾರಕ ಯಜ್ಞವು ಅವನಿಗಾಗಿ ಇರುತ್ತದೆ. ಆರೋನನು ತನಗೂ ತನ್ನ ಕುಟುಂಬದವರಿಗೂ ಪ್ರಾಯಶ್ಚಿತ್ತ ಮಾಡಲು ಇದನ್ನು ಮಾಡಬೇಕು.
ಆದರೆ ಚೀಟು ಹಾಕುವುದರ ಮೂಲಕ ಅಜಾಜೇಲನಿಗಾಗಿ ಆರಿಸಲ್ಪಟ್ಟ ಹೋತವನ್ನು ಜೀವಂತವಾಗಿ ಯೆಹೋವನ ಸನ್ನಿಧಿಗೆ ತರಬೇಕು ಮತ್ತು ಈ ಹೋತವನ್ನು ಮರುಭೂಮಿಯಲ್ಲಿರುವ ಅಜಾಜೇಲನಿಗೆ ಕಳುಹಿಸಬೇಕು. ಜನರಿಗೋಸ್ಕರ ಪ್ರಾಯಶ್ಚಿತ್ತ ಮಾಡಲು ಹೀಗೆ ಮಾಡಬೇಕು.
ಬಳಿಕ ಅವನು ಯೆಹೋವನ ಸನ್ನಿಧಿಯಲ್ಲಿರುವ ವೇದಿಕೆಯಿಂದ ಕೆಂಡಗಳನ್ನು ಧೂಪಾರತಿಯಲ್ಲಿ ತೆಗೆದುಕೊಳ್ಳಬೇಕು. ಆರೋನನು ಪರಿಮಳ ಧೂಪ ದ್ರವ್ಯದ ಪುಡಿಯಲ್ಲಿ ಎರಡು ಹಿಡಿ ತೆಗೆದುಕೊಳ್ಳುವನು. ಆರೋನನು ಆ ಧೂಪವನ್ನು ತೆರೆಯ ಹಿಂದೆ ಇರುವ ಕೋಣೆಗೆ ತೆಗೆದುಕೊಂಡು ಬರಬೇಕು.
ಆರೋನನು ಯೆಹೋವನ ಸನ್ನಿಧಿಯಲ್ಲಿ ಬೆಂಕಿಯ ಮೇಲೆ ಧೂಪವನ್ನು ಹಾಕಬೇಕು. ಆಗ ಒಡಂಬಡಿಕೆಯ ಪೆಟ್ಟಿಗೆ ಮೇಲಿರುವ ಕೃಪಾಸವನ್ನು ಧೂಪದ ಹೊಗೆಯು ಮುಚ್ಚಿಕೊಳ್ಳುವುದು. ಹೀಗೆ ಮಾಡುವುದರಿಂದ ಆರೋನನು ಸಾಯುವುದಿಲ್ಲ.
ಅಲ್ಲದೆ ಆರೋನನು ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಕೃಪಾಸನದ ಪೂರ್ವಭಾಗದಲ್ಲಿ ತನ್ನ ಬೆರಳಿನಿಂದ ಚಿಮಿಕಿಸಬೇಕು. ಕೃಪಾಸನದ ಮುಂಭಾಗದಲ್ಲಿ ಅವನು ತನ್ನ ಬೆರಳಿನಿಂದ ರಕ್ತವನ್ನು ಏಳು ಬಾರಿ ಚಿಮಿಕಿಸುವನು.
“ಬಳಿಕ ಆರೋನನು ಜನರಿಗೋಸ್ಕರವಾಗಿರುವ ಪಾಪಪರಿಹಾರಕ ಪಶುವಾದ ಹೋತವನ್ನು ವಧಿಸಬೇಕು. ಆರೋನನು ಈ ಹೋತದ ರಕ್ತವನ್ನು ತೆರೆಯ ಹಿಂಭಾಗದಲ್ಲಿರುವ ಕೋಣೆಗೆ ತೆಗೆದುಕೊಂಡು ಬರಬೇಕು. ಆರೋನನು ಹೋರಿಯ ರಕ್ತದಿಂದ ಮಾಡಿದಂತೆ ಹೋತದ ರಕ್ತದಿಂದಲೂ ಮಾಡಬೇಕು. ಆರೋನನು ಹೋತದ ರಕ್ತವನ್ನು ಕೃಪಾಸನದ ಮೇಲೂ ಮತ್ತು ಕೃಪಾಸನದ ಮುಂಭಾಗದಲ್ಲಿಯೂ ಚಿಮಿಕಿಸಬೇಕು.
ಆರೋನನು ಮಹಾ ಪವಿತ್ರಸ್ಥಳವನ್ನು ಪರಿಶುದ್ಧ ಮಾಡಲು ಅನುಸರಿಸಬೇಕಾದ ನಿಯಮಗಳು: ಇಸ್ರೇಲರ ಅಶುದ್ಧತ್ವ, ದಂಗೆಕೋರತನ ಮತ್ತು ಅವರ ಯಾವುದೇ ಪಾಪಗಳ ಪರಿಹಾರಕ್ಕಾಗಿ ಆರೋನನು ಇದನ್ನು ಮಾಡಬೇಕು. ಅವರ ಅಶುದ್ಧತ್ವದ ನಡುವೆ ಇರುವ ದೇವದರ್ಶನಗುಡಾರಕ್ಕೂ ಅವನು ಇದನ್ನೇ ಮಾಡಬೇಕು.
“ಆರೋನನು ಮಹಾ ಪವಿತ್ರಸ್ಥಳದಲ್ಲಿ ಪ್ರಾಯಶ್ಚಿತ್ತ ಮಾಡಲು ದೇವದರ್ಶನಗುಡಾರದೊಳಗೆ ಹೋದ ಸಮಯದಿಂದ ಅವನು ಬರುವ ತನಕ ಗುಡಾರದೊಳಗೆ ಯಾರೂ ಇರಕೂಡದು. ಆರೋನನು ಬರುವ ತನಕ ಯಾರೂ ಒಳಗೆ ಹೋಗಕೂಡದು. ಹೀಗೆ ಆರೋನನು ತನಗಾಗಿಯೂ ತನ್ನ ಕುಟುಂಬಕ್ಕಾಗಿಯೂ ಇಡೀ ಇಸ್ರೇಲ್ ಸಮೂಹಕ್ಕಾಗಿಯೂ ಪ್ರಾಯಶ್ಚಿತ್ತ ಮಾಡುವನು.
ತರುವಾಯ ಆರೋನನು ಹೊರಗೆ ಬಂದು ಯೆಹೋವನ ಸನ್ನಿಧಿಯಲ್ಲಿರುವ ಯಜ್ಞವೇದಿಕೆಯ ಬಳಿಗೆ ಹೋಗುವನು. ಆರೋನನು ಯಜ್ಞವೇದಿಕೆಯನ್ನು ಶುದ್ಧೀಕರಿಸುವನು. ಆರೋನನು ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ಮತ್ತು ಹೋತದ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಯಜ್ಞವೇದಿಕೆಯ ಎಲ್ಲಾ ಮೂಲೆಗಳಿಗೆ ಹಚ್ಚುವನು.
ಬಳಿಕ ಆರೋನನು ತನ್ನ ಬೆರಳಿನಿಂದ ಸ್ವಲ್ಪ ರಕ್ತವನ್ನು ಯಜ್ಞವೇದಿಕೆಯ ಮೇಲೆ ಏಳು ಸಲ ಚಿಮಿಕಿಸುವನು. ಹೀಗೆ ಆರೋನನು ಯಜ್ಞವೇದಿಕೆಯನ್ನು ಇಸ್ರೇಲರಿಂದ ಅದಕ್ಕುಂಟಾದ ಅಶುದ್ಧತ್ವದಿಂದ ದೂರಮಾಡಿ ಪರಿಶುದ್ಧಗೊಳಿಸುವನು.
ಆರೋನನು ಸಜೀವವಾದ ಹೋತದ ತಲೆಯ ಮೇಲೆ ತನ್ನ ಎರಡು ಕೈಗಳನ್ನಿಟ್ಟು ಇಸ್ರೇಲರು ಮಾಡಿದ ಪಾಪಗಳನ್ನು ಮತ್ತು ದ್ರೋಹಗಳನ್ನು ಅರಿಕೆಮಾಡುವನು. ಹೀಗೆ ಆರೋನನು ಜನರ ಪಾಪಗಳನ್ನು ಹೋತದ ತಲೆಯ ಮೇಲೆ ಹೊರಿಸುವನು. ಬಳಿಕ ಅವನು ಹೋತವನ್ನು ಮರುಭೂಮಿಗೆ ಕಳುಹಿಸಿಬಿಡುವನು. ಒಬ್ಬ ಮನುಷ್ಯನು ಹೋತವನ್ನು ನಡಿಸಿಕೊಂಡು ಹೋಗಲು ಸಿದ್ಧನಾಗಿ ನಿಂತಿರುವನು.
“ಬಳಿಕ ಆರೋನನು ದೇವದರ್ಶನಗುಡಾರವನ್ನು ಪ್ರವೇಶಿಸುವನು. ಅವನು ಪವಿತ್ರಸ್ಥಳದೊಳಗೆ ಹೋಗಿದ್ದಾಗ ಧರಿಸಿಕೊಂಡಿದ್ದ ನಾರುಬಟ್ಟೆಯನ್ನು ತೆಗೆದುಹಾಕುವನು. ಅವನು ಈ ಬಟ್ಟೆಗಳನ್ನು ಅಲ್ಲಿಯೇ ಬಿಡಬೇಕು.
ಅವನು ತನ್ನ ಶರೀರವನ್ನು ಪವಿತ್ರಸ್ಥಳದಲ್ಲಿ ನೀರಿನಿಂದ ತೊಳೆದುಕೊಳ್ಳುವನು. ಬಳಿಕ ಅವನು ತನ್ನ ಇತರ ವಿಶೇಷ ಬಟ್ಟೆಗಳನ್ನು ಧರಿಸಿಕೊಳ್ಳುವನು. ಅವನು ಹೊರಗೆ ಬಂದು, ತನ್ನ ಸರ್ವಾಂಗಹೋಮವನ್ನು ಮತ್ತು ಜನರ ಸರ್ವಾಂಗಹೋಮವನ್ನು ಅರ್ಪಿಸುವನು. ಅವನು ತನಗಾಗಿಯೂ ಜನರಿಗಾಗಿಯೂ ಪ್ರಾಯಶ್ಚಿತ್ತ ಮಾಡುವನು.
“ಪಾಪಪರಿಹಾರಕ ಯಜ್ಞಕ್ಕಾಗಿ ಇರುವ ಹೋರಿಯನ್ನು ಮತ್ತು ಹೋತವನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಬೇಕು. (ಆ ಪಶುಗಳ ರಕ್ತವನ್ನು, ಪವಿತ್ರವಸ್ತುಗಳನ್ನು ಶುದ್ಧೀಕರಿಸುವುದಕ್ಕೆ ಪವಿತ್ರಸ್ಥಳಕ್ಕೆ ತರಲಾಯಿತು.) ಯಾಜಕರು ಆ ಪಶುಗಳ ಚರ್ಮ, ಮಾಂಸ ಮತ್ತು ದೇಹದ ಕಲ್ಮಶವನ್ನೆಲ್ಲಾ ಬೆಂಕಿಯಿಂದ ಸುಟ್ಟುಹಾಕಿಸಬೇಕು.
“ಇದು ನಿಮಗೆ ಶಾಶ್ವತವಾದ ಕಟ್ಟಳೆ: ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ನೀವು ಆಹಾರವನ್ನು [*ಆಹಾರವನ್ನು ಅಕ್ಷರಶಃ, ನಿಮ್ಮನ್ನು ದೀನರನ್ನಾಗಿ ಮಾಡಿಕೊಳ್ಳಿರಿ.] ತೆಗೆದುಕೊಳ್ಳದೆ ಉಪವಾಸ ಮಾಡಬೇಕು. ಆ ದಿನದಲ್ಲಿ ಯಾವ ಕೆಲಸವನ್ನೂ ಮಾಡಬಾರದು. ನಿಮ್ಮ ದೇಶದಲ್ಲಿ ವಾಸಿಸುವ ಪ್ರವಾಸಿಗರಾಗಲಿ ಪರದೇಶಸ್ಥರಾಗಲಿ ಯಾವ ಕೆಲಸವನ್ನು ಮಾಡಬಾರದು.
“ಆದ್ದರಿಂದ ಪ್ರಧಾನಯಾಜಕನಾಗಿ ಆರಿಸಲ್ಪಟ್ಟವನು ವಸ್ತುಗಳನ್ನು ಶುದ್ಧೀಕರಿಸಲು ಈ ಆಚರಣೆಯನ್ನು ಮಾಡಬೇಕು. ಈತನು ತನ್ನ ತಂದೆಯ ನಂತರ ಪ್ರಧಾನಯಾಜಕನಾಗಿ ಸೇವೆಮಾಡುವುದಕ್ಕೆ ನೇಮಿಸಲ್ಪಟ್ಟವನಾಗಿದ್ದಾನೆ. ಆ ಯಾಜಕನು ಪವಿತ್ರವೂ ಶ್ರೇಷ್ಠವೂ ಆಗಿರುವ ನಾರುಬಟ್ಟೆಯನ್ನು ಧರಿಸಿಕೊಳ್ಳಬೇಕು.
ಇಸ್ರೇಲರನ್ನು ಶುದ್ಧೀಕರಿಸುವ ಕಟ್ಟಳೆ ಶಾಶ್ವತವಾದದ್ದು. ನೀವು ಆ ಕಾರ್ಯಗಳನ್ನು ವರ್ಷಕ್ಕೊಮ್ಮೆ ಇಸ್ರೇಲರ ಪಾಪಗಳ ದೆಸೆಯಿಂದ ಮಾಡಬೇಕು.” ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಅವರು ಆ ಕಾರ್ಯಗಳನ್ನು ಮಾಡಿದರು.