ಆಗ ಯೆಹೋವನು ಯೆಹೋಶುವನಿಗೆ, “ಭಯಪಡಬೇಡ, ನಿರಾಶೆಗೊಳ್ಳಬೇಡ. ನಿಮ್ಮ ಎಲ್ಲ ಯೋಧರನ್ನು ‘ಆಯಿ’ಗೆ ತೆಗೆದುಕೊಂಡು ಹೋಗು. ‘ಆಯಿ’ಯ ಅರಸನನ್ನು ಸೋಲಿಸಲು ನಾನು ನಿನಗೆ ಸಹಾಯ ಮಾಡುತ್ತೇನೆ. ನಾನು ನಿನಗೆ ಅವನ ಜನರನ್ನು, ಅವನ ಪಟ್ಟಣವನ್ನು ಮತ್ತು ಅವನ ಪ್ರದೇಶವನ್ನು ಕೊಡುವೆನು.
ಜೆರಿಕೊ ಮತ್ತು ಅದರ ಅರಸನಿಗೆ ಮಾಡಿದಂತೆಯೇ ನೀವು ‘ಆಯಿ’ ಮತ್ತು ಅದರ ಅರಸನಿಗೆ ಮಾಡಬೇಕು. ಈ ಸಲ ಮಾತ್ರ ನೀವು ಎಲ್ಲ ಸಂಪತ್ತನ್ನು ತೆಗೆದುಕೊಂಡು ನಿಮಗಾಗಿ ಇಟ್ಟುಕೊಳ್ಳಬೇಕು. ನೀವು ಈ ಸಂಪತ್ತನ್ನು ನಿಮ್ಮ ಜನರೊಂದಿಗೆ ಹಂಚಿಕೊಳ್ಳಿರಿ. ಈಗ, ನಿಮ್ಮ ಕೆಲವು ಯೋಧರಿಗೆ ಪಟ್ಟಣದ ಹಿಂಭಾಗದಲ್ಲಿ ಅಡಗಿಕೊಂಡಿರಲು ತಿಳಿಸು” ಅಂದನು.
ನಾನು ನನ್ನ ಸಂಗಡವಿರುವ ಜನರನ್ನು ಕರೆದುಕೊಂಡು ಪಟ್ಟಣದ ಕಡೆಗೆ ಹೋಗುತ್ತೇನೆ. ಪಟ್ಟಣದೊಳಗಿರುವ ಜನರು ನಮ್ಮ ಸಂಗಡ ಕಾದಾಡಲು ಹೊರಗೆ ಬರುತ್ತಾರೆ. ನಾವು ಮುಂಚಿನಂತೆ ಹಿಂತಿರುಗಿ ಅಲ್ಲಿಂದ ಓಡುತ್ತೇವೆ.
ಅವರು ನಗರದಿಂದ ನಮ್ಮನ್ನು ಬೆನ್ನಟ್ಟಿಕೊಂಡು ಬರುತ್ತಾರೆ. ನಾವು ಮುಂಚಿನಂತೆ ಅವರ ಮುಂದೆ ಸೋತು ಓಡಿಹೋಗುತ್ತಿದ್ದೇವೆ ಎಂದು ಅವರು ತಿಳಿದುಕೊಳ್ಳುತ್ತಾರೆ. ಹೀಗೆ ನಾವು ಬಹುದೂರ ಓಡಿಹೋದಾಗ
ನೀವು ಯಾವ ಸ್ಥಳದಲ್ಲಿ ಅಡಗಿಕೊಂಡಿದ್ದೀರೋ ಆ ಸ್ಥಳದಿಂದ ಹೊರಬಂದು ಪಟ್ಟಣವನ್ನು ಸ್ವಾಧೀನಪಡಿಸಿಕೊಳ್ಳಬೇಕು. ನಿಮ್ಮ ದೇವರಾದ ಯೆಹೋವನು ನಿಮಗೆ ಗೆಲ್ಲುವ ಸಾಮರ್ಥ್ಯವನ್ನು ದಯ ಪಾಲಿಸುತ್ತಾನೆ.
“ಯೆಹೋವನು ಹೇಳಿದಂತೆಯೇ ನೀವು ಮಾಡಬೇಕು. ನೀವು ಪಟ್ಟಣವನ್ನು ಸ್ವಾಧೀನಪಡಿಸಿಕೊಂಡ ಮೇಲೆ ಅದನ್ನು ಸುಟ್ಟುಹಾಕಬೇಕು. ನನ್ನ ಕಡೆಗೆ ಗಮನವಿರಲಿ! ಆಕ್ರಮಣ ಮಾಡುವುದಕ್ಕೆ ನಾನು ಆಜ್ಞೆಯನ್ನು ಕೊಡುತ್ತೇನೆ” ಎಂದು ಆಜ್ಞಾಪಿಸಿದನು.
ಬಳಿಕ ಯೆಹೋಶುವನು ಅವರನ್ನು ಅವರು ಅಡಗಿಕೊಳ್ಳಬೇಕಾದ ಸ್ಥಳಕ್ಕೆ ಕಳುಹಿಸಿದನು. ಅವರು “ಬೇತೇಲ್” ಮತ್ತು “ಆಯಿ”ಯ ಮಧ್ಯದಲ್ಲಿದ್ದ ಒಂದು ಸ್ಥಳಕ್ಕೆ ಹೋದರು. ಇದು ಆಯಿಯ ಪಶ್ಚಿಮಕ್ಕಿತ್ತು. ಯೆಹೋಶುವನು ತನ್ನ ಜನರೊಂದಿಗೆ ಆ ರಾತ್ರಿ ಅಲ್ಲಿಯೇ ಇದ್ದನು.
ಅವನ ಜೊತೆಗಿದ್ದ ಎಲ್ಲ ಸೈನಿಕರು “ಆಯಿ”ಯ ಕಡೆಗೆ ಹೋದರು. ಅವರು ನಗರದ ಮುಂದುಗಡೆ ನಿಂತರು. ಸೈನ್ಯವು ನಗರದ ಉತ್ತರ ದಿಕ್ಕಿನಲ್ಲಿಳಿದುಕೊಂಡಿತು. ಈ ಸೈನ್ಯ ಮತ್ತು “ಆಯಿ” ಪಟ್ಟಣದ ನಡುವೆ ಒಂದು ಕಣಿವೆ ಇತ್ತು.
ಯೆಹೋಶುವನು ತನ್ನ ಜನರನ್ನು ಯುದ್ಧಕ್ಕೆ ಸಿದ್ಧಗೊಳಿಸಿದ್ದನು. ಮುಖ್ಯ ಪಾಳೆಯವು ಪಟ್ಟಣದ ಉತ್ತರ ದಿಕ್ಕಿನಲ್ಲಿತ್ತು. ಉಳಿದ ಜನರು ಪಶ್ಚಿಮದಲ್ಲಿ ಅಡಗಿಕೊಂಡಿದ್ದರು. ಆ ರಾತ್ರಿ ಯೆಹೋಶುವನು ಕಣಿವೆಗೆ ಹೋದನು.
ತರುವಾಯ “ಆಯಿ”ಯ ಅರಸನು ಇಸ್ರೇಲರ ಸೈನ್ಯವನ್ನು ನೋಡಿದನು. ಅರಸನು ಮತ್ತು ಅವನ ಜನರು ಇಸ್ರೇಲರ ಸೈನ್ಯದೊಂದಿಗೆ ಯುದ್ಧಮಾಡಿ ಮುಗಿಸುವುದಕ್ಕಾಗಿ ತ್ವರೆಮಾಡಿ ಹೊರಟರು. “ಆಯಿ”ಯ ಅರಸನು ಪಟ್ಟಣದ ಪೂರ್ವಕ್ಕೆ ಹೋದನು. ಆದ್ದರಿಂದ ಅವನು ಪಟ್ಟಣದ ಹಿಂಭಾಗದಲ್ಲಿ ಅಡಗಿದ್ದ ಸೈನಿಕರನ್ನು ನೋಡಲಿಲ್ಲ.
ಯೆಹೋಶುವನು ಮತ್ತು ಇಸ್ರೇಲರ ಎಲ್ಲ ಜನರು “ಆಯಿ”ಯ ಸೈನ್ಯವು ತಮ್ಮನ್ನು ಹಿಮ್ಮೆಟ್ಟುವುದಕ್ಕೆ ಅವಕಾಶ ಮಾಡಿಕೊಟ್ಟರು. ಯೆಹೋಶುವನು ಮತ್ತು ಅವನ ಜನರು ಪೂರ್ವಕ್ಕೆ ಮರಭೂಮಿಯ ಕಡೆಗೆ ಓಡಲು ಪ್ರಾರಂಭಿಸಿದರು.
ಅಡಗಿಕೊಂಡಿದ್ದ ಇಸ್ರೇಲಿನ ಜನರು ಇದನ್ನು ನೋಡಿ ಕೂಡಲೇ ತಾವು ಅಡಗಿದ್ದ ಸ್ಥಳದಿಂದ ಹೊರಬಂದು ವೇಗವಾಗಿ ಪಟ್ಟಣದ ಕಡೆಗೆ ಧಾವಿಸಿದರು. ಅವರು ಪಟ್ಟಣವನ್ನು ಪ್ರವೇಶಿಸಿ ಅದನ್ನು ಸ್ವಾಧೀನಪಡಿಸಿಕೊಂಡು ಅದಕ್ಕೆ ಬೆಂಕಿ ಹಚ್ಚಿದರು.
“ಆಯಿ”ಯ ಜನರು ಹಿಂತಿರುಗಿ ನೋಡಿದಾಗ ತಮ್ಮ ಪಟ್ಟಣ ಉರಿಯುತ್ತಿರುವುದನ್ನೂ ಹೊಗೆಯು ಆಕಾಶಕ್ಕೆ ಏರುತ್ತಿರುವುದನ್ನೂ ಕಂಡು ತಮ್ಮ ಶಕ್ತಿಯನ್ನೂ ಧೈರ್ಯವನ್ನೂ ಕಳೆದುಕೊಂಡರು. ಅವರು ಇಸ್ರೇಲಿನ ಜನರ ಬೆನ್ನಟ್ಟುವುದನ್ನು ಬಿಟ್ಟರು. ಇಸ್ರೇಲಿನ ಜನರು ಓಡಿಹೋಗುವುದನ್ನು ನಿಲ್ಲಿಸಿ “ಆಯಿ”ಯ ಜನರೊಂದಿಗೆ ಹೋರಾಡತೊಡಗಿದರು. “ಆಯಿ”ಯ ಜನರಿಗೆ ಓಡಿಹೋಗಲು ಸುರಕ್ಷಿತವಾದ ಯಾವ ಸ್ಥಳವೂ ಇರಲಿಲ್ಲ.
ಯೆಹೋಶುವನು ಮತ್ತು ಅವನ ಜನರು, ತಮ್ಮ ಸೈನ್ಯವು ಪಟ್ಟಣವನ್ನು ಸ್ವಾಧೀನಪಡಿಸಿಕೊಂಡದ್ದನ್ನು ನೋಡಿದರು. ಅವರು ಪಟ್ಟಣದಿಂದ ಏಳುತ್ತಿರುವ ಹೊಗೆಯನ್ನು ನೋಡಿದರು. ಆಗ ಅವರು ಓಡಿಹೋಗುವುದನ್ನು ನಿಲ್ಲಿಸಿ “ಆಯಿ” ಜನರೊಂದಿಗೆ ಹೋರಾಡಲು ಬಂದರು.
ಆಗ ಅಡಗಿಕೊಂಡಿದ್ದ ಜನರು ಯುದ್ಧದಲ್ಲಿ ಸಹಾಯ ಮಾಡಲು ಪಟ್ಟಣದಿಂದ ಹೊರಬಂದರು. ಇಸ್ರೇಲಿನ ಸೈನ್ಯವು “ಆಯಿ”ಯ ಜನರ ಎರಡು ಕಡೆಗೂ ಇತ್ತು. “ಆಯಿ”ಯ ಜನರು ಸಿಕ್ಕಿಬಿದ್ದರು. ಇಸ್ರೇಲರು ಅವರನ್ನು ಸೋಲಿಸಿ ಅವರಲ್ಲಿ ಒಬ್ಬರನ್ನೂ ಜೀವಂತವಾಗಿ ಉಳಿಸಲಿಲ್ಲ. ಅವರಲ್ಲಿ ಒಬ್ಬನಾದರೂ ತಪ್ಪಿಸಿಕೊಳ್ಳಲಾಗಲಿಲ್ಲ.
ಯುದ್ಧದಲ್ಲಿ ಇಸ್ರೇಲರು “ಆಯಿ”ಯ ಜನರನ್ನು ಬೆನ್ನಟ್ಟಿ ಬಯಲುಗಳಲ್ಲಿಯೂ ಅರಣ್ಯದಲ್ಲಿಯೂ ಕೊಂದುಹಾಕಿದರು. ಬಳಿಕ ಇಸ್ರೇಲರು ‘ಆಯಿ’ಗೆ ಹಿಂತಿರುಗಿ ಪಟ್ಟಣದಲ್ಲಿ ಜೀವಸಹಿತ ಉಳಿದಿದ್ದ ಎಲ್ಲರನ್ನು ಕೊಂದುಹಾಕಿದರು.
ಆ ಪಟ್ಟಣವನ್ನು ನಾಶಮಾಡಲು ಸೂಚಿಸುವ ಸಂಕೇತದಂತೆ ಯೆಹೋಶುವನು ತನ್ನ ಈಟಿಯನ್ನು “ಆಯಿ”ಯ ಕಡೆಗೆ ಚಾಚಿದನು. ಆ ಪಟ್ಟಣದ ಜನರೆಲ್ಲರೂ ನಾಶವಾಗುವವರೆಗೆ ಯೆಹೋಶುವನು ಈಟಿ ಹಿಡಿದು ಚಾಚಿದ ಕೈಯನ್ನು ಹಿಂದೆಗೆಯಲಿಲ್ಲ.
ಆ ಪಟ್ಟಣ ನಿವಾಸಿಗಳ ಸ್ವತ್ತಾಗಿದ್ದ ಪಶುಗಳನ್ನು ಮತ್ತು ವಸ್ತುಗಳನ್ನು ಇಸ್ರೇಲಿನ ಜನರು ತಮಗಾಗಿ ಇಟ್ಟುಕೊಂಡರು. ಅವುಗಳನ್ನು ಇಟ್ಟುಕೊಳ್ಳಲು ಯೆಹೋವನು ಯೆಹೋಶುವನಿಗೆ ಅಪ್ಪಣೆಕೊಟ್ಟಿದ್ದನು.
ಯೆಹೋಶುವನು “ಆಯಿ”ಯ ಅರಸನನ್ನು ಒಂದು ಮರಕ್ಕೆ ಸಾಯಂಕಾಲದವರೆಗೂ ನೇತುಹಾಕಿದನು. ಸೂರ್ಯನು ಮುಳುಗಿದ ಮೇಲೆ, ಯೆಹೋಶುವನು ಆ ಅರಸನ ಶವವನ್ನು ಮರದಿಂದ ಕೆಳಗಿಳಿಸಿ ನಗರದ ದ್ವಾರದಲ್ಲೇ ಬಿಸಾಡಿ ಅದರ ಮೇಲೆ ಕಲ್ಲಿನ ದೊಡ್ಡ ಕುಪ್ಪೆಯನ್ನು ಮಾಡಿಸಿದನು. ಅದು ಇಂದಿನವರೆಗೂ ಹಾಗೆಯೇ ಇದೆ.
ಯಜ್ಞವೇದಿಕೆಯನ್ನು ಹೇಗೆ ಕಟ್ಟಬೇಕೆಂಬುದನ್ನು ಯೆಹೋವನ ಸೇವಕನಾದ ಮೋಶೆಯು ಇಸ್ರೇಲರಿಗೆ ಹೇಳಿ ಕೊಟ್ಟಿದ್ದನು. ಆದ್ದರಿಂದ ಮೋಶೆಯ ಧರ್ಮಶಾಸ್ತ್ರದ ಗ್ರಂಥದಲ್ಲಿ ವಿವರಿಸಿದಂತೆ ಯೆಹೋಶುವನು ಯಜ್ಞವೇದಿಕೆಯನ್ನು ಕಟ್ಟಿಸಿದನು. ಯಜ್ಞವೇದಿಕೆಯನ್ನು ಕಡಿಯದ ಕಲ್ಲುಗಳಿಂದ ಮಾಡಲಾಯಿತು. ಆ ಕಲ್ಲುಗಳ ಮೇಲೆ ಯಾವ ಉಪಕರಣವನ್ನೂ ಉಪಯೋಗಿಸಿರಲಿಲ್ಲ. ಯೆಹೋವನಿಗೆ ಆ ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಅರ್ಪಿಸಿದರು.
ಹಿರಿಯರು, ಅಧಿಕಾರಿಗಳು, ನ್ಯಾಯಾಧೀಶರು ಮತ್ತು ಇಸ್ರೇಲರೆಲ್ಲರು ಪವಿತ್ರ ಪೆಟ್ಟಿಗೆಯ ಸುತ್ತಲೂ ನಿಂತುಕೊಂಡಿದ್ದರು. ಯೆಹೋವನ ಒಡಂಬಡಿಕೆಯ ಪವಿತ್ರ ಪೆಟ್ಟಿಗೆಯನ್ನು ಹೊತ್ತುತಂದ ಲೇವಿಯರ ಎದುರುಗಡೆ ಅವರು ನಿಂತುಕೊಂಡಿದ್ದರು. ಅರ್ಧಜನರು ಏಬಾಲ್ ಬೆಟ್ಟದ ಎದುರಿಗೂ ಮತ್ತು ಇನ್ನುಳಿದ ಅರ್ಧಜನರು ಗೆರಿಜ್ಜೀಮ್ ಬೆಟ್ಟದ ಎದುರಿಗೂ ನಿಂತುಕೊಂಡಿದ್ದರು. ಆಶೀರ್ವಾದವನ್ನು ಹೊಂದಿಕೊಳ್ಳಲು ಹೀಗೆ ಮಾಡಬೇಕೆಂದು ಯೆಹೋವನ ಸೇವಕನಾದ ಮೋಶೆಯು ಜನರಿಗೆ ಹೇಳಿದ್ದನು.
ಅಲ್ಲಿ ಇಸ್ರೇಲಿನ ಎಲ್ಲ ಜನರು ಸೇರಿ ಬಂದಿದ್ದರು. ಎಲ್ಲ ಹೆಂಗಸರು ಮತ್ತು ಮಕ್ಕಳು ಮತ್ತು ಇಸ್ರೇಲಿನ ಜನರೊಂದಿಗೆ ಇದ್ದ ಎಲ್ಲ ವಿದೇಶಿಯರು ಅಲ್ಲಿ ಇದ್ದರು. ಅವರೆಲ್ಲರಿಗೆ ಕೇಳಿಸುವಂತೆ ಮೋಶೆಯು ಕೊಟ್ಟಿದ್ದ ಪ್ರತಿಯೊಂದು ಆಜ್ಞೆಯನ್ನು ಯೆಹೋಶುವನು ಓದಿದನು.