ಈಜಿಪ್ಟಿನ ಶೀಹೋರ್ ನದಿಯಿಂದ ಉತ್ತರದ ಎಕ್ರೋನ್ ಸೀಮೆಯವರೆಗೂ ಚಾಚಿಕೊಂಡಿರುವ ಭೂಮಿಯನ್ನು ನೀನು ವಶಪಡಿಸಿಕೊಂಡಿಲ್ಲ. ಆ ಭೂಮಿಯು ಇನ್ನೂ ಕಾನಾನ್ಯರ ಅಧೀನದಲ್ಲಿದೆ. ನೀನು ಗಾಜಾ, ಅಷ್ಡೋದ್, ಅಷ್ಕೆಲೋನ್, ಗತೂರು ಮತ್ತು ಎಕ್ರೋನಿನ ಎಂಬ ಐದು ಮಂದಿ ಫಿಲಿಷ್ಟಿಯರ ನಾಯಕರನ್ನು ಇನ್ನೂ ಸೋಲಿಸಬೇಕಾಗಿದೆ.
ನೀನು ಇಲ್ಲಿಯವರೆಗೂ ಗೆಬಾಲ್ಯರನ್ನು ಸೋಲಿಸಿಲ್ಲ. ಹೆರ್ಮೋನ್ ಬೆಟ್ಟದ ಬುಡದಲ್ಲಿರುವ ಬಾಲ್ಗಾದಿನ ಪೂರ್ವದಿಂದಿಡಿದು ಲೆಬೊಹಾಮಾತಿನವರೆಗೆ ಇರುವ ಪ್ರದೇಶವನ್ನು ನೀನು ಗೆಲ್ಲಬೇಕು. ಬಾಲ್ಗಾದ್ ಲೆಬನೋನ್ ಪ್ರದೇಶದಲ್ಲಿದೆ. ನ
“ಲೆಬನೋನಿನಿಂದ ಮಿಸ್ರೆಪೋತ್ಮಯಿಮಿನವರೆಗಿರುವ ಪರ್ವತ ಪ್ರದೇಶದಲ್ಲಿ ಚೀದೋನ್ಯರು ವಾಸವಾಗಿದ್ದಾರೆ. ಆದರೆ ಇಸ್ರೇಲರಿಗಾಗಿ ನಾನು ಅವರನ್ನೆಲ್ಲಾ ಹೊರ ತಳ್ಳುತ್ತೇನೆ. ಇಸ್ರೇಲರಿಗೆ ದೇಶವನ್ನು ಹಂಚುವಾಗ ಈ ಪ್ರದೇಶವನ್ನು ಸೇರಿಸಿ
ಮನಸ್ಸೆ ಕುಲದ ಅರ್ಧಜನರು, ರೂಬೇನ್ ಮತ್ತು ಗಾದ್ ಕುಲಗಳವರು ಈಗಾಗಲೇ ತಮ್ಮ ಸ್ವಾಸ್ತ್ಯವನ್ನು ತೆಗೆದುಕೊಂಡಿದ್ದರು. ಯೆಹೋವನ ಸೇವಕನಾದ ಮೋಶೆಯು ಜೋರ್ಡನ್ ನದಿಯ ಪೂರ್ವದಿಕ್ಕಿನ ಪ್ರದೇಶವನ್ನು ಅವರಿಗೆ ಕೊಟ್ಟಿದ್ದನು.
ಅವರಿಗೆ ದೊರಕಿದ ಪ್ರದೇಶವು ಅರ್ನೋನ್ ಕಣಿವೆಯ ಬಳಿಯಲ್ಲಿದ್ದ ಅರೋಯೇರ್ನಿಂದ ಆರಂಭಗೊಂಡು ಮಧ್ಯಕಣಿವೆಯಲ್ಲಿದ್ದ ಊರಿನವರೆಗೂ ವಿಸ್ತರಿಸಿಕೊಂಡಿತ್ತು. ಮೇದೆಬದಿಂದ ದೀಬೋನಿನವರೆಗಿದ್ದ ಇಡೀ ಬಯಲು ಪ್ರದೇಶವನ್ನು ಇದು ಒಳಗೊಂಡಿತ್ತು.
ಅಮೋರಿಯರ ಅರಸನಾದ ಸೀಹೋನನು ಆಳುತ್ತಿದ್ದ ಎಲ್ಲ ಪಟ್ಟಣಗಳು ಆ ಪ್ರದೇಶದಲ್ಲಿದ್ದವು. ಆ ಅರಸನು ಹೆಷ್ಬೋನ್ ನಗರದಲ್ಲಿ ಆಳುತ್ತಿದ್ದನು. ಅಮ್ಮೋನಿಯರು ಮೊದಲು ನೆಲೆಸಿದ್ದ ಪ್ರದೇಶದವರೆಗೆ ಈ ಪ್ರದೇಶ ವಿಸ್ತರಿಸಿತ್ತು.
ಗಿಲ್ಯಾದ್ ಪಟ್ಟಣವೂ ಸಹ ಈ ಪ್ರದೇಶಕ್ಕೆ ಒಳಪಟ್ಟಿತ್ತು. ಗೆಷೂರ್ಯರು ಮತ್ತು ಮಾಕತೀಯರು ವಾಸಮಾಡುತ್ತಿದ್ದ ಪ್ರದೇಶವು ಸಹ ಈ ಪ್ರದೇಶಕ್ಕೆ ಸೇರಿತ್ತು. ಇಡೀ ಹೆರ್ಮೋನ್ ಬೆಟ್ಟಪ್ರದೇಶ ಮತ್ತು ಸಲ್ಕಾ ಪಟ್ಟಣದವರೆಗೆ ವಿಸ್ತರಿಸಿಕೊಂಡಿದ್ದ ಬಾಷಾನಿನ ಎಲ್ಲಾ ಪ್ರಾಂತ್ಯಗಳು ಆ ಪ್ರದೇಶಕ್ಕೆ ಸೇರಿಕೊಂಡಿದ್ದವು.
ಓಗ್ ರಾಜನ ಎಲ್ಲ ಪ್ರಾಂತ್ಯಗಳು ಆ ಪ್ರದೇಶದಲ್ಲಿ ಸೇರಿತ್ತು. ಓಗ್ ರಾಜನು ಬಾಷಾನಿನಲ್ಲಿ ಆಳುತ್ತಿದ್ದನು. ಮೊದಲು ಅವನು ಅಷ್ಟರೋತ್ ಮತ್ತು ಎದ್ರೈಗಳಲ್ಲಿದ್ದುಕೊಂಡು ಆಳುತ್ತಿದ್ದನು. ಓಗನು ರೆಫಾಯರ ವಂಶಸ್ಥನಾಗಿದ್ದನು. ಮೊದಲು ಮೋಶೆಯು ಆ ಜನರನ್ನು ಸೋಲಿಸಿ ಅವರ ಪ್ರದೇಶವನ್ನು ತೆಗೆದುಕೊಂಡಿದ್ದನು.
ಲೇವಿಕುಲದವರಿಗೆ ಮಾತ್ರ ಯಾವ ಪ್ರದೇಶವೂ ಸಿಕ್ಕಲಿಲ್ಲ. ಅದಕ್ಕೆ ಬದಲಾಗಿ, ಇಸ್ರೇಲರ ದೇವರಾದ ಯೆಹೋವನು ಅವರಿಗೆ ವಾಗ್ದಾನ ಮಾಡಿದಂತೆ ಸರ್ವಾಂಗಹೋಮಗಳಾಗಿ ಅರ್ಪಿತವಾಗುವ ಎಲ್ಲಾ ಪಶುಗಳಲ್ಲಿ ಉಳಿದ ಭಾಗವನ್ನು ಅವರು ಪಡೆದುಕೊಳ್ಳುವರು.
ಆದ್ದರಿಂದ ಅಮೋರಿಯರ ಅರಸನಾದ ಸೀಹೋನನ ಆಳ್ವಿಕೆಯಲ್ಲಿದ್ದ ಎಲ್ಲ ಊರುಗಳನ್ನು ಆ ಪ್ರದೇಶವು ಒಳಗೊಂಡಿತ್ತು. ಆ ಅರಸನು ಹೆಷ್ಬೋನ್ ಪಟ್ಟಣದಲ್ಲಿ ಆಳಿದನು. ಆದರೆ ಮೋಶೆಯು ಅವನನ್ನು ಮತ್ತು ಮಿದ್ಯಾನ್ ಜನರ ನಾಯಕರನ್ನು ಸೋಲಿಸಿದ್ದನು. ಎವೀ, ರೆಕೆಮ್, ಚೂರ್, ಹೂರ್ ಮತ್ತು ರೆಬಾ, ಇವರೇ ಆ ನಾಯಕರಾಗಿದ್ದರು. (ಈ ನಾಯಕರೆಲ್ಲ ಸೀಹೋನನ ಜೊತೆ ಸೇರಿ ಯುದ್ಧಮಾಡಿದ್ದರು.) ಈ ನಾಯಕರೆಲ್ಲ ಅದೇ ದೇಶದಲ್ಲಿ ವಾಸವಾಗಿದ್ದರು.
ರೂಬೇನನ ಜನರಿಗೆ ಕೊಟ್ಟ ಪ್ರದೇಶ ಜೋರ್ಡನ್ ನದಿಯ ದಡಕ್ಕೆ ಸೀಮಿತವಾಗಿತ್ತು. ಈ ಪ್ರಕಾರ ರೂಬೇನನ ಕುಲದ ಗೋತ್ರದವರಿಗೆ ಕೊಟ್ಟ ಪ್ರದೇಶವು ಇಲ್ಲಿ ಪಟ್ಟಿ ಮಾಡಿದ ಎಲ್ಲ ಊರುಗಳನ್ನು ಮತ್ತು ಅವುಗಳ ಹೊಲಗಳನ್ನು ಒಳಗೊಂಡಿತ್ತು.
ಆ ಪ್ರದೇಶವು ಬೇತ್ಹಾರಾಮ್, ಬೇತ್ನಿಮ್ರಾ, ಸುಕ್ಕೋತ್ ಮತ್ತು ಚಾಫೋನ್ ಕಣಿವೆಗಳನ್ನು ಒಳಗೊಂಡಿತ್ತು. ಹೆಷ್ಬೋನಿನ ಅರಸನಾದ ಸೀಹೋನನ ರಾಜ್ಯಕ್ಕೆ ಸೇರಿದ ಉಳಿದೆಲ್ಲ ಪ್ರದೇಶವನ್ನು ಇದರಲ್ಲಿ ಸೇರಿಸಲಾಗಿತ್ತು. ಈ ಪ್ರದೇಶವು ಜೋರ್ಡನ್ ನದಿಯ ಪೂರ್ವ ಭಾಗದಲ್ಲಿತ್ತು. ಈ ಪ್ರದೇಶವು ಗಲಿಲೇಯ ಸರೋವರದ ಕೊನೆಯವರೆಗೆ ವಿಸ್ತರಿಸಿತ್ತು.
ಈ ಪ್ರದೇಶವು ಮಹನಯಿಮಿನಿಂದ ಪ್ರಾರಂಭವಾಗುತ್ತದೆ. ಇಡೀ ಬಾಷಾನ್, ಅರಸನಾದ ಓಗನ ಆಳ್ವಿಕೆಗೆ ಒಳಪಟ್ಟ ಪ್ರದೇಶ, ಬಾಷಾನಿನಲ್ಲಿರುವ ಯಾಯೀರನ ಎಲ್ಲ ಊರುಗಳು (ಒಟ್ಟು ಅರವತ್ತು ಊರುಗಳು) ಇದರಲ್ಲಿ ಸೇರಿವೆ.
ಗಿಲ್ಯಾದಿನ ಅರ್ಧಭಾಗವು, ಅಷ್ಟರೋತ್, ಎದ್ರೈ ಎಂಬ ಪಟ್ಟಣಗಳೂ ಇದರಲ್ಲಿ ಸೇರಿವೆ. (ಗಿಲ್ಯಾದ್, ಅಷ್ಟರೋತ್ ಮತ್ತು ಎದ್ರೈ ಎಂಬ ಪಟ್ಟಣಗಳಲ್ಲಿ ರಾಜನಾದ ಓಗ್ ವಾಸವಾಗಿದ್ದನು.) ಈ ಎಲ್ಲ ಪ್ರದೇಶವನ್ನು ಮನಸ್ಸೆಯ ಮಗನಾದ ಮಾಕೀರನ ಅರ್ಧಗೋತ್ರದವರಿಗೆ ಕೊಡಲಾಯಿತು.
ಮೋಶೆಯು ಈ ಪ್ರದೇಶಗಳನ್ನೆಲ್ಲ ಆಯಾ ಕುಲಗಳಿಗೆ ಮೋವಾಬ್ ಬಯಲಿನಲ್ಲಿ ಇಳಿದುಕೊಂಡಿದ್ದಾಗ ಹಂಚಿಕೊಟ್ಟನು. ಮೋವಾಬ್ ಬಯಲು ಜೆರಿಕೊ ನಗರಕ್ಕೆ ಪೂರ್ವದಲ್ಲಿಯೂ ಜೋರ್ಡನ್ ನದಿಯ ಆಚೆದಡದಲ್ಲೂ ಇತ್ತು.