ಇಸ್ರೇಲರು ಜೋರ್ಡನ್ ನದಿಯ ಪೂರ್ವದಿಕ್ಕಿನ ಭೂಮಿಯನ್ನು ಸ್ವಾಧೀನಪಡಿಸಿಕೊಂಡರು. ಅರ್ನೋನ್ ನದಿಯಿಂದ ಹೆರ್ಮೋನ್ ಪರ್ವತದವರೆಗಿನ ಪ್ರದೇಶ ಮತ್ತು ಜೋರ್ಡನ್ ಕಣಿವೆಯ ಪೂರ್ವದಿಕ್ಕಿಗೆ ಉದ್ದಕ್ಕೂ ಹಬ್ಬಿರುವ ಪ್ರದೇಶ ಅವರ ವಶಕ್ಕೆ ಬಂತು. ಈ ದೇಶವನ್ನು ತೆಗೆದುಕೊಳ್ಳುವುದಕ್ಕಾಗಿ ಇಸ್ರೇಲರು ಸೋಲಿಸಿದ ಅರಸರ ವಿವರ ಹೀಗಿದೆ:
ಅವರು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸನಾದ ಸೀಹೋನನನ್ನು ಸೋಲಿಸಿದರು. ಅವನು ಅರ್ನೋನ್ ನದಿಯ ತೀರದಲ್ಲಿದ್ದ ಅರೋಯೇರ್ನಿಂದ ಯಬ್ಬೋಕ್ ನದಿಯವರೆಗಿರುವ ಪ್ರದೇಶವನ್ನು ಆಳುತ್ತಿದ್ದನು. ಅವನ ರಾಜ್ಯವು ಆ ತಗ್ಗು ಪ್ರದೇಶದ ಮಧ್ಯದಿಂದ ಪ್ರಾರಂಭವಾಗುತ್ತಿತ್ತು. ಇದು ಅಮ್ಮೋನಿಯರ ಪ್ರದೇಶಕ್ಕೂ ಮೇರೆಯಾಗಿತ್ತು. ಗಿಲ್ಯಾದಿನ ಅರ್ಧ ಪ್ರದೇಶವು ಸೀಹೋನನ ಆಳ್ವಿಕೆಗೆ ಒಳಗಾಗಿತ್ತು.
ಗಲಿಲಾಯ ಸರೋವರದಿಂದ ಲವಣಸಮುದ್ರದವರೆಗೆ ಹಬ್ಬಿದ ಜೋರ್ಡನ್ ಕಣಿವೆಯ ಪೂರ್ವಭಾಗವು ಕೂಡ ಅವನ ಆಳ್ವಿಕೆಗೆ ಒಳಪಟ್ಟಿತ್ತು. ಬೇತ್ಯೆಷಿಮೋತಿನಿಂದ ದಕ್ಷಿಣದಲ್ಲಿ ಪಿಸ್ಗಾ ಬೆಟ್ಟದವರೆಗೆ ಹಬ್ಬಿದ ಪ್ರದೇಶವನ್ನು ಸಹ ಅವನು ಆಳುತ್ತಿದ್ದನು.
ಓಗನು ಹೆರ್ಮೋನ್ ಬೆಟ್ಟದ ಮೇಲಿನ ಸೀಮೆ, ಸಲ್ಕಾ ಮತ್ತು ಬಾಷಾನಿನ ಎಲ್ಲ ಪ್ರದೇಶ, ಇವುಗಳನ್ನು ಆಳುತ್ತಿದ್ದನು. ಗೆಷೂರ್ಯರು ಮತ್ತು ಮಾಕತೀ ಜನರು ವಾಸಮಾಡುವ ಪ್ರದೇಶವು ಇವನ ರಾಜ್ಯದ ಮೇರೆಯಾಗಿತ್ತು. ಹೆಷ್ಬೋನಿನ ಅರಸನಾದ ಸೀಹೋನನ ರಾಜ್ಯದ ಮೇರೆಯವರೆಗೆ ಹಬ್ಬಿದ ಗಿಲ್ಯಾದಿನ ಅರ್ಧಪ್ರಾಂತ್ಯವನ್ನು ಕೂಡ ಓಗನು ಆಳುತ್ತಿದ್ದನು.
ಯೆಹೋವನ ಸೇವಕನಾದ ಮೋಶೆಯು ಮತ್ತು ಇಸ್ರೇಲರು ಈ ಎಲ್ಲ ಅರಸರನ್ನು ಸೋಲಿಸಿದರು. ಮೋಶೆಯು ಈ ಪ್ರದೇಶವನ್ನು ರೂಬೇನನ ಕುಲದವರಿಗೂ ಗಾದನ ಕುಲದವರಿಗೂ ಮನಸ್ಸೆ ಕುಲದ ಅರ್ಧಜನರಿಗೂ ಸ್ವಾಸ್ತ್ಯವಾಗಿ ಕೊಟ್ಟುಬಿಟ್ಟನು.
ಇಸ್ರೇಲರು ಜೋರ್ಡನ್ ನದಿಯ ಪಶ್ಚಿಮ ಪ್ರದೇಶದಲ್ಲಿದ್ದ ಅರಸರನ್ನು ಸಹ ಸೋಲಿಸಿದರು. ಈ ಪ್ರದೇಶದಲ್ಲಿ ಯೆಹೋಶುವನು ಜನರ ಮುಂದಾಳಾದನು. ಯೆಹೋಶುವನು ಈ ಪ್ರದೇಶವನ್ನು ಇಸ್ರೇಲಿನ ಹನ್ನೆರಡು ಕುಲಗಳಿಗೆ ಹಂಚಿದನು. ದೇವರು ಅವರಿಗೆ ಕೊಡುವುದಾಗಿ ವಾಗ್ದಾನ ಮಾಡಿದ್ದ ಪ್ರದೇಶವೇ ಅದಾಗಿತ್ತು. ಈ ಪ್ರದೇಶವು ಲೆಬನೋನ್ ಕಣಿವೆಯ ಬಾಲ್ಗಾದ್ ಮತ್ತು ಸೇಯೀರ್ ಹತ್ತಿರವಿದ್ದ ಹಾಲಾಕ್ ಬೆಟ್ಟದ ನಡುವೆ ಇತ್ತು.
ಪರ್ವತ ಪ್ರದೇಶ, ಪಶ್ಚಿಮದಿಕ್ಕಿನ ಇಳಿಜಾರು ಪ್ರದೇಶ, ಜೋರ್ಡನ್ ಕಣಿವೆ, ಪೂರ್ವದಿಕ್ಕಿನ ಬೆಟ್ಟಗಳು, ಮರುಭೂಮಿ ಮತ್ತು ನೆಗೆವ್ ಇದರಲ್ಲಿ ಸೇರಿಕೊಂಡಿದ್ದವು. ಈ ಪ್ರದೇಶವು ಹಿತ್ತಿಯರ, ಅಮೋರಿಯರ, ಕಾನಾನ್ಯರ, ಪೆರಿಜ್ಜೀಯರ, ಹಿವ್ವಿಯರ, ಯೆಬೂಸಿಯರ ವಾಸಸ್ಥಾನವಾಗಿತ್ತು. ಇಸ್ರೇಲರು ಸೋಲಿಸಿದ ಅರಸರ ಪಟ್ಟಿಯು ಇಂತಿದೆ: