ಹಾಚೋರಿನ ಅರಸನಾದ ಯಾಬೀನನು ನಡೆದ ಎಲ್ಲ ಸಂಗತಿಗಳ ಬಗ್ಗೆ ಕೇಳಿದನು. ಅದಕ್ಕಾಗಿ ಅವನು ಅನೇಕ ಅರಸರ ಸೈನ್ಯಗಳನ್ನು ಒಟ್ಟಿಗೆ ಸೇರಿಸುವ ನಿರ್ಧಾರವನ್ನು ಮಾಡಿದನು. ಮಾದೋನಿನ ಅರಸನಾದ ಯೋಬಾಬನಿಗೆ, ಶಿಮ್ರೋನಿನ ಅರಸನಿಗೆ, ಅಕ್ಷಾಫಿನ ಅರಸನಿಗೆ ಯಾಬೀನನು ಸಂದೇಶವನ್ನು ಕಳುಹಿಸಿದನು.
ಉತ್ತರದಿಕ್ಕಿನ ಪರ್ವತ ಪ್ರದೇಶಗಳಲ್ಲಿನ ಮತ್ತು ಅರಣ್ಯದಲ್ಲಿನ ಅರಸರಿಗೂ ಕಿನ್ನೆರೋತ್, ನೆಗೆವ್ ಮತ್ತು ಪಶ್ಚಿಮದ ಇಳಿಜಾರಿನ ಪ್ರದೇಶದ ಅರಸರಿಗೂ ಪಶ್ಚಿಮದಿಕ್ಕಿನ ನೆಫತ್ದೋರ್ ರಾಜನಿಗೂ ಯಾಬೀನನು ಸಂದೇಶವನ್ನು ಕಳುಹಿಸಿದನು.
ಯಾಬೀನನು ಪೂರ್ವ ಮತ್ತು ಪಶ್ಚಿಮದಲ್ಲಿದ್ದ ಕಾನಾನಿನ ಅರಸರಿಗೂ ಅಮೋರಿಯರಿಗೂ ಹಿತ್ತಿಯರಿಗೂ ಪೆರಿಜ್ಜೀಯರಿಗೂ ಬೆಟ್ಟಪ್ರದೇಶದ ಯೆಬೂಸಿಯರಿಗೂ ಹೆರ್ಮೋನ್ ಪರ್ವತದ ಬುಡದಲ್ಲಿ ಮಿಚ್ಛಾದ ಹತ್ತಿರ ವಾಸವಾಗಿದ್ದ ಹಿವ್ವಿಯರಿಗೂ ಸಂದೇಶವನ್ನು ಕಳುಹಿಸಿದನು.
ಹೀಗಾಗಿ ಈ ಎಲ್ಲ ಅರಸರ ಸೈನ್ಯಗಳು ಒಟ್ಟುಗೂಡಿದವು. ಈ ಮಹಾಸೈನ್ಯದಲ್ಲಿ ಅಸಂಖ್ಯಾತ ಯೋಧರಿದ್ದರು, ಕುದುರೆಗಳಿದ್ದವು ಮತ್ತು ರಥಗಳಿದ್ದವು. ಸಮುದ್ರತೀರದ ಮರಳು ಕಣಗಳಷ್ಟೇ ಅಸಂಖ್ಯಾತ ಯೋಧರು ಆ ಸೈನ್ಯದಲ್ಲಿರುವಂತೆ ಕಾಣುತ್ತಿತ್ತು.
ಆಗ ಯೆಹೋವನು ಯೆಹೋಶುವನಿಗೆ, “ಆ ಸೈನ್ಯಕ್ಕೆ ನೀನು ಹೆದರಬೇಡ; ನೀವು ಅವರನ್ನು ಸೋಲಿಸುವಂತೆ ನಾನು ಮಾಡುತ್ತೇನೆ. ನಾಳೆ ಇಷ್ಟು ಹೊತ್ತಿಗೆ ನೀವು ಅವರೆಲ್ಲರನ್ನು ಕೊಂದುಬಿಡುವಿರಿ. ನೀವು ಅವರ ಕುದುರೆಗಳ ಕಾಲುಗಳನ್ನು ಕತ್ತರಿಸುವಿರಿ; ಅವರ ರಥಗಳನ್ನು ಸುಟ್ಟುಹಾಕುವಿರಿ” ಎಂದನು.
ಇಸ್ರೇಲರು ಶತ್ರುಗಳನ್ನು ಸೋಲಿಸುವಂತೆ ಯೆಹೋವನು ಮಾಡಿದನು. ಇಸ್ರೇಲರ ಸೈನ್ಯವು ಶತ್ರುಗಳನ್ನು ಸೋಲಿಸಿ ಅವರನ್ನು ದೊಡ್ಡ ಚೀದೋನ್ ಮತ್ತು ಮಿಸ್ರೆಪೋತ್ಮಯಿಮ್ವರೆಗೂ ಪೂರ್ವದಿಕ್ಕಿನಲ್ಲಿ ಮಿಚ್ಛೆಯ ಕಣಿವೆಯವರೆಗೂ ಬೆನ್ನಟ್ಟಿತು. ಶತ್ರುಗಳಲ್ಲಿ ಯಾರೂ ಉಳಿದುಕೊಳ್ಳದಂತೆ ಇಸ್ರೇಲರು ಯುದ್ಧಮಾಡಿದರು.
ಯೆಹೋಶುವನು ಈ ಎಲ್ಲ ಪಟ್ಟಣಗಳನ್ನು ವಶಪಡಿಸಿಕೊಂಡನು; ಅವುಗಳ ಎಲ್ಲ ಅರಸರನ್ನು ಕೊಂದುಹಾಕಿದನು; ಈ ಪಟ್ಟಣಗಳಲ್ಲಿದ್ದ ಎಲ್ಲವನ್ನು ನಾಶಮಾಡಿದನು. ಯೆಹೋವನ ಸೇವಕನಾದ ಮೋಶೆಯು ಆಜ್ಞಾಪಿಸಿದಂತೆಯೇ ಅವನು ಮಾಡಿದನು.
ಆದರೆ ಇಸ್ರೇಲಿನ ಸೈನಿಕರು ಬೆಟ್ಟಗಳ ಮೇಲೆ ಕಟ್ಟಲಾದ ಯಾವ ಪಟ್ಟಣವನ್ನೂ ಸುಡಲಿಲ್ಲ. ಬೆಟ್ಟಗಳ ಮೇಲೆ ಕಟ್ಟಿದ ಪಟ್ಟಣಗಳಲ್ಲಿ ಅವರು ಸುಟ್ಟ ಒಂದೇ ಒಂದು ಪಟ್ಟಣವೆಂದರೆ ಹಾಚೋರ್. ಈ ಪಟ್ಟಣವನ್ನು ಯೆಹೋಶುವನು ಸುಟ್ಟನು.
ಆ ಪಟ್ಟಣಗಳಲ್ಲಿ ಸಿಕ್ಕಿದ ಎಲ್ಲ ಪದಾರ್ಥಗಳನ್ನು ಮತ್ತು ಎಲ್ಲ ಪಶುಗಳನ್ನು ಇಸ್ರೇಲರು ತಮಗಾಗಿ ಇಟ್ಟುಕೊಂಡರು. ಆದರೆ ಅಲ್ಲಿದ್ದ ಜನರನ್ನೆಲ್ಲ ಕೊಂದರು. ಅವರಲ್ಲಿ ಯಾರನ್ನೂ ಸಜೀವವಾಗಿ ಉಳಿಸಲಿಲ್ಲ.
ಹೀಗೆ ಮಾಡಬೇಕೆಂದು ಯೆಹೋವನು ತನ್ನ ಸೇವಕನಾದ ಮೋಶೆಗೆ ಬಹುಕಾಲದ ಹಿಂದೆಯೇ ಹೇಳಿದ್ದನು. ಮೋಶೆಯು ಈ ಕಾರ್ಯವನ್ನು ಮಾಡಲು ಯೆಹೋಶುವನಿಗೆ ಆಜ್ಞಾಪಿಸಿದ್ದನು. ಹೀಗೆ ಯೆಹೋಶುವನು ದೇವರ ಆಜ್ಞೆಯನ್ನು ಪಾಲಿಸಿದನು. ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೆಲ್ಲವನ್ನು ಯೆಹೋಶುವನು ಮಾಡಿದನು.
ಹೀಗೆ ಯೆಹೋಶುವನು ಆ ದೇಶದ ಎಲ್ಲರನ್ನು ಸೋಲಿಸಿದನು. ಬೆಟ್ಟದ ಮೇಲಿನ ಪ್ರದೇಶ, ನೆಗೆವ್ ಪ್ರದೇಶ, ಗೋಷೆನಿನ ಎಲ್ಲ ಪ್ರದೇಶ, ಪಶ್ಚಿಮದ ಇಳಕಲಿನ ಪ್ರದೇಶ, ಜೋರ್ಡನಿನ ಕಣಿವೆ, ಇಸ್ರೇಲಿನ ಪರ್ವತ ಪ್ರದೇಶ ಮತ್ತು ಅವುಗಳ ಹತ್ತಿರದ ಎಲ್ಲ ಬೆಟ್ಟಗಳ ಪ್ರದೇಶ ಅವನ ಸ್ವಾಧೀನಕ್ಕೆ ಬಂದವು.
ಸೇಯೀರಿನ ಹತ್ತಿರವಿರುವ ಹಾಲಾಕ್ ಬೆಟ್ಟದಿಂದ ಹೆರ್ಮೋನ್ ಬೆಟ್ಟದ ಬುಡದಲ್ಲಿ ಲೆಬನೋನ್ ಕಣಿವೆಯಲ್ಲಿರುವ ಬಾಲ್ಗಾದ್ ಪಟ್ಟಣದವರೆಗೂ ಇರುವ ಭೂಮಿಯು ಅವನ ಸ್ವಾಧೀನವಾಯಿತು. ಯೆಹೋಶುವನು ಆ ಪ್ರದೇಶದ ಎಲ್ಲ ಅರಸರನ್ನು ಸೆರೆಹಿಡಿದು ಕೊಂದುಹಾಕಿದನು.
ತಾವು ಶಕ್ತಿಶಾಲಿಗಳೆಂಬ ಭಾವನೆಯನ್ನು ಯೆಹೋವನು ಆ ಜನರಲ್ಲಿ ಹುಟ್ಟಿಸಿ ಅವರನ್ನು ಇಸ್ರೇಲರ ಮೇಲೆ ಯುದ್ಧಕ್ಕೆ ಬರಮಾಡಿದನು. ಯುದ್ಧದಲ್ಲಿ ಕರುಣೆಯಿಲ್ಲದೆ ಅವರನ್ನು ಸಂಹರಿಸಬೇಕೆಂಬುದು ಯೆಹೋವನ ಯೋಜನೆಯಾಗಿತ್ತು. ಯೆಹೋವನು ಮೋಶೆಗೆ ಹೇಳಿದ ರೀತಿಯಲ್ಲಿ ಯೆಹೋಶುವನು ಆ ಪಟ್ಟಣಗಳನ್ನು ನಾಶಮಾಡಲು ಇದರಿಂದ ಸಾಧ್ಯವಾಯಿತು.
ಆಗ ಅನಾಕ ವಂಶಸ್ಥರು ಹೆಬ್ರೋನ್, ದೆಬೀರ್, ಅನಾಬ್ ಮತ್ತು ಯೆಹೂದ ಬೆಟ್ಟಪ್ರದೇಶಗಳಲ್ಲಿ ವಾಸವಾಗಿದ್ದರು. ಯೆಹೋಶುವನು ಈ ಅನಾಕ ವಂಶಸ್ಥರೊಂದಿಗೆ ಯುದ್ಧ ಮಾಡಿದನು. ಯೆಹೋಶುವನು ಆ ಎಲ್ಲ ಜನರನ್ನು ಮತ್ತು ಊರುಗಳನ್ನು ನಾಶಪಡಿಸಿದನು.
ಬಹಳ ಹಿಂದೆಯೇ ಯೆಹೋವನು ಮೋಶೆಗೆ ಹೇಳಿದ ಪ್ರಕಾರ ಯೆಹೋಶುವನು ಇಸ್ರೇಲಿನ ಪ್ರದೇಶವನ್ನೆಲ್ಲ ಸ್ವಾಧೀನಪಡಿಸಿಕೊಂಡನು. ಯೆಹೋವನು ತಾನು ವಾಗ್ದಾನ ಮಾಡಿದಂತೆ ಆ ಪ್ರದೇಶವನ್ನು ಇಸ್ರೇಲರಿಗೆ ಕೊಟ್ಟುಬಿಟ್ಟನು. ಆಗ ಯೆಹೋಶುವನು ಆ ಪ್ರದೇಶವನ್ನು ಕುಲಗಳ ಪ್ರಕಾರ ಹಂಚಿಕೊಟ್ಟನು. ಆಗ ಯುದ್ಧವು ಮುಗಿಯಿತು, ಕೊನೆಗೆ ಆ ಪ್ರದೇಶದಲ್ಲಿ ಶಾಂತಿ ನೆಲೆಸಿತು.