English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Jeremiah Chapters

Jeremiah 38 Verses

1 ಯೆರೆಮೀಯನು ಪ್ರವಾದಿಸುತ್ತಿರುವುದನ್ನು ಕೆಲವು ಜನ ರಾಜಾಧಿಕಾರಿಗಳು ಕೇಳಿಸಿಕೊಂಡರು. ಮತ್ತಾನನ ಮಗನಾದ ಶೆಫತ್ಯ, ಪಷ್ಹೂರನ ಮಗನಾದ ಗೆದಲ್ಯ, ಸೆಲೆಮ್ಯನ ಮಗನಾದ ಯೂಕಲ, ಮಲ್ಕೀಯನ ಮಗನಾದ ಪಷ್ಹೂರ ಇವರುಗಳು ಅವನ ಮಾತನ್ನೆಲ್ಲಾ ಕೇಳಿಸಿಕೊಂಡರು. ಯೆರೆಮೀಯನು ಎಲ್ಲಾ ಜನರಿಗೆ ಈ ಸಂದೇಶವನ್ನು ಹೇಳುತ್ತಿದ್ದನು.
2 “ಯೆಹೋವನು ಹೀಗೆನ್ನುತ್ತಾನೆ: ‘ಜೆರುಸಲೇಮಿನಲ್ಲಿರುವ ಪ್ರತಿಯೊಬ್ಬರು ಖಡ್ಗದಿಂದಾಗಲಿ ಕ್ಷಾಮದಿಂದಾಗಲಿ ಭಯಂಕರವಾದ ವ್ಯಾಧಿಯಿಂದಾಗಲಿ ಸತ್ತುಹೋಗುವರು. ಆದರೆ ಬಾಬಿಲೋನಿನ ಸೈನಿಕರಿಗೆ ಶರಣಾಗುವ ಪ್ರತಿಯೊಬ್ಬರು ಬಂದುಕುವರು. ಅವರು ಜೀವಂತ ಉಳಿಯುವರು.’
3 ಯೆಹೋವನು ಹೀಗೆನ್ನುತ್ತಾನೆ: ‘ಈ ಜೆರುಸಲೇಮ್ ನಗರವನ್ನು ಖಂಡಿತವಾಗಿಯೂ ಬಾಬಿಲೋನ್ ರಾಜನ ಸೈನಿಕರ ಕೈಗೆ ಒಪ್ಪಿಸಲಾಗುವುದು. ಅವನು ಈ ನಗರವನ್ನು ಸ್ವಾಧೀನಪಡಿಸಿಕೊಳ್ಳುವನು.’ ”
4 ಯೆರೆಮೀಯನು ಜನರಿಗೆ ಹೇಳುತ್ತಿರುವ ವಿಷಯಗಳನ್ನು ಕೇಳಿದ ರಾಜಾಧಿಕಾರಿಗಳು ರಾಜನಾದ ಚಿದ್ಕೀಯನ ಬಳಿಗೆ ಹೋಗಿ, “ಯೆರೆಮೀಯನಿಗೆ ಮರಣದಂಡನೆಯಾಗಬೇಕು. ಇನ್ನೂ ನಗರದಲ್ಲಿರುವ ಸೈನಿಕರನ್ನೂ ಎಲ್ಲರನ್ನೂ ತನ್ನ ಮಾತುಗಳಿಂದ ಧೈರ್ಯಗೆಡಿಸುತ್ತಿದ್ದಾನೆ. ನಮಗೆ ಒಳ್ಳೆಯದಾಗಬೇಕೆಂದು ಅವನು ಬಯಸದೆ ಜೆರುಸಲೇಮಿನ ಜನರ ನಾಶನವನ್ನು ಬಯಸುತ್ತಾನೆ” ಎಂದು ಹೇಳಿದರು.
5 ಆಗ ರಾಜನಾದ ಚಿದ್ಕೀಯನು, “ಯೆರೆಮೀಯನು ನಿಮ್ಮ ಅಧಿನದಲ್ಲಿದ್ದಾನೆ. ನೀವು ಏನು ಬೇಕಾದರೂ ಮಾಡಿ” ಎಂದು ಆ ಅಧಿಕಾರಿಗಳಿಗೆ ಹೇಳಿದನು.
6 ಆಗ ಆ ಅಧಿಕಾರಿಗಳು ಯೆರೆಮೀಯನನ್ನು ಹಿಡಿದು ಮಲ್ಕೀಯನ ಬಾವಿಯೊಳಗೆ ಹಾಕಿದರು. (ಮಲ್ಕೀಯನು ರಾಜವಂಶದವನಾಗಿದ್ದನು.) ಆ ಬಾವಿಯು ಕಾರಾಗೃಹದ ಅಂಗಳದಲ್ಲಿತ್ತು. ಆ ಅಧಿಕಾರಿಗಳು ಹಗ್ಗಗಳನ್ನು ಕಟ್ಟಿ ಯೆರೆಮೀಯನನ್ನು ಬಾವಿಯಲ್ಲಿ ಇಳಿಬಿಟ್ಟರು. ಆ ಬಾವಿಯಲ್ಲಿ ಸ್ವಲ್ಪವೂ ನೀರಿರಲಿಲ್ಲ. ಕೇವಲ ಕೇಸರಿತ್ತು. ಯೆರೆಮೀಯನು ಕೆಸರಿನಲ್ಲಿ ಮುಳುಗಿಹೋದನು.
7 ಆ ಅಧಿಕಾರಿಗಳು ಯೆರೆಮೀಯನನ್ನು ಬಾವಿಗೆ ಹಾಕಿದ ಸಂಗತಿಯು ಎಬೆದ್ಮೆಲೆಕನೆಂಬ ಮನುಷ್ಯನ ಕಿವಿಗೆ ಬಿತ್ತು. ಎಬೆದ್ಮೆಲೆಕನು ಇಥಿಯೋಪಿಯದವನಾಗಿದ್ದು ಅರಮನೆಯಲ್ಲಿ ಕಂಚುಕಿಯಾಗಿದ್ದನು. ರಾಜನಾದ ಚಿದ್ಕೀಯನು ಬೆನ್ಯಾಮೀನ್ ಊರ ಬಾಗಲಲ್ಲಿ ಕುಳಿತಿದ್ದನು. ಎಬೆದ್ಮೆಲೆಕನು ಅರಮನೆಯನ್ನು ಬಿಟ್ಟು ಬೆನ್ಯಾಮೀನ್ ಊರಹೆಬ್ಬಾಗಿಲಿನ ಹತ್ತಿರ ಕುಳಿತಿದ್ದ ರಾಜನಾದ ಚಿದ್ಕೀಯನ ಹತ್ತಿರ ಬಂದು ಹೀಗೆ ಹೇಳಿದನು:
8 (8-9) “ನನ್ನ ಒಡೆಯನಾದ ರಾಜನೇ, ಆ ಅಧಿಕಾರಿಗಳು ದುಷ್ಟ ರೀತಿಯಲ್ಲಿ ವರ್ತಿಸಿದ್ದಾರೆ. ಅವರು ಪ್ರವಾದಿಯಾದ ಯೆರೆಮೀಯನೊಂದಿಗೆ ದುಷ್ಟತನದಿಂದ ವ್ಯವಹರಿಸಿದ್ದಾರೆ. ಅವರು ಅವನನ್ನು ಒಂದು ಬಾವಿಯಲ್ಲಿ ಎಸೆದಿದ್ದಾರೆ. ಅವನನ್ನು ಅಲ್ಲಿಯೇ ಸಾಯಲು ಬಿಟ್ಟಿದ್ದಾರೆ” ಎಂದು ಹೇಳಿದನು.
10 ಆಗ ರಾಜನಾದ ಚಿದ್ಕೀಯನು ಇಥಿಯೋಪಿಯದವನಾದ ಎಬೆದ್ಮೆಲೆಕನಿಗೆ, “ಅರಮನೆಯಿಂದ ಮೂರು ಜನರನ್ನು ನಿನ್ನ ಸಂಗಡ ಕರೆದುಕೊಂಡು ಹೋಗು. ಯೆರೆಮೀಯನನ್ನು ಅವನು ಸಾಯುವ ಮುಂಚೆ ಬಾವಿಯಿಂದ ಮೇಲೆತ್ತು” ಎಂದು ಅಪ್ಪಣೆಕೊಟ್ಟನು.
11 ಎಬೆದ್ಮೆಲೆಕನು ಆ ಜನರನ್ನು ಕರೆದುಕೊಂಡು ಹೊರಟನು. ಅವನು ಮೊದಲು ಅರಮನೆಯ ಉಗ್ರಾಣದ ಕೆಳಗಿರುವ ಕೋಣೆಗೆ ಹೋದನು. ಆ ಕೋಣೆಯಿಂದ ಅವನು ಕೆಲವು ಹಳೆಯದಾದ ಮತ್ತು ಹರಿದುಹೋದ ಬಟ್ಟೆಗಳನ್ನು ತೆಗೆದುಕೊಂಡನು. ಆ ಚಿಂದಿಬಟ್ಟೆಗಳನ್ನು ಒಂದು ಹಗ್ಗಕ್ಕೆ ಕಟ್ಟಿ ಆಳವಾದ ಬಾವಿಯಲ್ಲಿ ಯೆರೆಮೀಯನಿಗೆ ತಲುಪುವಂತೆ ಇಳಿಬಿಟ್ಟನು.
12 ಆಗ ಇಥಿಯೋಪಿಯದವನಾದ ಎಬೆದ್ಮೆಲೆಕನು, “ಆ ಹರಿದುಹೋದ ಮತ್ತು ಹಳೆಯದಾದ ಬಟ್ಟೆಗಳನ್ನು ನಿನ್ನ ಕಂಕುಳಲ್ಲಿ ಇಟ್ಟುಕೋ. ನಾವು ನಿನ್ನನ್ನು ಮೇಲಕ್ಕೆಳೆಯುವಾಗ ನಿನ್ನ ಕಂಕುಳಿಗೆ ಹಗ್ಗಗಳಿಂದ ಗಾಯಗಳಾಗುವದಿಲ್ಲ” ಎಂದನು. ಯೆರೆಮೀಯನು ಎಬೆದ್ಮೆಲೆಕನು ಹೇಳಿದಂತೆ ಮಾಡಿದನು.
13 ಅವರು ಯೆರೆಮೀಯನನ್ನು ಹಗ್ಗದಿಂದ ಮೇಲಕ್ಕೆ ಎಳೆದು ಬಾವಿಯಿಂದ ಹೊರತೆಗೆದರು. ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ವಾಸಿಸಿದನು.
14 ರಾಜನಾದ ಚಿದ್ಕೀಯನು ಪ್ರವಾದಿಯಾದ ಯೆರೆಮೀಯನನ್ನು ಒಬ್ಬನ ಮೂಲಕ ಯೆಹೋವನ ಆಲಯದ ಮೂರನೇ ಪ್ರವೇಶದ್ವಾರಕ್ಕೆ ಕರೆಸಿದನು. ರಾಜನು ಅವನಿಗೆ, “ಯೆರೆಮೀಯನೇ, ನಾನು ನಿನಗೆ ಒಂದು ವಿಷಯವನ್ನು ಕೇಳಲಿದ್ದೇನೆ. ನನ್ನಿಂದ ಏನನ್ನೂ ಮುಚ್ಚಿಡಬೇಡ. ಎಲ್ಲವನ್ನು ಪ್ರಾಮಾಣಿಕವಾಗಿ ನನಗೆ ಹೇಳು” ಎಂದನು.
15 ಅದಕ್ಕೆ ಯೆರೆಮೀಯನು, “ನಾನು ಉತ್ತರಕೊಟ್ಟರೆ ನೀನು ಬಹುಶಃ ನನ್ನನ್ನು ಕೊಂದುಬಿಡುವೆ, ಸಲಹೆ ಕೊಟ್ಟರೆ ನೀನು ನನ್ನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುವದಿಲ್ಲ” ಎಂದು ಹೇಳಿದನು.
16 ಆದರೆ ರಾಜನಾದ ಚಿದ್ಕೀಯನು ಯೆರೆಮೀಯನಿಗೆ ರಹಸ್ಯವಾಗಿ, “ಯೆರೆಮೀಯನೇ, ನಮಗೆ ಉಸಿರನ್ನೂ ಜೀವವನ್ನೂ ದಯಪಾಲಿಸಿದ ಯೆಹೋವನ ಆಣೆಯಾಗಿ ಹೇಳುತ್ತೇನೆ, ನಾನು ನಿನ್ನನ್ನು ಕೊಲ್ಲುವುದಿಲ್ಲ. ಕೊಲ್ಲಬಯಸುವ ಅಧಿಕಾರಿಗಳ ಕೈಗೂ ನಿನ್ನನ್ನು ಕೊಡುವದಿಲ್ಲವೆಂದು ನಾನು ಮಾತು ಕೊಡುತ್ತೇನೆ” ಎಂದು ಹೇಳಿದನು.
17 ಆಗ ಯೆರೆಮೀಯನು ರಾಜನಾದ ಚಿದ್ಕೀಯನಿಗೆ ಹೀಗೆಂದನು: “ಇಸ್ರೇಲರ ದೇವರಾದ ಮತ್ತು ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: ‘ನೀನು ಬಾಬಿಲೋನಿನ ರಾಜನ ಅಧಿಕಾರಿಗಳಿಗೆ ಶರಣಾಗತನಾದರೆ ನಿನ್ನ ಪ್ರಾಣವನ್ನು ಉಳಿಸಲಾಗುವುದು ಮತ್ತು ಜೆರುಸಲೇಮ್ ನಗರವನ್ನು ಸುಟ್ಟುಹಾಕಲ್ಪಡುವುದಿಲ್ಲ. ನೀನೂ ಬಂದುಕುವೆ ಮತ್ತು ನಿನ್ನ ಕುಟುಂಬದವರೂ ಬಂದುಕುವರು.
18 ಆದರೆ ನೀನು ಬಾಬಿಲೋನಿನ ಅಧಿಕಾರಿಗಳಿಗೆ ಶರಣಾಗತನಾಗಲು ಒಪ್ಪದ್ದಿದ್ದರೆ, ಜೆರುಸಲೇಮನ್ನು ಬಾಬಿಲೋನಿನ ಸೈನಿಕರಿಗೆ ಒಪ್ಪಿಸಲಾಗುವುದು. ಅವರು ಜೆರುಸಲೇಮನ್ನು ಸುಟ್ಟುಬಿಡುವರು ಮತ್ತು ನೀನು ಸಹ ಅವರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.’ ”
19 ಆಗ ಚಿದ್ಕೀಯನು, “ನಾನು ಈಗಾಗಲೇ ಬಾಬಿಲೋನಿನ ಸೈನ್ಯದ ಕಡೆಗೆ ಸೇರಿದ ಯೆಹೂದ್ಯರಿಗೆ ಹೆದರುತ್ತೇನೆ. ಆ ಸೈನಿಕರು ನನ್ನನ್ನು ಯೆಹೂದದ ಆ ಜನರಿಗೆ ಒಪ್ಪಿಸಿಕೊಡಬಹುದು ಮತ್ತು ಅವರು ನನಗೆ ಕೇಡುಮಾಡಬಹುದು; ನನ್ನನ್ನು ಹಿಂಸಿಸಬಹುದು ಎಂದು ಭಯವಾಗುತ್ತದೆ” ಎಂದು ಯೆರೆಮೀಯನಿಗೆ ಹೇಳಿದನು.
20 ಆದರೆ ಯೆರೆಮೀಯನು, “ರಾಜನಾದ ಚಿದ್ಕೀಯನೇ, ಆ ಸೈನಿಕರು ನಿನ್ನನ್ನು ಯೆಹೂದದ ಆ ಜನರಿಗೆ ಒಪ್ಪಿಸುವುದಿಲ್ಲ. ನಾನು ಹೇಳಿದಂತೆ ಮಾಡಿ ಯೆಹೋವನ ಆಜ್ಞಾಪಾಲನೆ ಮಾಡು. ಆಗ ನಿನಗೆಲ್ಲ ಒಳ್ಳೆಯದಾಗುವುದು ಮತ್ತು ನಿನ್ನ ಪ್ರಾಣ ಉಳಿಯುವುದು.
21 ನೀನು ಬಾಬಿಲೋನಿನ ಸೈನಿಕರಿಗೆ ಶರಣಾಗತನಾಗದಿದ್ದರೆ ಏನಾಗುವದೆಂಬುದನ್ನು ಯೆಹೋವನು ನನಗೆ ತೋರಿಸಿಕೊಟ್ಟಿದ್ದಾನೆ. ಯೆಹೋವನು ನನಗೆ ಹೀಗೆ ಹೇಳಿದ್ದಾನೆ:
22 ಯೆಹೂದದ ರಾಜನ ಅರಮನೆಯಲ್ಲಿ ಉಳಿದ ಎಲ್ಲಾ ಸ್ತ್ರೀಯರನ್ನು ಬಾಬಿಲೋನಿನ ಸೈನ್ಯಾಧಿಕಾರಿಗಳ ಬಳಿಗೆ ತರಲಾಗುವುದು. ನಿನ್ನ ಸ್ತ್ರೀಯರು ಹಾಡನ್ನು ಹಾಡಿ ನಿನ್ನನ್ನು ತಮಾಷೆ ಮಾಡುವರು. ಆ ಸ್ತ್ರೀಯರು ಹೀಗೆ ಹೇಳುವರು: ‘ನಿನಗಿಂತಲೂ ಪ್ರಬಲರಾಗಿದ್ದ ನಿನ್ನ ಒಳ್ಳೆಯ ಸ್ನೇಹಿತರು ನಿನ್ನನ್ನು ತಪ್ಪುದಾರಿಗೆ ಎಳೆದರು. ಆ ಸ್ನೇಹಿತರನ್ನು ನೀನು ತುಂಬಾ ನಂಬಿಕೊಂಡಿದ್ದೆ. ನಿನ್ನ ಪಾದಗಳು ಕೆಸರಿನಲ್ಲಿ ಹೂತಿವೆ. ನಿನ್ನ ಸ್ನೇಹಿತರು ನಿನ್ನಿದ ದೂರವಾಗಿದ್ದಾರೆ.’
23 “ನಿನ್ನ ಎಲ್ಲಾ ಹೆಂಡತಿಯರನ್ನು ಮತ್ತು ಮಕ್ಕಳನ್ನು ಹೊರತರಲಾಗುವುದು. ಅವರನ್ನು ಬಾಬಿಲೋನಿನ ಸೈನಿಕರಿಗೆ ಒಪ್ಪಿಸಲಾಗುವುದು. ನೀನೂ ಬಾಬಿಲೋನಿನ ಸೈನಿಕರಿಂದ ತಪ್ಪಿಸಿಕೊಳ್ಳಲಾರೆ. ಬಾಬಿಲೋನಿನ ರಾಜನು ನಿನ್ನನ್ನು ವಶಪಡಿಸಿಕೊಳ್ಳುವನು ಮತ್ತು ಜೆರುಸಲೇಮ್ ನಗರವನ್ನು ಸುಟ್ಟುಹಾಕಲಾಗುವುದು” ಎಂದು ಉತ್ತರಿಸಿದನು.
24 ಆಗ ಚಿದ್ಕೀಯನು ಯೆರೆಮೀಯನಿಗೆ ಹೀಗೆ ಹೇಳಿದನು: “ನಾನು ನಿನ್ನ ಸಂಗಡ ಮಾತನಾಡುತ್ತಿದ್ದೆ ಎಂದು ಯಾರಿಗೂ ಹೇಳಬೇಡ. ಇಲ್ಲವಾದರೆ ನೀನು ಸಾಯುವೆ.
25 ನಾನು ನಿನ್ನೊಂದಿಗೆ ಮಾತನಾಡಿದ್ದನ್ನು ಆ ಅಧಿಕಾರಿಗಳು ಪತ್ತೆ ಹಚ್ಚಬಹುದು. ಅವರು ನಿನ್ನ ಹತ್ತಿರ ಬಂದು, ‘ಯೆರೆಮೀಯನೇ, ನೀನು ರಾಜನಾದ ಚಿದ್ಕೀಯನಿಗೆ ಏನು ಹೇಳಿದೆ? ಚಿದ್ಕೀಯನು ನಿನಗೆ ಏನು ಹೇಳಿದನು? ಪ್ರಾಮಾಣಿಕವಾಗಿ ಎಲ್ಲವನ್ನು ನಮಗೆ ಹೇಳು; ಇಲ್ಲವಾದರೆ ನಾವು ನಿನ್ನನ್ನು ಕೊಂದುಬಿಡುತ್ತೇವೆ’ ಎನ್ನಬಹುದು.
26 ಆಗ ನೀನು ಅವರಿಗೆ, ‘ಯೆಹೋನಾಥಾನನ ಮನೆಯ ನೆಲಮಾಳಿಗೆಯ ಕತ್ತಲು ಕೋಣೆಗೆ ನನ್ನನ್ನು ಮತ್ತೆ ಕಳುಹಿಸಬೇಡಿ, ಅಲ್ಲಿಗೆ ಹೋದರೆ ನಾನು ಸತ್ತುಹೋಗುವೆನೆಂದು ರಾಜನಿಗೆ ಪ್ರಾರ್ಥಿಸುತ್ತಿದ್ದೆ’ ” ಎಂದು ಹೇಳು.
27 ಆ ರಾಜ್ಯಾಧಿಕಾರಿಗಳು ಅವನನ್ನು ಪ್ರಶ್ನಿಸುವದಕ್ಕಾಗಿ ಯೆರೆಮೀಯನಲ್ಲಿಗೆ ಬಂದರು. ರಾಜನು ಆಜ್ಞಾಪಿಸಿದಂತೆ ಯೆರೆಮೀಯನು ಅವರಿಗೆ ಎಲ್ಲವನ್ನು ಹೇಳಿದನು. ಆಗ ಆ ಅಧಿಕಾರಿಗಳು ಯೆರೆಮೀಯನನ್ನು ಬಿಟ್ಟುಹೋದರು. ಯೆರೆಮೀಯನ ಮತ್ತು ರಾಜನ ಸಂಭಾಷಣೆಯನ್ನು ಯಾರೂ ಕೇಳಿರಲಿಲ್ಲ.
28 ಜೆರುಸಲೇಮ್ ನಗರವು ಶತ್ರುಗಳ ವಶವಾಗುವವರೆಗೆ ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ವಾಸಮಾಡಿಕೊಂಡಿದ್ದನು.
×

Alert

×