English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Jeremiah Chapters

Jeremiah 3 Verses

1 ಯೆಹೋವನು ಹೀಗೆ ನುಡಿದನು: “ಒಬ್ಬನು ತನ್ನ ಹೆಂಡತಿಯೊಂದಿಗೆ ವಿವಾಹವಿಚ್ಛೇದನ ಮಾಡಿಕೊಂಡ ಮೇಲೆ ಅವಳು ಮತ್ತೊಬ್ಬನನ್ನು ಮದುವೆಯಾದರೆ ಆ ಮೊದಲನೆಯ ಗಂಡನು ಪುನಃ ಅವಳಲ್ಲಿಗೆ ಬರಲು ಸಾಧ್ಯವೇ? ಇಲ್ಲ. ಆ ಮನುಷ್ಯನು ಪುನಃ ಆ ಸ್ತ್ರೀಯಲ್ಲಿಗೆ ಹೋದರೆ ಆ ದೇಶವು ಪರಿಪೂರ್ಣವಾಗಿ ಅಪವಿತ್ರವಾಗುತ್ತದೆ. ಯೆಹೂದವೇ, ನೀನು ಬಹು ಜನರೊಂದಿಗೆ ಕಾಮದಾಟವಾಡಿದ ವೇಶ್ಯಾ ಸ್ತ್ರೀಯಂತೆ ವರ್ತಿಸಿದೆ. ಈಗ ನೀನು ಪುನಃ ನನ್ನಲ್ಲಿಗೆ ಬರಲು ಇಚ್ಛಿಸುವಿಯಾ?” ಇದು ಯೆಹೋವನ ನುಡಿ.
2 “ಯೆಹೂದವೇ, ತಲೆಯೆತ್ತಿ ಬೋಳುಗುಡ್ಡಗಳ ಕಡೆಗೆ ನೋಡು. ನೀನು ಕಾಮಕೇಳಿ ಆಡದ ಸ್ಥಳ ಯಾವುದಾದರೂ ಇದೆಯೇ? ಅರಬೀಯನಂತೆ ನೀನು ಮಾರ್ಗದ ಮಗ್ಗುಲಲ್ಲಿ ಪ್ರಿಯತಮರಿಗಾಗಿ ಎದುರುನೋಡುತ್ತಾ ಕುಳಿತಿರುವೆ. ನೀನು ಭೂಮಿಯನ್ನು ಅಪವಿತ್ರಗೊಳಿಸಿದೆ; ಹೇಗೆಂದರೆ, ನೀನು ಅನೇಕ ಕೆಟ್ಟಕೆಲಸಗಳನ್ನು ಮಾಡಿದೆ. ನನಗೆ ವಿಶ್ವಾಸದ್ರೋಹ ಮಾಡಿದೆ.
3 ನೀನು ಪಾಪ ಮಾಡಿದ್ದರಿಂದ ಮಳೆ ಬರಲಿಲ್ಲ; ಹಿಂಗಾರು ಮಳೆಯೂ ಆಗಲಿಲ್ಲ. ನಿನ್ನ ಮುಖದ ಮೇಲೆ ಇನ್ನೂ ವೇಶ್ಯೆಯ ಕಳೆಯೇ ಇದೆ. ನೀನು ಮಾಡಿದ ದುಷ್ಕೃತ್ಯಗಳಿಗಾಗಿ ನಿನಗೆ ನಾಚಿಕೆಯೂ ಆಗುವುದಿಲ್ಲ.
4 ಆದರೆ ಈಗ ನೀನು, ‘ನನ್ನ ತಂದೆಯೇ, ನಾನು ಚಿಕ್ಕ ಮಗು ಆದಾಗಿನಿಂದ ನೀನು ನನ್ನ ಪ್ರೀತಿಯ ಸ್ನೇಹಿತನಾಗಿದ್ದೆ’ ಎಂದು ಕೂಗುತ್ತಲಿರುವೆ.
5 ಇದಲ್ಲದೆ, ಯೆಹೂದವೇ, ‘ದೇವರು ಯಾವಾಗಲೂ ನನ್ನ ಮೇಲೆ ಕೋಪಿಷ್ಟನಾಗಿರುವುದಿಲ್ಲ. ದೇವರ ಕೋಪವು ಶಾಶ್ವತವಾಗಿರುವುದಿಲ್ಲ’ ಎಂದು ನೀನು ಹೇಳಿದೆಯಲ್ಲಾ. “ಆದರೆ ನಿನ್ನಿದ ಸಾಧ್ಯವಾದಷ್ಟು ಕೆಡುಕನ್ನು ಮಾಡುವೆ.” ಇಬ್ಬರು ಕೆಟ್ಟ ಸಹೋದರಿಯರು: ಇಸ್ರೇಲ್ ಮತ್ತು ಯೆಹೂದ
6 ಯೆಹೂದ ಪ್ರದೇಶವನ್ನು ಯೋಷೀಯನು ಆಳುತ್ತಿದ್ದಾಗ ಯೆಹೋವನು ನನ್ನೊಂದಿಗೆ ಮಾತನಾಡಿ, “ಯೆರೆಮೀಯನೇ, ಇಸ್ರೇಲ್‌ [*ಇಸ್ರೇಲ್ ಇಲ್ಲಿ ಇಸ್ರೇಲ್ ಅಂದರೆ ಇಸ್ರೇಲಿನ ಉತ್ತರ ರಾಜ್ಯ. ಇಸ್ರೇಲ್ ಯೆರೆಮೀಯನ ಕಾಲಕ್ಕೆ 100 ವರ್ಷ ಮುಂಚೆಯೇ ಅಸ್ಸೀರಿಯ ಜನರಿಂದ ಹಾಳು ಮಾಡಲ್ಪಟ್ಟಿತ್ತು.] ಎಂಬಾಕೆಯು ಮಾಡಿದ ದುಷ್ಕೃತ್ಯಗಳನ್ನು ನೀನು ನೋಡಿದಿಯಾ? ಅವಳು ನನಗೆ ಹೇಗೆ ವಂಚಿಸಿದಳು ನೋಡಿದಿಯಾ? ಅವಳು ಪ್ರತಿಯೊಂದು ಬೆಟ್ಟದ ಮೇಲೆಯೂ ಸೊಂಪಾಗಿ ಬೆಳೆದ ಪ್ರತಿಯೊಂದು ಮರದ ಕೆಳಗೂ ವಿಗ್ರಹಗಳ ಜೊತೆ ಜಾರತನ ಮಾಡಿದಳು.
7 ‘ಈ ದುಷ್ಕೃತ್ಯಗಳನ್ನೆಲ್ಲಾ ಮಾಡಿ ಮುಗಿಸಿದ ಮೇಲೆಯೂ ಇಸ್ರೇಲ್ ನನ್ನಲ್ಲಿಗೆ ಬರಬಹುದು’ ಎಂದು ನಾನು ಭಾವಿಸಿದ್ದೆ. ಆದರೆ ಅವಳು ನನ್ನಲ್ಲಿಗೆ ಬರಲಿಲ್ಲ. ಇಸ್ರೇಲಿನ ವಂಚಕಿ ಸಹೋದರಿಯಾದ ಯೆಹೂದ ಎಂಬಾಕೆಯು ಮಾಡಿದ್ದನ್ನು ನೋಡಿದಳು.
8 ಇಸ್ರೇಲ್ ಎಂಬಾಕೆಯು ನನಗೆ ವಿಶ್ವಾಸದ್ರೋಹ ಮಾಡಿದ್ದಳು. ನಾನು ಏಕೆ ಹೊರಗೆ ಹಾಕಿದೆ ಎಂಬುದು ಅವಳಿಗೆ ಗೊತ್ತಿತ್ತು. ಅವಳ ಜಾರತನ ಎಂಬ ಪಾಪದ ಬಗ್ಗೆ ನನಗೆ ತಿಳಿದಿದೆ ಎಂದು ಇಸ್ರೇಲಳಿಗೆ ಗೊತ್ತಾಗಿತ್ತು. ಆದರೆ ಅದರಿಂದ ಅವಳ ವಂಚಕಳಾದ ಸೋದರಿಗೆ ಭಯವಾಗಲಿಲ್ಲ. ಯೆಹೂದ ಭಯಪಡಲಿಲ್ಲ. ಆಕೆಯು ಸಹ ವೇಶ್ಯೆಯರಂತೆ ವರ್ತಿಸಿದಳು.
9 ತನ್ನ ನಡತೆಯ ಬಗ್ಗೆ ಆಕೆ ಯೋಚಿಸಲಿಲ್ಲ. ಅವಳು ತನ್ನ ದೇಶವನ್ನು ‘ಅಶುದ್ಧ’ಗೊಳಿಸಿದಳು. ಕಲ್ಲಿನ ಮತ್ತು ಮರದ ವಿಗ್ರಹಗಳನ್ನು ಪೂಜಿಸಿ ಜಾರತನ ಎಂಬ ಪಾಪವನ್ನು ಮಾಡಿದಳು.
10 ಇಸ್ರೇಲಿಗೆ ಇಷ್ಟೆಲ್ಲಾ ದಂಡನೆ ಆದರೂ ಅವಳ ಸೋದರಿಯಾದ ಯೆಹೂದ ತುಂಬುಹೃದಯದಿಂದ ನನ್ನಲ್ಲಿಗೆ ಬರಲಿಲ್ಲ. ಅವಳು ನನ್ನಲ್ಲಿಗೆ ತಿರುಗಿ ಬರುವ ನಟನೆಯನ್ನು ಮಾತ್ರ ಮಾಡಿದಳು. ಇದು ಯೆಹೋವನಾದ ನನ್ನ ನುಡಿ” ಎಂದು ಹೇಳಿದನು.
11 ಯೆಹೋವನು ನನಗೆ, “ಇಸ್ರೇಲ್ ಎಂಬಾಕೆಯು ನನಗೆ ನಂಬಿಗಸ್ತಳಾಗಿ ನಡೆದುಕೊಳ್ಳಲಿಲ್ಲ. ಆದರೆ ಅವಳು ಯೆಹೂದ ಎಂಬಾಕೆಗಿಂತ ಒಳ್ಳೆಯವಳಾಗಿ ಕಂಡು ಬಂದಳು.
12 ಯೆರೆಮೀಯನೇ, ಹೋಗು. ಈ ಸಂದೇಶವನ್ನು ಉತ್ತರದಿಕ್ಕಿನಲ್ಲಿ ಸಾರು. ಯೆಹೋವನು ಹೀಗೆ ಹೇಳುತ್ತಾನೆ: “ ‘ವಿಶ್ವಾಸದ್ರೋಹಿಗಳಾದ ಇಸ್ರೇಲಿನ ಜನರೇ, ಹಿಂತಿರುಗಿ ಬನ್ನಿ.’ ‘ನಾನು ಕೋಪಮುಖದಿಂದ ನಿಮ್ಮನ್ನು ನೋಡುವುದನ್ನು ನಿಲ್ಲಿಸುವೆನು. ನಾನು ಕರುಣಾಶಾಲಿ, ನಿತ್ಯಕೋಪಿಯಲ್ಲ.’ ಇದು ಯೆಹೋವನ ನುಡಿ.
13 ‘ನೀವು ನಿಮ್ಮ ಪಾಪವನ್ನು ಅರಿತುಕೊಂಡರೆ ಸಾಕು. ನೀವು ನಿಮ್ಮ ದೇವರಾದ ಯೆಹೋವನಿಗೆ ವಿರುದ್ಧ ತಿರುಗಿದಿರಿ, ಅದೇ ನಿಮ್ಮ ಪಾಪ. ನೀವು ಬೇರೆ ರಾಷ್ಟ್ರದವರ ವಿಗ್ರಹಗಳನ್ನು ಆರಾಧಿಸಿದಿರಿ. ನೀವು ಪ್ರತಿಯೊಂದು ಹಸಿರು ಮರದ ಕೆಳಗೆ ವಿಗ್ರಹಗಳನ್ನು ಆರಾಧಿಸಿದಿರಿ. ನೀವು ನನ್ನ ಆಜ್ಞೆಯನ್ನು ಪರಿಪಾಲಿಸಲಿಲ್ಲ’ ” ಇದು ಯೆಹೋವನ ನುಡಿಯಾಗಿತ್ತು.
14 “ವಿಶ್ವಾಸದ್ರೋಹಿಗಳಾದ ಜನರೇ, ನನ್ನಲ್ಲಿಗೆ ಹಿಂತಿರುಗಿ ಬನ್ನಿ” ಇದು ಯೆಹೋವನ ನುಡಿಯಾಗಿತ್ತು. “ನಾನೇ ನಿಮ್ಮ ಒಡೆಯನು. ನಾನು ಪ್ರತಿಯೊಂದು ನಗರದಿಂದ ಒಬ್ಬ ವ್ಯಕ್ತಿಯನ್ನು ಮತ್ತು ಪ್ರತಿಯೊಂದು ಕುಲದಿಂದ ಇಬ್ಬರನ್ನು ಆರಿಸಿ ಚೀಯೋನಿಗೆ ಕರೆದು ತರುವೆನು.
15 ನಿಮಗೆ ಹೊಸ ಪಾಲಕರನ್ನು ನೇಮಿಸುವೆನು. ಆ ಪಾಲಕರು ನನಗೆ ನಂಬಿಗಸ್ತರಾಗಿರುತ್ತಾರೆ. ಅವರು ಬುದ್ಧಿ ಮತ್ತು ಜ್ಞಾನಗಳಿಂದ ನಿಮಗೆ ಮಾರ್ಗದರ್ಶನ ಮಾಡುತ್ತಾರೆ.
16 ಆಗ ದೇಶದಲ್ಲಿ ನಿಮ್ಮ ಸಂಖ್ಯೆ ಬೆಳೆಯುವದು” ಇದು ಯೆಹೋವನ ನುಡಿ. “ಆ ಕಾಲದಲ್ಲಿ ಜನರು, ‘ನಮ್ಮಲ್ಲಿ ಯೆಹೋವನ ಒಡಂಬಡಿಕೆಯ ಪೆಟ್ಟಿಗೆ ಇದ್ದ ದಿನಗಳನ್ನು ಜ್ಞಾಪಿಸಿಕೊಳ್ಳುವ’ ಎಂದು ಹೇಳುವುದಿಲ್ಲ. ಅವರು, ‘ಪವಿತ್ರ ಪೆಟ್ಟಿಗೆ’ಯ ಬಗ್ಗೆ ಯೋಚನೆ ಸಹ ಮಾಡುವುದಿಲ್ಲ. ಅವರು ಅದನ್ನು ಜ್ಞಾಪಿಸುವುದೂ ಇಲ್ಲ. ಅದರ ಅಭಾವವನ್ನು ಮನಸ್ಸಿಗೆ ತಂದುಕೊಳ್ಳುವುದೂ ಇಲ್ಲ. ಅವರು ಇನ್ನೊಂದು ‘ಪವಿತ್ರ ಪೆಟ್ಟಿಗೆ’ಯನ್ನು ಸಿದ್ಧಪಡಿಸುವದಿಲ್ಲ.
17 ಆ ಕಾಲದಲ್ಲಿ ಜೆರುಸಲೇಮ್ ನಗರಕ್ಕೆ ‘ಯೆಹೋವನ ಸಿಂಹಾಸನ’ ಎಂದು ಕರೆಯುವರು. ಯೆಹೋವನ ಹೆಸರಿಗೆ ಗೌರವ ಸೂಚಿಸಲು ಎಲ್ಲಾ ಜನಾಂಗದವರು ಜೆರುಸಲೇಮಿನಲ್ಲಿ ಬಂದು ಸೇರುವರು. ಅವರು ತಮ್ಮ ದುಷ್ಟ ಮತ್ತು ಹಟಮಾರಿ ಹೃದಯಗಳನ್ನು ಅನುಸರಿಸುವುದಿಲ್ಲ.
18 ಆ ಕಾಲದಲ್ಲಿ ಯೆಹೂದದ ಜನರು ಇಸ್ರೇಲ್ ಜನರನ್ನು ಕೂಡಿಕೊಳ್ಳುವರು. ಅವೆರಡೂ ಕೂಡಿ ಉತ್ತರದಿಕ್ಕಿನ ಪ್ರದೇಶದಿಂದ ಬರುವರು. ನಾನು ಅವರ ಪೂರ್ವಿಕರಿಗೆ ಕೊಟ್ಟ ಪ್ರದೇಶಕ್ಕೆ ಅವರು ಬರುವರು.”
19 ಯೆಹೋವನಾದ ನಾನು ಹೀಗೆಂದುಕೊಂಡೆ: “ನಾನು ಸಂತೋಷದಿಂದ ನಿಮ್ಮನ್ನು ಮಕ್ಕಳಂತೆ ನೋಡಿಕೊಳ್ಳುವೆನು. ಬೇರೆ ಎಲ್ಲಾ ಜನಾಂಗಗಳ ಪ್ರದೇಶಕ್ಕಿಂತ ಅತಿ ಸುಂದರವಾದ ಪ್ರದೇಶವನ್ನು ನಿಮಗೆ ಕೊಡುವುದಕ್ಕೆ ನಾನು ಸಂತೋಷಪಡುವೆನು. ನೀವು ನನ್ನನ್ನು ‘ತಂದೆ’ ಎಂದು ಕರೆಯುವಿರೆಂದು ನಾನು ಭಾವಿಸಿದ್ದೆ. ನೀವು ಯಾವಾಗಲೂ ನನ್ನ ಹಿಂಬಾಲಕರಾಗಿರುವಿರೆಂದು ಭಾವಿಸಿದ್ದೆ.
20 ಆದರೆ ನೀವು ಗಂಡನಿಗೆ ವಂಚಿಸುವ ಜಾರಿಣಿಯಂತಾದಿರಿ. ಇಸ್ರೇಲ್ ವಂಶದವರೇ, ನೀವು ನನಗೆ ದ್ರೋಹ ಮಾಡಿದಿರಿ” ಎಂದು ಯೆಹೋವನು ನುಡಿದನು.
21 ಬೋಳುಪರ್ವತದ ಮೇಲೆ ಅಳುವ ಧ್ವನಿಯನ್ನು ನೀವು ಕೇಳಬಹುದು. ಇಸ್ರೇಲಿನ ಜನರು ಕಣ್ಣೀರು ಸುರಿಸಿ ಕರುಣೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಅವರು ತುಂಬಾ ಕೆಟ್ಟುಹೋಗಿ ತಮ್ಮ ದೇವರಾದ ಯೆಹೋವನನ್ನು ಮರೆತರು.
22 ಇದಲ್ಲದೆ ಯೆಹೋವನು, “ಅಪನಂಬಿಗಸ್ತರಾದ ಜನರೇ, ನನ್ನಲ್ಲಿಗೆ ಹಿಂತಿರುಗಿ ಬನ್ನಿ. ನನಗೆ ವಿಶ್ವಾಸದ್ರೋಹ ಮಾಡಿದುದಕ್ಕೆ ನಾನು ಕ್ಷಮಿಸುವೆನು, ಹಿಂತಿರುಗಿ ಬನ್ನಿ” ಎಂದು ಹೇಳುತ್ತಾನೆ. “ಅದಕ್ಕೆ ಜನರು, ‘ಆಗಲಿ ನಿನ್ನಲ್ಲಿಗೆ ಬರುತ್ತೇವೆ. ನೀನೇ ನಮ್ಮ ದೇವರಾದ ಯೆಹೋವನು.
23 ಬೆಟ್ಟದ ಮೇಲೆ ವಿಗ್ರಹಗಳ ಪೂಜೆ ಮಾಡಿದ್ದು ನಮ್ಮ ಮೂರ್ಖತನವಾಯಿತು. ಬೆಟ್ಟಗಳ ಮೇಲಿನ ಎಲ್ಲಾ ಉತ್ಸವಗಳು ಕೇವಲ ಸುಳ್ಳು. ಇಸ್ರೇಲಿನ ರಕ್ಷಣೆ ಖಚಿತವಾಗಿಯೂ ನಮ್ಮ ದೇವರಾದ ಯೆಹೋವನಿಂದ ಮಾತ್ರ ಸಾಧ್ಯ.
24 ನಮ್ಮ ಪೂರ್ವಿಕರು ಸಂಪಾದಿಸಿದ್ದೆಲ್ಲವನ್ನು ನೈವೇದ್ಯದಲ್ಲಿ ಸುಳ್ಳುದೇವರಾದ ಬಾಳನು ತಿಂದುಬಿಟ್ಟನು. ನಮ್ಮ ಬಾಲ್ಯದಿಂದಲೂ ಹೀಗಾಗುತಾ ಬಂದಿದೆ. ಭಯಂಕರವಾದ ಆ ಸುಳ್ಳು ದೇವರು ನಮ್ಮ ಪೂರ್ವಿಕರ ದನಕುರಿಗಳನ್ನೂ ಅವರ ಗಂಡುಹೆಣ್ಣುಮಕ್ಕಳನ್ನೂ ಬಲಿ ತೆಗೆದುಕೊಳ್ಳುತ್ತಿರುವನು.
25 ನಾವು ತಂದುಕೊಂಡ ಅವಮಾನದಲ್ಲಿ ಬಿದ್ದಿರೋಣ. ನಮ್ಮ ನಾಚಿಕೆಯು ಕಂಬಳಿಯು ಹೊದಿಸಿದಂತೆ ನಮ್ಮನ್ನು ಮುಚ್ಚಿಬಿಡಲಿ. ನಾವು ನಮ್ಮ ದೇವರಾದ ಯೆಹೋವನ ವಿಷಯದಲ್ಲಿ ಪಾಪಮಾಡಿದ್ದೇವೆ. ನಾವು ಮತ್ತು ನಮ್ಮ ಪೂರ್ವಿಕರು ಪಾಪಮಾಡಿದ್ದೇವೆ. ನಮ್ಮ ಬಾಲ್ಯದಿಂದ ಇಂದಿನವರೆಗೆ ನಾವು ನಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಪಾಲಿಸಲಿಲ್ಲ’ ” ಎಂದು ಮೊರೆಯಿಟ್ಟರು.
×

Alert

×