1
|
ಆಹಾಜನು ಯೋಥಾವುನ ಮಗನು. ಯೋಥಾವುನು ಉಜ್ಜೀಯನ ಮಗನು. ರೆಚೀನ್ ಎಂಬವನು ಅರಾಮ್ಯರ ಅರಸನಾಗಿದ್ದನು. ರೆಮಲ್ಯನ ಮಗನಾದ ಪೆಕಹನು ಇಸ್ರೇಲಿನ ಅರಸನಾಗಿದ್ದನು. ಆಗ ಆಹಾಜನು ಯೆಹೂದದ ಅರಸನಾಗಿದ್ದನು. ರೆಚೀನ್ ಮತ್ತು ಪೆಕಹ ಇವರಿಬ್ಬರೂ ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧಕ್ಕೆ ಹೊರಟರು. ಆದರೆ ಆ ನಗರವನ್ನು ಸೋಲಿಸಲು ಅವರಿಂದಾಗಲಿಲ್ಲ. |
2
|
ದಾವೀದನ ವಂಶದವರಿಗೆ ಒಂದು ಸಂದೇಶವು ಕಳುಹಿಸಲ್ಪಟ್ಟಿತು, “ಅರಾಮ್ಯರ ಸೈನ್ಯ ಮತ್ತು ಎಫ್ರಾಯೀಮ್ಯರ ಸೈನ್ಯ (ಇಸ್ರೇಲ್) ಒಟ್ಟಾಗಿ ಶಿಬಿರ ಹೂಡಿದ್ದಾರೆ” ಎಂಬುದೇ ಆ ಸಂದೇಶ. ಅರಸನಾದ ಆಹಾಜನು ಈ ಸಂದೇಶವನ್ನು ಕೇಳಿದಾಗ, ಅವನೂ ಅವನ ಜನರೂ ಬಹಳವಾಗಿ ಭಯಹಿಡಿದವರಾದರು. ಅಡವಿಯ ಮರಗಳು ಬಿರುಗಾಳಿಗೆ ತತ್ತರಿಸುತ್ತವೋ ಎಂಬಂತೆ ಅವರು ತತ್ತರಿಸಿದರು. |
3
|
ಆಗ ಯೆಹೋವನು ಯೆಶಾಯನಿಗೆ, “ನೀನೂ ನಿನ್ನ ಮಗನಾದ ಶೆಯಾರ್ ಯಾಶೂಬನೂ ಆಹಾಜನ ಬಳಿಗೆ ಹೋಗಿ ಮಾತನಾಡಬೇಕು. ನೀರು ಮೇಲಿನ ಕೊಳಕ್ಕೆ ಸೇರುವ ಸ್ಥಳಕ್ಕೆ ಹೋಗು. ಇದು ಅಗಸನ ಹೊಲಕ್ಕೆ ಹೋಗುವ ಮಾರ್ಗದಲ್ಲಿದೆ. |
4
|
“ಆಹಾಜನಿಗೆ ಹೀಗೆ ಹೇಳು: ‘ಶಾಂತನಾಗಿದ್ದು ಜಾಗ್ರತೆಯಿಂದಿರು. ಭಯಪಡಬೇಡ. ರೆಚೀನ್ ಮತ್ತು ರೆಮಲ್ಯನ ಮಗ ಇವರಿಬ್ಬರೂ ಸೇರಿ ನಿನ್ನನ್ನು ಬೆದರಿಸದಂತೆ ನೋಡಿಕೋ. ಅವರಿಬ್ಬರೂ ಸುಟ್ಟುಹೋದ ಕೋಲಿನಂತಿದ್ದಾರೆ. ಹಿಂದೆ ಅವರು ಬೆಂಕಿಯಿಂದ ಉರಿಯುತ್ತಿದ್ದರು. ಆದರೆ ಈಗ ಅವರು ಕೇವಲ ಹೊಗೆಯಾಡುತ್ತಿದ್ದಾರೆ. ರೆಚೀನ್, ಅರಾಮ್, ಮತ್ತು ರೆಮಲ್ಯನ ಮಗ ಕೋಪಗೊಂಡಿದ್ದಾರೆ. |
5
|
ಅವರು ನಿನ್ನ ವಿರುದ್ಧವಾಗಿ ಕುತಂತ್ರ ನಡಿಸಿದ್ದಾರೆ. |
6
|
ಅವರು, “ನಾವು ಹೋಗಿ ಯೆಹೂದಕ್ಕೆ ವಿರುದ್ಧವಾಗಿ ಯುದ್ಧ ಮಾಡೋಣ. ಯೆಹೂದ ರಾಜ್ಯವನ್ನು ನಾವಿಬ್ಬರೂ ಭಾಗ ಮಾಡಿಕೊಳ್ಳೋಣ ಮತ್ತು ಟಾಬೇಲನ ಮಗನನ್ನು ಯೆಹೂದದ ಹೊಸ ಅರಸನಾಗಿ ಮಾಡೋಣ ಎಂದು ಮಾತಾಡಿಕೊಳ್ಳುತ್ತಿದ್ದಾರೆ.”“‘ |
7
|
ನನ್ನ ಒಡೆಯನಾದ ಯೆಹೋವನು ಹೇಳುವದೇನೆಂದರೆ, “ಅವರ ಕುತಂತ್ರವು ನಡೆಯದು. ಅದು ನೆರವೇರದು. |
8
|
ದಮಸ್ಕದಲ್ಲಿ ರೆಚೀನನು ಅರಸನಾಗಿರುವಷ್ಟು ಸಮಯ ಅದು ನಡೆಯದು. ಎಫ್ರಾಯೀಮ್ (ಇಸ್ರೇಲ್) ಈಗ ಒಂದು ದೇಶವಾಗಿದೆ. ಆದರೆ ಇನ್ನು ಅರವತ್ತೈದು ವರ್ಷಗಳೊಳಗೆ ಎಫ್ರಾಯೀಮ್ ಒಂದು ದೇಶವಾಗಿರದು. |
9
|
ಸಮಾರ್ಯವು ಎಫ್ರಾಯೀಮಿನ ರಾಜಧಾನಿಯಾಗಿರುವಷ್ಟು ಕಾಲ ಮತ್ತು ರೆಮಲ್ಯನ ಮಗನು ಸಮಾರ್ಯದಲ್ಲಿ ಅರಸನಾಗಿರುವಷ್ಟು ಕಾಲ ಅವರ ಯೋಜನೆಗಳು ಕೈಗೂಡುವುದಿಲ್ಲ. ನೀನು ಈ ವಾರ್ತೆಯನ್ನು ನಂಬದಿದ್ದರೆ ಜನರು ನಿನ್ನ ಮಾತನ್ನು ನಂಬದಿರಲಿ.” |
10
|
ಬಳಿಕ ಯೆಹೋವನು ಆಹಾಜನೊಡನೆ ಮಾತನ್ನು ಮುಂದುವರಿಸಿದನು. |
11
|
ಯೆಹೋವನು ಹೇಳಿದ್ದೇನೆಂದರೆ, “ಇವೆಲ್ಲಾ ಸತ್ಯವೆಂದು ಮನದಟ್ಟು ಮಾಡಿಕೊಳ್ಳಲು ಒಂದು ಗುರುತನ್ನು ಕೇಳಿಕೊ. ನಿನಗೆ ಯಾವ ಗುರುತನ್ನು ಬೇಕಾದರೂ ಕೇಳಿಕೊ. ಆ ಗುರುತು ಆಳವಾದ ನರಕದಿಂದ ಬಂದ ಗುರುತಾದರೂ ಸರಿಯೇ ಅಥವಾ ಉನ್ನತವಾದ ಆಕಾಶದಿಂದ ಬಂದ ಗುರುತಾದರೂ ಸರಿಯೇ, ನಿನಗೆ ದಯಪಾಲಿಸುವೆನು” ಎಂದು ಹೇಳಿದನು. |
12
|
ಅದಕ್ಕೆ ಆಹಾಜನು, “ಇದು ಸತ್ಯವೆಂಬುದಕ್ಕೆ ನಾನು ಯಾವ ಗುರುತನ್ನೂ ಕೇಳಲಾರೆ. ನಾನು ಯೆಹೋವನನ್ನು ಪರೀಕ್ಷಿಸುವುದಿಲ್ಲ” ಎಂದು ಹೇಳಿದನು. |
13
|
ಆಗ ಯೆಶಾಯನು ಹೇಳಿದ್ದೇನೆಂದರೆ, “ದಾವೀದನ ಮನೆತನದವರೇ, ಕಿವಿಗೊಟ್ಟು ಕೇಳಿರಿ. ನೀವು ಜನರ ತಾಳ್ಮೆಯನ್ನು ಪರೀಕ್ಷಿಸುತ್ತೀರಿ. ಆದರೆ ಅದು ನಿಮಗೆ ದೊಡ್ಡ ವಿಷಯವಲ್ಲ. ಆದರೆ ಈಗ ನೀವು ನನ್ನ ದೇವರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದೀರಿ. |
14
|
ನನ್ನ ಒಡೆಯನಾದ ದೇವರು ನಿಮ್ಮಗೊಂದು ಗುರುತನ್ನು ಕೊಡುವನು: ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನಿಗೆ ಜನ್ಮ ನೀಡುವಳು. ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವಳು. |
15
|
ಆತನು ಒಳ್ಳೆಯದನ್ನು ಆರಿಸಿಕೊಳ್ಳಲು ಮತ್ತು ಕೆಟ್ಟದ್ದನ್ನು ನಿರಾಕರಿಸಲು ಕಲಿತುಕೊಳ್ಳುವವರೆಗೆ ಮೊಸರನ್ನೂ ಜೇನುತುಪ್ಪವನ್ನೂ ತಿನ್ನುವನು. |
16
|
ಆ ಮಗುವು ಒಳ್ಳೆಯದರ ಬಗ್ಗೆ ಮತ್ತು ಕೆಟ್ಟದ್ದರ ಬಗ್ಗೆ ಕಲಿತುಕೊಳ್ಳುವಷ್ಟು ವಯಸ್ಸಾಗುವ ಮೊದಲೇ ಎಫ್ರಾಯೀಮ್ ದೇಶ ಮತ್ತು ಅರಾಮ್ಯರ ದೇಶ ನಿರ್ಜನವಾಗುವುದು. ನೀವೀಗ, ಆ ಇಬ್ಬರು ಅರಸರಿಗೆ ಭಯಪಡುತ್ತಿದ್ದೀರಿ. |
17
|
“ಆದರೆ ನೀವು ಯೆಹೋವನಿಗೆ ಭಯಪಡುವವರಾಗಿರಬೇಕು. ಯಾಕೆಂದರೆ ಆತನು ನಿಮಗೆ ಸಂಕಟದ ಕಾಲವನ್ನು ತಂದೊಡ್ಡುವನು. ಅದು ಎಫ್ರಾಯೀಮ್ ಯೆಹೂದದಿಂದ ಅಗಲಿಹೋದ ಸಮಯದಲ್ಲಾದ ಸಂಕಂಟದಂತಿರುವುದು. ಆ ಸಂಕಟವು ನಿಮ್ಮ ಜನಗಳಿಗೂ ನಿಮ್ಮ ಪೂರ್ವಿಕರ ಕುಟುಂಬಕ್ಕೂ ಬರುವದು. ದೇವರು ಏನು ಮಾಡುವನು? ಆತನು ಅಶ್ಶೂರದ ರಾಜನನ್ನು ನಿಮಗೆ ವಿರುದ್ಧವಾಗಿ ಯುದ್ಧಕ್ಕೆ ಬರಮಾಡುವನು. |
18
|
“ಆ ಸಮಯದಲ್ಲಿ ಯೆಹೋವನು ನೊಣಗಳನ್ನು ಕರೆಯುವನು. ಆ ನೊಣಗಳು ಈಗ ಈಜಿಪ್ಟಿನ ನದಿಗಳ ಸಮೀಪದಲ್ಲಿವೆ. ಯೆಹೋವನು ದುಂಬಿಗಳನ್ನು ಕರೆಯುವನು. ಆ ದುಂಬಿಗಳು ಈಗ ಅಶ್ಶೂರ್ ದೇಶದಲ್ಲಿವೆ. ಈ ವೈರಿಗಳು ನಿಮ್ಮ ದೇಶಕ್ಕೆ ಬಂದು |
19
|
ಮರುಭೂಮಿಯ ಹಳ್ಳಗಳ ಸಮೀಪದಲ್ಲಿರುವ ಬಂಡೆಯ ಸಂದುಗೊಂದುಗಳಲ್ಲಿಯೂ ನೀರಿನ ಬಾವಿಗಳ ಬಳಿಯಲ್ಲಿರುವ ಮುಳ್ಳುಪೊದೆಗಳಲ್ಲಿಯೂ ಶಿಬಿರ ಹಾಕಿಕೊಳ್ಳುವರು. |
20
|
ಯೆಹೋವನು ಅಶ್ಶೂರದವರ ಮೂಲಕ ಯೆಹೂದವನ್ನು ಶಿಕ್ಷಿಸುವನು. ಆತನು ಅಶ್ಶೂರವನ್ನು ಬಾಡಿಗೆಗೆ ತೆಗೆದುಕೊಂಡ ಕ್ಷೌರಿಕನ ಕತ್ತಿಯಂತೆ ತೆಗೆದುಕೊಂಡು ಯೆಹೂದದ ತಲೆಕೂದಲನ್ನೂ ಕೈಕಾಲುಗಳ ರೋಮವನ್ನೂ ಗಡ್ಡವನ್ನೂ ಬೋಳಿಸಿಬಿಡುವನು. |
21
|
“ಆ ಕಾಲದಲ್ಲಿ ಯಾವನೇ ಆಗಲಿ ಹಸುವನ್ನೂ ಎರಡು ಕುರಿಗಳನ್ನೂ ಸಾಕಿ, |
22
|
ಅವು ಕರೆಯುವ ಹಾಲಿನಿಂದ ಮೊಸರನ್ನು ತಿನ್ನುವನು; ದೇಶದಲ್ಲಿರುವ ಪ್ರತಿಯೊಬ್ಬನೂ ಮೊಸರನ್ನೂ ಜೇನುತುಪ್ಪವನ್ನೂ ತಿಂದು ಜೀವಿಸುವನು. |
23
|
ಒಂದುಸಾವಿರ ದ್ರಾಕ್ಷಾಲತೆಗಳಿರುವ ತೋಟಗಳಿರುತ್ತವೆ. ಪ್ರತಿಯೊಂದು ದ್ರಾಕ್ಷಾಲತೆಯು ಒಂದುಸಾವಿರ ಬೆಳ್ಳಿನಾಣ್ಯಗಳಷ್ಟು ಬೆಲೆಬಾಳುವಂಥದ್ದಾಗಿರುತ್ತದೆ. ಆದರೆ ಅಂಥ ತೋಟಗಳು ಹಣಜಿಗಳಿಂದಲೂ ಮುಳ್ಳುಗಿಡಗಳಿಂದಲೂ ತುಂಬಿಕೊಂಡಿರುವವು. |
24
|
ದೇಶವು ಕಾಡಾಗುವುದರಿಂದ ಜನರು ಬಿಲ್ಲುಬಾಣಗಳೊಡನೆ ಸಂಚರಿಸುವರು. |
25
|
ಒಂದು ಕಾಲದಲ್ಲಿ ಜನರು ಈ ಬೆಟ್ಟಗಳ ಮೇಲೆ ವ್ಯವಸಾಯ ಮಾಡಿ ಬೆಳೆಯನ್ನು ಬೆಳೆಯುತ್ತಿದ್ದರು. ಆದರೆ ಆ ಸಮಯದಲ್ಲಿ ಜನರು ಅಲ್ಲಿಗೆ ಹೋಗುವುದಿಲ್ಲ. ದೇಶವು ಹಣಜಿಯಿಂದಲೂ ಮುಳ್ಳುಗಿಡಗಳಿಂದಲೂ ತುಂಬಿರುವದು. ಆ ಸ್ಥಳಗಳಿಗೆ ದನಕುರಿಗಳು ಮಾತ್ರವೇ ಹೋಗುತ್ತವೆ.” |
Isaiah 7:16 Kannada Language Bible Words basic statistical display
COMING SOON ...