ಯೆಹೋವನು ಹೇಳುವುದೇನೆಂದರೆ: “ಎಲ್ಲರಿಗೂ ನ್ಯಾಯವಂತರಾಗಿರಿ; ಎಲ್ಲರಿಗೂ ಒಳ್ಳೆಯವರಾಗಿರಿ; ಯಾಕೆಂದರೆ ನನ್ನ ರಕ್ಷಣೆಯು ಬೇಗನೆ ಬರಲಿದೆ; ಇಡೀ ಲೋಕಕ್ಕೆಲ್ಲಾ ನನ್ನ ನೀತಿಯು ಬೇಗನೆ ವ್ಯಕ್ತವಾಗುವುದು.
ಯೆಹೂದ್ಯರಲ್ಲದ ಜನರು ಯೆಹೋವನ ಬಳಿಗೆ ಬರುವರು. ಅವರು, “ಯೆಹೋವನು ನಮ್ಮನ್ನು ತನ್ನ ಜನರೊಂದಿಗೆ ಸ್ವೀಕರಿಸುವದಿಲ್ಲ” ಎಂದು ಹೇಳಬಾರದು. ಕಂಚುಕಿಯು, “ನಾನು ಕೆಲಸಕ್ಕೆ ಬಾರದ ಒಣಗಿದ ಮರ.” ಎಂದು ಹೇಳಬಾರದು.
(4-5) ಯಾಕೆಂದರೆ ಯೆಹೋವನು ಹೇಳುವುದೇನೆಂದರೆ: “ಈ ಕಂಚುಕಿಯರಲ್ಲಿ ಕೆಲವರು ಸಬ್ಬತ್ ನಿಯಮವನ್ನು ಅನುಸರಿಸುತ್ತಾರೆ. ಅವರು ನನ್ನ ಇಷ್ಟಪ್ರಕಾರ ನಡೆದುಕೊಳ್ಳುತ್ತಾರೆ; ಅವರು ನನ್ನ ಒಡಂಬಡಿಕೆಗೆ ಸರಿಯಾಗಿ ನಡೆಯುತ್ತಾರೆ. ಆದ್ದರಿಂದ ನಾನು ಅವರಿಗೋಸ್ಕರ ನನ್ನ ಮಂದಿರದಲ್ಲಿ ಸ್ಮಾರಕಸ್ತಂಭ ನೆಡುವೆನು. ನನ್ನ ಪಟ್ಟಣದಲ್ಲಿ ಅವರ ಹೆಸರುಗಳು ಜ್ಞಾಪಕ ಮಾಡಲ್ಪಡುವವು. ಹೌದು, ಆ ಕಂಚುಕಿಗಳಿಗೆ ನಾನು ಮಕ್ಕಳಿಗಿಂತ ಉತ್ತಮವಾದದ್ದನ್ನು ಕೊಡುವೆನು. ಅವರಿಗೆ ನಿತ್ಯಕಾಲಕ್ಕೂ ಇರುವ ಹೆಸರನ್ನು ಕೊಡುವೆನು. ನನ್ನ ಜನರಿಂದ ಅವರನ್ನು ಬೇರ್ಪಡಿಸುವುದಿಲ್ಲ.”
“ಅನ್ಯದೇಶದವರಲ್ಲಿ ಕೆಲವರು ಯೆಹೋವನನ್ನು ಅನುಸರಿಸುವರು. ಆತನನ್ನು ಸೇವಿಸಿ ಆತನ ನಾಮವನ್ನು ಪ್ರೀತಿಸುವರು. ಅವರು ಯೆಹೋವನ ಸೇವಕರಾಗುವುದಕ್ಕಾಗಿ ಆತನೊಂದಿಗೆ ಸೇರಿಕೊಳ್ಳುವರು. ಸಬ್ಬತ್‌ದಿವಸವನ್ನು ಆರಾಧನೆ ಮಾಡುವ ವಿಶೇಷ ದಿವಸವೆಂದು ನೆನಸಿ ಒಡಂಬಡಿಕೆಯನ್ನು ಪರಿಪಾಲಿಸುವರು.
ನಾನು ಅವರನ್ನು ನನ್ನ ಪವಿತ್ರಪರ್ವತಕ್ಕೆ ತರುವೆನು: ನನ್ನ ಪ್ರಾರ್ಥನಾಲಯದಲ್ಲಿ ಅವರನ್ನು ಸಂತೋಷಪಡಿಸುವೆನು. ಅವರು ಅರ್ಪಿಸುವ ಸರ್ವಾಂಗಹೋಮಗಳನ್ನೂ ಯಜ್ಞಗಳನ್ನೂ ನಾನು ಮೆಚ್ಚಿಕೊಳ್ಳುವೆನು. ಯಾಕೆಂದರೆ ನನ್ನ ಆಲಯವು ಎಲ್ಲಾ ಜನಾಂಗದವರಿಗೆ ಪ್ರಾರ್ಥನಾಲಯವೆಂದು ಕರೆಯಲ್ಪಡುವುದು.”
ಇದು ನನ್ನ ಒಡೆಯನಾದ ಯೆಹೋವನ ಮಾತುಗಳು. ಇಸ್ರೇಲ್ ಜನರು ತಮ್ಮ ದೇಶದಿಂದ ಹೊರಗೆ ಹಾಕಲ್ಪಟ್ಟರು. ಆದರೆ ಯೆಹೋವನು ಅವರನ್ನು ಮತ್ತೆ ಬರಮಾಡುತ್ತಾನೆ. ಆತನು, “ಈ ಜನರನ್ನು ನಾನು ಮತ್ತೆ ಒಟ್ಟುಗೂಡಿಸುತ್ತೇನೆ” ಎಂದು ಹೇಳುತ್ತಾನೆ.
ಕಾವಲುಗಾರರೆಲ್ಲಾ ಕುರುಡರಾಗಿದ್ದಾರೆ. ತಾವು ಮಾಡುತ್ತಿರುವುದು ಅವರಿಗೆ ತಿಳಿಯದು. ಅವರು ಬೊಗಳದ ನಾಯಿಗಳಂತಿರುವರು. ಅವುಗಳು ನೆಲದ ಮೇಲೆ ಬಿದ್ದುಕೊಂಡು ಮಲಗುವವು. ಅವುಗಳಿಗೆ ಮಲಗುವುದೆಂದರೆ ತುಂಬಾ ಪ್ರೀತಿ.
ಅವರು ಹಸಿದ ನಾಯಿಗಳಂತಿದ್ದಾರೆ. ಅವರು ಎಂದಿಗೂ ತೃಪ್ತಿ ಹೊಂದುವವರಲ್ಲ. ಕುರುಬರಿಗೆ ತಾವು ಮಾಡುವುದೇ ತಿಳಿಯದು. ಅವರು ತಮ್ಮ ಕುರಿಗಳ ಹಾಗೆ ದಾರಿತಪ್ಪಿದ್ದಾರೆ. ಅವರೆಲ್ಲಾ ಅತ್ಯಾಶೆಯುಳ್ಳವರು; ತಮ್ಮನ್ನು ತೃಪ್ತಿಪಡಿಸುವದೇ ಅವರ ಕೆಲಸ.
ಅವರು ಬಂದು, “ನಾನು ಸ್ವಲ್ಪ ದ್ರಾಕ್ಷಾರಸ ಕುಡಿಯುತ್ತೇನೆ. ಅಥವಾ ನಾನು ಸ್ವಲ್ಪ ಮದ್ಯವನ್ನು ಕುಡಿಯುತ್ತೇನೆ. ನಾನು ನಾಳೆಯೂ ಹೀಗೆ ಮಾಡುವೆನು. ನಾನು ಇನ್ನೂ ಹೆಚ್ಚಾಗಿ ಕುಡಿಯುವೆನು” ಎಂದು ಹೇಳುವರು.