ಯೆಹೋವನು ಹೀಗೆನ್ನುತ್ತಾನೆ: “ಈ ಮಕ್ಕಳನ್ನು ನೋಡಿರಿ, ಅವರು ನನಗೆ ವಿಧೇಯರಾಗುತ್ತಿಲ್ಲ. ಅವರು ಯೋಜನೆಗಳನ್ನು ತಯಾರಿಸುತ್ತಾರೆ, ಆದರೆ ನನ್ನಿಂದ ಸಹಾಯವನ್ನು ಕೇಳುತ್ತಿಲ್ಲ. ಅವರು ಬೇರೆ ರಾಜ್ಯಗಳೊಂದಿಗೆ ಒಪ್ಪಂದ ಮಾಡುತ್ತಾರೆ; ಆದರೆ ನನ್ನ ಆತ್ಮವು ಅದಕ್ಕೆ ಒಪ್ಪುತ್ತಿಲ್ಲ. ಈ ಜನರು ತಮ್ಮ ಪಾಪಗಳಿಗೆ ಇನ್ನೂ ಹೆಚ್ಚು ಪಾಪವನ್ನು ಕೂಡಿಸಿಟ್ಟುಕೊಳ್ಳುತ್ತಾರೆ.
ಈ ಮಕ್ಕಳು ಈಜಿಪ್ಟಿಗೆ ಸಹಾಯಕ್ಕಾಗಿ ಹೋಗುತ್ತಾರೆ, ಆದರೆ ಅವರು ಹಾಗೆ ಮಾಡುವದು ಸರಿಯೋ ಎಂದು ನನ್ನ ಹತ್ತಿರ ಕೇಳುವದಿಲ್ಲ. ಫರೋಹನು ತಮ್ಮನ್ನು ರಕ್ಷಿಸುತ್ತಾನೆಂದು ಅವರು ತಿಳಿದಿದ್ದಾರೆ. ಈಜಿಪ್ಟೇ ತಮ್ಮನ್ನು ಕಾಪಾಡಬೇಕು ಎಂಬುದು ಅವರ ಇಷ್ಟ.
ಆದರೆ ಅವರು ನಿರಾಶರಾಗುವರು. ತಮಗೆ ಸಹಾಯ ಮಾಡಲಶಕ್ಯವಾದ ರಾಜ್ಯಗಳಿಗೆ ಸಹಾಯಕ್ಕಾಗಿ ಹೋಗಿದ್ದಾರೆ. ಈಜಿಪ್ಟು, ನಿಷ್ಪ್ರಯೋಜಕವಾಗಿದೆ. ಅದು ಸಹಾಯ ಮಾಡದು. ಅದು ನಾಚಿಕೆ, ಅವಮಾನಗಳನ್ನು ಕೊಡುವದು.”
ನೆಗೆವ್‌ನಲ್ಲಿರುವ ಪ್ರಾಣಿಗಳ ದುಃಖಕರವಾದ ಸಂದೇಶ: ನೆಗೆವ್ ಬಹು ಅಪಾಯಕಾರಿ ಸ್ಥಳ. ಸಿಂಹ, ವಿಷದ ಹಾವುಗಳು, ವೇಗವಾಗಿ ಚಲಿಸುವ ಹಾವುಗಳಿಂದ ಅದು ತುಂಬಿದೆ. ಆದರೆ ಕೆಲವರು ನೆಗೆವ್ ಮೂಲಕ ಪ್ರಯಾಣ ಮಾಡಿ ಈಜಿಪ್ಟಿಗೆ ಹೋಗುತ್ತಾರೆ. ಅವರು ತಮ್ಮ ಸಂಪತ್ತನ್ನೆಲ್ಲಾ ಕತ್ತೆಯ ಮೇಲೆ ಹೊರಿಸಿರುತ್ತಾರೆ. ಅವರು ತಮ್ಮ ಧನವನ್ನು ಒಂಟೆಯ ಮೇಲೆ ಹೊರಿಸಿರುತ್ತಾರೆ. ತಮಗೆ ಸಹಾಯ ಮಾಡಲಾರದ ದೇಶದ ಮೇಲೆ ಜನರು ಭರವಸವಿಟ್ಟಿದ್ದಾರೆ ಎಂಬುದೇ ಇದರರ್ಥ.
ಅವರು ಪ್ರವಾದಿಗಳಿಗೆ, “ನಾವು ಮಾಡಬೇಕಿರುವ ಕಾರ್ಯಗಳ ಬಗ್ಗೆ ದೈವೋಕ್ತಿ ನುಡಿಯಬೇಡಿ, ನಮಗೆ ಸತ್ಯವನ್ನು ತಿಳಿಸಬೇಡಿ. ನಮಗೊಪ್ಪುವ ಮನರಂಜನೆಯ ಮಾತುಗಳನ್ನಾಡಿ. ನಮಗೋಸ್ಕರ ಒಳ್ಳೆಯ ಸಂಗತಿಗಳನ್ನೇ ನಿಮ್ಮ ದರ್ಶನಗಳಲ್ಲಿ ನೋಡಿರಿ.
ಇಸ್ರೇಲಿನ ಪರಿಶುದ್ಧನು ಹೇಳುವುದೇನೆಂದರೆ, “ಯೆಹೋವನಿಂದ ಬರುವ ಸಂದೇಶವನ್ನು ಅಂಗೀಕರಿಸಲು ನೀವು ನಿರಾಕರಿಸುತ್ತೀರಿ. ನೀವು ನಿಮ್ಮ ಯುದ್ಧಗಳಿಂದಲೂ ಸುಳ್ಳಾಡುವದರಿಂದಲೂ ನಿಮಗೆ ಸಹಾಯ ಸಿಗುವದೆಂದು ಭರವಸೆಯಿಂದಿದ್ದೀರಿ.
ಒಂದು ದೊಡ್ಡ ಆವೆಮಣ್ಣಿನ ಭರಣಿ ನಚ್ಚುನೂರಾಗಿ ಹೋಗುವಂತೆ ನೀವಿದ್ದೀರಿ. ಅದರ ತುಂಡುಗಳಿಂದ ಏನೂ ಪ್ರಯೋಜನವಿಲ್ಲ. ಆ ಭರಣಿಯ ಚೂರಿನಿಂದ ಸುಡುವ ಕಲ್ಲಿದ್ದಲನ್ನು ಹೊರತೆಗೆಯಲು ಅಥವಾ ಅದರಿಂದ ನೀರು ಸೇದಲು ಆಗುವದಿಲ್ಲ.”
ನನ್ನ ಒಡೆಯನೂ ದೇವರೂ ಇಸ್ರೇಲಿನ ಪರಿಶುದ್ಧನೂ ಹೇಳುವುದೇನೆಂದರೆ, “ನೀವು ನನ್ನ ಕಡೆಗೆ ತಿರುಗಿಕೊಳ್ಳುವುದಾದರೆ ನೀವು ರಕ್ಷಿಸಲ್ಪಡುವಿರಿ. ನೀವು ತಾಳ್ಮೆಯಿಂದ ನನ್ನ ಮೇಲೆ ಭರವಸೆಯಿಟ್ಟರೆ, ನೀವು ಬಲವನ್ನು ಹೊಂದುವಿರಿ.” ಆದರೆ ಹಾಗೆ ಮಾಡಲು ನಿಮಗೆ ಇಷ್ಟವಿಲ್ಲ.
ನೀವು, “ನಮಗೆ ಸಹಾಯ ಬೇಡ. ಓಡಿಹೋಗಲು ಕುದುರೆಗಳು ಬೇಕು” ಎಂದು ಹೇಳುವಿರಿ. ಅದು ಸರಿಯಾದ ಮಾತು. ನೀವು ಕುದುರೆಗಳ ಮೂಲಕವೇ ಓಡುವಿರಿ. ಆದರೆ ಶತ್ರುಗಳು ನಿಮ್ಮನ್ನು ಹಿಂದಟ್ಟುವರು. ಅವರು ನಿಮ್ಮ ಕುದುರೆಗಳಿಗಿಂತ ವೇಗಶಾಲಿಗಳಾಗಿದ್ದಾರೆ.
ಶತ್ರುವಿನಲ್ಲಿ ಒಬ್ಬನು ಬೆದರಿಸಿದರೆ ನಿಮ್ಮಲ್ಲಿರುವ ಸಾವಿರ ಮಂದಿ ಓಡುವರು. ಐದು ಮಂದಿ ವೈರಿಗಳು ಬೆದರಿಕೆ ಹಾಕಿದರೆ ನೀವೆಲ್ಲರೂ ಅವರ ಮುಂದಿನಿಂದ ಓಡಿಹೋಗುವಿರಿ. ಕೊನೆಗೆ ನಿಮ್ಮ ಸೈನ್ಯದಲ್ಲಿ ಉಳಿಯುವ ವಸ್ತು ಯಾವದೆಂದರೆ ಬೆಟ್ಟದ ಮೇಲೆ ನೆಟ್ಟಿರುವ ನಿಮ್ಮ ಧ್ವಜಸ್ತಂಭವೊಂದೇ.
ಯೆಹೋವನು ನಿಮಗೆ ಕರುಣೆ ತೋರಿಸಲು ಇಷ್ಟಪಡುತ್ತಾನೆ. ಆತನು ನಿಮ್ಮನ್ನು ಎದುರು ನೋಡುತ್ತಿದ್ದಾನೆ. ಆತನು ಎದ್ದು ನಿಮ್ಮನ್ನು ಸಂತೈಸಲು ಬಯಸುತ್ತಾನೆ. ದೇವರಾದ ಯೆಹೋವನು ನ್ಯಾಯವಂತನಾಗಿದ್ದಾನೆ. ಆತನ ಸಹಾಯವನ್ನು ನಿರೀಕ್ಷಿಸುವವರೆಲ್ಲರೂ ಆಶೀರ್ವದಿಸಲ್ಪಡುವರು.
ಚೀಯೋನ್ ಪರ್ವತದಲ್ಲಿರುವ ಜೆರುಸಲೇಮಿನಲ್ಲಿ ಯೆಹೋವನ ಜನರು ವಾಸಿಸುವರು. ನೀವು ಇನ್ನು ಮೇಲೆ ಅಳುವದಿಲ್ಲ. ಯೆಹೋವನು ನಿಮ್ಮ ಅಳುವಿಕೆಯನ್ನು ನೋಡಿ ನಿಮ್ಮನ್ನು ಆದರಿಸುವನು. ಆತನು ನಿಮ್ಮ ಮೊರೆಯನ್ನು ಕೇಳಿ ನಿಮಗೆ ಸಹಾಯಿಸುವನು.
ಹಿಂದಿನ ದಿವಸಗಳಲ್ಲಿ ನನ್ನ ಒಡೆಯನು ನಿಮಗೆ ದುಃಖವನ್ನೂ ಬೇನೆಯನ್ನೂ ಕೊಟ್ಟನು. ಅದು ನಿಮಗೆ ದಿನನಿತ್ಯ ತಿನ್ನುವಂಥ ರೊಟ್ಟಿಯಂತೆಯೂ ನೀರಿನಂತೆಯೂ ಇತ್ತು. ಆದರೆ ನಿಮ್ಮ ಬೋಧಕನಾದ ದೇವರು ನಿಮ್ಮಿಂದ ಎಂದಿಗೂ ಅಡಗಿಕೊಂಡಿರಲಾರನು. ನಿಮ್ಮ ಬೋಧಕನನ್ನು ನೀವು ಕಣ್ಣಾರೆ ಕಾಣುವಿರಿ.
ಆದರೆ ನೀವು ತಪ್ಪು ಕಾರ್ಯಮಾಡಿದರೆ, ದುಷ್ಟತ್ವದಲ್ಲಿ ಜೀವಿಸಿದರೆ ನಿಮ್ಮ ಹಿಂದಿನಿಂದ ಒಂದು ಸ್ವರ, “ಇದು ಸರಿಯಾದ ಮಾರ್ಗ. ಈ ಮಾರ್ಗದಲ್ಲಿ ಮುಂದುವರಿಯಿರಿ” ಎಂದು ಹೇಳುವುದು ಕೇಳಿಸುವದು.
ನಿಮ್ಮಲ್ಲಿ ಬೆಳ್ಳಿಬಂಗಾರಗಳ ವಿಗ್ರಹಗಳಿವೆ. ಆ ಸುಳ್ಳುದೇವರುಗಳು ನಿಮ್ಮನ್ನು ಹೊಲೆಯನ್ನಾಗಿ ಮಾಡಿವೆ. ನೀವು ಅವುಗಳ ಸೇವೆಯನ್ನು ನಿಲ್ಲಿಸುವಿರಿ. ಅವು ಹೊಲಸು ವಸ್ತುಗಳೋ ಎಂಬಂತೆ ಅವುಗಳನ್ನೆತ್ತಿ ಬಿಸಾಡಿಬಿಡುವಿರಿ.
ಆ ಸಮಯದಲ್ಲಿ ಯೆಹೋವನು ನಿಮಗಾಗಿ ಮಳೆ ಸುರಿಸುವನು. ನೀವು ಭೂಮಿಯಲ್ಲಿ ಬೀಜಬಿತ್ತಿದ್ದಾಗ ಫಸಲನ್ನು ಹೊಂದುವಿರಿ. ನಿಮಗೆ ಬಹುದೊಡ್ಡ ಸುಗ್ಗಿ ಆಗುವದು. ಹೊಲದಲ್ಲಿ ನಿಮ್ಮ ಪಶುಗಳಿಗೆ ಬೇಕಾದಷ್ಟು ಹುಲ್ಲು ಇರುವದು. ಮೇಯಲು ನಿಮ್ಮ ಕುರಿಗಳಿಗೆ ಬೇಕಾದಷ್ಟು ಬಯಲಿವೆ.
ಆ ಸಮಯದಲ್ಲಿ ಚಂದ್ರನ ಪ್ರಕಾಶವು ಸೂರ್ಯನಂತಿರುವದು. ಸೂರ್ಯನ ಪ್ರಕಾಶವು ಈಗ ಇರುವದಕ್ಕಿಂತ ಏಳರಷ್ಟು ಹೆಚ್ಚಾಗಿರುವದು. ಸೂರ್ಯನ ಒಂದು ದಿವಸದ ಬೆಳಕು ಒಂದು ವಾರದ ಬೆಳಕಿನಷ್ಟಿರುವದು. ಯೆಹೋವನು ತನ್ನ ಮುರಿದುಹೋದ ಜನರಿಗೆ ಆದ ಗಾಯದ ಪೆಟ್ಟುಗಳನ್ನು ಗುಣಪಡಿಸುವಾಗ ಇವೆಲ್ಲಾ ಸಂಭವಿಸುತ್ತವೆ.
ಇಗೋ, ಯೆಹೋವನ ನಾಮವು ಬಹುದೂರದಿಂದ ಬರುವದು. ಆತನ ಕೋಪವು ದಟ್ಟವಾದ ಹೊಗೆಯೊಂದಿಗೆ ಇರುವ ಬೆಂಕಿಯೋಪಾದಿಯಲ್ಲಿರುವದು. ಯೆಹೋವನ ಬಾಯಿ ಕೋಪದಿಂದಲೂ ನಾಲಿಗೆಯು ಸುಡುವ ಬೆಂಕಿಯಂತೆಯೂ ಇರುವದು.
ಆತನ ಶ್ವಾಸವು (ಆತ್ಮ) ಒಂದು ಮಹಾನದಿಯಂತಿರುವದು. ಅದರ ನೀರು ಕುತ್ತಿಗೆಯ ತನಕ ಏರುವದು. ಯೆಹೋವನು ಜನಾಂಗಗಳಿಗೆ ನ್ಯಾಯತೀರಿಸುವನು. ಅವುಗಳನ್ನು ಜರಡಿಯಿಂದ ಜಾಲಾಡಿಸುವನು. ಯೆಹೋವನು ಅವುಗಳನ್ನು ನಿಯಂತ್ರಿಸುವನು. ಅದು ಪ್ರಾಣಿಗಳನ್ನು ನಿಯಂತ್ರಿಸುವ ಬಾಯಿಯಲ್ಲಿ ಹಾಕುವ ಕಡಿವಾಣದಂತಿರುವದು.
ಆ ಸಮಯದಲ್ಲಿ ನೀವು ಹರ್ಷಗಾನ ಹಾಡುವಿರಿ. ಅದು ಹಬ್ಬದ ರಾತ್ರಿಯ ಸಮಯದಂತಿರುವದು. ದೇವರ ಪರ್ವತದಲ್ಲಿ ನಡೆಯುತ್ತಿರುವಾಗ ನೀವು ಅತ್ಯಂತ ಸಂತೋಷಪಡುವಿರಿ. ಇಸ್ರೇಲಿನ ಬಂಡೆಯಾಗಿರುವ ಯೆಹೋವನನ್ನು ಆರಾಧಿಸಲು ಹೋಗುವಾಗ ಕೊಳಲಿನ ಗಾನವನ್ನು ಕೇಳಿ ಸಂತೋಷಿಸುವಿರಿ.
ಯೆಹೋವನು ತನ್ನ ಮಹಾಸ್ವರವನ್ನು ಜನರು ಕೇಳುವಂತೆ ಮಾಡುವನು. ತನ್ನ ಸಾಮರ್ಥ್ಯದ ಬಾಹುವು ಕೋಪದಿಂದ ನಡುಗುವದನ್ನು ಜನರು ನೋಡುವಂತೆ ಮಾಡುವನು. ಆ ಬಾಹುವು ಎಲ್ಲವನ್ನು ಸುಡುವ ದೊಡ್ಡ ಅಗ್ನಿಯಂತಿರುವದು. ಯೆಹೋವನ ಶಕ್ತಿಯು ಆಲಿಕಲ್ಲಿನಿಂದಲೂ ಮಳೆಯಿಂದಲೂ ಕೂಡಿರುವ ಬಿರುಗಾಳಿಯಂತಿರುವುದು.
ಬಹುಕಾಲದವರೆಗೆ ಅಗ್ನಿಕುಂಡ [*ಅಗ್ನಿಕುಂಡ ಮೂಲ: ತೋಫೆತ್] ಸಿದ್ಧವಾಗಿತ್ತು. ಅದು ರಾಜನಿಗಾಗಿ ಸಿದ್ಧವಾಗಿದೆ. ಅದು ಆಳವಾಗಿಯೂ ಅಗಲವಾಗಿಯೂ ಮಾಡಲ್ಪಟ್ಟಿದೆ. ಅಲ್ಲಿ ಒಂದು ದೊಡ್ಡ ಕಟ್ಟಿಗೆಯ ರಾಶಿಯೂ ಬೆಂಕಿಯೂ ಇದೆ ಮತ್ತು ಯೆಹೋವನ ಬಾಯುಸಿರು ಗಂಧಕದ ಪ್ರವಾಹದಂತೆ ಬಂದು ಎಲ್ಲವನ್ನು ನಾಶಮಾಡುವದು.