ನಮ್ಮ ಆತ್ಮವು ನಿನ್ನೊಂದಿಗೆ ರಾತ್ರಿಯಲ್ಲಿರಲು ಆಶಿಸುತ್ತದೆ. ನಮ್ಮೊಳಗಿರುವ ಆತ್ಮವು ನಿನ್ನ ಸಹವಾಸವನ್ನು ಬಯಸುತ್ತದೆ. ಹೊಸ ದಿವಸಗಳ ಮುಂಜಾನೆಯಲ್ಲಿ ನಿನ್ನೊಂದಿಗಿರಲು ಆಶಿಸುತ್ತದೆ. ನಿನ್ನ ನ್ಯಾಯವು ಈ ಭೂಮಿಗೆ ಬಂದಾಗ ಜನರು ಜೀವನದ ಸತ್ಯಮಾರ್ಗವನ್ನು ಅರಿಯುವರು.
ದುಷ್ಟರಿಗೆ ದಯೆತೋರಿಸಿದರೆ ಅವರು ಸುಕಾರ್ಯಗಳನ್ನು ಮಾಡಲು ಕಲಿಯುವುದಿಲ್ಲ. ದುಷ್ಟರು ಯಥಾರ್ಥರ ಲೋಕದಲ್ಲಿ ಜೀವಿಸಿದರೂ ಅವರು ದುಷ್ಕೃತ್ಯಗಳನ್ನೇ ಮಾಡುವರು. ಆ ದುಷ್ಟರು ಯೆಹೋವನ ಮಹತ್ವವನ್ನು ಎಂದೂ ಗಮನಿಸಲಾರರು.
ಆದರೆ ದೇವರೇ, ನೀನು ಅವರನ್ನು ಶಿಕ್ಷಿಸಿದರೆ ಅವರು ಅದನ್ನು ನೋಡುವರು. ನಿನ್ನ ಜನರ ಮೇಲೆ ನಿನಗಿರುವ ಗಾಢಪ್ರೀತಿಯನ್ನು ಆ ದುಷ್ಟಜನರು ನೋಡಲಿ. ಆಗ ಅವರು ಅವಮಾನ ಹೊಂದುವರು. ನಿನ್ನ ಶತ್ರುಗಳು ತಮ್ಮ ದುಷ್ಟತನದ ಬೆಂಕಿಯಲ್ಲಿಯೇ ಸುಟ್ಟುಹೋಗುವರು.
ಯೆಹೋವನೇ, ನೀನೇ ನಮ್ಮ ದೇವರು. ಆದರೆ ಹಿಂದಿನ ಕಾಲದಲ್ಲಿ ನಾವು ಇತರ ಪ್ರಭುಗಳನ್ನು ಅನುಸರಿಸಿದೆವು. ನಾವು ನಮ್ಮ ಒಡೆಯರುಗಳಿಗೆ ಸೇರಿದ್ದೆವು. ಆದರೆ ಈಗ ಜನರು ಒಂದೇ ಹೆಸರನ್ನು, ಅಂದರೆ ನಿನ್ನ ಹೆಸರನ್ನೇ ನೆನಪುಮಾಡಲಿ.
ಇತರ ದೇವರುಗಳಿಗೆ ಜೀವವಿಲ್ಲ. ಪ್ರೇತಗಳು ಸತ್ತವರೊಳಗಿಂದ ಏಳುವದಿಲ್ಲ. ನೀನು ಅವುಗಳನ್ನು ನಾಶಮಾಡಲು ತೀರ್ಮಾನಿಸಿದೆ. ಅದರ ಬಗ್ಗೆ ನಮಗೆ ನೆನಪು ಹುಟ್ಟಿಸುವ ಎಲ್ಲಾ ವಿಚಾರಗಳನ್ನು ನೀನು ನಾಶಮಾಡಿದೆ.
ಅದೇ ರೀತಿಯಲ್ಲಿ ನಾವು ನೋವನ್ನು ಅನುಭವಿಸುತ್ತೇವೆ. ನಾವು ಹೆರುವದು ಕೇವಲ ಗಾಳಿಯನ್ನೇ. ನಾವು ಈ ಲೋಕದೊಳಗೆ ಹೊಸಜೀವಿಗಳನ್ನು ನಿರ್ಮಿಸುವದಿಲ್ಲ. ನಾವು ದೇಶಕ್ಕೆ ರಕ್ಷಣೆಯನ್ನು ತರುವದಿಲ್ಲ.
ಆದರೆ ಯೆಹೋವನು ಹೇಳುವುದೇನೆಂದರೆ, “ನಿನ್ನ ಜನರು ಸತ್ತಿದ್ದಾರೆ. ಆದರೆ ಅವರು ಮತ್ತೆ ಬದುಕುವರು. ನನ್ನ ಜನರ ದೇಹಗಳು ಸತ್ತವರೊಳಗಿಂದ ಏಳುವವು. ಭೂಮಿಯ ಮೇಲೆ ಸತ್ತಿರುವ ಜನರೇ, ಎದ್ದುನಿಂತು ಸಂತೋಷಿಸಿರಿ. ನಿಮ್ಮನ್ನು ಆವರಿಸಿದ ಮಂಜು ಮುಂಜಾನೆಯ ಬೆಳಕಿನಂತೆ ಪ್ರಕಾಶಿಸುತ್ತದೆ. ಭೂಮಿಯು ತನ್ನಲ್ಲಿರುವ ಸತ್ತವರನ್ನು ಒಪ್ಪಿಸಿಕೊಡುವಾಗ ಪ್ರಾರಂಭವಾಗುವ ಹೊಸ ದಿನವನ್ನು ಅದು ಸೂಚಿಸುವದು.”
ಇಗೋ, ಈ ಲೋಕದ ಜನರು ಮಾಡಿದ ಪಾಪಕೃತ್ಯಗಳಿಗೆ ನ್ಯಾಯತೀರಿಸಲು ಯೆಹೋವನು ತನ್ನ ಸ್ಥಳದಿಂದ ಎದ್ದಿದ್ದಾನೆ. ಭೂಮಿಯು ತನ್ನಲ್ಲಿರುವ ರಕ್ತವನ್ನು ತೋರಿಸುವದು. ಭೂಮಿಯು ಇನ್ನುಮುಂದೆ ಸತ್ತವರನ್ನು ಮರೆಮಾಡುವುದಿಲ್ಲ.