ಯೆಹೋವನೇ, ನೀನೇ ನನ್ನ ದೇವರು. ನಿನ್ನನ್ನು ಗೌರವಿಸಿ ನಿನ್ನ ನಾಮವನ್ನು ಸ್ತುತಿಸುವೆನು. ನೀನು ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿರುವೆ. ಬಹಳ ಕಾಲದ ಹಿಂದೆ ನೀನು ಹೇಳಿರುವ ವಿಷಯಗಳು ಸತ್ಯವೇ ಸರಿ. ನೀನು ಮುಂತಿಳಿಸಿದಂತೆಯೇ ಎಲ್ಲವೂ ಸಂಭವಿಸಿದವು.
ನೀನು ವಿದೇಶದ ಪಟ್ಟಣವನ್ನು ಕೆಡವಿಹಾಕಿರುವೆ. ಆ ಪಟ್ಟಣವು ಮಹಾಗೋಡೆಗಳಿಂದ ಸಂರಕ್ಷಿಸಲ್ಪಟ್ಟದ್ದಾಗಿತ್ತು. ಆದರೆ ಈಗ ಅದು ಕೇವಲ ಕಲ್ಲುಗಳ ರಾಶಿ. ಅರಮನೆಯು ಕೆಡವಲ್ಪಟ್ಟಿದೆ. ಅದನ್ನು ತಿರುಗಿ ಕಟ್ಟಲು ಸಾಧ್ಯವೇ ಇಲ್ಲ.
ಯೆಹೋವನೇ, ನೀನೇ ನಮ್ಮ ಆಶ್ರಯವು. ಬಡವರಿಗೆ ನೀನೇ ಆಧಾರ. ಅವರ ಸಮಸ್ಯೆಗಳು ಅವರನ್ನು ಕಷ್ಟಕ್ಕೆ ಗುರಿಪಡಿಸುವವು. ಆದರೆ ನೀನು ಅವರನ್ನು ಸಂರಕ್ಷಿಸುವೆ. ಯೆಹೋವನೇ, ಒಂದು ಮನೆಯ ಜನರನ್ನು ಪ್ರವಾಹದಿಂದಲೂ, ಬಿಸಿಲಿನ ತಾಪದಿಂದಲೂ ಕಾಪಾಡುವಂತೆ ನೀನಿರುವೆ. ಮುಂದಿನ ತೊಂದರೆಗಳು ಬಿರುಗಾಳಿಯಂತೆಯೂ ಮಳೆಯಂತೆಯೂ ಇವೆ. ಮಳೆಯು ಗೋಡೆಗೆ ಬಡಿದು ಕೆಳಗೆ ಇಳಿಯುವದು. ಆದರೆ ಮನೆಯೊಳಗಿರುವವರಿಗೆ ಹಾನಿಯೇ ಆಗದು.
ವೈರಿಯು ಆರ್ಭಟಿಸುತ್ತಾ ಗದ್ದಲ ಮಾಡುತ್ತಾನೆ. ಆ ಭಯಂಕರ ಶತ್ರುವು ಯುದ್ಧಕ್ಕೆ ಬಾ ಎಂದು ಸವಾಲು ಹಾಕುತ್ತಾನೆ. ಆದರೆ ದೇವರೇ, ನೀನು ಅವನನ್ನು ತಡೆಯುವೆ. ಬೇಸಿಗೆ ಕಾಲದಲ್ಲಿ ಮರುಭೂಮಿಯಲ್ಲಿರುವ ಸಸಿಗಳು ಬಾಡಿಹೋಗಿ ನೆಲದ ಮೇಲೆ ಬಿದ್ದುಹೋಗುವವು. ಅದೇ ರೀತಿಯಲ್ಲಿ ನೀನು ವೈರಿಯನ್ನು ಸೋಲಿಸಿ ಅವನು ಮೊಣಕಾಲೂರುವಂತೆ ಮಾಡುವೆ. ಕಾರ್ಮುಗಿಲು ಬೇಸಿಗೆಯ ತಾಪವನ್ನು ನಿವಾರಿಸುವದು. ಅದೇ ರೀತಿಯಲ್ಲಿ ನೀನು ಶತ್ರುವಿನ ಆರ್ಭಟವನ್ನು ನಿಲ್ಲಿಸುವೆ.
ಆದರೆ ಮರಣವು ಎಂದೆಂದಿಗೂ ನಾಶಮಾಡಲ್ಪಡುವದು. ನನ್ನ ಒಡೆಯನಾಗಿರುವ ಯೆಹೋವನು ಪ್ರತೀ ಮುಖದಲ್ಲಿರುವ ಕಣ್ಣೀರನ್ನು ಒರೆಸುವನು. ಹಿಂದೆ ಆತನ ಜನರೆಲ್ಲಾ ದುಃಖಕ್ಕೆ ಒಳಗಾಗಿದ್ದರು. ಆದರೆ ದೇವರು ಆ ದುಃಖವನ್ನು ಈ ಭೂಮಿಯಿಂದಲೇ ತೆಗೆದುಹಾಕುವನು. ಇವೆಲ್ಲಾ ಯೆಹೋವನು ಹೇಳಿದಂತೆಯೇ ಸಂಭವಿಸುವದು.
ಆ ಸಮಯದಲ್ಲಿ ಜನರು, “ನಮ್ಮ ದೇವರು ಇಲ್ಲಿದ್ದಾನೆ. ಆತನಿಗಾಗಿಯೇ ನಾವು ಕಾಯುತ್ತಿದ್ದೆವು. ಆತನು ನಮ್ಮನ್ನು ರಕ್ಷಿಸಲು ಬಂದಿದ್ದಾನೆ. ನಾವು ನಮ್ಮ ದೇವರಾದ ಯೆಹೋವನಿಗಾಗಿ ಕಾಯುತ್ತಿದ್ದೆವು. ಆತನು ನಮ್ಮನ್ನು ರಕ್ಷಿಸುವಾಗ ನಾವು ಹರ್ಷಭರಿತರಾಗಿ ಸಂತೋಷಿಸುವೆವು” ಎಂದು ಹೇಳುವರು.
ಯೆಹೋವನು ತನ್ನ ಕೈಗಳನ್ನು ಈಜುವವನಂತೆ ಅಗಲವಾಗಿ ತೆರೆದು ಮನುಷ್ಯರು ಹೆಚ್ಚಳಪಡುವ ವಸ್ತುಗಳನ್ನೆಲ್ಲಾ ಬಾಚಿಕೊಳ್ಳುವನು. ಜನರು ತಯಾರಿಸಿದ ಅಂದವಾದ ವಸ್ತುಗಳನ್ನು ಒಟ್ಟುಗೂಡಿಸಿ ಬಿಸಾಡುವನು.