ಸಮುದ್ರ ತೀರದಲ್ಲಿ ವಾಸಿಸುವ ಜನರೇ, ನೀವು ಸ್ತಬ್ಧರಾಗಿದ್ದು ದುಃಖಿಸಿರಿ. ತೂರು “ಚೀದೋನಿನ ವ್ಯಾಪಾರಿ” ಆಗಿತ್ತು. ಆ ನಗರವು ವರ್ತಕರನ್ನು ಸಮುದ್ರದಾಚೆ ಕಳುಹಿಸಿತು. ಆ ಜನರು ನಿನ್ನನ್ನು ಐಶ್ವರ್ಯಗಳಿಂದ ತುಂಬಿಸಿದರು.
ಚೀದೋನೇ, ನೀನು ತುಂಬಾ ದುಃಖದಿಂದಿರಬೇಕು. ಯಾಕೆಂದರೆ ಸಮುದ್ರವೂ ಸಮುದ್ರದ ಕೋಟೆಯೂ ಹೇಳುವುದೇನೆಂದರೆ, “ನನಗೆ ಮಕ್ಕಳಿಲ್ಲ, ನಾನು ಪ್ರಸವವೇದನೆ ಅನುಭವಿಸಲಿಲ್ಲ. ನಾನು ಮಕ್ಕಳನ್ನು ಹೆರಲಿಲ್ಲ. ನಾನು ಗಂಡುಮಕ್ಕಳನ್ನಾಗಲಿ ಹೆಣ್ಣುಮಕ್ಕಳನ್ನಾಗಲಿ ಬೆಳೆಸಲಿಲ್ಲ.”
ಯೆಹೋವನು ಸಮುದ್ರದ ಮೇಲೆ ತನ್ನ ಕೈಯನ್ನು ಚಾಚಿದ್ದಾನೆ. ಆತನು ತೂರಿಗೆ ವಿರುದ್ಧವಾಗಿ ಯುದ್ಧಮಾಡಲು ರಾಜ್ಯಗಳನ್ನು ಒಟ್ಟುಗೂಡಿಸುತ್ತಾನೆ. ಯೆಹೋವನು ಕಾನಾನಿಗೆ ತೂರಿನ ಆಶ್ರಯಸ್ಥಳಗಳನ್ನು ನಾಶಮಾಡಲು ಆಜ್ಞಾಪಿಸುತ್ತಾನೆ.
ಯೆಹೋವನು ಹೇಳುವುದೇನೆಂದರೆ, “ಚೀದೋನ್ ಕುಮಾರಿಯೇ, ನೀನು ನಾಶವಾಗುವೆ; ಎಂದಿಗೂ ನೀನು ಹರ್ಷಿಸುವದಿಲ್ಲ. ತೂರಿನ ಜನರು, ‘ನಮಗೆ ಸೈಪ್ರಸ್‌ನವರು ಸಹಾಯ ಮಾಡುತ್ತಾರೆ’ ಎಂದು ಹೇಳುತ್ತಾರೆ. ಆದರೆ ನೀನು ಸಮುದ್ರ ಮಾರ್ಗವಾಗಿ ಸೈಪ್ರಸ್‌ಗೆ ಹೋದರೆ ಅಲ್ಲಿ ನಿನಗೆ ವಿಶ್ರಮಿಸಲು ಸ್ಥಳ ದೊರಕುವದಿಲ್ಲ.”
ಆಗ ತೂರಿನ ಜನರು ಹೀಗೆನ್ನುವರು: “ಬಾಬಿಲೋನಿನವರು ನಮಗೆ ಸಹಾಯಮಾಡುವರು.” ಆದರೆ ಕಸ್ದೀಯರ ದೇಶವನ್ನು ನೋಡಿ. ಬಾಬಿಲೋನ್ ಈಗ ದೇಶವಲ್ಲ. ಬಾಬಿಲೋನನ್ನು ಅಶ್ಶೂರವು ವಶಪಡಿಸಿಕೊಂಡು ಅದರ ಸುತ್ತಲೂ ಕಾವಲು ಬುರುಜುಗಳನ್ನು ಕಟ್ಟಿಸಿದೆ. ಅಲ್ಲಿದ್ದ ಸುಂದರ ಮನೆಗಳಿಂದ ಸೈನಿಕರು ಎಲ್ಲವನ್ನು ದೋಚಿರುತ್ತಾರೆ. ಅಶ್ಶೂರ ಬಾಬಿಲೋನನ್ನು ಕಾಡುಪ್ರಾಣಿಗಳ ವಾಸಸ್ಥಳವನ್ನಾಗಿ ಮಾಡಿದೆ. ಅವರು ಬಾಬಿಲೋನನ್ನು ಪಾಳುಬಿದ್ದ ಅವಶೇಷವನ್ನಾಗಿ ಮಾಡಿದ್ದಾರೆ.
“ಪುರುಷರು ಮರೆತಿರುವ ವೇಶ್ಯೆಯೇ, ನಿನ್ನ ಕಿನ್ನರಿಯನ್ನು ತೆಗೆದುಕೊಂಡು ಊರೊಳಗೆ ಹೋಗಿ ನಿನ್ನ ಹಾಡನ್ನು ನುಡಿಸು, ಮತ್ತೆಮತ್ತೆ ಹಾಡು. ಆಗ ಯಾರಾದರೂ ನಿನ್ನನ್ನು ನೆನಪುಮಾಡಿಕೊಳ್ಳಬಹುದೇನೋ.”
ಎಪ್ಪತ್ತು ವರ್ಷಗಳ ನಂತರ ಯೆಹೋವನು ತೂರಿನ ಕುರಿತು ಮತ್ತೆ ಆಲೋಚಿಸಿ ತೀರ್ಮಾನಿಸುವನು. ತೂರಿನಲ್ಲಿ ವ್ಯಾಪಾರವು ಮತ್ತೆ ಪ್ರಾರಂಭವಾಗುವದು. ಅದು ಲೋಕದ ಎಲ್ಲಾ ರಾಜ್ಯಗಳಿಗೆ ವೇಶ್ಯೆಯಂತಿದೆ.
ಆದರೆ ಆಕೆ ತಾನು ಗಳಿಸಿದ ಹಣವನ್ನು ತನ್ನಲ್ಲಿ ಇಟ್ಟುಕೊಳ್ಳುವದಿಲ್ಲ. ತೂರ್ ತನ್ನ ವ್ಯಾಪಾರದಲ್ಲಿ ಗಳಿಸಿದ ಲಾಭವನ್ನು ಯೆಹೋವನಿಗಾಗಿ ಶೇಖರಿಸಿಟ್ಟಿದ್ದಾಳೆ. ಯೆಹೋವನನ್ನು ಸೇವಿಸುವವರಿಗೆ ಆ ಲಾಭವನ್ನು ಮೀಸಲಾಗಿಟ್ಟಿದ್ದಾಳೆ. ಹೀಗೆ ಯೆಹೋವನ ಸೇವಕರು ಹೊಟ್ಟೆತುಂಬ ಊಟಮಾಡುವರು, ಒಳ್ಳೆಯ ಬಟ್ಟೆ ಧರಿಸಿಕೊಳ್ಳುವರು.