ಈಜಿಪ್ಟಿನ ವಿಷಯವಾಗಿ ದುಃಖಕರವಾದ ಸಂದೇಶ: ಯೆಹೋವನು ವೇಗವಾಗಿ ಬರುವ ಮೋಡದೊಂದಿಗೆ ಬರುತ್ತಿದ್ದಾನೆ. ಆತನು ಈಜಿಪ್ಟನ್ನು ಪ್ರವೇಶಿಸುವಾಗ ಈಜಿಪ್ಟಿನ ಸುಳ್ಳುದೇವರುಗಳೆಲ್ಲಾ ಹೆದರಿ ನಡುಗುವವು. ಈಜಿಪ್ಟು ಧೈರ್ಯಶಾಲಿ ದೇಶವಾಗಿದ್ದರೂ, ಅದರ ಧೈರ್ಯ ಮೇಣದಂತೆ ಕರಗಿಹೋಗುವದು.
ದೇವರು ಹೇಳುವುದೇನೆಂದರೆ: “ನಾನು ಈಜಿಪ್ಟಿನ ಜನರಲ್ಲಿ ಒಳಜಗಳವನ್ನು ಹುಟ್ಟಿಸುವೆನು. ಜನರು ತಮ್ಮ ಸಹೋದರರೊಂದಿಗೆ ಜಗಳವಾಡುವರು. ನೆರೆಹೊರೆಯವರು ಪರಸ್ಪರ ಜಗಳವಾಡುವರು. ನಗರವು ನಗರದೊಂದಿಗೆ ಯುದ್ಧ ಮಾಡುವದು. ಒಂದು ರಾಷ್ಟ್ರವು ಇನ್ನೊಂದು ರಾಷ್ಟ್ರದೊಂದಿಗೆ ಯುದ್ಧಮಾಡುವದು.
ಈಜಿಪ್ಟಿನ ಜನರಲ್ಲಿ ಗಲಿಬಿಲಿ ಉಂಟಾಗುವದು. ಆ ಜನರು ತಮ್ಮ ಸುಳ್ಳುದೇವರುಗಳ ಬಳಿಗೂ ಪಂಡಿತರ ಬಳಿಗೂ ಓಡಿ ತಾವು ಏನು ಮಾಡಬೇಕೆಂದು ವಿಚಾರಿಸುವರು. ಮಂತ್ರವಾದಿಗಳನ್ನೂ ಪ್ರೇತವಿಚಾರಕರನ್ನೂ ಬೇತಾಳಿಕರನ್ನೂ ಕೇಳುವರು. ಆದರೆ ಅವರ ಯಾವ ಸಲಹೆಗಳೂ ಪ್ರಯೋಜನಕ್ಕೆ ಬರುವದಿಲ್ಲ.”
ಚೋಯನಿನ ನಗರದ ಪ್ರಮುಖರು ಮೂರ್ಖರಾಗಿದ್ದಾರೆ. ಫರೋಹನ “ಜ್ಞಾನಿಗಳಾದ ಸಲಹೆಗಾರರು” ತಪ್ಪು ಸಲಹೆ ಕೊಡುತ್ತಾರೆ. ಅವರು ತಾವೇ ಬುದ್ಧಿವಂತರೆಂದೂ ರಾಜವಂಶದವರೆಂದೂ ಹೇಳಿಕೊಳ್ಳುವರು. ಆದರೆ ತಾವು ನೆನಸುವಷ್ಟರ ಮಟ್ಟಿಗೆ ಅವರು ಬುದ್ಧಿವಂತರಲ್ಲ.
ಈಜಿಪ್ಟೇ, ನಿನ್ನ ಜ್ಞಾನಿಗಳು ಎಲ್ಲಿ? ಸರ್ವಶಕ್ತನಾದ ಯೆಹೋವನು ಈಜಿಪ್ಟ್ ದೇಶಕ್ಕೆ ಮಾಡಿರುವ ಯೋಜನೆಯನ್ನು ನಿನ್ನ ಜ್ಞಾನಿಗಳು ಮೊದಲು ತಿಳಿದುಕೊಳ್ಳಬೇಕು. ನಿಮಗೆ ಸಂಭವಿಸಲಿರುವುದನ್ನು ಅವರು ನಿನಗೆ ತಿಳಿಸಬೇಕು.
ಯೆಹೋವನು ಆ ನಾಯಕರನ್ನು ಗಲಿಬಿಲಿಪಡಿಸಿದನು. ಅವರು ಈಜಿಪ್ಟನ್ನು ತಪ್ಪಾದ ದಾರಿಯಲ್ಲಿ ನಡೆಸಿದರು. ಅವರು ಮಾಡುವ ಪ್ರತಿಯೊಂದು ಕಾರ್ಯವೂ ತಪ್ಪಾದದ್ದೇ. ಅವರು ಕುಡಿದು ಮತ್ತರಾದವರಂತೆ ನೆಲದ ಮೇಲೆ ಬಿದ್ದು ಹೊರಳಾಡುತ್ತಾರೆ.
ಆ ಸಮಯದಲ್ಲಿ ಈಜಿಪ್ಟಿನವರು ಭಯದಿಂದ ಕಂಗೆಟ್ಟ ಹೆಂಗಸರಂತಿರುವರು. ಅವರು ಸರ್ವಶಕ್ತನಾದವನಿಗೆ ಭಯಪಡುವರು. ಯೆಹೋವನು ಜನರನ್ನು ಶಿಕ್ಷಿಸಲು ತನ್ನ ಕೈಯನ್ನೆತ್ತುವನು. ಆಗ ಅವರೆಲ್ಲರೂ ಹೆದರಿಹೋಗುವರು.
ಯೆಹೂದ ಪ್ರಾಂತ್ಯದವರೂ ಈಜಿಪ್ಟಿನಲ್ಲಿರುವವರೂ ಭಯಪಡಬೇಕಾಗಿದೆ. ಈಜಿಪ್ಟಿನಲ್ಲಿ ಯಾರೇ ಆಗಲಿ ಯೆಹೂದದ ಹೆಸರು ಕೇಳಿದಾಗ ಭಯಪಡುವರು. ಯಾಕೆಂದರೆ ಭಯಂಕರ ಘಟನೆಗಳು ಈಜಿಪ್ಟಿನಲ್ಲಿ ಸಂಭವಿಸುವಂತೆ ಸರ್ವಶಕ್ತನಾದ ಯೆಹೋವನು ಮಾಡುತ್ತಾನೆ.
ಆ ಸಮಯದಲ್ಲಿ ಈಜಿಪ್ಟಿನಲ್ಲಿ ಕಾನಾನ್ ದೇಶದ (ಯೆಹೂದ್ಯರ) ಭಾಷೆಯನ್ನಾಡುವ ಐದು ಪಟ್ಟಣಗಳಿರುವವು. ಅದರಲ್ಲಿ ಒಂದರ ಹೆಸರು “ನಾಶನದ ನಗರ.” ಆ ಜನರು ಸರ್ವಶಕ್ತನಾದ ಯೆಹೋವನನ್ನು ಹಿಂಬಾಲಿಸಲು ತೀರ್ಮಾನಿಸುವರು.
ಇದು ಸರ್ವಶಕ್ತನಾದ ಯೆಹೋವನು ಅದ್ಭುತವನ್ನು ನಡಿಸುತ್ತಾನೆಂಬುದಕ್ಕೆ ಗುರುತಾಗಿದೆ. ಜನರು ಯಾವಾಗಲಾದರೂ ಸರಿಯೇ ಸಹಾಯಕ್ಕಾಗಿ ಮೊರೆಯಿಟ್ಟರೆ ಆತನು ಸಹಾಯವನ್ನು ಕಳುಹಿಸುವನು. ಯೆಹೋವನು ಅವರನ್ನು ರಕ್ಷಿಸಲೂ ಕಾಪಾಡಲೂ ಒಬ್ಬನನ್ನು ಕಳುಹಿಸುವನು. ಆ ಮನುಷ್ಯನು ಬೇರೆಯವರಿಂದ ಶೋಷಿತರಾದವರನ್ನು ಸಂರಕ್ಷಿಸುವನು.
ಆ ಸಮಯದಲ್ಲಿ ಈಜಿಪ್ಟಿನ ಜನರು ಯೆಹೋವನನ್ನು ನಿಜವಾಗಿಯೂ ಅರಿತುಕೊಳ್ಳುವರು. ಅವರು ದೇವರನ್ನು ಪ್ರೀತಿಸುವರು. ಅವರು ಯೆಹೋವನನ್ನು ಸೇವಿಸಿ ಅನೇಕ ಯಜ್ಞಗಳನ್ನು ಸಮರ್ಪಿಸುವರು. ಯೆಹೋವನಿಗೆ ಹರಕೆ ಹೊತ್ತು ಸಲ್ಲಿಸುವರು.
ಯೆಹೋವನು ಈಜಿಪ್ಟಿನ ಜನರನ್ನು ಶಿಕ್ಷಿಸುವನು. ಆಮೇಲೆ ಆತನು ಅವರನ್ನು ಕ್ಷಮಿಸುವನು. ಆಗ ಅವರು ಆತನ ಬಳಿಗೆ ಹಿಂದಿರುಗಿ ಬರುವರು. ಯೆಹೋವನು ಅವರ ಪ್ರಾರ್ಥನೆಯನ್ನು ಕೇಳಿ ಅವರನ್ನು ಕ್ಷಮಿಸುವನು.
ಆ ಸಮಯದಲ್ಲಿ ಈಜಿಪ್ಟಿನಿಂದ ಅಶ್ಶೂರದವರೆಗೆ ಹೆದ್ದಾರಿ ಇರುವುದು. ಆಗ ಅಶ್ಶೂರದವರು ಈಜಿಪ್ಟಿಗೂ, ಈಜಿಪ್ಟಿನವರು ಅಶ್ಶೂರಕ್ಕೂ ಪ್ರಯಾಣ ಮಾಡುವರು. ಈಜಿಪ್ಟಿನವರು ಅಶ್ಶೂರದವರೊಟ್ಟಿಗೆ ಕೆಲಸ ಮಾಡುವರು.
ಸರ್ವಶಕ್ತನಾದ ಯೆಹೋವನು ಈ ದೇಶಗಳನ್ನು ಆಶೀರ್ವದಿಸುವನು. ಆತನು, “ಈಜಿಪ್ಟೇ, ನೀನು ನನ್ನವನು; ಅಶ್ಶೂರವೇ, ನಾನು ನಿನ್ನನ್ನು ನಿರ್ಮಿಸಿದೆನು. ಇಸ್ರೇಲೇ, ನೀನು ನನ್ನ ಸ್ವಾಸ್ತ್ಯ. ನೀವೆಲ್ಲರೂ ಆಶೀರ್ವದಿಸಲ್ಪಟ್ಟವರು” ಎನ್ನುವನು.