ಮುಂದಿನ ದಿವಸಗಳಲ್ಲಿ ಯೆಹೋವನು ಯಾಕೋಬನ ಮೇಲೆ ಮತ್ತೆ ಪ್ರೀತಿತೋರುವನು. ಯೆಹೋವನು ಮತ್ತೆ ಇಸ್ರೇಲರನ್ನು ಆರಿಸುವನು. ಆ ಸಮಯದಲ್ಲಿ ಅವರ ದೇಶವನ್ನು ಅವರಿಗೆ ಹಿಂತಿರುಗಿಸುವನು. ಆಗ ಯೆಹೂದ್ಯರಲ್ಲದವರು ಯೆಹೂದ್ಯರೊಂದಿಗೆ ಸೇರಿಕೊಳ್ಳುವರು. ಅವರೆಲ್ಲರೂ ಒಂದೇ ವಂಶದವರಾಗುವರು. ಅದು ಯಾಕೋಬನ ವಂಶ.
ಆ ಜನಾಂಗಗಳವರು ಇಸ್ರೇಲರನ್ನು ಇಸ್ರೇಲ್ ದೇಶಕ್ಕೆ ನಡಿಸುವರು. ಆ ಪರಜನಾಂಗಗಳ ಗಂಡಸರು ಹೆಂಗಸರು ಇಸ್ರೇಲರ ಗುಲಾಮರಾಗಿರುವರು. ಹಿಂದಿನ ದಿವಸಗಳಲ್ಲಿ ಆ ಜನರು ಇಸ್ರೇಲರನ್ನು ಬಲವಂತದಿಂದ ತಮ್ಮ ಗುಲಾಮರನ್ನಾಗಿ ಮಾಡಿದರು. ಆದರೆ ಈಗ ಇಸ್ರೇಲರು ಆ ಜನಾಂಗಗಳನ್ನು ಸೋಲಿಸಿ ಅವರನ್ನು ಆಳುವರು.
ಯೆಹೋವನು ನಿಮ್ಮ ಪ್ರಯಾಸವನ್ನು ನಿವಾರಿಸಿ ನಿಮ್ಮನ್ನು ಆದರಿಸುವನು. ಹಿಂದಿನ ದಿವಸಗಳಲ್ಲಿ ನೀವು ಗುಲಾಮರಾಗಿರುವಾಗ ಜನರು ನಿಮ್ಮನ್ನು ಬಹಳವಾಗಿ ಹಿಂಸಿಸಿದರು; ಬಲವಂತದಿಂದ ಕಷ್ಟಕರವಾದ ಕೆಲಸವನ್ನು ನಿಮ್ಮಿಂದ ಮಾಡಿಸಿದರು. ಆದರೆ ಯೆಹೋವನು ಆ ಸಂಕಟಗಳಿಂದ ನಿಮ್ಮನ್ನು ಪಾರುಮಾಡುವನು.
ಬಾಬಿಲೋನಿನ ಅರಸನು ತನ್ನ ದುಷ್ಟತನದಲ್ಲಿ ಜನರನ್ನು ಹೊಡೆಯಿಸಿದನು. ಹೊಡೆಯುವದನ್ನು ಅವನು ನಿಲ್ಲಿಸಲೇ ಇಲ್ಲ. ಆ ದುಷ್ಟ ಅರಸನು ಜನರನ್ನು ಸಿಟ್ಟಿನಿಂದಲೇ ಆಳಿದನು. ಜನರನ್ನು ಹಿಂಸೆಪಡಿಸುವದನ್ನು ಅವನು ನಿಲ್ಲಿಸಲಿಲ್ಲ.
ನೀನು ದುಷ್ಟ ಅರಸನಾಗಿದ್ದೆ, ಈಗ ನಿನಗೆ ಅಂತ್ಯವು ಬಂತು. ತುರಾಯಿ ಮರಗಳೂ ಲೆಬನೋನಿನ ದೇವದಾರು ವೃಕ್ಷಗಳೂ ಹರ್ಷಗೊಂಡಿವೆ. ಆ ಮರಗಳು ಹೀಗೆ ಹೇಳುತ್ತಿವೆ: ಅರಸನು ನಮ್ಮನ್ನು ಕಡಿದುರುಳಿಸಿದನು. ಈಗ ಅರಸನೇ ಉರುಳಿಬಿದ್ದಿದ್ದಾನೆ. ಅವನು ಮತ್ತೆಂದಿಗೂ ಏಳುವುದಿಲ್ಲ.
ನೀನು ಬರುವದರಿಂದ ಮರಣದ ಸ್ಥಳವಾಗಿರುವ ನರಕವು ಉತ್ಸಾಹಗೊಂಡಿದೆ. ನಿನ್ನನ್ನು ಎದುರುಗೊಳ್ಳುವದಕ್ಕಾಗಿ ಪಾತಾಳವು ಲೋಕದ ಎಲ್ಲಾ ಅಧಿಪತಿಗಳ ಆತ್ಮಗಳನ್ನು ಎಬ್ಬಿಸಿದೆ. ಅರಸರು ತಮ್ಮ ಸಿಂಹಾಸನದಲ್ಲಿ ನಿಂತುಕೊಳ್ಳುವಂತೆ ಪಾತಾಳವು ಮಾಡುತ್ತಿದೆ. ಅವರು ನಿನ್ನ ಬರುವಿಕೆಯನ್ನು ಕಾಯುತ್ತಿದ್ದಾರೆ.
ನಿನ್ನ ಜಂಬವು ಪಾತಾಳಕ್ಕೆ ಕಳುಹಿಸಲಾಗಿದೆ. ನಿನ್ನ ಹಾರ್ಪ್ವಾದ್ಯದ ಸ್ವರವು ನಿನ್ನ ಅಹಂಕಾರದ ಆತ್ಮವನ್ನು ಸಾರಿಹೇಳುತ್ತವೆ. ಹುಳಗಳು ನಿನ್ನ ಶರೀರವನ್ನು ತಿಂದುಬಿಡುವವು. ಹಾಸಿಗೆಯೋ ಎಂಬಂತೆ ನೀನು ಅವುಗಳ ಮೇಲೆ ಮಲಗಿಕೊಳ್ಳುವೆ. ಹುಳಗಳು ನಿನ್ನ ಶರೀರವನ್ನು ಕಂಬಳಿಯಂತೆ ಮುಚ್ಚಿಕೊಳ್ಳುವವು.
ನೀನು ಉದಯ ನಕ್ಷತ್ರದಂತೆ ಇರುವೆ. ಆದರೆ ನೀನು ಆಕಾಶದಿಂದ ಕೆಳಗೆ ಬಿದ್ದಿರುವೆ. ಹಿಂದಿನ ಕಾಲದಲ್ಲಿ ಲೋಕದ ಎಲ್ಲಾ ರಾಜ್ಯಗಳು ನಿನಗೆ ಅಡ್ಡಬಿದ್ದವು. ಆದರೆ ಈಗ ನೀನು ಉರುಳಿಸಲ್ಪಟ್ಟಿರುವೆ.
ನೀನು ಯಾವಾಗಲೂ ನಿನ್ನೊಳಗೆ, “ನಾನು ಉನ್ನತವಾದ ಆಕಾಶಕ್ಕೆ ಹೋಗುವೆನು. ನಾನು ದೇವರ ನಕ್ಷತ್ರಗಳಿಗಿಂತ ಮೇಲೆ ನನ್ನ ಸಿಂಹಾಸನವನ್ನು ಸ್ಥಾಪಿಸುವೆನು. ನಾನು ಜಾಫೋನ್ ಎಂಬ ಪವಿತ್ರ ಪರ್ವತದಲ್ಲಿ ಕುಳಿತುಕೊಳ್ಳುವೆನು. ಆ ಪರ್ವತದಲ್ಲಿ ನಾನು ದೇವರುಗಳನ್ನು ಸಂಧಿಸುವೆನು.
ಆದರೆ ದುಷ್ಟ ಅರಸನಾದ ನೀನು ನಿನ್ನ ಸಮಾಧಿಯಿಂದ ತೆಗೆದುಹಾಕಲ್ಪಟ್ಟಿರುವೆ. ಮರದಿಂದ ಬೇರ್ಪಡಿಸಿದ ಕೊಂಬೆಯಂತೆ ನೀನಿರುವೆ. ಯುದ್ಧದಲ್ಲಿ ಸತ್ತ ಸೈನಿಕನಂತೆ ನೀನಿರುವೆ. ಬೇರೆ ಸೈನಿಕರು ಅವನ ಮೇಲೆ ನಡೆದಾಡುವರು. ಈಗ ನೀನು ಸಾಧಾರಣ ಹೆಣದಂತೆ ಇರುವೆ. ಸಮಾಧಿಯ ಬಟ್ಟೆಗಳಿಂದ ನೀನು ಸುತ್ತಲ್ಪಟ್ಟಿರುವೆ.
ಬೇರೆ ಅನೇಕ ಅರಸರು ಸತ್ತುಹೋದರು. ಅವರೆಲ್ಲರಿಗೂ ಸ್ವಂತ ಸಮಾಧಿ ಇದೆ. ಆದರೆ ನೀನು ಅವರೊಂದಿಗೆ ಸೇರಲಾರೆ. ಯಾಕೆಂದರೆ ನಿನ್ನ ರಾಜ್ಯವನ್ನು ನೀನೇ ನಾಶಮಾಡಿರುವೆ. ನೀನು ನಿನ್ನ ಜನರನ್ನೇ ಸಾಯಿಸಿರುವೆ. ಆದರೆ ನೀನು ನಾಶಮಾಡಿದಂತೆ ನಾಶಮಾಡಲು ನಿನ್ನ ಮಕ್ಕಳಿಗೆ ಅವಕಾಶಕೊಡಲಾಗದು.
ಅವನ ಮಕ್ಕಳನ್ನು ಕೊಲ್ಲಲು ಸಿದ್ಧಗೊಳ್ಳಿರಿ. ಅವರ ತಂದೆಯ ದುಷ್ಟತನಕ್ಕಾಗಿ ಅವರನ್ನು ಕೊಲ್ಲಿರಿ. ಅವನ ಮಕ್ಕಳು ದೇಶವನ್ನು ಇನ್ನೆಂದಿಗೂ ತಮ್ಮ ವಶಕ್ಕೆ ತೆಗೆದುಕೊಳ್ಳಲಾರರು. ಅವರು ಪ್ರಪಂಚವನ್ನು ಇನ್ನೆಂದಿಗೂ ತಮ್ಮ ಪಟ್ಟಣಗಳಿಂದ ತುಂಬಿಸಲಾರರು.
ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನಾನು ಎದ್ದುನಿಂತು ಅವರಿಗೆ ವಿರುದ್ಧವಾಗಿ ಹೋರಾಡುವೆನು. ನಾನು ಹೆಸರುವಾಸಿಯಾದ ಬಾಬಿಲೋನ್ ನಗರವನ್ನು ನಾಶಮಾಡುವೆನು. ಬಾಬಿಲೋನಿನ ಎಲ್ಲಾ ಜನರನ್ನು ನಾಶಮಾಡುವೆನು. ಅವರ ಮಕ್ಕಳನ್ನು ಮತ್ತು ಮರಿಮಕ್ಕಳನ್ನು ನಾಶಮಾಡುವೆನು” ಯೆಹೋವನೇ ಈ ಮಾತುಗಳನ್ನು ನುಡಿದಿದ್ದಾನೆ.
ಯೆಹೋವನು ಹೇಳುವುದೇನೆಂದರೆ: “ನಾನು ಬಾಬಿಲೋನನ್ನು ಪ್ರಾಣಿಗಳ ವಾಸಸ್ಥಳವನ್ನಾಗಿ ಬದಲಾಯಿಸುವೆನು. ಆ ಸ್ಥಳವು ಜವುಗು ನೆಲವಾಗಿರುವುದು. ‘ನಾಶನವೆಂಬ ಪೊರಕೆಯಿಂದ’ ಅದನ್ನು ಗುಡಿಸುವೆನು.” ಇದು ಸರ್ವಶಕ್ತನಾದ ಯೆಹೋವನ ನುಡಿ.
ನನ್ನ ದೇಶದಲ್ಲಿ ಅಶ್ಶೂರದ ರಾಜನನ್ನು ನಾಶಮಾಡುವೆನು. ನನ್ನ ಪರ್ವತಗಳ ಮೇಲೆ ಆ ರಾಜನ ಮೇಲೆ ತುಳಿದುಕೊಂಡು ನಡೆದಾಡುವೆನು. ಆ ರಾಜನು ನನ್ನ ಜನರನ್ನು ಗುಲಾಮರನ್ನಾಗಿ ಮಾಡಿದನು. ಅವರ ಹೆಗಲಿನ ಮೇಲೆ ನೊಗವನ್ನಿಟ್ಟನು. ಆ ನೊಗವು ಯೆಹೂದದ ಹೆಗಲಿನಿಂದ ತೆಗೆಯಲ್ಪಡುವದು.
ಫಿಲಿಷ್ಟಿಯ ದೇಶವೇ, ನಿನ್ನನ್ನು ಹೊಡೆದ ಅರಸನು ಸತ್ತದ್ದಕ್ಕಾಗಿ ನೀನು ಸಂತೋಷಗೊಂಡಿರುವೆ. ಆದರೆ ನೀನು ಸಂತೋಷಗೊಳ್ಳಬಾರದು. ಅವನ ರಾಜ್ಯಭಾರವು ಅಂತ್ಯವಾಯಿತು ಎಂಬುದು ಸತ್ಯ. ಆದರೆ ಅರಸನ ಮಗನು ರಾಜ್ಯವಾಳುವನು. ಒಂದು ಹಾವು ಇನ್ನೊಂದು ಭಯಂಕರ ಹಾವನ್ನು ಹೆರುವಂತೆ ಅದು ಇರುವದು. ಈ ಹೊಸ ಅರಸನು ನಿಮಗೆ ವೇಗವಾದ ಮತ್ತು ಅಪಾಯಕರವಾದ ಹಾವಾಗುವನು.
ಆದರೆ ನನ್ನ ಬಡಜನರು ಸುರಕ್ಷಿತವಾಗಿ ಊಟಮಾಡುವರು. ಅವರ ಮಕ್ಕಳೂ ಸುರಕ್ಷಿತವಾಗಿರುವರು. ನನ್ನ ಬಡಜನರು ಹಾಯಾಗಿ ಮಲಗಿ ಸುರಕ್ಷಿತರಾಗಿರುವರು. ಆದರೆ ನಿಮ್ಮ ಸಂತಾನದವರು ಹಸಿವೆಯಿಂದ ಸಾಯುವಂತೆ ಮಾಡುವೆನು. ನಿಮ್ಮ ದೇಶದಲ್ಲಿ ಉಳಿದಿರುವ ಜನರೆಲ್ಲರೂ ಸಾಯುವರು.
ಆ ಸೈನ್ಯದವರು ತಮ್ಮ ದೇಶಕ್ಕೆ ಸಂದೇಶವಾಹಕರನ್ನು ಕಳುಹಿಸುತ್ತಾರೆ. ಆ ಸಂದೇಶವು ಏನಿರಬಹುದು? “ಫಿಲಿಷ್ಟಿಯರು ಸೋತುಹೋದರು. ಆದರೆ ಯೆಹೋವನು ಚೀಯೋನನ್ನು ಬಲಪಡಿಸಿದ್ದಾನೆ. ಆತನ ಬಡಜನರು ರಕ್ಷಣೆಗಾಗಿ ಅಲ್ಲಿಗೆ ಹೋಗಿದ್ದಾರೆ” ಎಂಬುದೇ ಆ ಸಂದೇಶ.