“ನಿಮ್ಮ ತಾಯಿಯೊಂದಿಗೆ ವಾದಿಸಿರಿ. ಯಾಕೆಂದರೆ ಆಕೆ ನನ್ನ ಹೆಂಡತಿಯಲ್ಲ. ನಾನು ಆಕೆಯ ಗಂಡನಲ್ಲ. ವೇಶ್ಯೆಯ ಹಾಗೆ ಆಕೆ ವರ್ತಿಸುವದನ್ನು ನಿಲ್ಲಿಸು ಎಂದು ಹೇಳಿರಿ. ಆಕೆಯ ಸ್ತನಗಳ ಮಧ್ಯದಿಂದ ಆಕೆಯ ಮಿಂಡರನ್ನು ತೆಗೆದುಹಾಕಲು ಹೇಳಿರಿ.
ಆಕೆ ವ್ಯಭಿಚಾರ ಮಾಡುವದನ್ನು ನಿಲ್ಲಿಸದೆ ಹೋದರೆ ನಾನು ಆಕೆಯನ್ನು ಬೆತ್ತಲೆ ಮಾಡಿ, ಆಕೆ ಜನ್ಮ ತಾಳಿದಾಗ ಹೇಗೆ ಇದ್ದಳೋ ಹಾಗೆ ಮಾಡುವೆನು. ಆಕೆಯ ಜನರನ್ನು ಆಕೆಯಿಂದ ತೊಲಗಿಸಿ ಆಕೆಯನ್ನು ಒಣ ಮರುಭೂಮಿಯಂತೆ ಬೆಂಗಾಡಾಗಿ ಮಾಡುವೆನು. ಆಕೆ ಬಾಯಾರಿ ಸಾಯುವಂತೆ ಮಾಡುವೆನು.
ಅವರ ತಾಯಿಯು ವೇಶ್ಯೆಯಂತೆ ವರ್ತಿಸಿದಳು. ತಾನು ನಡಿಸಿದ ಕೃತ್ಯಗಳಿಗಾಗಿ ಆಕೆ ನಾಚಿಕೆಪಡಬೇಕು. ಆಕೆಯು ಹೀಗಂದುಕೊಳ್ಳುತ್ತಿದ್ದಾಳೆ, ‘ನಾನು ನನ್ನ ಮಿಂಡರ ಬಳಿಗೆ ಹೋಗುವೆನು. ಅವರು ನನಗೆ ಅನ್ನ ನೀರನ್ನು ಕೊಡುವರು. ನನಗೆ ಉಣ್ಣೆಯನ್ನೂ, ನಾರುಮಡಿಯನ್ನೂ ಕೊಡುವರು. ದ್ರಾಕ್ಷಾರಸ ಮತ್ತು ಆಲೀವ್ ಎಣ್ಣೆಯನ್ನೂ ಕೊಡುವರು.’
ಆಕೆಯು ತನ್ನ ಮಿಂಡರ ಹಿಂದೆ ಓಡಿಹೋದರೂ ಅವರನ್ನು ಹಿಡಿಯಲಾರಳು. ಆಕೆಯು ತನ್ನ ಮಿಂಡರನ್ನು ಹುಡುಕುವಳು. ಆದರೆ ಅವರು ಆಕೆಗೆ ಸಿಗುವುದಿಲ್ಲ. ಆಗ ಆಕೆ ಹೀಗೆ ಹೇಳುವಳು, ‘ನಾನು ನನ್ನ ಮೊದಲನೇ ಪತಿಯ ಬಳಿಗೆ (ಯೆಹೋವನು) ಹೋಗುವೆನು. ನಾನು ಆತನೊಂದಿಗೆ ಇದ್ದಾಗ ನನ್ನ ಜೀವಿತವು ಎಷ್ಟೋ ಚೆನ್ನಾಗಿತ್ತು. ಈಗಿನ ನನ್ನ ಜೀವಿತಕ್ಕಿಂತ ಆಗಿನ ಜೀವಿತವು ಎಷ್ಟೋ ಮೇಲಾಗಿತ್ತು.’
“ಆಕೆಗೆ (ಇಸ್ರೇಲಿಗೆ) ನಾನು (ಯೆಹೋವನು) ಧಾನ್ಯ, ಎಣ್ಣೆ, ದ್ರಾಕ್ಷಾರಸವನ್ನು ಕೊಟ್ಟವನೆಂದು ತಿಳಿದಿಲ್ಲ. ಆಕೆಗೆ ಹೆಚ್ಚೆಚ್ಚಾಗಿ ಬೆಳ್ಳಿಬಂಗಾರಗಳನ್ನು ಕೊಡುತ್ತಾ ಬಂದೆನು. ಆದರೆ ಆ ಬೆಳ್ಳಿಬಂಗಾರವನ್ನು ಇಸ್ರೇಲ್ ಬಾಳನ ವಿಗ್ರಹಗಳನ್ನು ತಯಾರಿಸಲು ಉಪಯೋಗಿಸಿದಳು.
ಆದುದರಿಂದ ನಾನು ಹಿಂತಿರುಗಿ ಬರುವೆನು. ನಾನು ಕೊಟ್ಟಿರುವ ಧಾನ್ಯವು ಕೊಯ್ಲಿಗೆ ತಯಾರಾದ ಅವಳಿಂದ ಅದನ್ನು ಹಿಂದಕ್ಕೆ ತೆಗೆದುಕೊಳ್ಳುವೆನು. ದ್ರಾಕ್ಷಿಹಣ್ಣು ಪಕ್ವವಾಗಿದ್ದಾಗ ನಾನು ಬಂದು ನನ್ನ ದ್ರಾಕ್ಷಾರಸವನ್ನು ಹಿಂದಕ್ಕೆ ತೆಗೆದುಕೊಳ್ಳುವೆನು. ನಾನು ಕೊಟ್ಟಿರುವ ಉಣ್ಣೆ ಮತ್ತು ನಾರಿನ ಬಟ್ಟೆಯನ್ನು ಹಿಂದಕ್ಕೆ ತೆಗೆದುಕೊಳ್ಳುವೆನು. ನಾನು ಅದನ್ನು ಅವಳಿಗೆ ತನ್ನ ಬೆತ್ತಲೆ ಶರೀರವನ್ನು ಮುಚ್ಚಿಕೊಳ್ಳುವದಕ್ಕೋಸ್ಕರ ಕೊಟ್ಟಿದ್ದೆನು.
ಆಕೆಯ ದ್ರಾಕ್ಷಾಲತೆಗಳನ್ನೂ ಅಂಜೂರದ ಮರಗಳನ್ನೂ ನಾಶಮಾಡುವೆನು. ‘ಇವುಗಳನ್ನು ನನ್ನ ಪ್ರೇಮಿಗಳು ನನಗೆ ಕೊಟ್ಟರು’ ಎಂದು ಆಕೆ ಹೇಳುತ್ತಾಳೆ. ಆದರೆ ನಾನು ಆಕೆಯ ತೋಟವನ್ನೇ ಬದಲಾಯಿಸುವೆನು. ಅದು ದಟ್ಟ ಅಡವಿಯಂತೆ ಆಗುವದು. ಅದರಲ್ಲಿದ್ದ ಮರಗಳ ಹಣ್ಣನ್ನು ಕಾಡುಪ್ರಾಣಿಗಳು ಬಂದು ತಿನ್ನುವವು.
“ಆಕೆಯು ಬಾಳನ ಸೇವೆ ಮಾಡಿದ್ದುದರಿಂದ ನಾನು ಆಕೆಯನ್ನು ಶಿಕ್ಷಿಸುವೆನು. ಬಾಳನಿಗೆ ಆಕೆ ಧೂಪ ಹಾಕಿದಳು. ಆಕೆ ವಸ್ತ್ರಾಭರಣಗಳಿಂದ ಭೂಷಿತಳಾಗಿ ಮೂಗುತಿಯನ್ನು ಧರಿಸಿಕೊಂಡು ತನ್ನ ಪ್ರೇಮಿಗಳ ಬಳಿಗೆ ಹೋದಳು. ನನ್ನನ್ನು ಮರೆತುಬಿಟ್ಟಳು.” ಇದು ಯೆಹೋವನು ಹೇಳಿದ ಮಾತು.
ಅಲ್ಲಿ ಆಕೆಗೆ ನಾನು ದ್ರಾಕ್ಷಿತೋಟಗಳನ್ನು ಕೊಡುವೆನು. ಆಕೆಗೆ ಅಕೋರ್ ತಗ್ಗುಪ್ರದೇಶವನ್ನು ನಿರೀಕ್ಷೆಯ ಬಾಗಿಲಾಗಿ ಕೂಡುವೆನು. ಆಗ ಅವಳು ತಾನು ಈಜಿಪ್ಟಿನಿಂದ ಹೊರಬಂದ ತನ್ನ ಯೌವನದ ದಿನಗಳಲ್ಲಿ ಹೇಗೆ ನನ್ನ ಸಂಗಡ ಮಾತನಾಡಿದಳೋ ಹಾಗೆಯೇ ನನ್ನೊಂದಿಗೆ ಮಾತನಾಡುವಳು.”
“ಆ ಸಮಯದಲ್ಲಿ ನಾನು ಇಸ್ರೇಲರಿಗೋಸ್ಕರವಾಗಿ ಅಡವಿಯ ಮೃಗಗಳೊಂದಿಗೂ ಆಕಾಶದ ಪಕ್ಷಿಗಳೊಂದಿಗೂ ನೆಲದ ಮೇಲೆ ಹರಿದಾಡುವ ಜಂತುಗಳೊಂದಿಗೂ ಒಡಂಬಡಿಕೆ ಮಾಡುವೆನು. ನಾನು ಯುದ್ಧದ ಆಯುಧ, ಬಿಲ್ಲು, ಖಡ್ಗಗಳನ್ನು ತುಂಡು ಮಾಡುವೆನು. ಆ ದೇಶದೊಳಗೆ ಯಾವ ಆಯುಧವೂ ಇರದು. ಆಗ ಇಸ್ರೇಲಿನ ಜನರು ನಿಶ್ಟಿಂತೆಯಿಂದ ಮಲಗುವರು.
ಆಕೆಯ ದೇಶದಲ್ಲಿ ನಾನು ಬೀಜ ಬಿತ್ತುವೆನು. ನಾನು ಲೋರುಹಾಮಳಿಗೆ ಕರುಣಿ ತೋರುವೆನು. ಲೋಅಮ್ಮಿಗೆ ನಾನು, ‘ನೀವು ನನ್ನ ಜನರು’ ಎಂದು ಹೇಳುವೆನು. ಆಗ ಅವರು, ‘ನೀನು ನಮ್ಮ ದೇವರು’ ಎಂದು ಹೇಳುವರು.