ಧರ್ಮಶಾಸ್ತ್ರವು ಮುಂದೆ ಬರುವ ಉತ್ತಮ ಸಂಗತಿಗಳ ಅಸ್ಪಷ್ಟ ಚಿತ್ರಣವಾಗಿದೆ. ಅದು ನಿಜವಾದ ಸಂಗತಿಗಳ ಸ್ಪಷ್ಟ ಚಿತ್ರಣವಲ್ಲ. ಪ್ರತಿ ವರ್ಷವೂ ಒಂದೇ ರೀತಿಯ ಯಜ್ಞಗಳನ್ನು ಅರ್ಪಿಸಬೇಕೆಂದು ಅದು ಜನರಿಗೆ ತಿಳಿಸಿತು. ದೇವರನ್ನು ಆರಾಧಿಸಲು ಬರುವ ಜನರು ಅದೇ ರೀತಿಯ ಯಜ್ಞಗಳನ್ನು ಅರ್ಪಿಸುತ್ತಿದ್ದರು. ಆದರೆ ಆ ಜನರನ್ನು ಧರ್ಮಶಾಸ್ತ್ರವು ಎಂದಿಗೂ ನಿಷ್ಕಳಂಕರನ್ನಾಗಿ ಮಾಡಲಿಲ್ಲ.
ಅದು ಜನರನ್ನು ನಿಷ್ಕಳಂಕರನ್ನಾಗಿ ಮಾಡಿದ್ದರೆ, ಆ ಯಜ್ಞಗಳು ಈಗಾಗಲೇ ನಿಂತುಹೋಗುತ್ತಿದ್ದವು. ಆ ಜನರು ಆಗಲೇ ತಮ್ಮ ಪಾಪಗಳಿಂದ ಬಿಡುಗಡೆ ಹೊಂದಿ ಪರಿಶುದ್ಧರಾಗುತ್ತಿದ್ದರು. ತಾವು ಪಾಪಿಗಳೆಂಬ ಅರಿವು ಅವರಿಗಿರುತ್ತಿರಲಿಲ್ಲ.
ಆಗ ನಾನು, ದೇವರೇ, ನಾನು ಇಲ್ಲಿದ್ದೇನೆ. ಧರ್ಮಶಾಸ್ತ್ರದಲ್ಲಿ ನನ್ನ ಬಗ್ಗೆ ಬರೆದಿರುವಂತೆಯೇ ನಿನ್ನ ಚಿತ್ತಕ್ಕನುಸಾರವಾಗಿ ಮಾಡಲು ನಾನು ಬಂದಿದ್ದೇನೆ؆ ಎಂದು ಹೇಳಿದೆ.” ಕೀರ್ತನೆ 40:6-8
ದೇವರ ಇಷ್ಟಕ್ಕನುಸಾರವಾದ ಕಾರ್ಯಗಳನ್ನು ಯೇಸು ಕ್ರಿಸ್ತನು ಮಾಡಿದನು. ಆ ಕಾರಣದಿಂದಲೇ, ಯಜ್ಞವಾಗಿ ಅರ್ಪಿತವಾದ ಆತನ ದೇಹದ ಮೂಲಕ ನಾವು ಪರಿಶುದ್ಧರಾದೆವು. ಆತನು ಶಾಶ್ವತವಾದ ಯಜ್ಞವನ್ನು ಒಂದೇ ಸಲ ಅರ್ಪಿಸಿದನು.
ಪ್ರತಿದಿನವೂ ಯಾಜಕರು ನಿಂತುಕೊಂಡು ತಮ್ಮ ಧಾರ್ಮಿಕ ಸೇವೆಯನ್ನು ಮಾಡುತ್ತಾರೆ. ಅವರು ಮತ್ತೆಮತ್ತೆ ಅದೇ ಯಜ್ಞಗಳನ್ನು ಅರ್ಪಿಸುತ್ತಾರೆ. ಆದರೆ ಅವರ ಪಾಪಗಳನ್ನು ತೆಗೆದುಹಾಕಲು ಯಜ್ಞಗಳಿಗೆ ಎಂದಿಗೂ ಸಾಧ್ಯವಿಲ್ಲ.
”ಮುಂದಿನ ಕಾಲದಲ್ಲಿ ನಾನು ನನ್ನ ಜನರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿದೆ ಎಂದು ಪ್ರಭುವು ಹೇಳುತ್ತಾನೆ: ನಾನು ನನ್ನ ಆಜ್ಞೆಗಳನ್ನು ಅವರ ಹೃದಯದಲ್ಲಿ ಇಡುವೆನು; ಅವರ ಮನಸ್ಸಿನ ಮೇಲೆ ಬರೆಯುವೆನು.” ಯೆರೆಮೀಯ 31:33
ನಾವು ತೊಳೆಯಲ್ಪಟ್ಟವರಾಗಿದ್ದು ಕೆಟ್ಟ ಮನಸ್ಸಾಕ್ಷಿಯಿಂದ ಬಿಡುಗಡೆ ಹೊಂದಿದ್ದೇವೆ. ನಮ್ಮ ದೇಹಗಳನ್ನು ಶುದ್ಧವಾದ ನೀರಿನಿಂದ ತೊಳೆಯಲಾಗಿದೆ. ಆದ್ದರಿಂದ ಪೂರ್ಣನಂಬಿಕೆಯಿಂದಲೂ ಶುದ್ಧವಾದ ಹೃದಯದಿಂದಲೂ ದೇವರ ಬಳಿಗೆ ಬರೋಣ.
ನಮ್ಮಲ್ಲಿರುವ ನಿರೀಕ್ಷೆಯನ್ನು ದೃಢವಾಗಿ ಕಾಯ್ದುಕೊಂಡು ಅದರ ಬಗ್ಗೆ ಜನರಿಗೆ ತಿಳಿಸುವುದರಲ್ಲಿ ದೃಢವಾಗಿರೋಣ. ದೇವರು ತನ್ನ ವಾಗ್ದಾನವನ್ನು ಈಡೇರಿಸುತ್ತಾನೆ ಎಂಬ ಭರವಸೆ ನಮ್ಮಲ್ಲಿರಬೇಕು.
ನಾವು ಸಭೆಯಾಗಿ ಸೇರಿಬರುವುದನ್ನು ಬಿಡಬಾರದು. ಕೆಲವರು ಸಭೆಗೆ ಬರುತ್ತಿಲ್ಲ. ನಾವು ಒಟ್ಟಾಗಿ ಸೇರಿಬಂದು ಒಬ್ಬರನ್ನೊಬ್ಬರು ಬಲಪಡಿಸಬೇಕು. ಯೇಸುವು ಪ್ರತ್ಯಕ್ಷನಾಗುವ ದಿನ ಸಮೀಪವಾಗುತ್ತಿರುವುದರಿಂದ ನೀವು ಇದನ್ನು ಮತ್ತಷ್ಟು ಹೆಚ್ಚಾಗಿ ಮಾಡಬೇಕು.
ಮೋಶೆಯ ನಿಯಮಗಳಿಗೆ ಅವಿಧೇಯನಾದ ವ್ಯಕ್ತಿಯು ಇಬ್ಬರು ಅಥವಾ ಮೂವರು ಸಾಕ್ಷಿಗಳಿಂದ ತಪ್ಪಿತಸ್ಥನೆಂದು ನಿರ್ಧರಿಸಲ್ಪಟ್ಟರೆ, ಅವನಿಗೆ ಕ್ಷಮೆ ದೊರೆಯುತ್ತಿರಲಿಲ್ಲ. ಅವನನ್ನು ಕೊಂದುಹಾಕುತ್ತಿದ್ದರು.
ಹೀಗಿರಲು ದೇವರ ಮಗನನ್ನು ದ್ವೇಷಿಸುವ ಒಬ್ಬ ವ್ಯಕ್ತಿಯನ್ನು ಏನು ಮಾಡಬೇಕೆಂದು ನೀವು ಆಲೋಚಿಸುವಿರಿ? ನಿಜವಾಗಿಯೂ ಆ ವ್ಯಕ್ತಿಗೆ ಇದಕ್ಕಿಂತಲೂ ತೀವ್ರವಾದ ದಂಡನೆಯನ್ನು ವಿಧಿಸಬೇಕಲ್ಲವೇ? ಹೌದು, ಹೊಸ ಒಡಂಬಡಿಕೆಯ ರಕ್ತಕ್ಕೆ ಗೌರವವನ್ನು ತೋರದಿದ್ದ ಆ ವ್ಯಕ್ತಿಗೆ ಕ್ರೂರವಾದ ದಂಡನೆಯಾಗಬೇಕು. ಆ ರಕ್ತವು ಅವನನ್ನು ಪವಿತ್ರನನ್ನಾಗಿಸಿತು. ದೇವರಾತ್ಮನ ಕೃಪೆಗೆ ಗೌರವವನ್ನು ತೋರದಿದ್ದ ಆ ವ್ಯಕ್ತಿಗೆ ತೀವ್ರವಾದ ದಂಡನೆಯಾಗಬೇಕು.
ಕೆಲವು ಸಂದರ್ಭಗಳಲ್ಲಿ ಜನರು ನಿಮಗೆ ದ್ವೇಷಮಯ ಸಂಗತಿಗಳನ್ನು ಹೇಳಿದರು ಹಾಗೂ ಅನೇಕ ಜನರ ಮುಂದೆ ನಿಮ್ಮನ್ನು ಹಿಂಸಿಸಿದರು. ಅದೇ ರೀತಿಯ ಹಿಂಸೆಗೆ ಗುರಿಯಾಗಿದ್ದ ಜನರಿಗೆ ಕೆಲವು ಸಂದರ್ಭಗಳಲ್ಲಿ ಸಹಾಯ ಮಾಡಿದಿರಿ.
ಹೌದು, ಸೆರೆಯಲ್ಲಿರುವ ಜನರಿಗೆ ಸಹಾಯ ಮಾಡಿದಿರಿ ಮತ್ತು ಅವರ ಸಂಕಟಗಳಲ್ಲಿ ಪಾಲ್ಗೊಂಡಿರಿ. ನಿಮ್ಮ ಸ್ವತ್ತುಗಳನ್ನೆಲ್ಲ ನಿಮ್ಮಿಂದ ಕಿತ್ತುಕೊಂಡು ಹೋದಾಗಲೂ ಸಂತೋಷದಿಂದಲೇ ಇದ್ದಿರಿ. ಅದಕ್ಕಿಂತಲೂ ಉತ್ತಮವಾದದ್ದೂ ಶಾಶ್ವತವಾದದ್ದೂ ನಿಮಗೆ ದೊರೆತಿದೆ ಎಂದು ನಿಮಗೆ ತಿಳಿದಿದ್ದ ಕಾರಣ ನೀವು ಸಂತೋಷವಾಗಿದ್ದಿರಿ.