“ನಾನು ಕಾವಲುಗಾರನಂತೆ ನಿಂತುಕೊಂಡು ಗಮನಿಸುವೆನು. ಯೆಹೋವನು ನನಗೆ ಏನನ್ನುವನೋ ಎಂದು ನಾನು ನಿರೀಕ್ಷಿಸುತ್ತಿರುವೆನು. ಆತನು ನನ್ನ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವನೆಂಬುದನ್ನು ತಾಳ್ಮೆಯಿಂದ ಗಮನಿಸುವೆನು.”
ಭವಿಷ್ಯದ ಒಂದು ವಿಶೇಷ ಸಮಯದ ಕುರಿತಾಗಿ ಈ ಸಂದೇಶ. ಈ ಸಂದೇಶವು ಅಂತ್ಯದ ವಿಷಯವಾಗಿ ಇದೆ. ಇದು ಖಂಡಿತವಾಗಿಯೂ ನೆರವೇರುತ್ತದೆ. ಆ ಸಮಯವು ಎಂದಿಗೂ ಬರುವುದಿಲ್ಲ ಎಂಬಂತೆ ಕಾಣಬಹುದು. ಆದರೆ ತಾಳ್ಮೆಯಿಂದಿರು; ಅದನ್ನು ನಿರೀಕ್ಷಿಸುತ್ತಾ ಇರು. ಆ ಸಮಯವು ಬರುವದು. ಅದು ತಡವಾಗುವುದಿಲ್ಲ.
ಯಾವ ಜನರು ಅದರ ವಿಚಾರವಾಗಿ ಕೇಳಲು ನಿರಾಕರಿಸುವರೋ ಅವರಿಗಾಗಿ ಈ ಸಂದೇಶವಿರುವದಿಲ್ಲ. ಆದರೆ ಒಬ್ಬ ಸತ್ಪುರುಷನು ಈ ಸಂದೇಶವನ್ನು ನಂಬುವನು. ಆ ಸತ್ಪುರುಷನು ತಾನು ನಂಬಿದ ನಿಮಿತ್ತವಾಗಿ ಬದುಕುವನು.”
ಯೆಹೋವನು ಹೇಳಿದ್ದು: “ಒಬ್ಬನನ್ನು ದ್ರಾಕ್ಷಾರಸವು ಮೋಸಪಡಿಸಬಹುದು. ಅದೇ ರೀತಿಯಲ್ಲಿ ಬಲಿಷ್ಠನ ಗರ್ವವು ಅವನನ್ನು ಮೋಸಪಡಿಸಬಹುದು. ಆದರೆ ಅವನಿಗೆ ಸಮಾಧಾನ ಸಿಕ್ಕುವುದಿಲ್ಲ. ಅವನು ಮರಣದಂತಿರುವನು. ಅವನಿಗೆ ಯಾವಾಗಲೂ ಹೆಚ್ಚೆಚ್ಚು ಬೇಕು. ಮರಣದಂತೆ ಅವನಿಗೆ ತೃಪ್ತಿಯೇ ಇರದು. ಅವನು ಜನಾಂಗಗಳನ್ನು ಸೋಲಿಸುತ್ತಲೇ ಇರುವನು. ಆ ಜನರನ್ನು ತನ್ನ ಕೈದಿಗಳನ್ನಾಗಿ ಮಾಡುತ್ತಲೇ ಇರುವನು.
ಆದರೆ ಬೇಗನೇ ಅವರೆಲ್ಲಾ ಇವನನ್ನು ನೋಡಿ ನಗಾಡುವರು. ಅವನ ಸೋಲುವಿಕೆಯ ಕಥೆಗಳನ್ನು ವರ್ಣಿಸುವರು; ನಗಾಡುತ್ತಾ, ‘ಎಂಥಾ ದುಃಖಕರ ಸಂಗತಿ, ಅಷ್ಟೆಲ್ಲಾ ಸಂಪಾದಿಸಿದವನು ಅದನ್ನು ಇಟ್ಟುಕೊಳ್ಳಲಾಗಲಿಲ್ಲವಲ್ಲ. ಅವನು ಸಾಲಗಳನ್ನು ವಸೂಲಿ ಮಾಡಿ ತನ್ನನ್ನು ಐಶ್ವರ್ಯವಂತನನ್ನಾಗಿ ಮಾಡಿಕೊಂಡನು.’
“ಬಲಶಾಲಿಯಾದ ಮನುಷ್ಯನೇ, ನೀನು ಜನರಿಂದ ಹಣವನ್ನು ಸುಲುಕೊಂಡಿದ್ದೀ. ಒಂದು ದಿವಸ ಆ ಜನರು ಎಚ್ಚರವಾಗಿ ತಮಗೆ ಏನಾಯಿತೆಂದು ಅರಿತುಕೊಳ್ಳುವರು. ನಿನಗೆ ವಿರುದ್ಧವಾಗಿ ಏಳುವರು. ನಿನ್ನ ಕೈಯಿಂದ ಆ ವಸ್ತುಗಳನ್ನು ಕಿತ್ತುಕೊಳ್ಳುವರು. ಆಗ ನೀನು ಭಯದಿಂದ ತುಂಬುವಿ.
ಎಷ್ಟೋ ಜನಾಂಗಗಳಿಂದ ನೀನು ವಸ್ತುಗಳನ್ನು ಅಪಹರಿಸಿದ್ದೀ. ಅವರು ನಿನ್ನಿಂದ ಇನ್ನೂ ಹೆಚ್ಚಾಗಿ ಅಪಹರಿಸುವರು. ನೀನು ಎಷ್ಟೋ ಮಂದಿಯನ್ನು ಕೊಂದಿರುತ್ತೀ; ದೇಶಗಳನ್ನೂ ನಗರಗಳನ್ನೂ ನಾಶ ಮಾಡಿರುತ್ತೀ. ಅಲ್ಲಿಯ ಎಷ್ಟೋ ಜನರನ್ನು ಸಂಹರಿಸಿರುತ್ತೀ.
ಹೌದು, ಕೆಟ್ಟದ್ದನ್ನು ಮಾಡಿ ಧನಿಕನಾದವನಿಗೆ ಬಹಳ ಕೇಡಾಗುವುದು. ಆ ಮನುಷ್ಯನು ಒಂದು ಸುರಕ್ಷಿತವಾದ ಸ್ಥಳದಲ್ಲಿ ವಾಸಿಸಲು ಇದನ್ನೆಲ್ಲಾ ಮಾಡುತ್ತಾನೆ. ಹಾಗೆ ಮಾಡುವದರಿಂದ ಬೇರೆ ಜನರು ಅವನಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲವೆಂದು ಅವನು ತಿಳಿಯುತ್ತಾನೆ. ಆದರೆ ಕೆಟ್ಟ ಸಂಗತಿಗಳು ಅವನಿಗೆ ಸಂಭವಿಸುವವು.
“ಎಷ್ಟೋ ಜನರನ್ನು ನಾಶಮಾಡಲು ನೀನು ಯೋಜನೆ ತಯಾರಿಸಿರುತ್ತೀ. ಆದರೆ ಆ ಯೋಜನೆಗಳು ನಿನ್ನ ಮನೆಗೆ ನಾಚಿಕೆಯನ್ನು ತಂದೊಡ್ಡುವವು. ನೀನು ಕೆಟ್ಟ ಕಾರ್ಯಗಳನ್ನು ಮಾಡಿದ್ದರಿಂದ ನೀನು ನಿನ್ನ ಪ್ರಾಣವನ್ನು ಕಳಕೊಳ್ಳುವಿ.
ತಾನು ಸಿಟ್ಟುಗೊಂಡು ಇತರರು ಸಂಕಟಪಡುವಂತೆ ಮಾಡುವವನಿಗೆ ಬಹಳ ಕೇಡು ಉಂಟಾಗುವದು. ಸಿಟ್ಟಿನ ಭರದಲ್ಲಿ ಆ ಮನುಷ್ಯನು ಇತರ ಜನರನ್ನು ನೆಲಕ್ಕೆ ಅಪ್ಪಳಿಸಿ ಬಿಡುವನು. ಅವನು ಅವರನ್ನು ಅಮಲೇರಿದವರಂತೆಯೂ ಬೆತ್ತಲೆಯಾಗಿರುವವರಂತೆಯೂ ಪರಿಗಣಿಸುತ್ತಾನೆ.
“ಆದರೆ ಅವನು ಯೆಹೋವನ ಕೋಪವನ್ನು ತಿಳಿದುಕೊಳ್ಳುವನು. ಆ ಕೋಪವು ಯೆಹೋವನ ಬಲಗೈಯಲ್ಲಿರುವ ವಿಷದ ಪಾತ್ರೆಯಂತಿರುವುದು. ಆ ವ್ಯಕ್ತಿಯು ಆ ಕೋಪವನ್ನು ರುಚಿ ನೋಡುವನು ಮತ್ತು ಅಮಲೇರಿದವನಂತೆ ನೆಲದ ಮೇಲೆ ಕುಸಿದು ಬೀಳುವನು. ದುಷ್ಟ ಅಧಿಪತಿಯೇ, ನೀನು ಆ ಪಾತ್ರೆಯಿಂದ ಕುಡಿಯುವಿ. ನಿನಗೆ ಅವಮಾನವೇ ಹೊರತು, ಮಾನ ಸಿಗುವುದಿಲ್ಲ.
“ಲೆಬನೋನಿನಲ್ಲಿ ಅನೇಕರನ್ನು ಗಾಯಗೊಳಿಸಿದ್ದೀ. ಅಲ್ಲಿ ಎಷ್ಟೋ ಪಶುಗಳನ್ನು ಅಪಹರಿಸಿರುತ್ತೀ. ಆ ದೇಶದಲ್ಲಿ ನೀನು ಮಾಡಿದ ದುಷ್ಕೃತ್ಯಗಳ ನಿಮಿತ್ತ, ಅದರಿಂದಾಗಿ ಅಲ್ಲಿ ಸತ್ತು ಹೋದವರ ನಿಮಿತ್ತ ನೀನು ಭಯಗ್ರಸ್ತನಾಗಿರುವಿ. ಅಲ್ಲಿಯ ಪಟ್ಟಣಗಳಿಗೆ ನೀನು ಮಾಡಿದ ಹಾನಿ, ಜನರಿಗೆ ನೀನು ಕೊಟ್ಟ ಸಂಕಟದ ನಿಮಿತ್ತ ನಿನಗೆ ಹೆದರಿಕೆಯುಂಟಾಗಿದೆ.”
ಆ ಮನುಷ್ಯನ ಸುಳ್ಳು ದೇವರು ಅವನಿಗೆ ಸಹಾಯ ಮಾಡಲಾರದು. ಯಾಕೆಂದರೆ ಅದು ಒಬ್ಬನು ಲೋಹದಿಂದ ಮಾಡಿದ ಕೇವಲ ವಿಗ್ರಹವಷ್ಟೆ. ಅದು ಕೇವಲ ಜಡ ಮೂರ್ತಿ. ಅದನ್ನು ಮಾಡಿದವನು, ಅದು ಅವನಿಗೆ ಸಹಾಯ ಮಾಡುವದೆಂದು ಯೋಚಿಸುವದು ಶುದ್ಧ ಮೂರ್ಖತನ. ಆ ಮೂರ್ತಿಯು ಮಾತಾಡುವೂದೂ ಇಲ್ಲ.
ಆ ಮೂರ್ತಿಗೆ ‘ಎದ್ದೇಳು’ ಎಂದು ಹೇಳುವವನಿಗೆ ಕೇಡಾಗುವುದು! ಮಾತಾಡಲಾಗದ ಒಂದು ಕಲ್ಲಿಗೆ ‘ಎಚ್ಚರವಾಗು’ ಎಂದು ಹೇಳುವವನಿಗೆ ಕೇಡಾಗುವುದು! ಅವುಗಳು ಅವನಿಗೆ ಸಹಾಯ ಮಾಡುವದಿಲ್ಲ. ಮಾಡಲಿಕ್ಕಾಗುವದೂ ಇಲ್ಲ. ಆ ವಿಗ್ರಹಗಳನ್ನು ಬೆಳ್ಳಿಬಂಗಾರದಿಂದ ಹೊದಿಸಿದರೂ ಆ ವಿಗ್ರಹಗಳಲ್ಲಿ ಜೀವವಿಲ್ಲ.