ಯೋಸೇಫನು ಇದನ್ನು ಕೇಳಿ ತನ್ನ ಎದುರಿನಲ್ಲಿದ್ದವರ ಮುಂದೆ ತಾಳಿಕೊಳ್ಳಲಾರದೆ, “ಇಲ್ಲಿರುವ ಎಲ್ಲರನ್ನೂ ಹೊರಗೆ ಕಳುಹಿಸಿರಿ” ಎಂದು ಅಪ್ಪಣೆಕೊಟ್ಟನು. ಅಲ್ಲಿದ್ದವರು ಹೊರಗೆ ಹೋದರು; ಸಹೋದರರು ಮಾತ್ರ ಯೋಸೇಫನೊಡನೆ ಇದ್ದರು.
ಯೋಸೇಫನು ತನ್ನ ಸಹೋದರರಿಗೆ, “ನಾನು ನಿಮ್ಮ ತಮ್ಮನಾದ ಯೋಸೇಫ. ನನ್ನ ತಂದೆ ಚೆನ್ನಾಗಿದ್ದಾನೆಯೇ?” ಎಂದು ಕೇಳಿದನು. ಆದರೆ ಸಹೋದರರು ಅವನಿಗೆ ಉತ್ತರಿಸಲಿಲ್ಲ. ಅವರಿಗೆ ಭಯವಾಗಿತ್ತು ಮತ್ತು ಗಲಿಬಿಲಿಗೊಂಡಿದ್ದರು.
ಯೋಸೇಫನು ಮತ್ತೆ ತನ್ನ ಸಹೋದರರಿಗೆ, “ನನ್ನ ಬಳಿಗೆ ಬನ್ನಿ. ನನ್ನ ಹತ್ತಿರ ಬನ್ನಿ ಎಂದು ಬೇಡಿಕೊಳ್ಳುತ್ತೇನೆ” ಎಂದು ಹೇಳಿದನು. ಆದ್ದರಿಂದ ಸಹೋದರರು ಯೋಸೇಫನ ಹತ್ತಿರ ಹೋದರು. ಯೋಸೇಫನು ಅವರಿಗೆ, “ನಾನು ನಿಮ್ಮ ತಮ್ಮನಾದ ಯೋಸೇಫ. ನೀವು ಈಜಿಪ್ಟಿನವರಿಗೆ ಯಾವನನ್ನು ಗುಲಾಮನನ್ನಾಗಿ ಮಾರಿದಿರೋ ಅವನೇ ನಾನು.
ನನ್ನನ್ನು ಇಲ್ಲಿಗೆ ಕಳುಹಿಸಿದ್ದು ನಿಮ್ಮ ತಪ್ಪಲ್ಲ. ಅದು ದೇವರ ಯೋಜನೆ. ದೇವರು ನನ್ನನ್ನು ಫರೋಹನ ಅತ್ಯುನ್ನತವಾದ ಅಧಿಕಾರಿಯನ್ನಾಗಿ ಮಾಡಿದ್ದಾನೆ. ನಾನು ಅವನ ಮನೆಗೆಲ್ಲಾ ಮತ್ತು ಈಜಿಪ್ಟಿಗೆಲ್ಲಾ ರಾಜ್ಯಪಾಲನಾಗಿದ್ದೇನೆ” ಎಂದು ಹೇಳಿದನು.
ಬಳಿಕ ಯೋಸೇಫನು, “ನನ್ನ ತಂದೆಯ ಬಳಿಗೆ ಬೇಗನೆ ಹೋಗಿ ಅವನಿಗೆ, ನಿನ್ನ ಮಗನಾದ ಯೋಸೇಫನು ಈ ಸಂದೇಶವನ್ನು ಕಳುಹಿಸಿದ್ದಾನೆ: ‘ದೇವರು ನನ್ನನ್ನು ಈಜಿಪ್ಟ್ ದೇಶಕ್ಕೆಲ್ಲಾ ರಾಜ್ಯಪಾಲನನ್ನಾಗಿ ಮಾಡಿದ್ದಾನೆ. ತಡಮಾಡದೆ ನನ್ನ ಬಳಿಗೆ ಬಾ.
ಯೋಸೇಫನು ಪ್ರತಿಯೊಬ್ಬ ಸಹೋದರನಿಗೂ ಒಂದೊಂದು ಜೊತೆ ಸುಂದರವಾದ ಉಡುಪುಗಳನ್ನು ಕೊಟ್ಟನು. ಆದರೆ ಬೆನ್ಯಾಮೀನನಿಗೆ ಮಾತ್ರ ಐದು ಜೊತೆ ಸುಂದರವಾದ ಉಡುಪುಗಳನ್ನೂ ಮುನ್ನೂರು ಬೆಳ್ಳಿಯ ನಾಣ್ಯಗಳನ್ನೂ ಕೊಟ್ಟನು.
ಯೋಸೇಫನು ತನ್ನ ತಂದೆಗೂ ಉಡುಗೊರೆಗಳನ್ನು ಕಳುಹಿಸಿದನು. ಅವನು ಈಜಿಪ್ಟಿನ ಶ್ರೇಷ್ಠವಾದ ವಸ್ತುಗಳನ್ನು ಹತ್ತು ಕತ್ತೆಗಳ ಮೇಲೆ ಕಳುಹಿಸಿದನು. ತನ್ನ ತಂದೆಯ ಮರುಪ್ರಯಾಣಕ್ಕೆ ಬೇಕಾದ ಕಾಳು, ರೊಟ್ಟಿ ಮತ್ತು ಇತರ ಆಹಾರಪದಾರ್ಥಗಳನ್ನೂ ಹತ್ತು ಹೆಣ್ಣುಕತ್ತೆಗಳ ಮೇಲೆ ಹೊರಿಸಿ ಕಳುಹಿಸಿದನು.
ಸಹೋದರರು ತಮ್ಮ ತಂದೆಗೆ, “ಅಪ್ಪಾ, ಯೋಸೇಫನು ಇನ್ನೂ ಬದುಕಿದ್ದಾನೆ; ಅವನು ಈಜಿಪ್ಟ್ ದೇಶಕ್ಕೆಲ್ಲಾ ರಾಜ್ಯಪಾಲನಾಗಿದ್ದಾನೆ” ಎಂದು ಹೇಳಿದರು. ಅವರ ತಂದೆಗೆ ಆಶ್ಚರ್ಯವಾಯಿತು. ಆತನು ಅವರನ್ನು ನಂಬಲಿಲ್ಲ.
ಆದರೆ ಯೋಸೇಫನು ತಮಗೆ ಹೇಳಿದ್ದೆಲ್ಲವನ್ನು ಸಹೋದರರು ತಮ್ಮ ತಂದೆಗೆ ಹೇಳಿದರು. ಆಮೇಲೆ ತನ್ನನ್ನು ಈಜಿಪ್ಟಿಗೆ ಕರೆದುಕೊಂಡು ಬರಲು ಯೋಸೇಫನು ಕಳುಹಿಸಿದ್ದ ರಥಗಳನ್ನು ಯಾಕೋಬನು ನೋಡಿ ಉಲ್ಲಾಸಪಟ್ಟನು.