English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Genesis Chapters

Genesis 1 Verses

1 ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದನು.
2 ಭೂಮಿಯು ಅಸ್ತವ್ಯಸ್ತವಾಗಿಯೂ ಬರಿದಾಗಿಯೂ ಇತ್ತು. ಭೂಮಿಯ ಮೇಲೆ ಏನೂ ಇರಲಿಲ್ಲ. ಸಾಗರದ ಮೇಲೆ ಕತ್ತಲು ಕವಿದಿತ್ತು. ದೇವರಾತ್ಮನು ಜಲಸಮೂಹಗಳ ಮೇಲೆ ಚಲಿಸುತ್ತಿದ್ದನು. [*ಚಲಿಸುತ್ತಿದ್ದನು ಹೀಬ್ರೂ ಭಾಷೆಯಲ್ಲಿ ಈ ಪದವು ಪಕ್ಷಿಯೊಂದು ಗೂಡಿನಲ್ಲಿರುವ ತನ್ನ ಮರಿಗಳನ್ನು ರಕ್ಷಿಸುವುದಕ್ಕಾಗಿ “ಮೇಲೆ ಹಾರಾಡುವಂತೆ” ಎಂಬರ್ಥವನ್ನು ನೀಡುತ್ತದೆ.] ಮೊದಲನೆ ದಿನ — ಬೆಳಕು
3 ಆಗ ದೇವರು, “ಬೆಳಕಾಗಲಿ” ಅನ್ನಲು ಬೆಳಕಾಯಿತು.
4 ದೇವರಿಗೆ ಬೆಳಕು ಒಳ್ಳೆಯದಾಗಿ ಕಂಡಿತು. ಬಳಿಕ ದೇವರು ಕತ್ತಲೆಯಿಂದ ಬೆಳಕನ್ನು ಬೇರ್ಪಡಿಸಿದನು.
5 ದೇವರು ಬೆಳಕಿಗೆ ಹಗಲೆಂದೂ ಕತ್ತಲೆಗೆ ರಾತ್ರಿಯೆಂದೂ ಹೆಸರಿಟ್ಟನು. ಹೀಗೆ ಸಾಯಂಕಾಲವೂ ಮುಂಜಾನೆಯೂ ಆಗಿ ಮೊದಲನೆ ದಿನವಾಯಿತು. ಎರಡನೆ ದಿನ — ಆಕಾಶ
6 ಬಳಿಕ ದೇವರು, “ಜಲಸಮೂಹಗಳ ನಡುವೆ ಗುಮಟ [†ಗುಮಟ ವಾಯುಮಂಡಲ.] ಉಂಟಾಗಲಿ. ಅದು ಕೆಳಭಾಗದ ನೀರುಗಳನ್ನು ಮೇಲ್ಭಾಗದ ನೀರುಗಳಿಂದ ಬೇರ್ಪಡಿಸಲಿ” ಅಂದನು.
7 ಹೀಗೆ ದೇವರು ಗುಮಟವನ್ನು ಉಂಟುಮಾಡಿ ಅದರ ಕೆಳಭಾಗದ ನೀರುಗಳನ್ನು ಅದರ ಮೇಲ್ಭಾಗದ ನೀರುಗಳಿಂದ ಬೇರ್ಪಡಿಸಿದನು.
8 ದೇವರು ಆ ಗುಮಟಕ್ಕೆ ಆಕಾಶವೆಂದು ಹೆಸರಿಟ್ಟನು. ಹೀಗೆ ಸಾಯಂಕಾಲವೂ ಮುಂಜಾನೆಯೂ ಆಗಿ ಎರಡನೆ ದಿನವಾಯಿತು. ಮೂರನೆ ದಿನ — ಒಣನೆಲ ಮತ್ತು ಸಸ್ಯಗಳು
9 ಬಳಿಕ ದೇವರು, “ಆಕಾಶದ ಕೆಳಗಿರುವ ನೀರೆಲ್ಲಾ ಒಟ್ಟಿಗೆ ಸೇರಿಕೊಂಡು ಒಣನೆಲವು ಕಾಣಿಸಲಿ” ಅಂದನು. ಹಾಗೆಯೇ ಆಯಿತು.
10 ದೇವರು ಒಣನೆಲಕ್ಕೆ ಭೂಮಿಯೆಂದೂ ಒಟ್ಟಿಗೆ ಸೇರಿಕೊಂಡಿದ್ದ ನೀರಿಗೆ ಸಮುದ್ರವೆಂದೂ ಹೆಸರಿಟ್ಟನು. ದೇವರಿಗೆ ಇವು ಒಳ್ಳೆಯದಾಗಿ ಕಂಡವು.
11 ಬಳಿಕ ದೇವರು, “ಭೂಮಿಯು ಸಸ್ಯರಾಶಿಯನ್ನು ಬೆಳೆಸಲಿ; ಬೀಜಗಳನ್ನು ಫಲಿಸುವ ಸಸ್ಯಗಳು ಬೆಳೆಯಲಿ; ತನ್ನತನ್ನ ಜಾತಿಗನುಸಾರವಾಗಿ ಬೀಜವುಳ್ಳ ಹಣ್ಣುಗಳನ್ನು ಫಲಿಸುವ ಹಣ್ಣಿನ ಮರಗಳು ಭೂಮಿಯ ಮೇಲೆ ಬೆಳೆಯಲಿ” ಅಂದನು. ಹಾಗೆಯೇ ಆಯಿತು.
12 ಸಸಿಗಳು ಭೂಮಿಯ ಮೇಲೆ ಬೆಳೆದವು. ಅವುಗಳಲ್ಲಿ ಬೀಜ ಫಲಿಸುವ ಗಿಡಗಳೂ ಬೀಜವುಳ್ಳ ಹಣ್ಣುಗಳನ್ನು ಫಲಿಸುವ ಮರಗಳೂ ಇದ್ದವು. ಪ್ರತಿಯೊಂದು ಸಸಿಯು ತನ್ನದೇ ಆದ ರೀತಿಯ ಬೀಜವನ್ನು ಫಲಿಸಿತು. ದೇವರಿಗೆ ಇವು ಒಳ್ಳೆಯದಾಗಿ ಕಂಡವು.
13 ಹೀಗೆ ಸಾಯಂಕಾಲವೂ ಮುಂಜಾನೆಯೂ ಆಗಿ ಮೂರನೆ ದಿನವಾಯಿತು. ನಾಲ್ಕನೆ ದಿನ — ಸೂರ್ಯ, ಚಂದ್ರ ಮತ್ತು ನಕ್ಷತ್ರ
14 ಬಳಿಕ ದೇವರು, “ಆಕಾಶದಲ್ಲಿ ಬೆಳಕುಗಳು ಉಂಟಾಗಲಿ. ಈ ಬೆಳಕುಗಳು ಹಗಲುರಾತ್ರಿಗಳನ್ನು ಬೇರ್ಪಡಿಸಲಿ. ಈ ಬೆಳಕುಗಳು ವಿಶೇಷವಾದ ಗುರುತುಗಳಾಗಿದ್ದು, ವಿಶೇಷವಾದ ಸಮಯಗಳನ್ನೂ ದಿನಗಳನ್ನೂ ವರ್ಷಗಳನ್ನೂ ತೋರಿಸಲಿ.
15 ಈ ಬೆಳಕುಗಳು ಆಕಾಶದಲ್ಲಿದ್ದು ಭೂಮಿಯ ಮೇಲೆ ಬೆಳಕನ್ನು ಪ್ರಕಾಶಿಸಲಿ” ಅಂದನು. ಹಾಗೆಯೇ ಆಯಿತು.
16 ಆದ್ದರಿಂದ ದೇವರು ಎರಡು ದೊಡ್ಡಬೆಳಕುಗಳನ್ನು ಸೃಷ್ಟಿಸಿದನು. ಹಗಲನ್ನಾಳುವುದಕ್ಕಾಗಿ ದೊಡ್ಡಬೆಳಕನ್ನೂ ರಾತ್ರಿಯನ್ನಾಳುವುದಕ್ಕಾಗಿ ಅದಕ್ಕಿಂತ ಚಿಕ್ಕಬೆಳಕನ್ನು ಸೃಷ್ಟಿಸಿದನು. ಆತನು ನಕ್ಷತ್ರಗಳನ್ನು ಸಹ ಸೃಷ್ಟಿಸಿದನು.
17 ಈ ಬೆಳಕುಗಳು ಭೂಮಿಯ ಮೇಲೆ ಪ್ರಕಾಶಿಸಲೆಂದು ದೇವರು ಅವುಗಳನ್ನು ಆಕಾಶದಲ್ಲಿರಿಸಿದನು.
18 ಹಗಲನ್ನು ಮತ್ತು ರಾತ್ರಿಯನ್ನು ಆಳಲೆಂದು ದೇವರು ಈ ಬೆಳಕುಗಳನ್ನು ಆಕಾಶದಲ್ಲಿರಿಸಿದನು. ಇವು ಬೆಳಕನ್ನು ಕತ್ತಲೆಯಿಂದ ಬೇರ್ಪಡಿಸಿದವು. ದೇವರಿಗೆ ಇವು ಒಳ್ಳೆಯದಾಗಿ ಕಂಡವು.
19 ಹೀಗೆ ಸಾಯಂಕಾಲವೂ ಮುಂಜಾನೆಯೂ ಆಗಿ ನಾಲ್ಕನೆ ದಿನವಾಯಿತು. ಐದನೆ ದಿನ — ಮೀನುಗಳು ಮತ್ತು ಪಕ್ಷಿಗಳು
20 ಬಳಿಕ ದೇವರು, “ನೀರಿನಲ್ಲಿ ಅನೇಕ ಜಲಚರಗಳು ತುಂಬಿಕೊಳ್ಳಲಿ. ಭೂಮಿಯ ಮೇಲೆ ಆಕಾಶದಲ್ಲಿ ಪಕ್ಷಿಗಳು ಹಾರಾಡಲಿ” ಅಂದನು.
21 ಹೀಗೆ ದೇವರು ಸಮುದ್ರದ ಬೃಹದಾಕಾರದ ಪ್ರಾಣಿಗಳನ್ನು, ಸಮುದ್ರದಲ್ಲಿ ಚಲಿಸುವ ಪ್ರತಿಯೊಂದು ಬಗೆಯ ಜೀವಿಗಳನ್ನು ಮತ್ತು ರೆಕ್ಕೆಗಳುಳ್ಳ ಪ್ರತಿಯೊಂದು ಬಗೆಯ ಪಕ್ಷಿಗಳನ್ನು ಸೃಷ್ಟಿಸಿದನು. ಆತನಿಗೆ ಇವು ಒಳ್ಳೆಯದಾಗಿ ಕಂಡವು.
22 ಇದಲ್ಲದೆ ದೇವರು, “ಪ್ರಾಣಿಗಳು ಅಸಂಖ್ಯಾತವಾಗಿ ಸಮುದ್ರಗಳನ್ನು ತುಂಬಿಕೊಳ್ಳಲಿ; ಪಕ್ಷಿಗಳು ಅಸಂಖ್ಯಾತವಾಗಿ ಭೂಮಿಯಲ್ಲೆಲ್ಲಾ ಹರಡಿಕೊಳ್ಳಲಿ” ಎಂದು ಹೇಳಿ ಆಶೀರ್ವದಿಸಿದನು.
23 ಹೀಗೆ ಸಾಯಂಕಾಲವೂ ಮುಂಜಾನೆಯೂ ಆಗಿ ಐದನೆ ದಿನವಾಯಿತು. ಆರನೆ ದಿನ — ನೆಲಪ್ರಾಣಿಗಳು ಮತ್ತು ಮನುಷ್ಯರು
24 ಬಳಿಕ ದೇವರು, “ಭೂಮಿಯು ಅನೇಕ ಬಗೆಯ ಪ್ರಾಣಿಗಳನ್ನು ಅವುಗಳ ಜಾತಿಗನುಸಾರವಾಗಿ ಹುಟ್ಟಿಸಲಿ. ಪ್ರತಿಯೊಂದು ಬಗೆಯ ದೊಡ್ಡ ಪ್ರಾಣಿಗಳು ಮತ್ತು ಹರಿದಾಡುವ ಚಿಕ್ಕ ಪ್ರಾಣಿಗಳು ಹುಟ್ಟಿಕೊಂಡು ಅಭಿವೃದ್ಧಿಯಾಗಲಿ” ಅಂದನು. ಹಾಗೆಯೇ ಆಯಿತು.
25 ಹೀಗೆ ದೇವರು ಪ್ರತಿಯೊಂದು ಬಗೆಯ ಕಾಡುಪ್ರಾಣಿಗಳನ್ನು, ಸಾಕುಪ್ರಾಣಿಗಳನ್ನು ಮತ್ತು ಹರಿದಾಡುವ ಎಲ್ಲಾ ಕ್ರಿಮಿಗಳನ್ನು ಸೃಷ್ಟಿಸಿದನು. ಆತನಿಗೆ ಇವು ಒಳ್ಳೆಯದಾಗಿ ಕಂಡವು.
26 ಬಳಿಕ ದೇವರು, “ಈಗ ನಾವು ಮನುಷ್ಯನನ್ನು ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ನಿರ್ಮಿಸೋಣ. ಮನುಷ್ಯರು ಸಮುದ್ರದಲ್ಲಿರುವ ಎಲ್ಲಾ ಮೀನುಗಳ ಮೇಲೆ, ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳ ಮೇಲೆ ಮತ್ತು ಭೂಮಿಯ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳ ಮೇಲೆ ದೊರೆತನ ಮಾಡಲಿ” ಅಂದನು.
27 ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾಗಿ ಸೃಷ್ಟಿಸಿದನು. ಆತನು ಅವರನ್ನು ಗಂಡು ಮತ್ತು ಹೆಣ್ಣುಗಳಾಗಿ ರೂಪಿಸಿದನು.
28 ದೇವರು ಅವರನ್ನು ಆಶೀರ್ವದಿಸಿ, “ನೀವು ಅನೇಕ ಮಕ್ಕಳನ್ನು ಪಡೆದು ಭೂಮಿಯಲ್ಲೆಲ್ಲಾ ಹರಡಿಕೊಂಡು ಅದನ್ನು ಸ್ವಾಧೀನಪಡಿಸಿಕೊಳ್ಳಿರಿ. ಸಮುದ್ರದಲ್ಲಿರುವ ಮೀನುಗಳ ಮೇಲೆ, ಆಕಾಶದಲ್ಲಿರುವ ಪಕ್ಷಿಗಳ ಮೇಲೆ ಮತ್ತು ಭೂಮಿಯ ಮೇಲೆ ಚಲಿಸುವ ಪ್ರತಿಯೊಂದು ಜೀವಿಯ ಮೇಲೆ ದೊರೆತನ ಮಾಡಿರಿ” ಅಂದನು.
29 ಇದಲ್ಲದೆ ದೇವರು ಅವರಿಗೆ, “ಬೀಜಫಲಿಸುವ ಎಲ್ಲಾ ಸಸಿಗಳನ್ನು ಮತ್ತು ಬೀಜವುಳ್ಳ ಹಣ್ಣುಗಳನ್ನು ಫಲಿಸುವ ಎಲ್ಲಾ ಮರಗಳನ್ನು ನಿಮಗೆ ಆಹಾರವಾಗಿ ಕೊಟ್ಟಿದ್ದೇನೆ.
30 ಭೂಮಿಯ ಮೇಲಿರುವ ಪ್ರಾಣಿಗಳಿಗೆಲ್ಲಾ ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆಲ್ಲಾ ಭೂಮಿಯ ಮೇಲೆ ಹರಿದಾಡುವ ಕ್ರಿಮಿಕೀಟಗಳಿಗೆಲ್ಲಾ ಆಹಾರಕ್ಕಾಗಿ ಸಸ್ಯರಾಶಿಯನ್ನು ಕೊಟ್ಟಿದ್ದೇನೆ” ಅಂದನು. ಹಾಗೆಯೇ ಆಯಿತು.
31 ದೇವರು ತಾನು ಸೃಷ್ಟಿಸಿದ್ದನ್ನೆಲ್ಲಾ ನೋಡಿದಾಗ, ಅವು ಆತನಿಗೆ ಒಳ್ಳೆಯದಾಗಿ ಕಂಡವು. ಹೀಗೆ ಸಾಯಂಕಾಲವೂ ಮುಂಜಾನೆಯೂ ಆಗಿ ಆರನೆ ದಿನವಾಯಿತು.
×

Alert

×