English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Ezekiel Chapters

Ezekiel 34 Verses

1 ಯೆಹೋವನ ಸಂದೇಶ ನನಗೆ ಬಂತು. ಆತನು ಹೇಳಿದ್ದೇನೆಂದರೆ,
2 “ನರಪುತ್ರನೇ, ನೀನು ಇಸ್ರೇಲರ ಕುರುಬರ ಸಂಗಡ ನನ್ನ ಪರವಾಗಿ ಮಾತನಾಡು. ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ ಎಂದು ಅವರಿಗೆ ಹೇಳು, ‘ಇಸ್ರೇಲರ ಕುರುಬರೇ, ನೀವು ನೀವಾಗಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತೀರಿ. ಇದು ಸರಿಯಲ್ಲ. ನಿಮ್ಮ ಮಂದೆಗೆ ನೀವು ಆಹಾರ ಯಾಕೆ ಒದಗಿಸುವುದಿಲ್ಲ?
3 ನೀವು ಕೊಬ್ಬಿದ ಕುರಿಯ ಮಾಂಸವನ್ನು ತಿನ್ನುತ್ತೀರಿ; ಅದರ ಉಣ್ಣೆಯಿಂದ ಬಟ್ಟೆಯನ್ನು ತಯಾರಿಸುತ್ತೀರಿ. ಕೊಬ್ಬಿದ ಕುರಿಗಳನ್ನು ಕಡಿಯುತ್ತೀರಿ; ಆದರೆ ಕುರಿಗಳನ್ನು ಮೇಯಿಸುವುದಿಲ್ಲ.
4 ಆದರೆ ನೀವು ಬಲಹೀನ ಕುರಿಗಳನ್ನು ಬಲಪಡಿಸಲಿಲ್ಲ. ಕಾಯಿಲೆಯಲ್ಲಿರುವ ಕುರಿಗಳನ್ನು ನೀವು ಪರಾಂಬರಿಸಲಿಲ್ಲ. ಗಾಯಗೊಂಡ ಕುರಿಗಳಿಗೆ ಬಟ್ಟೆ ಸುತ್ತಲಿಲ್ಲ. ಕೆಲವು ಕುರಿಗಳು ದಾರಿತಪ್ಪಿ ದೂರ ಹೋದವು. ಆದರೆ ನೀವು ಅದರ ಬೆನ್ನ ಹಿಂದೆ ಹೋಗಿ ಹಿಂತಿರುಗಿ ಬರುವಂತೆ ಮಾಡಲಿಲ್ಲ. ತಪ್ಪಿಹೋದ ಕುರಿಗಳನ್ನು ನೀವು ಹುಡುಕಲಿಲ್ಲ. ನೀವು ಬಹಳ ಕ್ರೂರಿಗಳೂ ದಯೆ ಇಲ್ಲದವರೂ ಆಗಿದ್ದೀರಿ. ಆ ರೀತಿಯಾಗಿ ನೀವು ನಿಮ್ಮ ಕುರಿಗಳನ್ನು ನಡೆಸಿದಿರಿ.
5 “ ‘ಈಗ ಆ ಮಂದೆಯು ಚದರಿಹೋಗಿದೆ. ಯಾಕೆಂದರೆ ಅವುಗಳಿಗೆ ಕುರುಬರಿಲ್ಲ. ಅವುಗಳು ಕಾಡುಪ್ರಾಣಿಗಳಿಗೆ ಆಹಾರವಾದವು. ಆದ್ದರಿಂದ ಅವು ಚದರಿಹೋದವು.
6 ಕುರುಬರೇ ಇಲ್ಲವಾದ್ದರಿಂದ ಎತ್ತರವಾದ ಎಲ್ಲಾ ಬೆಟ್ಟಗುಡ್ಡಗಳ ಮೇಲೆ ನನ್ನ ಮಂದೆಯು ಅಲೆದಾಡಿತು; ಭೂಮಂಡಲದ ಎಲ್ಲಾ ಕಡೆಗಳಲ್ಲಿ ಚದರಿ ಹೋಯಿತು.’ ”
7 ಆದ್ದರಿಂದ ಕುರಬರೇ, ಯೆಹೋವನ ಮಾತುಗಳನ್ನು ಕೇಳಿರಿ. ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ,
8 “ನನ್ನ ಜೀವದಾಣೆ, ನನ್ನ ಕುರಿಗಳು ಎಲ್ಲಾ ಬಗೆಯ ಕಾಡುಪ್ರಾಣಿಗಳಿಂದ ಹಿಡಿಯಲ್ಪಟ್ಟು ಅವುಗಳಿಗೆ ಆಹಾರವಾದವು. ಯಾಕೆಂದರೆ ಅವುಗಳಿಗೆ ಒಳ್ಳೆಯ ಕುರುಬರಿರಲಿಲ್ಲ. ನನ್ನ ಕುರುಬರು ತಮ್ಮ ಕುರಿಗಳಿಗೆ ಗಮನಕೊಡಲಿಲ್ಲ. ಅವರು ಅವುಗಳನ್ನು ಕೊಂದು ತಿಂದರು. ಆದರೆ ಮಂದೆಗೆ ಆಹಾರ ಒದಗಿಸಲಿಲ್ಲ.”
9 ಆದ್ದರಿಂದ ಕುರುಬರೇ, ಯೆಹೋವನ ಮಾತನ್ನು ಕೇಳಿರಿ.
10 ಯೆಹೋವನು ಹೇಳುವುದೇನೆಂದರೆ, “ನಾನು ಆ ಕುರುಬರಿಗೆ ವಿರುದ್ಧವಾಗಿದ್ದೇನೆ. ಅವರ ಕೈಯಿಂದ ನನ್ನ ಕುರಿಗಳ ಬಗ್ಗೆ ವಿಚಾರಿಸುವೆನು. ನಾನು ಅವರನ್ನು ತೊಲಗಿಸಿ ಬಿಡುವೆನು. ಇನ್ನು ಮುಂದೆ ಅವರು ನನ್ನ ಕುರುಬರಾಗಿರುವುದಿಲ್ಲ. ಇನ್ನು ಅವರಿಗೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ನನ್ನ ಕುರಿಗಳನ್ನು ಅವರ ಬಾಯಿಂದ ತಪ್ಪಿಸುವೆನು. ಆಗ ನನ್ನ ಕುರಿಗಳು ಅವರಿಗೆ ಆಹಾರವಾಗುವುದಿಲ್ಲ.”
11 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ, “ನಾನೇ ಅವರಿಗೆ ಕುರುಬನಾಗಿರುವೆನು. ತಪ್ಪಿಹೋದ ಕುರಿಗಳನ್ನು ನಾನು ಹುಡುಕುವೆನು, ನಾನು ಅವರನ್ನು ಗಮನಿಸುತ್ತಾ ನಡೆಸುವೆನು.
12 ತಪ್ಪಿಹೋದ ಕುರಿಗಳಿಗಾಗಿ ಹುಡುಕುವ ಕುರುಬನಂತೆ ನನ್ನ ಕುರಿಗಳನ್ನು ಹುಡುಕಿ ರಕ್ಷಿಸುವೆನು. ಮೋಡ ಕವಿದ ಕಾರ್ಗತ್ತಲೆಯ ದಿನದಲ್ಲಿ ತಪ್ಪಿಸಿಕೊಂಡ ಅವುಗಳನ್ನು ಹುಡುಕಿ ತರುವೆನು.
13 ನನ್ನ ಕುರಿಗಳನ್ನು ಆ ದೇಶಗಳಿಂದ ಬರಮಾಡುವೆನು. ಆ ದೇಶಗಳಿಂದ ಅವುಗಳನ್ನು ಒಟ್ಟುಗೂಡಿಸುವೆನು. ಅವುಗಳ ಸ್ವಂತ ದೇಶಕ್ಕೆ ಹಿಂದಿರುಗಿಸುವೆನು. ಇಸ್ರೇಲರ ಬೆಟ್ಟಗಳಲ್ಲಿ ಅವುಗಳನ್ನು ಮೇಯಿಸುವೆನು. ನೀರಿನ ತೊರೆಗಳ ಬದಿಯಲ್ಲಿ ಜನರಿರುವ ಸ್ಥಳಗಳಲ್ಲಿ ನಾನವುಗಳನ್ನು ಮೇಯಿಸುವೆನು.
14 ಹುಲ್ಲುಗಾವಲಿಗೆ ನಾನು ಅವುಗಳನ್ನು ನಡೆಸುವೆನು. ಇಸ್ರೇಲಿನ ಎತ್ತರವಾದ ಬೆಟ್ಟಗಳಲ್ಲಿ ಅವು ಮೇಯುವವು. ಅಲ್ಲಿ ಒಳ್ಳೆಯ ಸ್ಥಳದಲ್ಲಿ ಅವುಗಳು ಮಲಗಿ ಹುಲ್ಲನ್ನು ಮೇಯುವವು.
15 ಹೌದು, ನಾನು ನನ್ನ ಮಂದೆಯನ್ನು ಮೇಯಿಸಿ ಅವುಗಳನ್ನು ವಿಶ್ರಾಂತಿಯ ಸ್ಥಳಕ್ಕೆ ನಡೆಸುವೆನು.” ಇದು ನನ್ನ ಒಡೆಯನಾದ ಯೆಹೋವನ ನುಡಿ.
16 “ಕಳೆದುಹೋದ ಕುರಿಗಳನ್ನು ನಾನು ಹುಡುಕುವೆನು. ಚದರಿಹೋಗಿದ್ದ ಕುರಿಗಳನ್ನು ಹಿಂದಕ್ಕೆ ತರುವೆನು. ಗಾಯಗೊಂಡ ಕುರಿಗಳನ್ನು ಬಟ್ಟೆಯಿಂದ ಸುತ್ತುವೆನು. ಬಲಹೀನ ಕುರಿಗಳನ್ನು ಬಲಶಾಲಿಯಾಗಿ ಮಾಡುವೆನು. ಆದರೆ ನಾನು ಕೊಬ್ಬಿದ, ಶಕ್ತಿಶಾಲಿಯಾದ ಕುರುಬರನ್ನು ನಾಶಮಾಡುವೆನು. ಯೋಗ್ಯವಾದ ಶಿಕ್ಷೆಯನ್ನು ಅವರಿಗೆ ಉಣಿಸುವೆನು.”
17 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನನ್ನ ಮಂದೆಯೇ, ನಾನು ಒಂದೊಂದು ಕುರಿಗಳ ನ್ಯಾಯತೀರಿಸುತ್ತೇನೆ. ಟಗರುಗಳನ್ನೂ ಹೋತಗಳನ್ನೂ ನ್ಯಾಯವಿಚಾರಣೆ ಮಾಡುವೆನು.
18 ನೀವು ಒಳ್ಳೆಯ ದೇಶದಲ್ಲಿ ಬೆಳೆಯುವ ಹುಲ್ಲನ್ನು ಮೇಯಬಹುದು. ಆದ್ದರಿಂದ ಬೇರೆ ಕುರಿಗಳು ಮೇಯಬೇಕಾದ ಹುಲ್ಲನ್ನು ನೀವು ಯಾಕೆ ತುಳಿದು ಹಾಳುಮಾಡುವಿರಿ? ನೀವು ಶುದ್ಧವಾದ ನೀರು ಬೇಕಾದಷ್ಟು ಕುಡಿಯಬಹುದು. ಆದರೆ ಬೇರೆ ಕುರಿಗಳು ನೀರು ಕುಡಿಯದಂತೆ ಯಾಕೆ ನೀರನ್ನು ಕದಡಿಸುತ್ತೀರಿ.
19 ನೀವು ತುಳಿದು ಹಾಳುಮಾಡಿದ ಹುಲ್ಲನ್ನು ನನ್ನ ಕುರಿಗಳು ಮೇಯಬೇಕು. ನೀವು ಕಾಲಿನಿಂದ ಕೆದಕಿ ಕೆಸರು ಮಾಡಿದ ನೀರನ್ನು ನನ್ನ ಕುರಿಗಳು ಕುಡಿಯಬೇಕು.”
20 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ನಾನು ಕೊಬ್ಬಿದ ಕುರಿಗಳಿಗೂ ಬಲಹೀನ ಕುರಿಗಳಿಗೂ ನ್ಯಾಯತೀರಿಸುವೆನು.
21 ನೀವು ನಿಮ್ಮ ಶಕ್ತಿಯಿಂದ ಬೇರೆ ಕುರಿಗಳನ್ನು ದೂಡಿಬಿಡುವಿರಿ. ನಿಮ್ಮ ಕೊಂಬುಗಳಿಂದ ಬಲಹೀನ ಕುರಿಗಳನ್ನು ಹಾದುಬಿಡುವಿರಿ. ಅವುಗಳು ಆ ಸ್ಥಳದಿಂದ ಓಡಿಬಿಡುವಂತೆ ಮಾಡುವಿರಿ.
22 ಆದ್ದರಿಂದ ನಾನು ನನ್ನ ಕುರಿಗಳನ್ನು ರಕ್ಷಿಸುವೆನು. ಅವುಗಳನ್ನು ಕಾಡುಪ್ರಾಣಿಗಳು ಇನ್ನು ಮುಂದೆ ಹಿಡಿಯಲಾರವು. ಅವುಗಳಲ್ಲಿ ಪ್ರತಿಯೊಂದಕ್ಕೂ ನಾನು ನ್ಯಾಯತೀರಿಸುವೆನು.
23 ಆಮೇಲೆ ನಾನು ಅವರಿಗೆ ಒಬ್ಬ ಕುರುಬನನ್ನು ನೇಮಿಸುವೆನು. ಅವನು ನನ್ನ ಸೇವಕನಾದ ದಾವೀದನು; ಅವನು ಅವರನ್ನು ಮೇಯಿಸುವನು ಮತ್ತು ಅವರಿಗೆ ಕುರುಬನಾಗುವನು.
24 ಯೆಹೋವನಾದ ನಾನು ಅವರಿಗೆ ದೇವರಾಗಿರುವೆನು. ನನ್ನ ಸೇವಕನಾದ ದಾವೀದನು ಅವರೊಂದಿಗೆ ವಾಸಿಸುತ್ತಾ ಅವರನ್ನು ಆಳುವನು. ಇದು ಯೆಹೋವನಾದ ನನ್ನ ನುಡಿ.
25 “ನಾನು ನನ್ನ ಕುರಿಗಳೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡುವೆನು. ಕೆಟ್ಟ ಕುರಿಗಳನ್ನು ನಾನು ದೇಶದೊಳಗಿಂದ ತೆಗೆದುಬಿಡುವೆನು. ಆಮೇಲೆ ನನ್ನ ಕುರಿಗಳು ಅಡವಿಯಲ್ಲಿ ಸುರಕ್ಷಿತವಾಗಿದ್ದು ಕಾಡುಗಳಲ್ಲಿ ಮಲಗಿಕೊಳ್ಳುವವು.
26 ನಾನು ನನ್ನ ಕುರಿಗಳನ್ನೂ ನನ್ನ ಬೆಟ್ಟದ ಸುತ್ತಲೂ ಇರುವ ಸ್ಥಳಗಳನ್ನೂ ಆಶೀರ್ವದಿಸುವೆನು. ಸರಿಯಾದ ಸಮಯಕ್ಕೆ ಮಳೆ ಬೀಳುವಂತೆ ಮಾಡುವೆನು. ಮತ್ತು ಅದನ್ನು ಆಶೀರ್ವಾದದ ಸುರಿಮಳೆಯಂತೆ ಸುರಿಸುವೆನು.
27 ಹೊಲದಲ್ಲಿ ಬೆಳೆಯುವ ಮರಗಳು ಫಲವನ್ನಿಯುವವು. ಭೂಮಿಯು ಬೆಳೆಯನ್ನು ಕೊಡುವದು. ಆಗ ಕುರಿಗಳು ಅವರ ದೇಶದಲ್ಲಿ ಸುರಕ್ಷಿತವಾಗಿರುವವು. ಅವರ ಮೇಲಿರುವ ನೊಗಗಳನ್ನು ನಾನು ಮುರಿದುಬಿಡುವೆನು. ಅವರನ್ನು ಗುಲಾಮರನ್ನಾಗಿ ಮಾಡಿದ ದೇಶದವರ ಶಕ್ತಿಯನ್ನೆ ಮುರಿಯುವೆನು. ನಾನು ಯೆಹೋವನೆಂದು ಆಗ ಅವರಿಗೆ ತಿಳಿಯುವದು.
28 ಬೇರೆ ದೇಶಗಳು ಅವರನ್ನು ಪ್ರಾಣಿಗಳನ್ನು ಹಿಡಿಯುವಂತೆ ಇನ್ನು ಹಿಡಿಯುವದಿಲ್ಲ. ಅವರು ಅವುಗಳನ್ನು ಇನ್ನು ಮುಂದಕ್ಕೆ ತಿನ್ನುವದಿಲ್ಲ. ಅವರು ಸುರಕ್ಷಿತವಾಗಿ ಜೀವಿಸುವರು. ಯಾರೂ ಅವರನ್ನು ಇನ್ನು ಹೆದರಿಸುವುದಿಲ್ಲ.
29 ನಾನು ಅವರಿಗೆ ಭೂಮಿಯನ್ನು ಕೊಡುವೆನು. ಅದರಲ್ಲಿ ಅವರು ತೋಟವನ್ನು ಮಾಡುವರು. ಆ ನಾಡಿನಲ್ಲಿ ಅವರು ಇನ್ನೆಂದಿಗೂ ಹಸಿವೆಯಿಂದ ಸಂಕಟಪಡುವುದಿಲ್ಲ. ಇತರ ಜನಾಂಗದವರಿಂದ ಇನ್ನು ಮುಂದೆ ಅವಮಾನ ಹೊಂದುವುದಿಲ್ಲ.
30 ಆಗ ನಾನು ಅವರ ದೇವರೆಂದೂ ನಾನು ಅವರೊಂದಿಗೆ ಇದ್ದೇನೆ ಎಂದೂ ಅವರು ತಿಳಿದುಕೊಳ್ಳುವರು. ಇಸ್ರೇಲ್ ಜನಾಂಗವು ಸಹ ತಾವು ನನ್ನ ಜನರು ಎಂದು ತಿಳಿದುಕೊಳ್ಳುವರು.” ಇದು ಒಡೆಯನಾದ ಯೆಹೋವನ ನುಡಿ.
31 “ನೀವು ನನ್ನ ಕುರಿಗಳು, ಹಸಿರುಗಾವಲಿನ ಕುರಿಗಳು. ನೀವು ಮಾನವರಷ್ಟೇ. ನಾನು ನಿಮ್ಮ ದೇವರು.” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.
×

Alert

×