ಆಗ ಯೆಹೋವನು ಮೋಶೆಗೆ, “ನಾನು ಫರೋಹನಿಗೆ ಮಾಡುವುದನ್ನು ಈಗ ನೀನು ನೋಡುವೆ. ನಾನು ನನ್ನ ಮಹಾಶಕ್ತಿಯನ್ನು ಅವನಿಗೆ ವಿರುದ್ಧವಾಗಿ ಉಪಯೋಗಿಸುವುದರಿಂದ ಅವನು ನನ್ನ ಜನರನ್ನು ಹೋಗಗೊಡಿಸುವನು; ಬಲವಂತದಿಂದ ಅವರನ್ನು ಹೊರಡಿಸುವನು” ಎಂದು ಹೇಳಿದನು.
“ನಾನು ಯೆಹೋವನೇ. ನಾನು ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಕಾಣಿಸಿಕೊಂಡೆನು. ಅವರು ನನ್ನನ್ನು ‘ಎಲ್ ಶದ್ದಾಯ್’ (ಸರ್ವಶಕ್ತನಾದ ದೇವರು) ಎಂದು ಕರೆದರು. ಆದರೆ ನಾನು ನನ್ನನ್ನು ಯೆಹೋವ ಎಂಬ ನನ್ನ ಹೆಸರಿನಲ್ಲಿ ಅವರಿಗೆ ಗೊತ್ತುಪಡಿಸಿಕೊಳ್ಳಲಿಲ್ಲ.
ನಾನು ಅವರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡೆನು. ಕಾನಾನ್ ದೇಶವನ್ನು ಅವರಿಗೆ ಕೊಡುವುದಾಗಿ ನಾನು ವಾಗ್ದಾನ ಮಾಡಿದೆನು. ಅವರು ಆ ದೇಶದಲ್ಲಿ ಜೀವಿಸಿದರೂ ಅದು ಅವರ ಸ್ವಂತ ದೇಶವಾಗಿರಲಿಲ್ಲ.
ಆದ್ದರಿಂದ ನನ್ನ ಈ ಮಾತುಗಳನ್ನು ಇಸ್ರೇಲರಿಗೆ ತಿಳಿಸು: ‘ನಾನೇ ಯೆಹೋವನು. ಈಜಿಪ್ಟಿನವರು ನಿಮ್ಮಿಂದ ಮಾಡಿಸುವ ಬಿಟ್ಟೀಕೆಲಸದಿಂದ ತಪ್ಪಿಸಿ ಈಜಿಪ್ಟಿನವರ ಗುಲಾಮಗಿರಿಯಿಂದ ಬಿಡಿಸುವೆನು. ನನ್ನ ಮಹಾಶಕ್ತಿಯಿಂದ ಈಜಿಪ್ಟಿನವರನ್ನು ಭಯಂಕರವಾಗಿ ದಂಡಿಸುವೆನು; ಬಳಿಕ ನಿಮ್ಮನ್ನು ರಕ್ಷಿಸುವೆನು.
ನೀವು ನನ್ನ ಜನರಾಗಿರುವಿರಿ; ನಾನು ನಿಮ್ಮ ದೇವರಾಗಿರುವೆನು. ನಿಮ್ಮ ದೇವರಾಗಿರುವ ಯೆಹೋವನಾದ ನಾನೇ ನಿಮ್ಮನ್ನು ಈಜಿಪ್ಟಿನವರ ಬಿಟ್ಟೀಕೆಲಸದಿಂದ ಬಿಡುಗಡೆಗೊಳಿಸಿದೆನೆಂದು ಆಗ ನೀವು ತಿಳಿದುಕೊಳ್ಳುವಿರಿ.
ಇದಲ್ಲದೆ ಅಬ್ರಹಾಮ, ಇಸಾಕ ಮತ್ತು ಯಾಕೋಬರಿಗೆ ನಾನು ವಾಗ್ದಾನ ಮಾಡಿದ ದೇಶಕ್ಕೆ ನಿಮ್ಮನ್ನು ನಡಿಸುವೆನು. ನಾನು ಆ ದೇಶವನ್ನು ನಿಮಗೆ ಕೊಡುವೆನು. ಅದು ನಿಮ್ಮದಾಗಿರುವುದು. ನಾನೇ ಯೆಹೋವನು’ ” ಎಂದು ಹೇಳಿದನು.
ಅದಕ್ಕೆ ಮೋಶೆ, “ಇಸ್ರೇಲರು ನನ್ನ ಮಾತನ್ನು ಕೇಳುವುದಿಲ್ಲ! ಆದ್ದರಿಂದ ಫರೋಹನು ನನ್ನ ಮಾತನ್ನು ಖಂಡಿತವಾಗಿ ಕೇಳುವುದಿಲ್ಲ. ನಾನು ಮಾತಾಡುವುದರಲ್ಲಿ ಜಾಣನಲ್ಲ” [*ಮಾತಾಡುವುದರಲ್ಲಿ ಜಾಣನಲ್ಲ ಅಥವಾ “ನಾನು ವಿದೇಶಿಯವನಂತೆ ಮಾತಾಡುತ್ತೇನೆ” ಅಕ್ಷರಶಃ, “ನನ್ನ ತುಟಿಗಳಿಗೆ ಸುನ್ನತಿಯಾಗಿಲ್ಲ.”] ಎಂದು ಹೇಳಿದನು.
ಆದರೆ, ಯೆಹೋವನು ಮೋಶೆ ಮತ್ತು ಆರೋನರ ಸಂಗಡ ಮಾತಾಡಿ ಇಸ್ರೇಲರೊಡನೆಯೂ ಫರೋಹನೊಡನೆಯೂ ಮಾತಾಡಬೇಕೆಂದು ಆಜ್ಞಾಪಿಸಿದನು. ಅಲ್ಲದೆ ಈಜಿಪ್ಟಿನಿಂದ ಇಸ್ರೇಲರನ್ನು ಬಿಡಿಸಿಕೊಂಡು ಹೋಗಬೇಕೆಂದು ಯೆಹೋವನು ಅವರಿಗೆ ಆಜ್ಞಾಪಿಸಿದನು.
ಆರೋನನು ಎಲೀಶೇಬಳನ್ನು ಮದುವೆಯಾದನು. (ಎಲೀಶೇಬಳು ಅಮ್ಮೀನಾದ್ವಾನ ಮಗಳು ಮತ್ತು ನಹಶೋನನ ತಂಗಿ.) ಆರೋನನಿಗೆ ಎಲೀಶೇಬಳಲ್ಲಿ ನಾದ್ವಾ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬ ಗಂಡುಮಕ್ಕಳು ಹುಟ್ಟಿದರು.
ಮೋಶೆ ಆರೋನರು ಸಹ ಲೇವಿ ಕುಲದವರು. “ನನ್ನ ಜನರನ್ನು ಗುಂಪುಗುಂಪಾಗಿ [†ಗುಂಪುಗುಂಪಾಗಿ ಇದು ಸೇನೆಯಲ್ಲಿ ಉಪಯೋಗಿಸುವ ಪದ ಪ್ರಯೋಗ, ಇಸ್ರೇಲರು ವ್ಯವಸ್ಥಿತವಾದ ಸೈನ್ಯವಾಗಿದ್ದರು ಎಂದು ಇದು ತೋರಿಸುತ್ತದೆ.] ಈಜಿಪ್ಟಿನಿಂದ ನಡೆಸಿಕೊಂಡು ಹೋಗಿ” ಎಂದು ದೇವರು ಹೇಳಿದ್ದು ಇವರಿಗೇ.