1
|
ಬಹಳ ಸಮಯ ದಾಟಿಹೋದರೂ ಮೋಶೆ ಬೆಟ್ಟದಿಂದ ಕೆಳಗಿಳಿಯಲಿಲ್ಲವಾದ್ದರಿಂದ ಇಸ್ರೇಲರು ಆರೋನನ ಬಳಿಗೆ ಒಟ್ಟಾಗಿ ಬಂದು, “ನೋಡು, ಮೋಶೆಯು ನಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದನು. ಆದರೆ ಅವನಿಗೇನಾಯಿತೊ ನಮಗೆ ತಿಳಿಯದು. ಆದ್ದರಿಂದ ನಮ್ಮನ್ನು ಮುನ್ನಡೆಸಲು ಕೆಲವು ದೇವರುಗಳನ್ನು ಮಾಡಿಕೊಡು” ಎಂದು ಹೇಳಿದರು. |
2
|
ಆರೋನನು ಅವರಿಗೆ, “ನಿಮ್ಮ ಹೆಂಡತಿಯ ಮತ್ತು ಗಂಡು ಹೆಣ್ಣುಮಕ್ಕಳಲ್ಲಿರುವ ಚಿನ್ನದ ಓಲೆಗಳನ್ನು ತಂದು ನನಗೆ ಕೊಡಿರಿ” ಎಂದು ಹೇಳಿದನು. |
3
|
ಆದ್ದರಿಂದ ಅವರೆಲ್ಲರೂ ತಮ್ಮ ಚಿನ್ನದ ಓಲೆಗಳನ್ನು ತಂದುಕೊಟ್ಟರು. |
4
|
ಆರೋನನು ಬಸವನ ಮೂರ್ತಿಯನ್ನು ಚಿನ್ನದಿಂದ ಎರಕಹೊಯ್ಯಿಸಿದನು. ಬಳಿಕ ಅವರು, “ಇಸ್ರೇಲರೇ, ನಿಮ್ಮ ದೇವರುಗಳು ಇಲ್ಲಿವೆ! ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರುಗಳು ಇವುಗಳೇ” ಎಂದು ಹೇಳಿದರು. |
5
|
ಆರೋನನು ಇವೆಲ್ಲವನ್ನು ನೋಡಿ, ಬಸವನ ಮುಂದೆ ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. ಬಳಿಕ, “ನಾಳೆ ಯೆಹೋವನನ್ನು ಸನ್ಮಾನಿಸಲು ಒಂದು ವಿಶೇಷ ಹಬ್ಬವಿರುವುದು” ಎಂದು ಪ್ರಕಟಿಸಿದನು. |
6
|
ಮರುದಿನ ಮುಂಜಾನೆ ಜನರೆಲ್ಲರೂ ಬೇಗನೆ ಎದ್ದು ತಮ್ಮ ಪಶುಗಳನ್ನು ವಧಿಸಿ ಸರ್ವಾಂಗ ಹೋಮಗಳನ್ನಾಗಿಯೂ ಸಮಾಧಾನಯಜ್ಞಗಳನ್ನಾಗಿಯೂ ಅರ್ಪಿಸಿ ತಿನ್ನುವುದಕ್ಕೂ ಕುಡಿಯುವುದಕ್ಕೂ ಕುಳಿತುಕೊಂಡರು. ಬಳಿಕ ಎದ್ದು ಕುಣಿದಾಡಿದರು ಮತ್ತು ಕೂಗಾಡಿದರು. |
7
|
ಅದೇ ಸಮಯದಲ್ಲಿ ಯೆಹೋವನು ಮೋಶೆಗೆ, “ಬೆಟ್ಟದಿಂದ ಇಳಿದುಹೋಗು. ನೀನು ಈಜಿಪ್ಟಿನಿಂದ ಕರೆದುಕೊಂಡು ಬಂದ ನಿನ್ನ ಜನರು ಭಯಂಕರವಾದ ಪಾಪ ಮಾಡಿದ್ದಾರೆ. |
8
|
ನಾನು ಅವರಿಗೆ ಆಜ್ಞಾಪಿಸಿದವುಗಳಿಗೆ ಬಹುಬೇಗನೆ ಅವಿಧೇಯರಾಗಿದ್ದಾರೆ. ಚಿನ್ನವನ್ನು ಕರಗಿಸಿ ಅದರಿಂದ ಬಸವನನ್ನು ಮಾಡಿಕೊಂಡು ಅದನ್ನು ಪೂಜಿಸುತ್ತಾ ಅದಕ್ಕೆ ಯಜ್ಞಗಳನ್ನು ಸಮರ್ಪಿಸುತ್ತಿದ್ದಾರೆ. ‘ಇಸ್ರೇಲರೇ ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರುಗಳು ಇವುಗಳು’ ಎಂದು ಜನರು ಹೇಳುತ್ತಿದ್ದಾರೆ” ಎಂದನು. |
9
|
ಯೆಹೋವನು ಮೋಶೆಗೆ, “ನಾನು ಈ ಜನರನ್ನು ನೋಡಿದ್ದೇನೆ. ಅವರು ಬಹಳ ಮೊಂಡರೆಂದು ನಾನು ಬಲ್ಲೆನು. ಅವರು ಯಾವಾಗಲೂ ನಿನಗೆ ವಿರೋಧವಾಗಿ ದಂಗೆ ಏಳುವರು.” |
10
|
“ಆದ್ದರಿಂದ ನಾನು ಅವರನ್ನು ಕೋಪದಿಂದ ನಾಶಮಾಡಿಬಿಡುತ್ತೇನೆ. ನನ್ನನ್ನು ತಡೆಯಬೇಡ. ಬಳಿಕ ನಾನು ನಿನ್ನಿಂದ ಒಂದು ಮಹಾಜನಾಂಗವನ್ನು ಉಂಟುಮಾಡುವೆನು” ಎಂದು ಹೇಳಿದನು. |
11
|
ಆದರೆ ಮೋಶೆಯು ತನ್ನ ದೇವರಾದ ಯೆಹೋವನಿಗೆ, “ಯೆಹೋವನೇ, ನಿನ್ನ ಕೋಪವು ನಿನ್ನ ಜನರನ್ನು ನಾಶಮಾಡದಿರಲಿ. ನಿನ್ನ ಮಹಾಶಕ್ತಿಯಿಂದಲೂ ಬಲದಿಂದಲೂ ಈ ಜನರನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದೆಯಲ್ಲಾ. |
12
|
ಆದರೆ ನೀನು ನಿನ್ನ ಜನರನ್ನು ನಾಶಮಾಡಿದರೆ, ಈಜಿಪ್ಟಿನವರು, ‘ಯೆಹೋವನು ತನ್ನ ಜನರಿಗೆ ಕೇಡನ್ನು ಮಾಡುವುದಕ್ಕಾಗಿಯೇ ಈಜಿಪ್ಟಿನಿಂದ ಕರೆದುಕೊಂಡು ಹೋದನು. ಆತನು ಅವರನ್ನು ಬೆಟ್ಟಗಳಲ್ಲಿ ಕೊಲ್ಲಬೇಕೆಂದಿದ್ದನು; ತನ್ನ ಜನರನ್ನು ಭೂಮಿಯಿಂದ ನಿರ್ಮೂಲ ಮಾಡಬೇಕೆಂದಿದ್ದನು’ ಎಂದು ಹೇಳುವರು. ಆದ್ದರಿಂದ ನಿನ್ನ ಜನರ ಮೇಲೆ ಕೋಪಗೊಳ್ಳಬೇಡ. ನಿನ್ನ ಕೋಪವನ್ನು ಬಿಟ್ಟುಬಿಡು. ನಿನ್ನ ಜನರನ್ನು ನಾಶಮಾಡಬೇಡ. |
13
|
ನಿನ್ನ ಸೇವೆಮಾಡಿದ ಅಬ್ರಹಾಮನನ್ನು, ಇಸಾಕನನ್ನು, ಇಸ್ರೇಲನನ್ನು ಜ್ಞಾಪಿಸಿಕೊ. ನೀನು ನಿನ್ನ ಹೆಸರನ್ನು ಉಪಯೋಗಿಸಿ ಆ ಜನರಿಗೆ ವಾಗ್ದಾನವನ್ನು ಮಾಡಿದೆ. ‘ನಾನು ನಿನ್ನ ಸಂತತಿಯವರನ್ನು ಆಕಾಶದ ನಕ್ಷತ್ರಗಳಷ್ಟು ಮಾಡುವೆನು. ನಾನು ವಾಗ್ದಾನ ಮಾಡಿದಂತೆ ಈ ದೇಶವನ್ನೆಲ್ಲಾ ನಿನ್ನ ಸಂತತಿಗಳವರಿಗೆ ಕೊಡುವೆನು. ಈ ದೇಶ ಎಂದೆಂದಿಗೂ ಅವರದಾಗಿರುವುದು’ ಎಂದು ನೀನು ನಿನ್ನ ಹೆಸರಿನಲ್ಲಿ ವಾಗ್ದಾನ ಮಾಡಿದೆಯಲ್ಲಾ” ಅಂದನು. |
14
|
ಆದ್ದರಿಂದ ಯೆಹೋವನು ಜನರಿಗಾಗಿ ಮರುಕಪಟ್ಟು ತನ್ನ ಮನಸ್ಸನ್ನು ಮಾರ್ಪಡಿಸಿಕೊಂಡನು; ತಾನು ಹೇಳಿದ್ದ ಕೇಡನ್ನು ಮಾಡಲಿಲ್ಲ; ತನ್ನ ಜನರನ್ನು ನಾಶಮಾಡಲಿಲ್ಲ. |
15
|
ಬಳಿಕ ಮೋಶೆ ಬೆಟ್ಟದಿಂದಿಳಿದು ಹೋದನು. ಮೋಶೆಯೊಡನೆ ಆಜ್ಞಾಶಾಸನಗಳ ಎರಡು ಕಲ್ಲಿನ ಹಲಿಗೆಗಳಿದ್ದವು. ಈ ಆಜ್ಞಾಶಾಸನಗಳ ಕಲ್ಲುಗಳ ಮುಂದೆಯೂ ಹಿಂದೆಯೂ ಬರೆಯಲ್ಪಟ್ಟಿದ್ದವು. |
16
|
ಯೆಹೋವನು ತಾನೇ ಆ ಕಲ್ಲುಗಳನ್ನು ಮಾಡಿ ಅವುಗಳ ಮೇಲೆ ಬರೆದಿದ್ದನು. |
17
|
ಇಸ್ರೇಲರ ಗದ್ದಲವನ್ನೂ ಕೂಗಾಟವನ್ನೂ ಯೆಹೋಶುವನು ಕೇಳಿ ಮೋಶೆಗೆ, “ಪಾಳೆಯದ ಕಡೆಯಿಂದ ಯುದ್ಧದ ಧ್ವನಿ ಕೇಳಿಬರುತ್ತಿದೆ” ಅಂದನು. |
18
|
ಅದಕ್ಕೆ ಮೋಶೆ, “ಅದು ಸೈನ್ಯದ ಜಯಧ್ವನಿಯಲ್ಲ. ಅದು ಸೋಲಿನಿಂದ ಕೂಗುವ ಸೈನ್ಯದ ಧ್ವನಿಯೂ ಅಲ್ಲ. ನಾನು ಕೇಳುತ್ತಿರುವುದು ಗೋಷ್ಠಿಯ ಧ್ವನಿ” ಎಂದು ಉತ್ತರಿಸಿದನು. |
19
|
ಮೋಶೆಯು ಪಾಳೆಯದ ಹತ್ತಿರಕ್ಕೆ ಬಂದನು. ಅವನು ಚಿನ್ನದ ಬಸವನನ್ನೂ ಜನರ ನರ್ತನವನ್ನೂ ನೋಡಿ ಬಹುಕೋಪಗೊಂಡು ಕಲ್ಲಿನ ಹಲಿಗೆಗಳನ್ನು ನೆಲದ ಮೇಲೆ ಬಿಸಾಡಿಬಿಟ್ಟನು; ಅವು ಚೂರುಚೂರಾಗಿ ಒಡೆದುಹೋದವು. |
20
|
ಬಳಿಕ ಮೋಶೆಯು ಆ ಬಸವನ ಮೂರ್ತಿಯನ್ನು ಬೆಂಕಿಯಲ್ಲಿ ಕರಗಿಸಿ ಅದರ ಚಿನ್ನವನ್ನು ಧೂಳಿನಂತೆ ಅರೆದು ನೀರಿಗೆ ಹಾಕಿ ಆ ನೀರನ್ನು ಇಸ್ರೇಲರಿಗೆ ಕುಡಿಸಿದನು. |
21
|
ಮೋಶೆಯು ಆರೋನನಿಗೆ, “ಈ ಜನರು ನಿನಗೇನು ಮಾಡಿದರು? ಇಂಥಾ ಕೆಟ್ಟ ಪಾಪವನ್ನು ಮಾಡುವಂತೆ ಯಾಕೆ ಅವರನ್ನು ನಡಿಸಿದೆ?” ಎಂದು ಹೇಳಿದನು. |
22
|
ಆರೋನನು, “ಕೋಪಗೊಳ್ಳಬೇಡ. ಇವರು ಯಾವಾಗಲೂ ಪಾಪಮಾಡಲು ಸಿದ್ಧರಾಗಿರುವುದು ನಿನಗೆ ಗೊತ್ತೇ ಇದೆ. |
23
|
ಅವರು ನನಗೆ, ‘ಮೋಶೆಯು ನಮ್ಮನ್ನು ಈಜಿಪ್ಟಿನಿಂದ ಹೊರಗೆ ನಡೆಸಿದನು. ಆದರೆ ಅವನಿಗೇನಾಯಿತೊ ನಮಗೆ ತಿಳಿಯದು. ಆದ್ದರಿಂದ ನಮ್ಮನ್ನು ಮುನ್ನಡೆಸಲು ದೇವರುಗಳನ್ನು ಮಾಡಿಕೊಡು’ ಎಂದು ಕೇಳಿದರು. |
24
|
ಆದ್ದರಿಂದ ನಾನು ಅವರಿಗೆ, “ನಿಮ್ಮಲ್ಲಿ ಚಿನ್ನದ ಆಭರಣಗಳಿದ್ದರೆ ನನಗೆ ಕೊಡಿರಿ’ ಎಂದು ಹೇಳಿದೆನು. ಅವರು ಆಭರಣಗಳನ್ನು ನನಗೆ ತಂದುಕೊಟ್ಟರು. ನಾನು ಅವುಗಳನ್ನು ಬೆಂಕಿಯಲ್ಲಿ ಕರಗಿಸಿ ಈ ಬಸವನ ಮೂರ್ತಿಯನ್ನು ಎರಕಹೊಯ್ದೆನು” ಎಂದು ಉತ್ತರಿಸಿದನು. |
25
|
ಜನರು ಅಂಕೆತಪ್ಪಿ ತಮ್ಮ ಇಷ್ಟಬಂದಂತೆ ಮಾಡುವುದಕ್ಕೆ ಆರೋನನು ಅವರನ್ನು ಬಿಟ್ಟುಬಿಟ್ಟಿರುವುದು ಮೋಶೆಗೆ ತಿಳಿಯಿತು. ಜನರು ಕ್ರಮವಿಲ್ಲದೆ ಸ್ವೇಚ್ಛೆಯಿಂದ ನಡೆಯುತ್ತಿದ್ದರು; ಅವರ ಮೂರ್ಖತನವು ಅವರ ವಿರೋಧಿಗಳಿಗೆ ಎದ್ದು ಕಾಣುತ್ತಿತ್ತು! |
26
|
ಆದ್ದರಿಂದ ಪಾಳೆಯದ ದ್ವಾರದಲ್ಲಿ ಮೋಶೆಯು ನಿಂತು, “ಯೆಹೋವನ ಪಕ್ಷದವರು ನನ್ನ ಬಳಿಗೆ ಬರಬೇಕು” ಎಂದು ಹೇಳಿದನು. ಲೇವಿ ಕುಲದವರೆಲ್ಲಾ ಮೋಶೆಯ ಬಳಿಗೆ ಬಂದರು. |
27
|
ಆಗ ಮೋಶೆ ಅವರಿಗೆ, “ಇಸ್ರೇಲರ ದೇವರಾದ ಯೆಹೋವನು ಹೇಳುವುದನ್ನು ನಿಮಗೆ ತಿಳಿಸುತ್ತೇನೆ! ‘ನಿಮ್ಮಲ್ಲಿ ಪ್ರತಿಯೊಬ್ಬನು ಕತ್ತಿಯನ್ನು ತೆಗೆದುಕೊಂಡು ಪಾಳೆಯದ ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೆ ಹೋಗಿ ಜನರನ್ನು ಶಿಕ್ಷಿಸಬೇಕು. ನಿಮ್ಮ ಸಹೋದರರಾಗಿದ್ದರೂ ಸ್ನೇಹಿತರಾಗಿದ್ದರೂ ಅಥವಾ ನೆರೆಯವರಾಗಿದ್ದರೂ ಸರಿ, ಕೊಲ್ಲಿರಿ”‘ ಎಂದು ಹೇಳಿದನು. |
28
|
ಲೇವಿಕುಲದವರು ಮೋಶೆಯ ಮಾತಿಗೆ ವಿಧೇಯರಾದರು. ಅಂದು ಇಸ್ರೇಲರಲ್ಲಿ ಸುಮಾರು ಮೂರು ಸಾವಿರ ಮಂದಿ ಸತ್ತರು. |
29
|
ಆಗ ಮೋಶೆಯು ಅವರಿಗೆ, “ಇಂದು ನೀವು ಯೆಹೋವನಿಗೆ ಮೀಸಲಾದ ಜನರಾದಿರಿ; ಯಾಕೆಂದರೆ ನೀವು ನಿಮ್ಮ ಸ್ವಂತ ಗಂಡು ಮಗನಿಗೂ ಸಹೋದರನಿಗೂ ವಿರೋಧವಾದಿರಿ. ಇಂದು ಆತನು ನಿಮ್ಮನ್ನು ಆಶೀರ್ವದಿಸಿದ್ದಾನೆ” ಅಂದನು. |
30
|
ಮರುದಿನ ಮುಂಜಾನೆ ಮೋಶೆಯು ಜನರಿಗೆ, “ನೀವು ಭಯಂಕರವಾದ ಪಾಪವನ್ನು ಮಾಡಿದ್ದೀರಿ. ಆದರೆ ಈಗ ನಾನು ಯೆಹೋವನ ಬಳಿಗೆ ಹೋಗಿ, ಆತನು ನಿಮ್ಮ ಪಾಪಗಳನ್ನು ಕ್ಷಮಿಸುವಂತೆ ನಾನೇನಾದರೂ ಮಾಡಬಹುದೊ ಎಂದು ವಿಚಾರಿಸುತ್ತೇನೆ” ಎಂದನು. |
31
|
ಅಂತೆಯೇ ಮೋಶೆಯು ಯೆಹೋವನ ಬಳಿಗೆ ಮರಳಿ ಹೋಗಿ, “ದಯವಿಟ್ಟು ಆಲಿಸು! ಈ ಜನರು ಬಹಳ ಕೆಟ್ಟ ಪಾಪವನ್ನು ಮಾಡಿದ್ದಾರೆ. ಚಿನ್ನದಿಂದ ಮೂರ್ತಿಯನ್ನು ಮಾಡಿಕೊಂಡಿದ್ದಾರೆ. |
32
|
ಅವರ ಈ ಪಾಪವನ್ನು ಕ್ಷಮಿಸು. ನೀನು ಅವರನ್ನು ಕ್ಷಮಿಸುವುದಿಲ್ಲವಾದರೆ ನಿನ್ನ ಜೀವಭಾದ್ಯರ ಪಟ್ಟಿಯ ಪುಸ್ತಕದಿಂದ ನನ್ನ ಹೆಸರನ್ನು ಅಳಿಸಿಬಿಡು” ಎಂದು ಪ್ರಾರ್ಥಿಸಿದನು. |
33
|
ಆದರೆ ಯೆಹೋವನು ಮೋಶೆಗೆ, “ನನಗೆ ವಿರೋಧವಾಗಿ ಪಾಪಮಾಡುವ ಜನರ ಹೆಸರನ್ನು ಮಾತ್ರವೇ ನನ್ನ ಪುಸ್ತಕದಿಂದ ಅಳಿಸುತ್ತೇನೆ. |
34
|
ಆದ್ದರಿಂದ ಈಗ ಕೆಳಗಿಳಿದು ನಾನು ನಿನಗೆ ಹೇಳುವಲ್ಲಿಗೆ ಜನರನ್ನು ನಡಿಸು. ನನ್ನ ದೂತನು ನಿನ್ನ ಮುಂದೆ ಹೋಗಿ ನಿನ್ನನ್ನು ನಡಿಸುವನು. ಪಾಪಮಾಡಿದ ಜನರನ್ನು ಶಿಕ್ಷಿಸುವ ಸಮಯ ಬಂದಾಗ ಅವರು ಶಿಕ್ಷಿಸಲ್ಪಡುವರು” ಎಂದು ಹೇಳಿದನು. |
35
|
ಆದ್ದರಿಂದ ಯೆಹೋವನು ಜನರಿಗೆ ಭಯಂಕರವಾದ ವ್ಯಾದಿಯನ್ನು ಬರಮಾಡಿದನು. ಅವರು ಆರೋನನಿಂದ ಬಸವನನ್ನು ಮಾಡಿಸಿಕೊಂಡದ್ದೇ ಇದಕ್ಕೇ ಕಾರಣ. “ನು ನಿಮ್ಮೊಂದಿಗೆ ಬರುವುದಿಲ್ಲ |
Exodus 32:1 Kannada Language Bible Words basic statistical display
COMING SOON ...