English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Exodus Chapters

Exodus 19 Verses

1 ಇಸ್ರೇಲರು ಈಜಿಪ್ಟಿನಿಂದ ಹೊರಟ ಮೂರನೆಯ ತಿಂಗಳಲ್ಲಿ ಸೀನಾಯ್ ಮರುಭೂಮಿಯನ್ನು ತಲುಪಿದರು.
2 ಜನರು ರೆಫೀದೀಮನ್ನು ಬಿಟ್ಟು ಸೀನಾಯ್ ಮರುಭೂಮಿಗೆ ಬಂದಿದ್ದರು. ಅಲ್ಲಿ ಅವರು ಬೆಟ್ಟದ ಬಳಿ ತಂಗಿದರು.
3 ಆಗ ಮೋಶೆ ಬೆಟ್ಟವನ್ನೇರಿ ಯೆಹೋವನ ಸನ್ನಿಧಿಗೆ ಹೋದನು. ಮೋಶೆಯು ಬೆಟ್ಟದ ಮೇಲೆ ಇದ್ದಾಗ ಯೆಹೋವನು ಅವನಿಗೆ, “ಯಾಕೋಬನ ಮಹಾ ಕುಟುಂಬವಾದ ಇಸ್ರೇಲರಿಗೆ ಈ ಸಂಗತಿಗಳನ್ನು ಹೇಳು:
4 ‘ನಾನು ನನ್ನ ವೈರಿಗಳಿಗೆ ಮಾಡುವ ಸಂಗತಿಗಳನ್ನು ನೀವು ನೋಡಿದ್ದೀರಿ. ನಾನು ಈಜಿಪ್ಟಿನವರಿಗೆ ಏನು ಮಾಡಿದೆನೆಂದು ನೀವು ನೋಡಿದಿರಿ. ಹದ್ದು ತನ್ನ ಮರಿಗಳನ್ನು ಹೊತ್ತುಕೊಂಡು ಬರುವಂತೆ ನಾನು ನಿಮ್ಮನ್ನು ಈಜಿಪ್ಟಿನಿಂದ ಇಲ್ಲಿಗೆ ಕರೆದುಕೊಂಡು ಬಂದದ್ದನ್ನು ನೀವು ನೋಡಿದಿರಿ.
5 ಆದ್ದರಿಂದ ನನ್ನ ಆಜ್ಞೆಗಳಿಗೆ ವಿಧೇಯರಾಗಬೇಕೆಂದು ನಾನು ನಿಮಗೆ ಹೇಳುತ್ತೇನೆ. ನನ್ನ ಒಡಂಬಡಿಕೆಯನ್ನು ಕೈಕೊಂಡು ನಡೆಯಿರಿ. ಆಗ ನೀವು ನನಗೆ ವಿಶೇಷವಾದ ಜನರಾಗುವಿರಿ. ಈ ಲೋಕವೆಲ್ಲಾ ನನ್ನದೇ. ಆದರೆ ನಾನು ನಿಮ್ಮನ್ನು ನನ್ನ ಸ್ವಂತ ಜನಾಂಗವನ್ನಾಗಿ ಆರಿಸಿಕೊಳ್ಳುತ್ತಿದ್ದೇನೆ.
6 ನೀವು ಯಾಜಕರ ರಾಜ್ಯ’ ಎಂಬ ವಿಶೇಷವಾದ ಜನಾಂಗವಾಗುವಿರಿ. ಮೋಶೆಯೇ, ನಾನು ನಿನಗೆ ಹೇಳಿದ ಸಂಗತಿಗಳನ್ನು ನೀನು ಇಸ್ರೇಲರಿಗೆ ಹೇಳಲೇಬೇಕು” ಎಂದನು.
7 ಆದ್ದರಿಂದ ಮೋಶೆ ಬೆಟ್ಟದಿಂದಿಳಿದು ಬಂದು ಜನರ ಹಿರಿಯರನ್ನು ಒಟ್ಟಾಗಿ ಕರೆಸಿದನು. ಯೆಹೋವನು ಹೇಳಬೇಕೆಂದು ಆಜ್ಞಾಪಿಸಿದ ಸಂಗತಿಗಳನ್ನೆಲ್ಲಾ ಮೋಶೆಯು ಹಿರಿಯರಿಗೆ ಹೇಳಿದನು.
8 ಜನರೆಲ್ಲರೂ ಒಟ್ಟಾಗಿ ಮಾತಾಡಿದರು. “ಯೆಹೋವನು ಹೇಳುವ ಪ್ರತಿಯೊಂದಕ್ಕೂ ನಾವು ವಿಧೇಯರಾಗುವೆವು” ಎಂದು ಅವರು ಅರಿಕೆಮಾಡಿದರು. ಬಳಿಕ ಮೋಶೆಯು ತಿರುಗಿ ಬೆಟ್ಟವನ್ನೇರಿ ಯೆಹೋವನ ಸನ್ನಿಧಿಗೆ ಹೋಗಿ ಜನರ ಪ್ರತಿಕ್ರಿಯೆಯನ್ನು ದೇವರಿಗೆ ತಿಳಿಸಿದನು.
9 ಯೆಹೋವನು ಮೋಶೆಗೆ, “ನಾನು ಕಾರ್ಮುಗಿಲಲ್ಲಿ ನಿನ್ನ ಬಳಿಗೆ ಬರುವೆನು. ನಾನು ನಿನ್ನೊಡನೆ ಮಾತಾಡುವೆನು. ನಿನ್ನೊಡನೆ ಮಾತಾಡುವುದನ್ನು ಜನರೆಲ್ಲರೂ ಕೇಳುವರು. ನೀನು ಹೇಳುವ ಸಂಗತಿಗಳನ್ನು ಜನರು ಯಾವಾಗಲೂ ನಂಬಲು ಸಹಾಯವಾಗುವಂತೆ ನಾನು ಇದನ್ನು ಮಾಡುವೆನು” ಎಂದು ಹೇಳಿದನು. ಆಗ ಮೋಶೆಯು ಜನರು ಹೇಳಿದ ಸಂಗತಿಗಳನ್ನೆಲ್ಲಾ ದೇವರಿಗೆ ಅರಿಕೆಮಾಡಿದನು.
10 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ಈ ದಿನ ಮತ್ತು ನಾಳೆ ನೀನು ಜನರನ್ನು ಒಂದು ವಿಶೇಷ ಸಂದರ್ಶನಕ್ಕಾಗಿ ಸಿದ್ಧಪಡಿಸಬೇಕು. ಜನರು ತಮ್ಮ ಬಟ್ಟೆಗಳನ್ನು ತೊಳೆದುಕೊಂಡು
11 ಮೂರನೆಯ ದಿನದಲ್ಲಿ ನನಗಾಗಿ ಸಿದ್ಧರಾಗಬೇಕು. ಮೂರನೆಯ ದಿನದಲ್ಲಿ ನಾನು ಸೀನಾಯ್ ಬೆಟ್ಟದ ಮೇಲೆ ಇಳಿದುಬರುವೆನು; ಜನರೆಲ್ಲರೂ ನನ್ನನ್ನು ನೋಡುವರು.
12 (12-13) ಆದರೆ ಬೆಟ್ಟದಿಂದ ದೂರವಿರಬೇಕೆಂದು ನೀನು ಜನರಿಗೆ ಹೇಳಬೇಕು. ಒಂದು ಗೆರೆಯನ್ನು ಹಾಕಿ ಆ ಗೆರೆಯನ್ನು ದಾಟಬಾರದೆಂದು ಅವರಿಗೆ ತಿಳಿಸು. ಯಾವ ವ್ಯಕ್ತಿಯಾಗಲಿ ಬೆಟ್ಟವನ್ನು ಮುಟ್ಟಿದರೆ ಅವನನ್ನು ಕಲ್ಲುಗಳಿಂದಾಗಲಿ ಬಾಣಗಳಿಂದಾಗಲಿ ಕೊಲ್ಲಬೇಕು. ಯಾವ ಪ್ರಾಣಿಯಾದರೂ ಬೆಟ್ಟವನ್ನು ಮುಟ್ಟಿದರೆ ಅದನ್ನು ಕೊಲ್ಲಬೇಕು. ಯಾರೂ ಬೆಟ್ಟವನ್ನು ಮುಟ್ಟಕೂಡದು. ಕೊಂಬಿನ ತುತ್ತೂರಿ ಊದಿದಾಗ ಜನರು ಬೆಟ್ಟದ ಸಮೀಪಕ್ಕೆ ಬರಬೇಕು ಎಂದು ಹೇಳು” ಎಂದನು.
14 ಮೋಶೆ ಬೆಟ್ಟದಿಂದಿಳಿದು ಹೋದನು. ಅವನು ಜನರ ಬಳಿಗೆ ಹೋಗಿ ವಿಶೇಷ ಸಂದರ್ಶನಕ್ಕಾಗಿ ಅವರನ್ನು ಸಿದ್ಧ ಮಾಡಿದನು. ಜನರು ತಮ್ಮ ಬಟ್ಟೆಗಳನ್ನು ತೊಳೆದುಕೊಂಡರು.
15 ಆಗ ಮೋಶೆ ಜನರಿಗೆ, “ಮೂರನೆಯ ದಿನದಲ್ಲಿ ಯೆಹೋವನೊಡನೆ ಒಂದು ವಿಶೇಷ ಸಂದರ್ಶನಕ್ಕಾಗಿ ಸಿದ್ಧರಾಗಿರಿ. ಅಲ್ಲಿಯವರೆಗೆ, ಪುರುಷರು ಸ್ತ್ರೀಯರ ಸಂಗ ಮಾಡಬಾರದು” ಎಂದು ಹೇಳಿದನು.
16 ಮೂರನೆಯ ದಿನದ ಮುಂಜಾನೆಯಲ್ಲಿ ಆ ಬೆಟ್ಟದ ಮೇಲೆ ಗುಡುಗು ಮಿಂಚುಗಳು ಉಂಟಾದವು. ಒಂದು ಕಾರ್ಮುಗಿಲು ಬೆಟ್ಟದ ಮೇಲೆ ಇಳಿದುಬಂತು; ತುತ್ತೂರಿಯ ಮಹಾ ಧ್ವನಿಯು ಕೇಳಿಸಿತು. ಪಾಳೆಯದಲ್ಲಿದ್ದ ಜನರೆಲ್ಲರೂ ಭಯಭೀತರಾದರು.
17 ಆಗ ಮೋಶೆ ದೇವರನ್ನು ಸಂಧಿಸುವುದಕ್ಕಾಗಿ ಜನರನ್ನು ಪಾಳೆಯದಿಂದ ಹೊರಗೆ ನಡಿಸಿ, ಬೆಟ್ಟದ ಬಳಿಗೆ ಕರೆದುಕೊಂಡು ಬಂದನು.
18 ಸೀನಾಯಿ ಬೆಟ್ಟವು ಹೊಗೆಯಿಂದ ಕವಿದುಕೊಂಡಿತು. ಕುಲುಮೆಯಿಂದ ಬರುವ ಹೊಗೆಯಂತೆ, ಬೆಟ್ಟದಿಂದ ಹೊಗೆಯು ಮೇಲಕ್ಕೇರಿತು. ಯೆಹೋವನು ಬೆಂಕಿಯಲ್ಲಿ ಬೆಟ್ಟದ ಮೇಲೆ ಇಳಿದು ಬಂದದ್ದರಿಂದ ಇದು ಸಂಭವಿಸಿತು. ಇಡೀ ಬೆಟ್ಟ ನಡುಗಲಾರಂಭಿಸಿತು.
19 ತುತ್ತೂರಿಯ ಧ್ವನಿ ಹೆಚ್ಚುಹೆಚ್ಚಾಯಿತು. ಮೋಶೆಯು ದೇವರೊಂದಿಗೆ ಮಾತಾಡಿದಾಗಲೆಲ್ಲಾ ದೇವರು ಗುಡುಗಿನಂತಿದ್ದ ಧ್ವನಿಯಲ್ಲಿ ಅವನಿಗೆ ಉತ್ತರಕೊಟ್ಟನು.
20 ಯೆಹೋವನು ಸೀನಾಯಿ ಬೆಟ್ಟಕ್ಕೆ ಇಳಿದುಬಂದನು. ಬಳಿಕ ಯೆಹೋವನು ಮೋಶೆಯನ್ನು ಕರೆದು ಬೆಟ್ಟದ ತುದಿಗೆ ಬರಲು ಹೇಳಿದನು. ಆದ್ದರಿಂದ ಮೋಶೆ ಮೇಲಕ್ಕೆ ಹೋದನು.
21 ಯೆಹೋವನು ಮೋಶೆಗೆ, “ಕೆಳಗಿಳಿದು ಹೋಗಿ, ಜನರು ನನ್ನನ್ನು ನೋಡಲು ನನ್ನ ಹತ್ತಿರ ಬರಬಾರದೆಂದು ಅವರನ್ನು ಎಚ್ಚರಿಸು. ಇಲ್ಲವಾದರೆ ಅವರಲ್ಲಿ ಅನೇಕರು ಸಾಯುವರು.
22 ಮಾತ್ರವಲ್ಲದೆ ನನ್ನ ಸಮೀಪಕ್ಕೆ ಬರುವ ಯಾಜಕರು ಈ ವಿಶೇಷ ಸಂದರ್ಶನಕ್ಕಾಗಿ ತಮ್ಮನ್ನು ಸಿದ್ಧಪಡಿಸಿಕೊಳ್ಳಬೇಕೆಂದು ಹೇಳು. ಇಲ್ಲವಾದರೆ ನಾನು ಅವರನ್ನೂ ಶಿಕ್ಷಿಸುವೆನು” ಅಂದನು.
23 ಮೋಶೆಯು ಯೆಹೋವನಿಗೆ, “ಜನರು ಬೆಟ್ಟವನ್ನೇರಿ ಬರಲಾರರು. ಬೆಟ್ಟದ ಸುತ್ತಲೂ ಮೇರೆಯನ್ನು ಹಾಕಿ ಅದನ್ನು ಪವಿತ್ರ ಸ್ಧಳವನ್ನಾಗಿ ಪ್ರತ್ಯೇಕಿಸಬೇಕೆಂದು ನೀನೇ ನಮಗೆ ಎಚ್ಚರಿಕೆ ನೀಡಿದೆಯಲ್ಲಾ!” ಎಂದು ಹೇಳಿದನು.
24 ಯೆಹೋವನು ಅವನಿಗೆ, “ಜನರ ಬಳಿಗೆ ಇಳಿದುಹೋಗಿ ಆರೋನನನ್ನು ಕರೆದುಕೊಂಡು ಬಾ. ಆದರೆ ಯಾಜಕರಾಗಲಿ ಜನರಾಗಲಿ ಬರಕೂಡದು. ಅವರು ನನ್ನ ಸಮೀಪಕ್ಕೆ ಬಂದರೆ, ನಾನು ಅವರನ್ನು ದಂಡಿಸುವೆನು” ಎಂದು ಹೇಳಿದನು.
25 ಆದ್ದರಿಂದ ಮೋಶೆ ಜನರ ಬಳಿಗೆ ಇಳಿದುಹೋಗಿ ಈ ಸಂಗತಿಗಳನ್ನು ಅವರಿಗೆ ತಿಳಿಸಿದನು.
×

Alert

×