‘ನಾನು ನನ್ನ ವೈರಿಗಳಿಗೆ ಮಾಡುವ ಸಂಗತಿಗಳನ್ನು ನೀವು ನೋಡಿದ್ದೀರಿ. ನಾನು ಈಜಿಪ್ಟಿನವರಿಗೆ ಏನು ಮಾಡಿದೆನೆಂದು ನೀವು ನೋಡಿದಿರಿ. ಹದ್ದು ತನ್ನ ಮರಿಗಳನ್ನು ಹೊತ್ತುಕೊಂಡು ಬರುವಂತೆ ನಾನು ನಿಮ್ಮನ್ನು ಈಜಿಪ್ಟಿನಿಂದ ಇಲ್ಲಿಗೆ ಕರೆದುಕೊಂಡು ಬಂದದ್ದನ್ನು ನೀವು ನೋಡಿದಿರಿ.
ಆದ್ದರಿಂದ ನನ್ನ ಆಜ್ಞೆಗಳಿಗೆ ವಿಧೇಯರಾಗಬೇಕೆಂದು ನಾನು ನಿಮಗೆ ಹೇಳುತ್ತೇನೆ. ನನ್ನ ಒಡಂಬಡಿಕೆಯನ್ನು ಕೈಕೊಂಡು ನಡೆಯಿರಿ. ಆಗ ನೀವು ನನಗೆ ವಿಶೇಷವಾದ ಜನರಾಗುವಿರಿ. ಈ ಲೋಕವೆಲ್ಲಾ ನನ್ನದೇ. ಆದರೆ ನಾನು ನಿಮ್ಮನ್ನು ನನ್ನ ಸ್ವಂತ ಜನಾಂಗವನ್ನಾಗಿ ಆರಿಸಿಕೊಳ್ಳುತ್ತಿದ್ದೇನೆ.
ಜನರೆಲ್ಲರೂ ಒಟ್ಟಾಗಿ ಮಾತಾಡಿದರು. “ಯೆಹೋವನು ಹೇಳುವ ಪ್ರತಿಯೊಂದಕ್ಕೂ ನಾವು ವಿಧೇಯರಾಗುವೆವು” ಎಂದು ಅವರು ಅರಿಕೆಮಾಡಿದರು. ಬಳಿಕ ಮೋಶೆಯು ತಿರುಗಿ ಬೆಟ್ಟವನ್ನೇರಿ ಯೆಹೋವನ ಸನ್ನಿಧಿಗೆ ಹೋಗಿ ಜನರ ಪ್ರತಿಕ್ರಿಯೆಯನ್ನು ದೇವರಿಗೆ ತಿಳಿಸಿದನು.
ಯೆಹೋವನು ಮೋಶೆಗೆ, “ನಾನು ಕಾರ್ಮುಗಿಲಲ್ಲಿ ನಿನ್ನ ಬಳಿಗೆ ಬರುವೆನು. ನಾನು ನಿನ್ನೊಡನೆ ಮಾತಾಡುವೆನು. ನಿನ್ನೊಡನೆ ಮಾತಾಡುವುದನ್ನು ಜನರೆಲ್ಲರೂ ಕೇಳುವರು. ನೀನು ಹೇಳುವ ಸಂಗತಿಗಳನ್ನು ಜನರು ಯಾವಾಗಲೂ ನಂಬಲು ಸಹಾಯವಾಗುವಂತೆ ನಾನು ಇದನ್ನು ಮಾಡುವೆನು” ಎಂದು ಹೇಳಿದನು. ಆಗ ಮೋಶೆಯು ಜನರು ಹೇಳಿದ ಸಂಗತಿಗಳನ್ನೆಲ್ಲಾ ದೇವರಿಗೆ ಅರಿಕೆಮಾಡಿದನು.
(12-13) ಆದರೆ ಬೆಟ್ಟದಿಂದ ದೂರವಿರಬೇಕೆಂದು ನೀನು ಜನರಿಗೆ ಹೇಳಬೇಕು. ಒಂದು ಗೆರೆಯನ್ನು ಹಾಕಿ ಆ ಗೆರೆಯನ್ನು ದಾಟಬಾರದೆಂದು ಅವರಿಗೆ ತಿಳಿಸು. ಯಾವ ವ್ಯಕ್ತಿಯಾಗಲಿ ಬೆಟ್ಟವನ್ನು ಮುಟ್ಟಿದರೆ ಅವನನ್ನು ಕಲ್ಲುಗಳಿಂದಾಗಲಿ ಬಾಣಗಳಿಂದಾಗಲಿ ಕೊಲ್ಲಬೇಕು. ಯಾವ ಪ್ರಾಣಿಯಾದರೂ ಬೆಟ್ಟವನ್ನು ಮುಟ್ಟಿದರೆ ಅದನ್ನು ಕೊಲ್ಲಬೇಕು. ಯಾರೂ ಬೆಟ್ಟವನ್ನು ಮುಟ್ಟಕೂಡದು. ಕೊಂಬಿನ ತುತ್ತೂರಿ ಊದಿದಾಗ ಜನರು ಬೆಟ್ಟದ ಸಮೀಪಕ್ಕೆ ಬರಬೇಕು ಎಂದು ಹೇಳು” ಎಂದನು.
ಮೂರನೆಯ ದಿನದ ಮುಂಜಾನೆಯಲ್ಲಿ ಆ ಬೆಟ್ಟದ ಮೇಲೆ ಗುಡುಗು ಮಿಂಚುಗಳು ಉಂಟಾದವು. ಒಂದು ಕಾರ್ಮುಗಿಲು ಬೆಟ್ಟದ ಮೇಲೆ ಇಳಿದುಬಂತು; ತುತ್ತೂರಿಯ ಮಹಾ ಧ್ವನಿಯು ಕೇಳಿಸಿತು. ಪಾಳೆಯದಲ್ಲಿದ್ದ ಜನರೆಲ್ಲರೂ ಭಯಭೀತರಾದರು.
ಸೀನಾಯಿ ಬೆಟ್ಟವು ಹೊಗೆಯಿಂದ ಕವಿದುಕೊಂಡಿತು. ಕುಲುಮೆಯಿಂದ ಬರುವ ಹೊಗೆಯಂತೆ, ಬೆಟ್ಟದಿಂದ ಹೊಗೆಯು ಮೇಲಕ್ಕೇರಿತು. ಯೆಹೋವನು ಬೆಂಕಿಯಲ್ಲಿ ಬೆಟ್ಟದ ಮೇಲೆ ಇಳಿದು ಬಂದದ್ದರಿಂದ ಇದು ಸಂಭವಿಸಿತು. ಇಡೀ ಬೆಟ್ಟ ನಡುಗಲಾರಂಭಿಸಿತು.
ಮೋಶೆಯು ಯೆಹೋವನಿಗೆ, “ಜನರು ಬೆಟ್ಟವನ್ನೇರಿ ಬರಲಾರರು. ಬೆಟ್ಟದ ಸುತ್ತಲೂ ಮೇರೆಯನ್ನು ಹಾಕಿ ಅದನ್ನು ಪವಿತ್ರ ಸ್ಧಳವನ್ನಾಗಿ ಪ್ರತ್ಯೇಕಿಸಬೇಕೆಂದು ನೀನೇ ನಮಗೆ ಎಚ್ಚರಿಕೆ ನೀಡಿದೆಯಲ್ಲಾ!” ಎಂದು ಹೇಳಿದನು.
ಯೆಹೋವನು ಅವನಿಗೆ, “ಜನರ ಬಳಿಗೆ ಇಳಿದುಹೋಗಿ ಆರೋನನನ್ನು ಕರೆದುಕೊಂಡು ಬಾ. ಆದರೆ ಯಾಜಕರಾಗಲಿ ಜನರಾಗಲಿ ಬರಕೂಡದು. ಅವರು ನನ್ನ ಸಮೀಪಕ್ಕೆ ಬಂದರೆ, ನಾನು ಅವರನ್ನು ದಂಡಿಸುವೆನು” ಎಂದು ಹೇಳಿದನು.