ನಾನು ಫರೋಹನ ಹೃದಯವನ್ನು ಕಠಿಣಪಡಿಸುವುದರಿಂದ ಅವನು ನಿಮ್ಮನ್ನು ಬೆನ್ನಟ್ಟುವನು. ಆದರೆ ನಾನು ಫರೋಹನನ್ನು ಮತ್ತು ಅವನ ಸೈನ್ಯವನ್ನು ಸೋಲಿಸುವೆನು. ಇದು ನನಗೆ ಗೌರವವನ್ನು ತರುವುದು. ಆಗ ನಾನೇ ಯೆಹೋವನೆಂದು ಈಜಿಪ್ಟಿನ ಜನರು ತಿಳಿದುಕೊಳ್ಳುವರು” ಎಂದು ಹೇಳಿದನು. ಇಸ್ರೇಲರು ದೇವರಿಗೆ ವಿಧೇಯರಾಗಿ ಆತನು ಹೇಳಿದ್ದನ್ನು ಮಾಡಿದರು.
ಇಸ್ರೇಲರು ತಪ್ಪಿಸಿಕೊಂಡರೆಂಬ ವರದಿಯನ್ನು ಕೇಳಿದಾಗ, ಫರೋಹನ ಮತ್ತು ಅವನ ಅಧಿಕಾರಿಗಳ ಮನಸ್ಸುಗಳು ಬದಲಾದವು. ಫರೋಹನು, “ಇಸ್ರೇಲರನ್ನು ನಾವು ಯಾಕೆ ಹೋಗಲು ಬಿಟ್ಟೆವು? ಅಯ್ಯೋ, ನಾವೀಗ ನಮ್ಮ ಗುಲಾಮರನ್ನು ಕಳೆದುಕೊಂಡೆವಲ್ಲಾ!” ಎಂದು ಹೇಳಿದನು.
ಇಸ್ರೇಲರು ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ಧೈರ್ಯದಿಂದ ಹೋಗುತ್ತಿದ್ದರು. ಆದರೆ ಈಜಿಪ್ಟಿನ ಅರಸನಾದ ಫರೋಹನ ಹೃದಯವನ್ನು ಯೆಹೋವನು ಕಠಿಣಗೊಳಿಸಿದ್ದರಿಂದ ಅವನು ಇಸ್ರೇಲರನ್ನು ಬೆನ್ನಟ್ಟಿದನು.
ಈಜಿಪ್ಟಿನ ಸೈನ್ಯದಲ್ಲಿ ಅನೇಕ ರಾಹುತರು ಇದ್ದರು; ರಥಗಳೂ ಇದ್ದವು. ಅವರು ಇಸ್ರೇಲರನ್ನು ಬೆನ್ನಟ್ಟಿದರು. ಇಸ್ರೇಲರು ಪೀಹಹೀರೋತಿನ ಹತ್ತಿರವಿರುವ ಬಾಳ್ಚೆಫೋನಿನ ಎದುರಾಗಿ ಸಮುದ್ರತೀರದಲ್ಲಿ ಇಳಿದುಕೊಳ್ಳುವಾಗಲೇ ಈಜಿಪ್ಟಿನ ಸೈನ್ಯದವರು ಅವರ ಹತ್ತಿರಕ್ಕೆ ಬಂದರು.
ಅವರು ಮೋಶೆಗೆ, “ನೀನು ಯಾಕೆ ನಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದೆ? ನಮ್ಮನ್ನು ಅರಣ್ಯದಲ್ಲಿ ಸಾಯಿಸುವುದಕ್ಕೆ ನೀನು ನಮ್ಮನ್ನು ಕರೆದುಕೊಂಡು ಬಂದೆಯಾ? ನಾವು ಈಜಿಪ್ಟಿನಲ್ಲಿಯೇ ಸಮಾಧಾನದಿಂದ ಸಾಯಬಹುದಾಗಿತ್ತಲ್ಲವೆ? ಈಜಿಪ್ಟಿನಲ್ಲಿ ಸಾಕಷ್ಟು ಸಮಾಧಿಗಳಿದ್ದವು.
ನಾವು ನಿನಗೆ ಈಜಿಪ್ಟಿನಲ್ಲೇ, ‘ದಯಮಾಡಿ ನಮ್ಮ ಗೊಡವೆಗೆ ಬರಬೇಡ. ನಾವು ಇಲ್ಲಿದ್ದುಕೊಂಡು ಈಜಿಪ್ಟಿನವರ ಸೇವೆಮಾಡಲು ಬಿಡು’ ಎಂದು ಹೇಳಿದ್ದೆವು. ನಾವು ಇಲ್ಲಿಗೆ ಬಂದು ಅರಣ್ಯದಲ್ಲಿ ಸಾಯುವುದಕ್ಕಿಂತ, ಅಲ್ಲೇ ಗುಲಾಮರಾಗಿ ಇದ್ದಿದ್ದರೆ ಒಳ್ಳೆಯದಾಗಿರುತ್ತಿತ್ತು” ಎಂದು ಹೇಳಿದರು.
ಆದರೆ ಮೋಶೆ ಆ ಜನರಿಗೆ, “ಭಯಪಡಬೇಡಿರಿ! ಓಡಿಹೋಗಬೇಡಿರಿ! ಇಲ್ಲೇ ಇದ್ದು ಯೆಹೋವನು ಈ ದಿನ ನಿಮ್ಮನ್ನು ರಕ್ಷಿಸುವುದನ್ನು ನೋಡಿರಿ. ಈ ದಿನದ ನಂತರ ನೀವು ಇನ್ನೆಂದಿಗೂ ಈ ಈಜಿಪ್ಟಿನವರನ್ನು ನೋಡುವುದಿಲ್ಲ.
ಈಜಿಪ್ಟಿನವರು ನಿಮ್ಮನ್ನು ಬೆನ್ನಟ್ಟುವಂತೆ ನಾನು ಅವರ ಹೃದಯಗಳನ್ನು ಕಠಿಣಗೊಳಿಸುವುದರಿಂದ ನಾನು ಫರೋಹನಿಗಿಂತಲೂ ಅವನ ಎಲ್ಲಾ ರಾಹುತರುಗಳಿಗಿಂತಲೂ ರಥಗಳಿಗಿಂತಲೂ ಶಕ್ತಿಶಾಲಿ ಎಂಬುದನ್ನು ನಿಮಗೆ ತೋರಿಸುವೆನು.
ಹೀಗೆ ಮೋಡವು ಈಜಿಪ್ಟಿನವರಿಗೂ ಇಸ್ರೇಲರಿಗೂ ನಡುವೆ ನಿಂತಿತು. ಅಲ್ಲಿ ಇಸ್ರೇಲರಿಗೆ ಬೆಳಕಿತ್ತು. ಆದರೆ ಈಜಿಪ್ಟಿನವರಿಗೆ ಕತ್ತಲಿತ್ತು. ಆದ್ದರಿಂದ ಈಜಿಪ್ಟಿನವರು ಆ ರಾತ್ರಿ ಇಸ್ರೇಲರ ಸಮೀಪಕ್ಕೆ ಬರಲಿಲ್ಲ.
ಮೋಶೆಯು ತನ್ನ ಕೈಯನ್ನು ಕೆಂಪುಸಮುದ್ರದ ಮೇಲೆ ಚಾಚಿದನು; ಆಗ ಯೆಹೋವನು ಪೂರ್ವದಿಂದ ಬಲವಾದ ಗಾಳಿಯನ್ನು ಬೀಸುವಂತೆ ಮಾಡಿದನು. ಗಾಳಿಯು ರಾತ್ರಿಯೆಲ್ಲಾ ಬೀಸಿತು. ಸಮುದ್ರವು ಇಬ್ಭಾಗವಾಗಿ ಮಧ್ಯದಲ್ಲಿ ಒಣನೆಲವಾಯಿತು.
ಬೆಳಗಿನ ಜಾವ ಇನ್ನೂ ಮೊಬ್ಬಿರುವಾಗ, ಯೆಹೋವನು ಎತ್ತರವಾದ ಮೇಘಸ್ತಂಭದಿಂದ ಮತ್ತು ಅಗ್ನಿಸ್ತಂಭದಿಂದ ಈಜಿಪ್ಟಿನ ಸೈನ್ಯವನ್ನು ದೃಷ್ಟಿಸಿದನು. ಆಗ ಯೆಹೋವನು ಅವರ ಮೇಲೆ ಧಾಳಿಮಾಡಿ ಅವರ ಪಾಳೆಯದಲ್ಲಿ ಗಲಿಬಿಲಿಮಾಡಿದನು.
ರಥಗಳ ಚಕ್ರಗಳು ನೆಲಕ್ಕೆ ಅಂಟಿಕೊಂಡವು. ರಥಗಳನ್ನು ನಡಿಸುವುದು ಬಹುಕಷ್ಟವಾಗಿತ್ತು. ಈಜಿಪ್ಟಿನವರು “ನಾವು ಇಲ್ಲಿಂದ ಹೋಗೋಣ. ಯೆಹೋವನು ಈಜಿಪ್ಟಿನ ವಿರುದ್ಧವಾಗಿ ಯುದ್ಧಮಾಡುತ್ತಿದ್ದಾನೆ. ಯೆಹೋವನು ಇಸ್ರೇಲರಿಗಾಗಿ ಯುದ್ಧ ಮಾಡುತ್ತಿದ್ದಾನೆ” ಎಂದು ಕೂಗಿಕೊಂಡರು.
ಆದ್ದರಿಂದ ಹಗಲಿನ ಬೆಳಕು ಪ್ರಕಾಶಿಸುವುದಕ್ಕಿಂತ ಸ್ವಲ್ಪ ಮೊದಲು, ಮೋಶೆಯು ತನ್ನ ಕೈಯನ್ನು ಸಮುದ್ರದ ಮೇಲೆ ಚಾಚಿದನು. ನೀರು ತನ್ನ ಸರಿಯಾದ ಮಟ್ಟಕ್ಕೆ ಹಿಂತಿರುಗಿತು. ಈಜಿಪ್ಟಿನವರು ನೀರಿನಿಂದ ಓಡಿಹೋಗಲು ಬಹಳವಾಗಿ ಪ್ರಯತ್ನಿಸಿದರು. ಆದರೆ ಯೆಹೋವನು ಈಜಿಪ್ಟಿನವರನ್ನು ಸಮುದ್ರದಲ್ಲಿ ಕೆಡವಿಬಿಟ್ಟನು.
ನೀರು ತನ್ನ ಸರಿಯಾದ ಮಟ್ಟಕ್ಕೆ ಹಿಂತಿರುಗಿ ರಥಗಳನ್ನು ಮತ್ತು ರಾಹುತರನ್ನು ಮುಚ್ಚಿಬಿಟ್ಟಿತು. ಸಮುದ್ರದೊಳಗೆ ಹೋಗಿದ್ದ ಇಸ್ರೇಲರನ್ನು ಬೆನ್ನಟ್ಟಿದ ಫರೋಹನ ಸೈನ್ಯವೆಲ್ಲಾ ನಾಶವಾಯಿತು. ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ.