ನಾನು ಪ್ರಭುವಿಗೆ ಸೇರಿದವನಾದ್ದರಿಂದ ಸೆರೆಯಲ್ಲಿದ್ದೇನೆ. ನೀವು ದೇವರಿಂದ ಕರಯಲ್ಪಟ್ಟಿದ್ದೀರಿ. ಆದ್ದರಿಂದ ನಿಮ್ಮ ಕರೆಯುವಿಕೆಗೆ ತಕ್ಕಂತೆ ಯೋಗ್ಯವಾಗಿ ಜೀವಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
ಆದಕಾರಣವೇ ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆದಿದೆ: “ಆತನು ಆಕಾಶದ ಉನ್ನತಸ್ಥಾನಕ್ಕೆ ಏರಿಹೋದಾಗ, ಶತ್ರುಗಳನ್ನು ಸೆರೆಯಾಳುಗಳಾಗಿ ಕೊಂಡೊಯ್ದು ಜನರಿಗೆ ದಾನಗಳನ್ನು ಮಾಡಿದನು.” ಕೀರ್ತನೆ. 68:18]
ನಾವೆಲ್ಲರೂ ಒಂದೇ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಐಕ್ಯರಾಗುವತನಕ ಈ ಸೇವೆಯು ಮುಂದುವರಿಯಬೇಕು. ನಾವು ಪರಿಪೂರ್ಣರಾಗುವ ತನಕ ಅಂದರೆ ಕ್ರಿಸ್ತನ ಸರ್ವಸಂಪೂರ್ಣತೆಯನ್ನು ಮುಟ್ಟುವತನಕ ಬೆಳೆಯಬೇಕು.
ನಾವು ಇನ್ನು ಮೇಲೆ ಕೂಸುಗಳಾಗಿರಬಾರದು. ಸಮುದ್ರದ ಅಲೆಗಳಿಂದ ಅತ್ತಿಂದಿತ್ತ ಚಲಿಸುವ ಹಡಗಿನಂತೆ ಚಂಚಲರಾಗಿರಬಾರದು. ನಮ್ಮನ್ನು ವಂಚಿಸುವುದಕ್ಕಾಗಿ ಜನರು ಹೇಳುವ ಯಾವುದೇ ಹೊಸ ಉಪದೇಶದಿಂದಾಗಲಿ ನಾವು ಚಂಚಲರಾಗಬಾರದು. ಜನರನ್ನು ಮೋಸಗೊಳಿಸಿ ಕೆಟ್ಟದಾರಿಗೆ ನಡೆಸಬೇಕೆಂಬ ಉದ್ದೇಶದಿಂದ ಆ ದುರ್ಬೋಧಕರು ನಾನಾ ಬಗೆಯ ಕುತಂತ್ರವನ್ನು ಮಾಡುತ್ತಾರೆ.
ಇಡೀ ದೇಹವು ಕ್ರಿಸ್ತನನ್ನು ಅವಲಂಬಿಸಿಕೊಂಡಿದೆ. ದೇಹದ ಒಂದೊಂದು ಅಂಗಗಳೂ ಒಂದಕ್ಕೊಂದು ಬಿಗಿದುಕೊಂಡಿವೆ. ಪ್ರತಿಯೊಂದು ಅಂಗವು ತನ್ನದೇ ಆದ ಕೆಲಸವನ್ನು ಮಾಡುವುದರಿಂದ ಇಡೀ ದೇಹವು ಬೆಳೆದು ಪ್ರೀತಿಯಲ್ಲಿ ಬಲವಾಗಿರಲು ಸಾಧ್ಯವಾಗುತ್ತದೆ.
ನೀವು ನಿಮ್ಮ ಹಿಂದಿನ ಕೆಟ್ಟ ನಡತೆಯನ್ನು ಬಿಟ್ಟುಬಿಡಬೇಕೆಂಬುದನ್ನು ಅಂದರೆ ನಿಮ್ಮ ಹಳೆಯ ಸ್ವಭಾವವನ್ನು ತೊರೆದುಬಿಡಬೇಕೆಂಬುದನ್ನು ಕಲಿತುಕೊಂಡಿರಿ. ಜನರು ತಾವು ಮಾಡ ಬಯಸುವ ದುಷ್ಕೃತ್ಯಗಳಿಂದ ವಂಚಿತರಾಗಿರುವುದರಿಂದ ಆ ಹಳೆಯ ಸ್ವಭಾವವು ದಿನದಿಂದ ದಿನಕ್ಕೆ ಮತ್ತಷ್ಟು ಕೆಟ್ಟು ಹೋಗುತ್ತದೆ.
ಕಳ್ಳನು ಕದಿಯುವುದನ್ನು ನಿಲ್ಲಿಸಿ ತಾನೇ ದುಡಿದು ಸಂಪಾದಿಸಲಿ; ಅವನು ತನ್ನ ಕೈಗಳನ್ನು ಒಳ್ಳೆಯದನ್ನು ಮಾಡುವುದಕ್ಕಾಗಿ ಉಪಯೋಗಿಸಲಿ. ಆಗ ಬಡವರಿಗೂ ಸಹಾಯ ಮಾಡಲು ಅವನಿಗೆ ಸಾಧ್ಯವಾಗುವುದು.
ಪವಿತ್ರಾತ್ಮನನ್ನು ದುಃಖಪಡಿಸಬೇಡಿ. ನೀವು ದೇವರಿಗೆ ಸೇರಿದವರೆಂಬುದಕ್ಕೆ ಆತನೇ ದೇವರ ಪ್ರಮಾಣವಾಗಿದ್ದಾನೆ. ಸೂಕ್ತ ಸಮಯದಲ್ಲಿ ನಿಮ್ಮನ್ನು ಬಿಡುಗಡೆ ಮಾಡುತ್ತೇನೆ ಎಂಬುದನ್ನು ತೋರಿಸುವುದಕ್ಕಾಗಿಯೇ ದೇವರು ನಿಮಗೆ ಆತನನ್ನು ಕೊಟ್ಟನು.