(16-17) ಆದ್ದರಿಂದ ನೀನು ನಿನ್ನನ್ನೇ ಯಾಕೆ ನಾಶಮಾಡಿಕೊಳ್ಳುವೆ? ಬಹಳ ನೀತಿವಂತನಾಗಿಯೂ ಇರಬೇಡ; ಬಹಳ ಕೆಟ್ಟವನಾಗಿಯೂ ಇರಬೇಡ. ಬಹು ಜ್ಞಾನಿಯಾಗಿಯೂ ಇರಬೇಡ; ಬಹು ಮೂಢನಾಗಿಯೂ ಇರಬೇಡ. ನಿನ್ನ ಕಾಲಕ್ಕಿಂತ ಮೊದಲೇ ನೀನು ಯಾಕೆ ಸಾಯಬೇಕು?
(19-20) ಒಳ್ಳೆಯದನ್ನೇ ಮಾಡುವ ಮತ್ತು ಪಾಪವನ್ನೇ ಮಾಡದ ನೀತಿವಂತನು ಭೂಮಿಯ ಮೇಲೆ ಇಲ್ಲವೇ ಇಲ್ಲ. ಜ್ಞಾನವು ಒಬ್ಬನಿಗೆ ಶಕ್ತಿಯನ್ನು ಕೊಡುತ್ತದೆ. ಒಬ್ಬ ಜ್ಞಾನಿಯು ನಗರದಲ್ಲಿರುವ ಹತ್ತುಮಂದಿ ಮೂಢ ನಾಯಕರುಗಳಿಗಿಂತಲೂ ಬಲಶಾಲಿ.
ನಿಜವಾದ ಜ್ಞಾನವನ್ನು ಕಂಡುಕೊಳ್ಳಲು ನಾನು ವ್ಯಾಸಂಗ ಮಾಡಿದೆ ಮತ್ತು ತುಂಬ ಕಷ್ಟಪಟ್ಟು ಪ್ರಯತ್ನಿಸಿದೆ. ಪ್ರತಿಯೊಂದಕ್ಕೂ ಕಾರಣವನ್ನು ಕಂಡುಕೊಳ್ಳಲು ನಾನು ಪ್ರಯತ್ನಿಸಿದೆ. ನಾನು ಕಲಿತಿದ್ದೇನು? ಕೆಡುಕನಾಗಿರುವುದು ಮೂಢತನ ಮತ್ತು ಮೂಢನಂತೆ ವರ್ತಿಸುವುದು ಹುಚ್ಚುತನ ಎಂಬುದನ್ನು ನಾನು ಕಲಿತುಕೊಂಡೆ.
ಇದಲ್ಲದೆ ಕೆಲವು ಸ್ತ್ರೀಯರು ಅಪಾಯಕರವಾದ ಬೋನುಗಳಂತಿರುವರು ಎಂಬುದನ್ನು ನಾನು ಕಂಡುಕೊಂಡೆ. ಅವರ ಹೃದಯಗಳು ಬಲೆಗಳಂತಿವೆ; ಅವರ ಕೈಗಳು ಸರಪಣಿಗಳಂತಿವೆ. ಆ ಸ್ತ್ರೀಯರಿಗೆ ಸಿಕ್ಕಿಬೀಳುವುದು ಮರಣಕ್ಕಿಂತಲೂ ಅಪಾಯಕರ. ದೇವರ ಭಕ್ತನು ಆ ಸ್ತ್ರೀಯರ ಬಳಿಯಿಂದ ಓಡಿ ಹೋಗುವನು; ಪಾಪಿಯಾದರೋ ಅವರಿಗೆ ಸಿಕ್ಕಿಕೊಳ್ಳುವನು.
(27-28) ಪ್ರಸಂಗಿಯು ಹೀಗೆನ್ನುತ್ತಾನೆ: “ಒಂದು ತೀರ್ಮಾನಕ್ಕೆ ಬರಬೇಕೆಂದು ಇವೆಲ್ಲವುಗಳನ್ನು ಒಟ್ಟಾಗಿ ಸೇರಿಸಿದೆ. ಆದರೂ ಒಂದು ತೀರ್ಮಾನಕ್ಕೆ ಬರಲಾಗುತ್ತಿಲ್ಲ. ಆದರೆ ನಾನು ಒಂದನ್ನು ಕಂಡುಕೊಂಡೆ. ಅದೇನೆಂದರೆ, ಸಾವಿರ ಪುರುಷರಲ್ಲಿ ಒಬ್ಬ ನೀತಿವಂತನು ಇದ್ದರೂ ಇರಬಹುದು; ಆದರೆ ಸಾವಿರ ಸ್ತ್ರೀಯರಲ್ಲಿ ಒಬ್ಬ ನೀತಿವಂತಳನ್ನೂ ನಾನು ಕಾಣಲಿಲ್ಲ.