ದೇವರನ್ನು ಆರಾಧಿಸಲು ಹೋಗುವಾಗ ಎಚ್ಚರಿಕೆಯಿಂದಿರಿ. ಮೂಢರಂತೆ ಯಜ್ಞಗಳನ್ನು ಅರ್ಪಿಸುವುದಕ್ಕಿಂತ ದೇವರಿಗೆ ಕಿವಿಗೊಡುವುದೇ ಉತ್ತಮ. ಮೂಢರು ದುಷ್ಕೃತ್ಯಗಳನ್ನು ಮಾಡುತ್ತಲೇ ಇರುವರು; ಆದರೆ ಅವರಿಗೆ ಅದು ಗೊತ್ತೇ ಇಲ್ಲ.
ದೇವರಿಗೆ ಹರಕೆ ಮಾಡುವಾಗ ಎಚ್ಚರಿಕೆಯಿಂದಿರಿ. ನೀವು ದೇವರೊಂದಿಗೆ ಮಾತಾಡುವಾಗ ಎಚ್ಚರಿಕೆಯಿಂದಿರಿ. ನಿಮ್ಮ ಮನೋದ್ವೇಗಗಳು ನಿಮ್ಮನ್ನು ಮಾತಿನಲ್ಲಿ ದುಡುಕಿಸದಂತೆ ನೋಡಿಕೊಳ್ಳಿ. ದೇವರು ಪರಲೋಕದಲ್ಲಿರುವುದರಿಂದ ಮತ್ತು ನೀವು ಈ ಲೋಕದಲ್ಲಿರುವುದರಿಂದ ನಿಮ್ಮ ಮಾತುಗಳು ಮಿತವಾಗಿರಲಿ. ಈ ನುಡಿ ಸತ್ಯವಾದದ್ದೇ:
ಆದ್ದರಿಂದ ನಿಮ್ಮ ಮಾತುಗಳು ನಿಮ್ಮನ್ನು ಪಾಪಕ್ಕೆ ನಡೆಸದಂತೆ ನೋಡಿಕೊಳ್ಳಿ. “ನಾನು ಅಜಾಗ್ರತೆಯಿಂದ ಹೇಳಿದೆ” ಎಂದು ಯಾಜಕನಿಗೆ ತಿಳಿಸಬೇಡಿ. ಇಲ್ಲವಾದರೆ, ದೇವರು ನಿಮ್ಮ ಮಾತುಗಳಿಗೆ ಕೋಪಗೊಂಡು ನೀವು ದುಡಿದಿರುವುದನ್ನೆಲ್ಲಾ ನಾಶಮಾಡಬಹುದು.
ದೇಶದಲ್ಲಿ ಬಡವರಿಂದ ಬಲವಂತ ಸೇವೆಮಾಡಿಸುವುದನ್ನು ಕಂಡು ಅವರಿಗೆ ಅನ್ಯಾಯವಾಗಿದೆಯೆಂದೂ ಹಕ್ಕಿಗೆ ಚ್ಯುತಿಯಾಗಿದೆಯೆಂದೂ ಆಶ್ಚರ್ಯಪಡಬೇಡಿ. ಅವರಿಂದ ಬಲವಂತವಾಗಿ ದುಡಿಸುವ ಅಧಿಪತಿಗೆ ಬಲವಂತದಿಂದ ದುಡಿಸುವ ಮತ್ತೊಬ್ಬ ಅಧಿಪತಿಯಿರುವನು. ಈ ಇಬ್ಬರು ಅಧಿಪತಿಗಳಿಗೂ ಮತ್ತೊಬ್ಬ ಅಧಿಪತಿಯಿರುವನು.
ದಿನವೆಲ್ಲಾ ಪ್ರಯಾಸಪಟ್ಟು ದುಡಿಯುವವನು ಸಮಾಧಾನದಿಂದ ಮಲಗಿಕೊಳ್ಳುವನು. ಅವನಿಗೆ ತಿನ್ನಲು ಸ್ವಲ್ಪವೇ ಇರಲಿ ಅಥವಾ ಹೆಚ್ಚೇ ಇರಲಿ, ಅದು ಮುಖ್ಯವಲ್ಲ. ಐಶ್ವರ್ಯವಂತನಿಗಾದರೋ ತನ್ನ ಸಂಪತ್ತಿನ ಕುರಿತು ಚಿಂತಿಸುತ್ತಾ ನಿದ್ರಿಸಲಾರನು.
ಮನುಷ್ಯನು ತಾಯಿಯ ಗರ್ಭದಿಂದ ಬರಿದಾಗಿ ಈ ಲೋಕಕ್ಕೆ ಬರುವನು; ಸಾಯುವಾಗ ಅದೇ ರೀತಿ ಬರಿದಾಗಿ ಹೋಗುವನು; ತಾನು ಪ್ರಯಾಸಪಟ್ಟು ಸಂಪಾದಿಸಿದವುಗಳಲ್ಲಿ ಒಂದನ್ನೂ ಅವನು ತನ್ನೊಡನೆ ತೆಗೆದುಕೊಂಡು ಹೋಗಲಾರನು.
ದೇವರು ಒಬ್ಬನಿಗೆ ಐಶ್ವರ್ಯವನ್ನೂ ಆಸ್ತಿಯನ್ನೂ ಮತ್ತು ಅವುಗಳನ್ನು ಅನುಭವಿಸುವ ಭಾಗ್ಯವನ್ನೂ ಕೊಟ್ಟಿದ್ದರೆ ಅವನು ಅವುಗಳನ್ನು ಅನುಭವಿಸಲಿ. ಅವನು ತನಗಿರುವಂಥವುಗಳನ್ನು ಹೊಂದಿಕೊಂಡು ತನ್ನ ದುಡಿಮೆಯಲ್ಲಿ ಸಂತೋಷಿಸಲಿ. ಅದು ದೇವರ ಅನುಗ್ರಹವಷ್ಟೇ.