“ನಾನು ಈ ದಿನ ಕೊಡುವ ಎಲ್ಲಾ ಆಜ್ಞೆಗಳನ್ನು ನೀವು ಅನುಸರಿಸಬೇಕು. ಆಗ ನೀವು ದೊಡ್ಡ ಜನಾಂಗವಾಗಿ ಅಭಿವೃದ್ಧಿಯಾಗುವಿರಿ. ನಿಮ್ಮ ಪೂರ್ವಿಕರಿಗೆ ಯೆಹೋವನು ವಾಗ್ದಾನ ಮಾಡಿದ ದೇಶವನ್ನು ನೀವು ಪಡೆದುಕೊಳ್ಳುವಿರಿ.
ನಿಮ್ಮ ದೇವರಾದ ಯೆಹೋವನು ಈ ನಲವತ್ತು ವರ್ಷಗಳ ಕಾಲ ನಿಮ್ಮನ್ನು ಅರಣ್ಯ ಪ್ರಯಾಣದಲ್ಲಿ ಮೊದಲು ನಡೆಸಿದ್ದನ್ನು ನೀವು ಯಾವಾಗಲೂ ಸ್ಮರಿಸಬೇಕು. ಯೆಹೋವನು ನಿಮ್ಮನ್ನು ಪರೀಕ್ಷಿಸುತ್ತಿದ್ದನು ಮತ್ತು ನಿಮ್ಮನ್ನು ದೀನರನ್ನಾಗಿ ಮಾಡಬೇಕೆಂದಿದ್ದನು. ನಿಮ್ಮ ಹೃದಯದ ಆಲೋಚನೆಗಳನ್ನು ಆತನು ತಿಳಿದುಕೊಳ್ಳಬೇಕೆಂದಿದ್ದನು; ನೀವು ಆತನ ಆಜ್ಞೆಗಳಿಗೆ ವಿಧೇಯರಾಗುವಿರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕೆಂದಿದ್ದನು.
ಯೆಹೋವನು ನಿಮ್ಮನ್ನು ದೀನರನ್ನಾಗಿ ಮಾಡಿ ನಿಮಗೆ ಹಸಿವೆಯಾಗುವಂತೆ ಮಾಡಿದನು. ಆ ಬಳಿಕ ಮನ್ನದ ಮೂಲಕ ನಿಮ್ಮ ಹಸಿವೆಯನ್ನು ನೀಗಿದನು. ಇದರ ವಿಷಯವಾಗಿ ನೀವು ಹಿಂದೆಂದೂ ಕೇಳಿರಲಿಲ್ಲ. ನಿಮ್ಮ ಪೂರ್ವಿಕರೂ ನೋಡಿರಲಿಲ್ಲ. ಆತನು ಹೀಗೇಕೆ ಮಾಡಿದನು? ಯಾಕೆಂದರೆ ಕೇವಲ ರೊಟ್ಟಿ ತಿಂದ ಮಾತ್ರದಿಂದ ಮನುಷ್ಯರು ಬದುಕದೆ ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೇ ಬದುಕುವರೆಂಬುದನ್ನು ನೀವು ತಿಳಿಯಬೇಕೆಂದು ಹೀಗೆ ಮಾಡಿದನು.
ನಿಮ್ಮ ದೇವರಾದ ಯೆಹೋವನು ಉತ್ತಮವಾದ ದೇಶವನ್ನು ನಿಮಗೆ ಕೊಡುತ್ತಿದ್ದಾನೆ. ಆ ದೇಶದಲ್ಲಿ ನೀರು ಸಮೃದ್ಧಿಯಾಗಿರುವುದು. ನೀರು ಕಣಿವೆಗಳಲ್ಲಿಯೂ ಬೆಟ್ಟಗಳಲ್ಲಿಯೂ ನೆಲದ ಮೇಲೂ ಹರಿದುಬರುವುದು.
ಆಗ ನೀವು ಹೆಮ್ಮೆಯಿಂದ ಸೊಕ್ಕಿನ ಕಣ್ಣುಳ್ಳವರಾಗಿರಬೇಡಿ. ನಿಮ್ಮ ದೇವರಾದ ಯೆಹೋವನನ್ನು ಮರೆತುಬಿಡಬೇಡಿರಿ. ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಾಗ ಆತನು ನಿಮ್ಮನ್ನು ಬಿಡಿಸಿ ಸ್ವತಂತ್ರರನ್ನಾಗಿ ಮಾಡಿದನು.
ಆತನು ನಿಮ್ಮನ್ನು ಭಯಂಕರವಾದ ಆ ಅಡವಿಯಲ್ಲಿ ಮೊದಲು ನಡೆಸಿದನು. ಅಲ್ಲಿ ವಿಷದ ಹಾವು, ಚೇಳುಗಳು ಇದ್ದವು. ನೆಲವು ಕಾದಿದ್ದು ಎಲ್ಲಿಯೂ ನೀರು ಸಿಗುತ್ತಿರಲಿಲ್ಲ. ಆದರೆ ನಿಮ್ಮ ದೇವರಾದ ಯೆಹೋವನು ಬಂಡೆಯೊಳಗಿಂದ ನೀರನ್ನು ನಿಮಗೆ ಒದಗಿಸಿದನು.
ನಿಮ್ಮ ಪೂರ್ವಿಕರು ನೋಡಿಲ್ಲದ ಮನ್ನವನ್ನು ಯೆಹೋವನು ನಿಮಗೆ ಮರುಭೂಮಿಯಲ್ಲಿ ತಿನ್ನಲು ಕೊಟ್ಟನು. ಯೆಹೋವನು ನಿಮ್ಮನ್ನು ಪರೀಕ್ಷಿಸಿದನು. ನೀವು ಒಳ್ಳೆಯ ಫಲಭರಿತವಾದ ಜೀವಿತವನ್ನು ನಡೆಸಬೇಕೆಂದು ಯೆಹೋವನು ನಿಮ್ಮನ್ನು ದೀನರನ್ನಾಗಿ ಮಾಡಿದನು.
ನಿಮ್ಮ ದೇವರಾದ ಯೆಹೋವನನ್ನು ಜ್ಞಾಪಕಮಾಡಿಕೊಳ್ಳಿ. ಇವೆಲ್ಲಾ ಸಂಪಾದಿಸುವುದಕ್ಕೆ ಆತನೇ ನಿಮಗೆ ಶಕ್ತಿ ಕೊಟ್ಟನು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಯೆಹೋವನು ನಿಮಗೆ ಹೀಗೆ ಮಾಡುವುದರ ಉದ್ದೇಶವೇನಾಗಿತ್ತು? ಆತನು ನಿಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನವನ್ನು ನೆರವೇರಿಸಬೇಕೆಂಬುದೇ ಆತನ ಉದ್ದೇಶವಾಗಿತ್ತು.