ಈ ಜನರಲ್ಲಿ ಅನೇಕರು ದೆವ್ವಗಳಿಂದ ಪೀಡಿತರಾಗಿದ್ದರು. ಫಿಲಿಪ್ಪನು ಆ ದೆವ್ವಗಳನ್ನು ಅವರೊಳಗಿಂದ ಹೊರಡಿಸಿದಾಗ ಅವು ಅಬ್ಬರಿಸುತ್ತಾ ಹೊರಬಂದವು. ಅಲ್ಲಿದ್ದ ಅನೇಕ ಬಲಹೀನರನ್ನು, ಕುಂಟರನ್ನು ಸಹ ಫಿಲಿಪ್ಪನು ಗುಣಪಡಿಸಿದನು.
ಆದರೆ ಆ ಪಟ್ಟಣದಲ್ಲಿ ಸಿಮೋನ ಎಂಬ ಒಬ್ಬನಿದ್ದನು. ಫಿಲಿಪ್ಪನು ಅಲ್ಲಿಗೆ ಬರುವುದಕ್ಕಿಂತ ಮೊದಲಿನಿಂದಲೂ ಸಿಮೋನನು ಮಂತ್ರತಂತ್ರಗಳನ್ನು ಮಾಡುತ್ತಿದ್ದನು. ಅವನು ತನ್ನ ತಂತ್ರಗಳಿಂದ ಸಮಾರ್ಯದ ಜನರೆಲ್ಲರನ್ನು ವಿಸ್ಮಯಗೊಳಿಸಿದ್ದನು. ಸಿಮೋನನು ತನ್ನನ್ನು ಮಹಾವ್ಯಕ್ತಿಯೆಂದು ಹೇಳಿಕೊಂಡು ಜಂಭಪಡುತ್ತಿದ್ದನು.
ಎಲ್ಲಾ ಜನರು ಅಂದರೆ ಕನಿಷ್ಠರಾದವರು ಮತ್ತು ಅತಿಮುಖ್ಯರಾದವರು ಸಿಮೋನನು ಹೇಳಿದ ಸಂಗತಿಗಳನ್ನು ನಂಬಿದ್ದರು. “ಈ ಮನುಷ್ಯನಲ್ಲಿ ಮಹಾಶಕ್ತಿ؆ ಎಂಬ ದೇವರ ಶಕ್ತಿಯಿದೆ!” ಎಂದು ಜನರು ಅವನ ಬಗ್ಗೆ ಹೇಳುತ್ತಿದ್ದರು.
ಆದರೆ ಫಿಲಿಪ್ಪನು ದೇವರ ರಾಜ್ಯದ ಬಗ್ಗೆ ಮತ್ತು ಯೇಸುಕ್ರಿಸ್ತನ ಶಕ್ತಿಯ ಬಗ್ಗೆ ಜನರಿಗೆ ಸುವಾರ್ತೆಯನ್ನು ಹೇಳಿದನು. ಗಂಡಸರು ಮತ್ತು ಹೆಂಗಸರು ಫಿಲಿಪ್ಪನು ಹೇಳಿದ್ದನ್ನು ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡರು.
ಸಿಮೋನನು ಸಹ ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡನು. ಸಿಮೋನನು ಫಿಲಿಪ್ಪನ ಸಮೀಪದಲ್ಲೇ ಇದ್ದನು. ಫಿಲಿಪ್ಪನು ಮಾಡಿದ ಅದ್ಭುತಕಾರ್ಯಗಳನ್ನು ಮತ್ತು ಸೂಚಕಕಾರ್ಯಗಳನ್ನು ಸಿಮೋನನು ನೋಡಿ ವಿಸ್ಮಿತನಾದನು.
ಅಪೊಸ್ತಲರು ಇನ್ನೂ ಜೆರುಸಲೇಮಿನಲ್ಲಿದ್ದರು. ಸಮಾರ್ಯದ ಜನರು ದೇವರ ವಾಕ್ಯವನ್ನು ಸ್ವೀಕರಿಸಿಕೊಂಡರೆಂಬುದು ಅವರಿಗೆ ತಿಳಿಯಿತು. ಆದ್ದರಿಂದ ಅಪೊಸ್ತಲರು ಪೇತ್ರ ಮತ್ತು ಯೋಹಾನರನ್ನು ಸಮಾರ್ಯದ ಜನರ ಬಳಿಗೆ ಕಳುಹಿಸಿದರು.
ಈ ಜನರು ಪ್ರಭುವಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರು. ಆದರೆ ಪವಿತ್ರಾತ್ಮನು ಅವರಲ್ಲಿ ಯಾರ ಮೇಲೆಯೂ ಇನ್ನೂ ಇಳಿದು ಬಂದಿರಲಿಲ್ಲ. ಈ ಕಾರಣದಿಂದಲೇ ಪೇತ್ರ ಮತ್ತು ಯೋಹಾನರು ಪ್ರಾರ್ಥಿಸಿದರು.
ಬಳಿಕ ಆ ಇಬ್ಬರು ಅಪೊಸ್ತಲರು ತಾವು ಕಂಡ ಯೇಸುವಿನ ಕಾರ್ಯಗಳನ್ನು ಜನರಿಗೆ ತಿಳಿಸಿದರು. ಅಪೊಸ್ತಲರು ಜನರಿಗೆ ಪ್ರಭುವಿನ ಸಂದೇಶವನ್ನು ತಿಳಿಸಿದರು. ಆಮೇಲೆ ಅವರು ಜೆರುಸಲೇಮಿಗೆ ಹಿಂತಿರುಗಿದರು. ದಾರಿಯಲ್ಲಿ ಅವರು ಸಮಾರ್ಯದ ಅನೇಕ ಊರುಗಳಿಗೆ ಹೋಗಿ ಜನರಿಗೆ ಸುವಾರ್ತೆಯನ್ನು ತಿಳಿಸಿದರು.
ಆದ್ದರಿಂದ ಫಿಲಿಪ್ಪನು ಸಿದ್ಧನಾಗಿ ಹೊರಟನು. ಇಥಿಯೋಪಿಯಾದ ಒಬ್ಬನನ್ನು ಅವನು ದಾರಿಯಲ್ಲಿ ಕಂಡನು. ಈ ಮನುಷ್ಯನು ನಪುಂಸಕನಾಗಿದ್ದನು. ಇಥಿಯೋಪಿಯದ ರಾಣಿಯಾದ ಕಂದಾಕೆಯ ಆಸ್ಥಾನದಲ್ಲಿ ಇವನು ಮುಖ್ಯಾಧಿಕಾರಿಯಾಗಿದ್ದನು. ಹಣವನ್ನೆಲ್ಲ ನೋಡಿಕೊಳ್ಳುವ ಜವಾಬ್ದಾರಿ ಇವನದೇ ಆಗಿತ್ತು. ಈ ಮನುಷ್ಯನು ಆರಾಧನೆಗಾಗಿ ಜೆರುಸಲೇಮಿಗೆ ಹೋಗಿದ್ದನು.
ಅಂತೆಯೇ ಫಿಲಿಪ್ಪನು ರಥದ ಬಳಿಗೆ ಹೋದನು. ಆ ಮನುಷ್ಯನು ಓದುತ್ತಿರುವುದು ಅವನಿಗೆ ಕೇಳಿಸಿತು. ಅವನು ಯೆಶಾಯನ ಪ್ರವಾದನಾ ಗ್ರಂಥವನ್ನು ಓದುತ್ತಿದ್ದನು. ಫಿಲಿಪ್ಪನು ಅವನಿಗೆ, “ನೀನು ಓದುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೋ?” ಎಂದು ಕೇಳಿದನು.
ಆ ಅಧಿಕಾರಿಯು “ನಾನು ಹೇಗೆ ಅರ್ಥಮಾಡಿಕೊಳ್ಳಲಿ? ಬೇರೆ ಯಾರಾದರೂ ನನಗೆ ಅದನ್ನು ವಿವರಿಸಬೇಕು!” ಎಂದು ಉತ್ತರಕೊಟ್ಟನು. ಬಳಿಕ, ರಥವನ್ನು ಹತ್ತಿ ತನ್ನೊಂದಿಗೆ ಕುಳಿತುಕೊಳ್ಳುವಂತೆ ಅವನು ಫಿಲಿಪ್ಪನನ್ನು ಆಹ್ವಾನಿಸಿದನು.
ಅವನು ಓದುತ್ತಿದ್ದ ಪವಿತ್ರ ಗ್ರಂಥದ ಭಾಗವು ಇಂತಿದೆ: ವಧ್ಯಸ್ಥಾನಕ್ಕೆ ಒಯ್ದ ಕುರಿಯಂತೆ ಆತನಿದ್ದನು. ಉಣ್ಣೆ ಕತ್ತರಿಸುವವನ ಮುಂದೆ ಮೌನವಾಗಿರುವ ಕುರಿಯಂತೆ ಆತನಿದ್ದನು. ಆತನು ಬಾಯಿ ತೆರೆಯಲಿಲ್ಲ.
ಅವನು ಫಿಲಿಪ್ಪನಿಗೆ, “ದಯವಿಟ್ಟು ನನಗೆ ಹೇಳು, ಯಾವ ಪ್ರವಾದಿಯ ಬಗ್ಗೆ ಇಲ್ಲಿ ಹೇಳುತ್ತಿದ್ದಾನೆ? ಅವನು ತನ್ನ ಬಗ್ಗೆ ಹೇಳುತ್ತಿದ್ದಾನೋ ಅಥವಾ ಬೇರೊಬ್ಬನ ಬಗ್ಗೆ ಹೇಳುತ್ತಿದ್ದಾನೋ?” ಎಂದು ಕೇಳಿದನು.
ಅವರು ಪ್ರಯಾಣ ಮಾಡುತ್ತಾ ನೀರಿದ್ದ ಒಂದು ಸ್ಥಳಕ್ಕೆ ಬಂದಾಗ ಅಧಿಕಾರಿಯು, “ಇಗೋ! ಇಲ್ಲಿ ನೀರಿದೆ! ನಾನು ದೀಕ್ಷಾಸ್ನಾನ ತೆಗೆದುಕೊಳ್ಳಲು ಏನಾದರೂ ಅಡ್ಡಿಯಿದೆಯೇ?” ಎಂದು ಫಿಲಿಪ್ಪನನ್ನು ಕೇಳಿದನು.
ಅವರು ನೀರಿನಿಂದ ಮೇಲಕ್ಕೆ ಬಂದಾಗ ಪ್ರಭುವಿನ ಆತ್ಮನಿಂದ ಫಿಲಿಪ್ಪನು ಎತ್ತಲ್ಪಟ್ಟನು. ಅವನು ಫಿಲಿಪ್ಪನನ್ನು ಮತ್ತೆಂದೂ ನೋಡಲಿಲ್ಲ. ಅವನು ಬಹಳ ಸಂತೋಷದಿಂದ ತನ್ನ ಪ್ರಯಾಣವನ್ನು ಮುಂದುವರಿಸಿದನು.