English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Acts Chapters

Acts 16 Verses

1 ಪೌಲನು ದರ್ಬೆ ಮತ್ತು ಲುಸ್ತ್ರ ಪಟ್ಟಣಗಳಿಗೆ ಹೋದನು. ತಿಮೊಥೆ ಎಂಬ ಕ್ರಿಸ್ತನ ಶಿಷ್ಯನೊಬ್ಬನು ಅಲ್ಲಿದ್ದನು. ತಿಮೊಥೆಯನ ತಾಯಿ ಯೆಹೂದ್ಯ ವಿಶ್ವಾಸಿಯಾಗಿದ್ದಳು. ಅವನ ತಂದೆಯು ಗ್ರೀಕನಾಗಿದ್ದನು.
2 ಲುಸ್ತ್ರ ಮತ್ತು ಇಕೋನಿಯಾ ಪಟ್ಟಣಗಳ ವಿಶ್ವಾಸಿಗಳು ತಿಮೊಥೆಯನನ್ನು ಗೌರವಿಸುತ್ತಿದ್ದರು; ಮತ್ತು ಅವನ ಬಗ್ಗೆ ಒಳ್ಳೆಯದನ್ನೇ ಹೇಳುತ್ತಿದ್ದರು.
3 ಪೌಲನು ತಿಮೊಥೆಯನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಅಪೇಕ್ಷಿಸಿದನು. ಆದರೆ ಆ ಪ್ರದೇಶದಲ್ಲಿ ವಾಸವಾಗಿದ್ದ ಎಲ್ಲಾ ಜನರಿಗೂ ತಿಮೊಥೆಯನ ತಂದೆ ಗ್ರೀಕನೆಂಬುದು ಗೊತ್ತಿತ್ತು. ಆದ್ದರಿಂದ ಪೌಲನು ಯೆಹೂದ್ಯರನ್ನು ಮೆಚ್ಚಿಸುವುದಕ್ಕಾಗಿ ತಿಮೊಥೆಯನಿಗೆ ಸುನ್ನತಿ ಮಾಡಿಸಿದನು.
4 ಬಳಿಕ ಪೌಲನು ಮತ್ತು ಅವನ ಸಂಗಡಿಗರು ಬೇರೆ ಪಟ್ಟಣಗಳ ಮೂಲಕ ಪ್ರಯಾಣ ಮಾಡಿದರು. ಜೆರುಸಲೇಮಿನಲ್ಲಿರುವ ಅಪೊಸ್ತಲರ ಮತ್ತು ಹಿರಿಯರ ನಿಯಮಗಳನ್ನೂ ತೀಮಾರ್ನಗಳನ್ನೂ ಅವರು ವಿಶ್ವಾಸಿಗಳಿಗೆ ಕೊಟ್ಟು ಅವುಗಳಿಗೆ ವಿಧೇಯರಾಗಬೇಕೆಂದು ತಿಳಿಸಿದರು.
5 ಇದರಿಂದಾಗಿ ಸಭೆಗಳು ನಂಬಿಕೆಯಲ್ಲಿ ಬಲವಾಗತೊಡಗಿದವು ಮತ್ತು ಸಂಖ್ಯೆಯಲ್ಲಿ ದಿನದಿನಕ್ಕೂ ಹೆಚ್ಚಾಗತೊಡಗಿದವು.
6 ಪೌಲನು ಮತ್ತು ಅವನ ಸಂಗಡಿಗರು ಫ್ರಿಜಿಯ ಮತ್ತು ಗಲಾತ್ಯ ಪ್ರಾಂತ್ಯಗಳ ಮೂಲಕ ಹಾದುಹೋದರು. ಏಷ್ಯಾ [*ಏಷ್ಯಾ ಇದು ಏಷ್ಯಾ ಮೈನರಿನ ಪಶ್ಚಿಮ ಭಾಗ.] ಸೀಮೆಯಲ್ಲಿ ಸುವಾರ್ತೆಯನ್ನು ತಿಳಿಸದಂತೆ ಪವಿತ್ರಾತ್ಮನು ಅವರನ್ನು ತಡೆದನು.
7 ಪೌಲ ತಿಮೊಥೆಯರು ಮುಸಿಯ ನಾಡಿನ ಸಮೀಪಕ್ಕೆ ಹೋದರು. ಅವರು ಬಿಥೂನಿಯ ನಾಡಿನೊಳಗೆ ಹೋಗಬೇಕೆಂದಿದ್ದರು. ಆದರೆ ಯೇಸುವಿನ ಆತ್ಮನು ಅಲ್ಲಿಗೆ ಹೋಗದಂತೆ ಅವರನ್ನು ತಡೆದನು.
8 ಆದ್ದರಿಂದ ಅವರು ಮುಸಿಯ ನಾಡನ್ನು ಹಾದು ನೇರವಾಗಿ ತ್ರೋವ ಪಟ್ಟಣಕ್ಕೆ ಬಂದರು.
9 ಆ ರಾತ್ರಿ ಪೌಲನಿಗೆ ಒಂದು ದರ್ಶನವಾಯಿತು. ಈ ದರ್ಶನದಲ್ಲಿ ಮಕೆದೋನಿಯದ ನಾಡಿನಿಂದ ಬಂದ ಒಬ್ಬ ಮನುಷ್ಯನು ಅಲ್ಲಿ ನಿಂತುಕೊಂಡು, “ಮಕೆದೋನಿಯಕ್ಕೆ ಬಂದು ನಮಗೆ ಸಹಾಯಮಾಡು” ಎಂದು ಬೇಡಿಕೊಂಡನು.
10 ಪೌಲನು ಆ ದರ್ಶನವನ್ನು ಕಂಡಕೂಡಲೇ, ಅಲ್ಲಿಯ ಜನರಿಗೆ ಸುವಾರ್ತೆಯನ್ನು ತಿಳಿಸುವುದಕ್ಕಾಗಿ ದೇವರು ನಮ್ಮನ್ನು ಕರೆದಿದ್ದಾನೆಂದು ಅರ್ಥಮಾಡಿಕೊಂಡು ಮಕೆದೋನಿಯಕ್ಕೆ ಹೋಗಲು ನಾವು ಸಿದ್ಧರಾದೆವು.
11 ನಾವು ತ್ರೋವದಿಂದ ಹಡಗಿನಲ್ಲಿ ಹೊರಟು ಸಮೊಥ್ರ ದ್ವೀಪಕ್ಕೆ ಬಂದು ಮರುದಿನ ನೆಯಪೊಲಿಸ್ ಪಟ್ಟಣವನ್ನು ತಲುಪಿ,
12 ಅಲ್ಲಿಂದ ಫಿಲಿಪ್ಪಿಗೆ ಹೋದೆವು. ಅದು ಮಕೆದೋನಿಯದ ಜಿಲ್ಲೆಯಲ್ಲಿ ಮತ್ತು ರೋಮನ್ನರ ವಸಾಹತುವಿನಲ್ಲಿ [†ವಸಾಹತು ವಲಸೆ ಹೊರಟವರು ಸ್ಥಾಪಿಸಿದ ಸ್ವತಂತ್ರ ನಗರ.] ಮುಖ್ಯವಾದ ಪಟ್ಟಣವಾಗಿತ್ತು. ನಾವು ಅಲ್ಲಿ ಕೆಲವು ದಿನಗಳವರೆಗೆ ಇಳಿದುಕೊಂಡೆವು.
13 ನದಿಯ ಸಮೀಪದಲ್ಲಿ ವಿಶೇಷವಾದ ಪ್ರಾರ್ಥನಾ ಸ್ಥಳವನ್ನು ನಾವು ಕಾಣಬಹುದೆಂದು ಆಲೋಚಿಸಿಕೊಂಡು ಸಬ್ಬತ್ ದಿನದಂದು ನದಿಯ ಬಳಿಗೆ ಹೋಗಲು ನಗರದ್ವಾರದಿಂದ ಹೊರಗೆ ಹೋದೆವು. ಕೆಲವು ಸ್ತ್ರೀಯರು ಅಲ್ಲಿ ಸೇರಿ ಬಂದಿದ್ದರು. ಆದ್ದರಿಂದ ನಾವು ಕುಳಿತುಕೊಂಡು ಅವರೊಂದಿಗೆ ಮಾತಾಡಿದೆವು.
14 ಅಲ್ಲಿ ಲಿಡಿಯಾ ಎಂಬ ಒಬ್ಬ ಹೆಂಗಸಿದ್ದಳು. ಆಕೆಯು ಥುವತೈರ ಪಟ್ಟಣದವಳು. ಕೆನ್ನೇರಳೆ ಬಣ್ಣದ ಬಟ್ಟೆಗಳನ್ನು ಮಾರುವುದು ಆಕೆಯ ಕಸುಬಾಗಿತ್ತು. ಆಕೆಯು ನಿಜ ದೇವರನ್ನು ಆರಾಧಿಸುತ್ತಿದ್ದಳು. ಪೌಲನ ಮಾತನ್ನು ಲಿಡಿಯಾ ಆಲಿಸುತ್ತಿದ್ದಳು. ಪ್ರಭುವು ಆಕೆಯ ಹೃದಯವನ್ನು ತೆರೆದನು. ಪೌಲನು ಹೇಳಿದ ಸಂಗತಿಗಳನ್ನು ಆಕೆ ನಂಬಿಕೊಂಡಳು.
15 ಆಕೆ ಮತ್ತು ಆಕೆಯ ಮನೆಯಲ್ಲಿ ವಾಸವಾಗಿದ್ದ ಎಲ್ಲಾ ಜನರು ದೀಕ್ಷಾಸ್ನಾನ ಮಾಡಿಸಿಕೊಂಡರು. ಆಕೆಯು, “ನಾನು ಪ್ರಭು ಯೇಸುವಿನಲ್ಲಿ ನಿಜವಾದ ವಿಶ್ವಾಸಿಯೆಂದು ನೀವು ಯೋಚಿಸುವುದಾಗಿದ್ದರೆ, ನನ್ನ ಮನೆಗೆ ಬಂದು ತಂಗಿರಿ” ಎಂದು ಕೇಳಿಕೊಂಡು ನಮ್ಮನ್ನು ಒತ್ತಾಯ ಮಾಡಿದಳು.
16 ಒಂದು ಸಲ, ನಾವು ಪ್ರಾರ್ಥನಾಸ್ಥಳಕ್ಕೆ ಹೋಗುತ್ತಿದ್ದಾಗ ಒಂದು ಸಂಗತಿ ಸಂಭವಿಸಿತು. ದಾಸಿಯೊಬ್ಬಳು ನಮ್ಮನ್ನು ಎದುರುಗೊಂಡಳು. ಆಕೆಯಲ್ಲಿ ವಿಶೇಷವಾದ ಆತ್ಮವಿತ್ತು. ಆ ಆತ್ಮದ ಶಕ್ತಿಯಿಂದ ಅವಳು ಮುಂದೆ ಸಂಭವಿಸುವ ಸಂಗತಿಗಳ ಬಗ್ಗೆ ಹೇಳುತ್ತಿದ್ದಳು. ಇದರ ಮೂಲಕವಾಗಿ ಆಕೆ ತನ್ನ ಯಜಮಾನರಿಗೆ ಬಹಳ ಹಣವನ್ನು ಗಳಿಸಿ ಕೊಡುತ್ತಿದ್ದಳು.
17 ಅವಳು ಪೌಲನನ್ನು ಮತ್ತು ನಮ್ಮನ್ನು ಹಿಂಬಾಲಿಸುತ್ತಾ, “ಈ ಜನರು ಮಹೋನ್ನತನಾದ ದೇವರ ಸೇವಕರು! ನೀವು ಹೇಗೆ ರಕ್ಷಣೆ ಹೊಂದಬಹುದೆಂಬುದನ್ನು ಅವರು ಹೇಳುತ್ತಿದ್ದಾರೆ!” ಎಂದು ಕೂಗುತ್ತಿದ್ದಳು.
18 ಹೀಗೆ ಆಕೆ ಅನೇಕ ದಿನಗಳವರೆಗೆ ಮಾಡಿದಳು. ಇದರಿಂದ ಬೇಸರಗೊಂಡ ಪೌಲನು ಹಿಂತಿರುಗಿ, ಆ ಆತ್ಮಕ್ಕೆ, “ಅವಳನ್ನು ಬಿಟ್ಟು ಹೋಗಬೇಕೆಂದು ಯೇಸು ಕ್ರಿಸ್ತನ ಹೆಸರಿನಲ್ಲಿ ನಿನಗೆ ಆಜ್ಞಾಪಿಸುತ್ತೇನೆ!” ಎಂದು ಹೇಳಿದನು. ಆ ಕೂಡಲೇ ಆ ಆತ್ಮವು ಹೊರಬಂದಿತು.
19 ಇದನ್ನು ಕಂಡ ಅವಳ ಯಜಮಾನರು ಈಗ ಆಕೆಯಿಂದ ಹಣಗಳಿಸಲು ಸಾಧ್ಯವಿಲ್ಲವೆಂದು ಅರಿತುಕೊಂಡರು. ಆದ್ದರಿಂದ ಅವರು ಪೌಲ ಸೀಲರನ್ನು ಹಿಡಿದು ಪಟ್ಟಣದ ನ್ಯಾಯಸ್ಥಾನಕ್ಕೆ ಎಳೆದುಕೊಂಡು ಹೋದರು. ನಗರಾಧಿಕಾರಿಗಳು ಅಲ್ಲಿದ್ದರು.
20 ಆ ಜನರು ಪೌಲ ಸೀಲರನ್ನು ನ್ಯಾಯಾಧೀಶರ ಬಳಿಗೆ ತಂದು, “ಈ ಜನರು ಯೆಹೂದ್ಯರು. ಇವರು ನಮ್ಮ ಪಟ್ಟಣದಲ್ಲಿ ಗಲಭೆ ಎಬ್ಬಿಸುತ್ತಿದ್ದಾರೆ.
21 ನಿಷಿದ್ಧ ಕಾರ್ಯಗಳನ್ನು ಮಾಡುವಂತೆ ಇವರು ಜನರಿಗೆ ಹೇಳುತ್ತಿದ್ದಾರೆ. ರೋಮ್ ಪ್ರಜೆಗಳಾಗಿರುವ ನಾವು ಅಂಥ ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲ” ಎಂದು ಹೇಳಿದರು.
22 ಜನರು ಪೌಲ ಸೀಲರಿಗೆ ವಿರೋಧವಾಗಿದ್ದರು. ಆಗ ನಾಯಕರು ಪೌಲ ಸೀಲರ ಬಟ್ಟೆಗಳನ್ನು ಹರಿದುಹಾಕಿಸಿ ಅವರಿಬ್ಬರಿಗೂ ಕೋಲುಗಳಿಂದ ಬಲವಾಗಿ ಹೊಡೆಸಿ, ಸೆರೆಮನೆಗೆ ಹಾಕಿಸಿದರು.
23 ಬಳಿಕ ಸೆರೆಮನೆಯ ಅಧಿಕಾರಿಗೆ, “ಅವರನ್ನು ಬಹು ಎಚ್ಚರಿಕೆಯಿಂದ ಕಾಯಿರಿ!” ಎಂದು ಆಜ್ಞಾಪಿಸಿದರು.
24 ಆದ್ದರಿಂದ ಸೆರೆಮನೆಯ ಅಧಿಕಾರಿಯು ಅವರನ್ನು ಸೆರೆಮನೆಯ ಒಳಕೋಣೆಗೆ ಹಾಕಿಸಿ, ಅವರ ಕಾಲುಗಳನ್ನು ಮರದ ದಿಮ್ಮಿಗಳಿಗೆ ಬಿಗಿಸಿದನು.
25 ಸುಮಾರು ಮಧ್ಯರಾತ್ರಿಯಲ್ಲಿ ಪೌಲ ಸೀಲರು ಪ್ರಾರ್ಥನೆ ಮಾಡುತ್ತಾ ದೇವರಿಗೆ ಸ್ತುತಿಗೀತೆಗಳನ್ನು ಹಾಡುತ್ತಾ ಇದ್ದರು. ಇತರ ಕೈದಿಗಳೆಲ್ಲರೂ ಆಲಿಸುತ್ತಿದ್ದರು.
26 ಇದ್ದಕ್ಕಿದ್ದಂತೆ ದೊಡ್ಡ ಭೂಕಂಪವಾಯಿತು. ಭೀಕರವಾಗಿದ್ದ ಅದು ಸೆರೆಮನೆಯ ಅಡಿಪಾಯವನ್ನೇ ನಡುಗಿಸಿತು. ಆಗ ಸೆರೆಮನೆಯ ಬಾಗಿಲುಗಳೆಲ್ಲಾ ತೆರೆದುಕೊಂಡವು. ಎಲ್ಲಾ ಕೈದಿಗಳ ಸರಪಣಿಗಳು ಕಳಚಿಬಿದ್ದವು.
27 ಆಗ ಸೆರೆಮನೆಯ ಅಧಿಕಾರಿಗೆ ಎಚ್ಚರವಾಯಿತು. ಸೆರೆಮನೆಯ ಬಾಗಿಲುಗಳು ತೆರೆದುಕೊಂಡಿರುವುದನ್ನು ಕಂಡು ಈಗಾಗಲೇ ಕೈದಿಗಳು ತಪ್ಪಿಸಿಕೊಂಡಿದ್ದಾರೆಂದು ಅವನು ಭಾವಿಸಿದನು. ಆದ್ದರಿಂದ ಅವನು ತನ್ನ ಕತ್ತಿಯನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನುವಷ್ಟರಲ್ಲಿಯೇ
28 ಪೌಲನು ಅವನಿಗೆ, “ಹಾನಿ ಮಾಡಿಕೊಳ್ಳಬೇಡ! ನಾವೆಲ್ಲಾ ಇಲ್ಲೇ ಇದ್ದೇವೆ!” ಎಂದು ಕೂಗಿ ಹೇಳಿದನು.
29 ಸೆರೆಮನೆಯ ಅಧಿಕಾರಿಯು ಒಬ್ಬನಿಗೆ ದೀಪವನ್ನು ತರಬೇಕೆಂದು ಹೇಳಿದನು. ಬಳಿಕ ಅವನು ಒಳಗೆ ಓಡಿಹೋದನು. ಅವನು ನಡುಗುತ್ತಾ ಪೌಲ ಸೀಲರ ಮುಂದೆ ಕುಸಿದುಬಿದ್ದನು.
30 ಬಳಿಕ ಅವನು ಅವರನ್ನು ಹೊರಗೆ ಕರೆದುಕೊಂಡು ಬಂದು, “ಸ್ವಾಮಿಗಳೇ, ನಾನು ರಕ್ಷಣೆ ಹೊಂದಬೇಕಾದರೆ ಏನು ಮಾಡಬೇಕು?” ಎಂದು ಕೇಳಿದನು.
31 ಅವರು ಅವನಿಗೆ, “ಪ್ರಭು ಯೇಸುವಿನಲ್ಲಿ ನಂಬಿಕೆಯಿಡು. ಆಗ ನೀನು ರಕ್ಷಣೆ ಹೊಂದುವೆ ಮತ್ತು ನಿನ್ನ ಮನೆಯವರೆಲ್ಲರೂ ರಕ್ಷಣೆ ಹೊಂದುವರು” ಎಂದು ಹೇಳಿ,
32 ಅವನಿಗೂ ಅವನ ಮನೆಯವರೆಲ್ಲರಿಗೂ ಪ್ರಭುವಿನ ಸಂದೇಶವನ್ನು ತಿಳಿಸಿದರು.
33 ಆಗ ಮಧ್ಯರಾತ್ರಿ ಕಳೆದಿತ್ತು. ಆದರೂ ಅವನು ಪೌಲ ಸೀಲರನ್ನು ಕರೆದೊಯ್ದು ಅವರ ಗಾಯಗಳನ್ನು ತೊಳೆದನು. ಬಳಿಕ ಅವನು ಮತ್ತು ಅವನ ಮನೆಯವರೆಲ್ಲರೂ ದೀಕ್ಷಾಸ್ನಾನ ಮಾಡಿಸಿಕೊಂಡರು.
34 ಇದಾದ ಮೇಲೆ ಅವನು ಪೌಲ ಸೀಲರನ್ನು ಮನೆಗೆ ಕರೆದೊಯ್ದು ಅವರಿಗೆ ಊಟಮಾಡಿಸಿದನು. ಆ ಜನರೆಲ್ಲರೂ ಪ್ರಭುವಿನಲ್ಲಿ ನಂಬಿಕೆ ಇಟ್ಟದ್ದರಿಂದ ಬಹ ಸಂತೋಷಭರಿತರಾದರು.
35 ಮರುದಿನ ಮುಂಜಾನೆ ನಾಯಕರು ಸೆರೆಮನೆಯ ಅಧಿಕಾರಿಗೆ, “ಈ ಜನರನ್ನು ಬಿಟ್ಟುಬಿಡು!” ಎಂದು ಕೆಲವು ಸೈನಿಕರ ಮೂಲಕ ಹೇಳಿ ಕಳುಹಿಸಿದರು.
36 ಸೆರೆಮನೆಯ ಅಧಿಕಾರಿಯು ಪೌಲನಿಗೆ, “ನಮ್ಮ ನಾಯಕರು ನಿಮ್ಮನ್ನು ಬಿಡುಗಡೆ ಮಾಡಬೇಕೆಂದು ಸೈನಿಕರ ಮೂಲಕ ಹೇಳಿ ಕಳುಹಿಸಿದ್ದಾರೆ. ಈಗ ನೀವು ಸಮಾಧಾನದಿಂದ ಹೋಗಿರಿ” ಎಂದು ಹೇಳಿದನು.
37 ಆದರೆ ಪೌಲನು, “ನಾವು ಏನು ತಪ್ಪು ಮಾಡಿದ್ದೇವೆಂಬುದನ್ನು ನಿಮ್ಮ ನಾಯಕರು ನಿರೂಪಿಸದೆ ನಮ್ಮನ್ನು ಜನರ ಎದುರಿನಲ್ಲಿ ಹೊಡೆಸಿ ಸೆರೆಮನೆಗೆ ಹಾಕಿಸಿದರು. ನಾವು ರೋಮಿನ ಪ್ರಜೆಗಳು. ಆದ್ದರಿಂದ ನಮಗೂ ಹಕ್ಕುಗಳಿವೆ. ಈಗ ಅವರು ನಮ್ಮನ್ನು ಗೋಪ್ಯವಾಗಿ ಬಿಡುಗಡೆ ಮಾಡಬೇಕೆಂದಿರುವರೇ? ಇಲ್ಲ! ನಾಯಕರೇ ಬಂದು ನಮ್ಮನ್ನು ಹೊರಗೆ ಕರೆದುಕೊಂಡು ಹೋಗಬೇಕು!” ಎಂದು ಹೇಳಿದನು.
38 ಆ ಸೈನಿಕರು ನಾಯಕರ ಬಳಿಗೆ ಹೋಗಿ ಪೌಲನು ಹೇಳಿದ್ದನ್ನೆಲ್ಲ ತಿಳಿಸಿದರು. ಪೌಲ ಸೀಲರು ರೋಮಿನ ಪ್ರಜೆಗಳೆಂಬುದನ್ನು ಕೇಳಿದ ಕೂಡಲೇ ನಾಯಕರಿಗೆ ಭಯವಾಯಿತು.
39 ಆದ್ದರಿಂದ ಅವರು ಪೌಲ ಸೀಲರ ಬಳಿಗ ಬಂದು ಕ್ಷಮೆ ಕೇಳಿದರು. ಅಲ್ಲದೆ ಅವರನ್ನು ಸೆರೆಮನೆಯಿಂದ ಹೊರಗೆ ಕರೆದುಕೊಂಡು ಹೋದರು ಮತ್ತು ತಮ್ಮ ಪಟ್ಟಣವನ್ನು ಬಿಟ್ಟುಹೋಗಬೇಕೆಂದು ಕೇಳಿಕೊಂಡರು.
40 ಆದರೆ ಪೌಲ ಸೀಲರು ಸೆರೆಮನೆಯಿಂದ ಹೊರಟು ಲಿಡಿಯಾಳ ಮನೆಗೆ ಹೋದರು. ಅಲ್ಲಿ ಅವರು ಕೆಲವು ವಿಶ್ವಾಸಿಗಳನ್ನು ಕಂಡು ಅವರನ್ನು ಸಂತೈಸಿದರು. ಬಳಿಕ ಪೌಲ ಸೀಲರು ಅಲ್ಲಿಂದ ಹೊರಟುಹೋದರು.
×

Alert

×