ಮೋವಾಬಿನ ಜನರನ್ನು ಸಹ ದಾವೀದನು ಸೋಲಿಸಿದನು. ಅವರನ್ನು ನೆಲದ ಮೇಲೆ ಬಲವಂತದಿಂದ ಮಲಗಿಸಿ ಹಗ್ಗದಿಂದ ಅವರನ್ನು ಸಾಲುಸಾಲಾಗಿ ವಿಂಗಡಿಸಿದನು. ಎರಡು ಸಾಲಿನ ಗಂಡಸರನ್ನು ಕೊಲ್ಲಿಸಿದನು; ಆದರೆ ಮೂರನೆಯ ಸಾಲಿನ ಗಂಡಸರನ್ನು ಜೀವಂತವಾಗಿ ಉಳಿಸಿದನು. ಮೋವಾಬಿನ ಜನರು ದಾವೀದನ ಸೇವಕರಾದರು. ಅವರು ಅವನಿಗೆ ಕಪ್ಪಕಾಣಿಕೆಗಳನ್ನು ಅರ್ಪಿಸಿದರು.
ಹದದೆಜೆರನು ರೆಹೋಬನ ಮಗ ಹಾಗೂ ಚೋಬದ ರಾಜ. ದಾವೀದನು ಯೂಫ್ರೇಟೀಸ್ ನದಿಯ ಸುತ್ತಲಿನ ಪ್ರದೇಶವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಹದದೆಜೆರನನ್ನು ಸೋಲಿಸಿದನು.
ಹದದೆಜೆರನಿಂದ ಒಂದು ಸಾವಿರ ರಥಗಳನ್ನೂ ಒಂದು ಸಾವಿರದ ಏಳುನೂರು ಅಶ್ವಪಡೆಗಳನ್ನೂ ದಾವೀದನು ತೆಗೆದುಕೊಂಡನು. ಅವನು ಇಪ್ಪತ್ತು ಸಾವಿರ ಕಾಲಾಳು ಸೈನಿಕರನ್ನು ಸಹ ಪಡೆದನು. ದಾವೀದನು ಒಂದು ನೂರು ರಥದ ಕುದುರೆಗಳನ್ನು ಇಟ್ಟುಕೊಂಡು ಉಳಿದವುಗಳನ್ನು ಕುಂಟುವಂತೆ ಮಾಡಿದನು.
ಬಳಿಕ ದಾವೀದನು ದಮಸ್ಕದ ಅರಾಮ್ ದೇಶದಲ್ಲಿ ಕಾವಲುದಂಡನ್ನು ಇರಿಸಿದನು. ಅರಾಮ್ಯರು ದಾವೀದನ ಸೇವಕರಾದರು ಮತ್ತು ಅವನಿಗೆ ಕಾಣಿಕೆಗಳನ್ನು ತಂದರು. ದಾವೀದನು ಹೋದ ಸ್ಥಳಗಳಲ್ಲೆಲ್ಲ ಯೆಹೋವನು ಜಯವನ್ನು ಉಂಟುಮಾಡಿದನು.
ಆಗ ತೋವಿಯು ತನ್ನ ಮಗನಾದ ಯೋರಾವುನನ್ನು ರಾಜನಾದ ದಾವೀದನ ಬಳಿಗೆ ಕಳುಹಿಸಿದನು. ದಾವೀದನು ಹದದೆಜೆರನ ವಿರುದ್ಧ ಹೋರಾಡಿ ಅವನನ್ನು ಸೋಲಿಸಿದ್ದಕ್ಕಾಗಿ ಯೋರಾವುನು ದಾವೀದನನ್ನು ಅಭಿನಂದಿಸಿದನು ಮತ್ತು ಆಶೀರ್ವದಿಸಿದನು. (ಈ ಮೊದಲು ಹದದೆಜೆರನು ತೋವಿಗೆ ವಿರುದ್ಧವಾಗಿ ಯುದ್ಧವನ್ನು ಮಾಡಿದನು.) ಯೋರಾವುನು ಚಿನ್ನ, ಬೆಳ್ಳಿ ಮತ್ತು ಹಿತ್ತಾಳೆಯಿಂದ ಮಾಡಿದ ವಸ್ತುಗಳನ್ನು ತಂದಿದ್ದನು.
ದಾವೀದನು ಆ ವಸ್ತುಗಳನ್ನು ತೆಗೆದುಕೊಂಡು ಯೆಹೋವನಿಗೆ ಸಮರ್ಪಿಸಿದನು. ಅವನು ಅನ್ಯದೇಶಗಳನ್ನು ಸೋಲಿಸಿದ್ದಾಗ ಯೆಹೋವನಿಗೆ ಸಮರ್ಪಿಸಿದ್ದ ಬೆಳ್ಳಿ ಮತ್ತು ಚಿನ್ನಗಳೊಂದಿಗೆ ಇವುಗಳನ್ನೂ ಸೇರಿಸಿದನು.
ಯೆಹೋಯಾದಾವನ ಮಗ ಬೆನಾಯನು ಕೆರೇತ್ಯರು ಮತ್ತು ಪೆಲೇತ್ಯರು ಎಂಬ ಕಾವಲು ದಂಡುಗಳ ಅಧಿಪತಿಯಾಗಿದ್ದನು. ದಾವೀದನ ಮಕ್ಕಳೆಲ್ಲರೂ ಮುಖ್ಯಅಧಿಕಾರಿಗಳಾಗಿದ್ದರು. [*ಮುಖ್ಯ ಅಧಿಕಾರಿ ಅಥವಾ ಯಾಜಕರಾಗಿದ್ದರು.]