ಆಗ ರಾಜನಾದ ದಾವೀದನು ಪ್ರವಾದಿಯಾದ ನಾತಾನನಿಗೆ, “ನೋಡು, ನಾನು ದೇವದಾರು ಮರದಿಂದ ನಿರ್ಮಿಸಿದ ವೈಭವದ ಮನೆಯಲ್ಲಿ ವಾಸವಾಗಿದ್ದೇನೆ; ಆದರೆ ದೇವರ ಪವಿತ್ರ ಪೆಟ್ಟಿಗೆಯನ್ನು ಇನ್ನೂ ಗುಡಾರದಲ್ಲಿಯೇ ಇಟ್ಟಿದ್ದೇನೆ. ಅದಕ್ಕಾಗಿ ಒಂದು ಆಲಯವನ್ನು ಕಟ್ಟಬೇಕು” ಎಂದು ಹೇಳಿದನು.
“ನೀನು ಇದನ್ನು ನನ್ನ ಸೇವಕನಾದ ದಾವೀದನಿಗೆ ಹೇಳಲೇಬೇಕು: ‘ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, ಹುಲ್ಲುಗಾವಲಿನಲ್ಲಿ ಕುರಿಕಾಯುತ್ತಿದ್ದ ನಿನ್ನನ್ನು ನಾನು ನನ್ನ ಜನರಾದ ಇಸ್ರೇಲರಿಗೆ ನಾಯಕನಾಗಿ ಮಾಡಲು ಕರೆತಂದೆನು.
(10-11) ನಾನು ನನ್ನ ಜನರಾದ ಇಸ್ರೇಲರಿಗೆ ಒಂದು ಸ್ಥಳವನ್ನು ಆರಿಸಿಕೊಂಡು ಅವರನ್ನು ನೆಲೆಗೊಳಿಸಿದ್ದೇನೆ. ವಾಸಿಸುವುದಕ್ಕಾಗಿ ಅವರ ಸ್ವಂತ ಸ್ಥಳವನ್ನು ಅವರಿಗೆ ಕೊಟ್ಟಿದ್ದೇನೆ. ಆದ್ದರಿಂದ ಈಗ ಅವರು ಅಲೆದಾಡುವ ಅಗತ್ಯವೇ ಇಲ್ಲ. ಮೊದಲು ನನ್ನ ಜನರಾದ ಇಸ್ರೇಲರನ್ನು ಮುನ್ನಡೆಸಲು ನ್ಯಾಯಾಧಿಪತಿಗಳನ್ನು ಕಳುಹಿಸಿದೆನು. ದುಷ್ಟಜನರು ಅವರಿಗೆ ತೊಂದರೆ ಕೊಟ್ಟರು. ಆದರೆ ಅದು ಈಗ ಸಂಭವಿಸುವುದಿಲ್ಲ. ನಿನಗೆ ಶತ್ರು ಭಯವಿಲ್ಲದಂತೆ ಮಾಡುತ್ತೇನೆ; ನಿನ್ನ ಕುಟುಂಬದಿಂದಲೇ ರಾಜರುಗಳನ್ನು ಬರಮಾಡುತ್ತೇನೆ.
“ ‘ನಿನ್ನ ದಿನಗಳು ಮುಗಿದುಹೋಗುತ್ತವೆ; ನೀನು ನಿನ್ನ ಪೂರ್ವಿಕರ ಜೊತೆಯಲ್ಲಿ ಸೇರುತ್ತಿ. ಆ ಸಮಯದಲ್ಲಿ, ನಿನ್ನ ಮಕ್ಕಳಲ್ಲಿ ಒಬ್ಬನನ್ನು ರಾಜನನ್ನಾಗಿ ಮಾಡಿ ಅವನ ರಾಜ್ಯವನ್ನು ಭದ್ರಗೊಳಿಸುತ್ತೇನೆ.
ಆದರೆ ನಾನು ಅವನನ್ನು ಪ್ರೀತಿಸುವುದನ್ನು ನಿಲ್ಲಿಸುವುದಿಲ್ಲ. ಅವನು ಯಾವಾಗಲೂ ನನ್ನ ಕರುಣಾಶ್ರಯದಲ್ಲಿರುವನು. ಸೌಲನ ಮೇಲಿಟ್ಟಿದ್ದ ಪ್ರೀತಿಯನ್ನು ಮತ್ತು ದಯೆಯನ್ನು ಹಿಂತೆಗೆದುಕೊಂಡೆನು. ಸೌಲನನ್ನು ನಿನ್ನ ಎದುರಿನಿಂದ ನಾನು ದೂರ ತಳ್ಳಿದೆನು. ನಾನು ನಿನ್ನ ಕುಟುಂಬಕ್ಕೆ ಹಾಗೆ ಮಾಡುವುದಿಲ್ಲ.
ನಾನು ಕೇವಲ ನಿನ್ನ ಸೇವಕನು. ನೀನು ನನ್ನ ಮೇಲೆ ಬಹಳ ದಯೆ ತೋರಿಸಿರುವೆ. ನನಗೆ ಮಾತ್ರವಲ್ಲದೆ ನೀನು ನನ್ನ ಮುಂದಿನ ಸಂತಾನದ ಬಗ್ಗೆಯೂ ಇದೇ ರೀತಿಯ ದಯಾಪರವಾದ ಮಾತುಗಳನ್ನು ಆಡಿರುವೆ. ನನ್ನ ಒಡೆಯನಾದ ಯೆಹೋವನೇ, ನರಪ್ರಾಣಿಯಾದ ನನ್ನೊಂದಿಗೆ ಇಂಥ ಮಹತ್ತಾದ ಕಾರ್ಯ ಮಾಡಬಹುದೇ?
“ನಿನ್ನ ಜನರಾದ ಇಸ್ರೇಲರಂಥವರು ಈ ಲೋಕದಲ್ಲಿ ಬೇರೆ ಯಾರೂ ಇಲ್ಲ, ಅವರು ವಿಶೇಷವಾದ ಜನರು. ಅವರು ಗುಲಾಮರಾಗಿದ್ದರು, ಆದರೆ ಅವರನ್ನು ಈಜಿಪ್ಟಿನಿಂದ ನೀನು ಹೊರತಂದು ಸ್ವತಂತ್ರರನ್ನಾಗಿ ಮಾಡಿರುವೆ. ನೀನು ಅವರನ್ನು ನಿನ್ನ ಜನರನ್ನಾಗಿ ಮಾಡಿಕೊಂಡೆ. ಇಸ್ರೇಲರಿಗಾಗಿ ನೀನು ಉತ್ತಮವಾದ ಮತ್ತು ಮಹತ್ತಾದ ಕಾರ್ಯಗಳನ್ನು ಮಾಡಿದೆ. ನಿನ್ನ ದೇಶಕ್ಕಾಗಿ ನೀನು ಮಹತ್ಕಾರ್ಯಗಳನ್ನು ಮಾಡಿದೆ.
“ದೇವರಾದ ಯೆಹೋವನೇ, ಈಗ ನೀನು ನನ್ನ ಬಗ್ಗೆ ಮಾತನಾಡಿರುವೆ. ನಾನು ನಿನ್ನ ಸೇವಕ. ನೀನು ನನ್ನ ಕುಲದ ಬಗ್ಗೆಯೂ ವಾಗ್ದಾನ ಮಾಡಿರುವೆ. ನಿನ್ನ ವಾಗ್ದಾನಗಳನ್ನು ನೆರವೇರಿಸು. ನೀನು ವಾಗ್ದಾನ ಮಾಡಿದ ಕಾರ್ಯಗಳನ್ನು ಮಾಡು.
ಆಗ ನಿನ್ನ ಹೆಸರು ಎಂದೆಂದೂ ಗೌರವಿಸಲ್ಪಡುತ್ತದೆ. ಜನರೆಲ್ಲರೂ ‘ಸರ್ವಶಕ್ತನಾದ ಯೆಹೋವನೇ ಇಸ್ರೇಲರ ದೇವರು!’ ಎಂದು ಹೇಳುವರು. ಅಲ್ಲದೆ ‘ನಿನ್ನ ಸೇವಕನಾದ ದಾವೀದನ ಕುಟುಂಬವು ನಿನ್ನ ಸನಿಧಿಯಲ್ಲಿ ಸ್ಥಿರವಾಗುವುದು’ ಎಂದು ಹೇಳುವರು.
“ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನೇ, ನೀನು ನನಗೆ ಮುಂದಿನ ಸಂಗತಿಗಳನ್ನು ತೋರಿಸಿರುವೆ. ‘ನಾನು ನಿನ್ನ ಕುಟುಂಬವನ್ನು ಸ್ಥಿರಪಡಿಸುವೆನು’ ಎಂದು ಹೇಳಿರುವೆ. ಆ ಕಾರಣದಿಂದಲೇ ನಿನ್ನ ಸೇವಕನಾದ ನಾನು ನಿನ್ನಲ್ಲಿ ಈ ಪ್ರಾರ್ಥನೆಯನ್ನು ಸಲ್ಲಿಸಲು ತೀರ್ಮಾನಿಸಿದ್ದೇನೆ.
ದಯವಿಟ್ಟು ನನ್ನ ಕುಟುಂಬವನ್ನು ಆಶೀರ್ವದಿಸು. ಅದು ನಿನ್ನ ಸನ್ನಿಧಿಯಲ್ಲಿ ಎಂದೆಂದಿಗೂ ಮುಂದುವರಿಯಲಿ. ದೇವರಾದ ಯೆಹೋವನೇ, ಆಶ್ಚರ್ಯಕರವಾದ ವಾಗ್ದಾನಗಳನ್ನು ನೀನು ನನಗೆ ಮಾಡಿರುವೆ. ನಿನ್ನ ಆಶೀರ್ವಾದದಿಂದ ನನ್ನ ಕುಟುಂಬವು ಎಂದೆಂದಿಗೂ ಆಶೀರ್ವಾದವನ್ನು ಹೊಂದಲಿ” ಎಂದು ಪ್ರಾರ್ಥಿಸಿದನು.